ಶುಕ್ರವಾರ, ಡಿಸೆಂಬರ್ 6, 2019
25 °C
ಸಿಸಿಬಿ ಪೊಲೀಸರಿಂದ ನೈಜೀರಿಯಾ ಪ್ರಜೆ ಬಂಧನ

ಜೈಲಿನಿಂದ ಹೊರಬಂದು ಮಾದಕ ವಸ್ತು ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಲಿನಿಂದ ಹೊರಬಂದು ಮಾದಕ ವಸ್ತು ಮಾರಾಟ

ಬೆಂಗಳೂರು: ಜೈಲು ಶಿಕ್ಷೆ ಅನುಭವಿಸಿ ಹೊರಬಂದು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಫೈಡೆಲಿಸ್‌ ಯಜೆಹಾ (37) ಎಂಬಾತನನ್ನು ಸಿಸಿಬಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ನೈಜೀರಿಯಾ ಪ್ರಜೆಯಾದ ಆತ, ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಕೆ.ಆರ್‌.ಪುರದ ರೆಪ್ಕೊ ಶಾಂತಿನಿಕೇತನ ಬಡಾವಣೆಯಲ್ಲಿ ವಾಸವಿದ್ದ. ಈತನಿಂದ ₹20 ಲಕ್ಷ ಮೌಲ್ಯದ ಮಾದಕ ವಸ್ತು, ತೂಕದ ಯಂತ್ರ ಹಾಗೂ ಸ್ಕೂಟರ್‌ ಜಪ್ತಿ ಮಾಡಲಾಗಿದೆ.

ಮಾದಕ ವಸ್ತು ಮಾರಾಟವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಫೈಡೆಲಿಸ್‌ನನ್ನು 2013ರಲ್ಲಿ ಕೆ.ಆರ್‌.ಪುರ ಪೊಲೀಸರು ಬಂಧಿಸಿದ್ದರು. ಮಾದಕ ವಸ್ತು ನಿಯಂತ್ರಣ ಕಾಯ್ದೆ (ಎನ್.ಡಿ.ಪಿ.ಎಸ್) ಹಾಗೂ ವಿದೇಶಿಯರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ 33ನೇ ಸಿಟಿ ಸಿವಿಲ್‌ ನ್ಯಾಯಾಲಯವು ಆತನಿಗೆ 3 ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿತ್ತು. ಜೈಲು ಶಿಕ್ಷೆ ಮುಗಿದ ಬಳಿಕ ಹೊರಬಂದಿದ್ದ ಆತ, ಮಾದಕ ವಸ್ತು ಮಾರಾಟವನ್ನು ಮುಂದುವರಿಸಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದರು.

ದೇಶದ ಬೇರೆ ರಾಜ್ಯಗಳಲ್ಲಿ ವಾಸವಿರುವ ನೈಜೀರಿಯಾ ಪ್ರಜೆಗಳ ಜತೆ ಒಡನಾಟವಿಟ್ಟುಕೊಂಡಿದ್ದ ಆರೋಪಿ, ಅವರಿಂದಲೇ ಮಾದಕ ವಸ್ತು ಖರೀದಿಸಿ ತಂದು ನಗರದಲ್ಲಿ ಮಾರುತ್ತಿದ್ದ. ಕೆ.ಆರ್.ಪುರ ಬಳಿಯ ಶೀಗೇಹಳ್ಳಿ ಮಲ್ಲಪ್ಪ ಲೇಔಟ್‍ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವೇಳೆಯಲ್ಲೇ ಸಿಕ್ಕಿಬಿದ್ದ. ಈತನ ವಿರುದ್ಧ ರಾಮಮೂರ್ತಿನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು ಎಂದರು.

ಪ್ರತಿಕ್ರಿಯಿಸಿ (+)