ಶುಕ್ರವಾರ, ಡಿಸೆಂಬರ್ 13, 2019
27 °C
ವಸ್ತುಪ್ರದರ್ಶನ, ಫಲಪುಷ್ಪ ಮೇಳಕ್ಕೆ ಭೇಟಿ ನೀಡುತ್ತಿರುವ ಜನರು, ‘ಪ್ಯಾರಾಸೇಲಿಂಗ್‌’, ‘ಜಲ ಕ್ರೀಡೆ’ಗಳತ್ತ ಆಕರ್ಷಿತರಾದ ಸಾಹಸ ಪ್ರಿಯರು

ದಶಮಾನೋತ್ಸವಕ್ಕೆ ರಂಗು ತಂದ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಶಮಾನೋತ್ಸವಕ್ಕೆ ರಂಗು ತಂದ ಪ್ರದರ್ಶನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದು 10 ವರ್ಷಗಳನ್ನು ಪೂರೈಸಿರುವ ಪ್ರಯುಕ್ತ ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ‘ಜಿಲ್ಲಾ ದಶಮಾನೋತ್ಸವ’ ಮೊದಲ ದಿನ ಸೊರಗಿದಂತೆ ಕಂಡುಬಂದರೂ, ಶನಿವಾರ ಸಂಜೆ ವೇಳೆಗೆ ರಂಗು ಪಡೆಯಿತು.

ಮಧ್ಯಾಹ್ನದ ಹೊತ್ತಿಗೆ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ, ಜನರು ಕುಟುಂಬ ಸಮೇತರಾಗಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಫಲಪುಷ್ಪ ಪ್ರದರ್ಶನ, ಆಹಾರ ಮಳಿಗೆಗಳು, ವಸ್ತು ಪ್ರದರ್ಶನ ಮಳಿಗೆಯತ್ತ ಹೆಜ್ಜೆ ಹಾಕುತ್ತಿದ್ದರು. ಅನೇಕರು ವಸ್ತುಪ್ರದರ್ಶನ ವೀಕ್ಷಿಸುವ ಜತೆಗೆ ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ಮಕ್ಕಳಿಗೆ ಆಟಿಕೆಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಇನ್ನೊಂದೆಡೆ ಸಾಹಸ ಪ್ರಿಯರು ಕಂದವಾರ ಕೆರೆಯಲ್ಲಿ ಆಯೋಜಿಸಿದ್ದ ‘ಪ್ಯಾರಾಸೇಲಿಂಗ್‌’ ಮತ್ತು ಶ್ರೀನಿವಾಸ ಸಾಗರ ಕೆರೆಯಲ್ಲಿ ಆಯೋಜಿಸಿದ್ದ ‘ಜಲ ಕ್ರೀಡೆ’ಗಳಲ್ಲಿ ಭಾಗವಹಿಸಿ, ವಾರಾಂತ್ಯದ ಮೋಜಿನ ಸವಿಯನ್ನು ಹೊಸ ಬಗೆಯಲ್ಲಿ ಸವಿದರು.

ಶನಿವಾರದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರ ಹಾಸ್ಯ ರಸಸಂಜೆ ಮತ್ತು ಗಾಯಕ ರಘು ದೀಕ್ಷಿತ್ ಅವರ ತಂಡದ ಸಂಗೀತಗೋಷ್ಠಿ ವಿಶೇಷ ಆಕರ್ಷಣೆಯಾಗಿದ್ದ ಕಾರಣ ಸಂಜೆ ವೇಳೆಗೆ ಜನರು ಜಿಲ್ಲಾ ಕ್ರೀಡಾಂಗಣದಲ್ಲಿದ್ದ ಮುಖ್ಯ ವೇದಿಕೆಯತ್ತ ಮುಖ ಮಾಡಿದ್ದು ಗೋಚರಿಸಿತು.

ಇಂದು ಸಮಾರೋಪ

ಜಿಲ್ಲಾ ದಶಮಾನೋತ್ಸವಕ್ಕೆ ಭಾನುವಾರ ತೆರೆ ಬೀಳಲಿದ್ದು, ಮುಖ್ಯ ವೇದಿಕೆಯಲ್ಲಿ ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಇದರಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದ ವೀರಪ್ಪ ಮೊಯಿಲಿ, ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ಸಿರಿಧಾನ್ಯಗಳ ಊಟ, ಹೋಳಿಗೆಯ ಘಮಲು

ದಶಮಾನೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದಲ್ಲಿ ತೆರೆದಿರುವ ವಿವಿಧ ಬಗೆಯ ಆಹಾರ ಮಳಿಗೆಗಳು ಇತರೆ ಕಾರ್ಯಕ್ರಮಗಳಿಗಿಂತ ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಹೆಚ್ಚು ಪೌಷ್ಟಿಕಾಂಶ, ನಾರಿನಂಶವುಳ್ಳ ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲೆ, ಬರಗು, ರಾಗಿ.. ಸೇರಿದಂತೆ ವಿವಿಧ ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ವೈವಿಧ್ಯಮಯ ಪದಾರ್ಥಗಳನ್ನು ಜನರು ಸವಿದರು.

ನವಣೆ ಬಿಸಿ ಬೆಳೆಬಾತ್, ಸಾಮೆ ಪೊಂಗಲ್, ಊದಲು ಪುಳಿಯೊಗರೆ, ಬರಗು ಮೊಸರನ್ನ, ಸಜ್ಜೆ ಬ್ರಾಹ್ಮಿ ಎಲೆಯ ರೊಟ್ಟಿ ಉಪ್ಪಿಟ್ಟು, ಕೆಸರಿಬಾತ್, ಪಾಯಸ, ಇಡ್ಲಿ, ದೊಸೆ, ಪಡ್ಡು, ಲಡ್ಡು ಚಕ್ಕುಲಿ.. ಹೀಗೆ ಹತ್ತು ಹಲವು ತಿಂಡಿಗಳು ಸಿರಿಧಾನ್ಯ ಪ್ರಿಯರ ಜಿಹ್ವಾ ಚಾಪಲ್ಯ ತಣಿಸಿದವು.

ಇನ್ನೊಂದೆಡೆ ‘ಹೋಳಿಗೆ ಮನೆ’ ಪ್ರಮುಖ ಆಕರ್ಷಣೆಯಾಗಿದ್ದು ಅಲ್ಲಿ ಸುಮಾರು 10ಕ್ಕೂ ಅಧಿಕ ಬಗೆಯ ಹೋಳಿಗೆಗಳ ಘಮಲು ಮನೆ ಮಾಡಿತ್ತು.

ಸಿರಿಧಾನ್ಯಗಳು, ಒಣಹಣ್ಣುಗಳಿಂದ ಮಾಡಿದ ಹೋಳಿಗೆಗಳು, ಬಾದಾಮಿ, ಕರ್ಜೂರ, ಕೋವ, ಫೈನಾಫಲ್, ಜಾಮೂನ್, ಕ್ಯಾರೆಟ್‌, ಚಾಕೊಲೇಟ್‌, ಗುಲ್ಕನ್, ಬೆಳೆ, ಕಾಯಿ, ಒಣ್ಣ ಕೊಬ್ಬರಿ ಹೋಳಿಗೆ ವಿವಿಧ ಬಗೆಯ ಹೋಳಿಗೆಗಳು ಸಿಹಿ ಪ್ರಿಯರಿಗೆ ‘ಹಬ್ಬ’ ಉಂಟು ಮಾಡುತ್ತಿವೆ. ಜತೆಗೆ ಒಗ್ಗರಣೆ ಮಿರ್ಚಿ, ತುಪ್ಪದ ಕಜ್ಜಾಯ, ಮಸಾಲೆ ದೋಸೆ, ಊಟವೂ ಇಲ್ಲಿನ ಮಳಿಗೆಗಳಲ್ಲಿ ಉಂಟು.

ಮತ್ಸ್ಯಪ್ರಿಯರಿಗಾಗಿಯೇ ವಿಶೇಷ ಮಳಿಗೆಯೊಂದು ತೆರೆದಿದ್ದು ಅದರಲ್ಲಿ ಬಂಗುಡೆ, ಅಂಜಾಲ್, ಬಿಳಿ ಸಿಗಡಿ ಪ್ರೈಗಳು, ಮೀನಿನ ಕಬಾಬ್‌, ಕಟ್ಲೆಟ್‌, ಏಡಿ ಮಸಾಲಾ ಹೀಗೆ ವಿವಿಧ ಖಾದ್ಯಗಳು ಮೀನು ಮೋಹಿಗಳ ಬಾಯಲ್ಲಿ ನೀರೂರಿಸುತ್ತಿವೆ. ತಿಂಡಿ, ಊಟ ಮಾತ್ರವಲ್ಲದೇ ಬಗೆ ಬಗೆಯ ಕಷಾಯ, ಜ್ಯೂಸ್‌ಗಳು ಆಹಾರ ಮಳಿಗೆಗಳಲ್ಲಿ ಲಭ್ಯವಿದೆ. ಅಮೃತ ಬಳ್ಳಿ ಎಲೆ ಕಷಾಯ, ಲಾವಂಚ, ಕರಬೂಜ ಜ್ಯೂಸ್, ಕೊರ್ಲೆ ಸಿರಿಧಾನ್ಯ, ಸೊಗದೆ ಬೇರು, ನುಗ್ಗೆ ಸೊಪ್ಪು ರಸ ಹೀಗೆ ಆರೋಗ್ಯಕ್ಕೆ ಪೂರಕವಾದ ಹಲವು ಪಾನಿಯಗಳು ಇಲ್ಲಿ ಮಾರಾಟಕ್ಕಿವೆ.

ಪ್ಯಾರಾಸೇಲಿಂಗ್ ತಂದ ರೋಮಾಂಚನ

ದಶಮಾನೋತ್ಸವ ಆಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಸಹಯೋಗದಲ್ಲಿ ಕಂದವಾರ ಕೆರೆಯಲ್ಲಿ ಆಯೋಜಿಸಿರುವ ‘ಪ್ಯಾರಾಸೇಲಿಂಗ್’ ಜನರಲ್ಲಿ ರೋಮಾಂಚನ ಮೂಡಿಸಿತು. 100 ಶುಲ್ಕ ಕೊಟ್ಟು ನಗರದಲ್ಲಿ ಇದೇ ಮೊದಲ ಬಾರಿ ‘ಗಾಳಿಯಲ್ಲಿ ತೆಲುವ’ ವಿಶೇಷ ಅನುಭವ ದಕ್ಕಿಸಿಕೊಂಡ ಜನರು ಪುಳಕಿತಗೊಂಡರು.

ರಕ್ಷಾ ಕವಚ ತೊಟ್ಟು ಪ್ಯಾರಾಚೂಟ್ ಕಟ್ಟಿಕೊಂಡವರು, ಓಡುವ ಕಾರಿಗೆ ಬಿಗಿದ್ದ ಪ್ಯಾರಾಚೂಟ್ ಮೇಲಕ್ಕೆ ಏರುತ್ತಿದ್ದಂತೆ ಕೇಕೆ ಹಾಕಿ ಸಂಭ್ರಮಿಸುತ್ತಿದ್ದರು. ಇನ್ನು ಕೆಲವರು ಭಯ ವ್ಯಕ್ತಪಡಿಸುತ್ತಿದ್ದದ್ದು ಮೋಜಿಗೆ ಮತ್ತಷ್ಟು ರಂಗು ತಂದಿತ್ತು. ಕೆಲ ಕ್ಷಣಗಳ ಕಾಲ ಬಾನಿನಲ್ಲಿ ತೇಲಾಡಿದವರು ನೆಲಕ್ಕೆ ಇಳಿಯುವ ವೇಳೆ ಮಾಡಿಕೊಳ್ಳುತ್ತಿದ್ದ ಗೊಂದಲಗಳು, ವ್ಯಕ್ತಪಡಿಸುತ್ತಿದ್ದ ಆತಂಕ ನೆರೆದವರಲ್ಲಿ ನಗೆ ಬುಗ್ಗೆ ಉಕ್ಕಿಸುತ್ತಿತ್ತು. ಕೆಲವರಂತೂ ಲ್ಯಾಂಡಿಂಗ್ (ಕೆಳಗಿಳಿಯುವುದು) ವೇಳೆ ಆಯ ತಪ್ಪಿ ದೊಪ್ಪನೆ ಕೆರೆಯಂಗಳಕ್ಕೆ ಅಪ್ಪಳಿಸಿ ಗಾಯ ಮಾಡಿಕೊಂಡರು.

ಮೋಡಿ ಮಾಡಿದ ಜಲ ಸಾಹಸಗಳು

ದಶಮಾನೋತ್ಸವ ಆಚರಣೆ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಸಹಯೋಗದಲ್ಲಿ ಶ್ರೀನಿವಾಸ ಸಾಗರ ಕೆರೆಯಲ್ಲಿ ಆಯೋಜಿಸಿರುವ ಜಲ ಸಾಹಸಗಳು ದಶಮಾನೋತ್ಸವದ ಪ್ರಮುಖ ಆಕರ್ಷಣೆಯಾಗಿವೆ. ಕಳೆದ ಎರಡು ದಿನಗಳಿಂದ ಜನರು ಪ್ರತಿ ನಿತ್ಯ ಜಲ ವಿಹಾರದ ಜತೆಗೆ ವಾಟರ್‌ ಬೈಕ್‌ (ಜಟ್ಸಕೀ) ರೈಡ್‌ ಮಾಡಿ ಕೇಕೇ ಹಾಕಿದರು.

ಇನ್ನು ಕೆಲವರು ಬನಾನಾ ಬೋಟ್‌ನಲ್ಲಿ ಕುಳಿತು ತಾವೇ ಹುಟ್ಟು ಹಾಕಿಕೊಂಡು ಕೆರೆ ಸುತ್ತು ಹೊಡೆದರೆ ಕುಟುಂಬ ಸಮೇತರಾಗಿ ಬಂದವರು ಎಲೆಕ್ಟ್ರಾನಿಕ್‌ ಎಂಜಿನ್‌ವುಳ್ಳ ಸ್ಪೀಡ್‌ ಬೋಟ್‌ನಲ್ಲಿ ಸುತ್ತಾಡಿ ಸಂತಸದಿಂದ ಬೀಗಿದರು. ವಾಟರ್‌ ಬೈಕ್‌ ₨100, ಸ್ಪೀಡ್‌ ಬೋಟ್‌ ₨50, ಬನಾನಾ ಬೋಟ್‌ ₨50, ವಿಂಗ್‌ ಸೇಲ್ಫಿಂಗ್‌ಗೆ ₨25 ಶುಲ್ಕ ನಿಗದಿ ಮಾಡಲಾಗಿದೆ.

ಮನಸೆಳೆದ ಫಲಪುಷ್ಪ ಪ್ರದರ್ಶನ

ಜಿಲ್ಲಾ ಕ್ರೀಡಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ಕೂಡ ಜನರ ಕೇಂದ್ರ ಬಿಂದುವಾಗಿದೆ. ಸುಮಾರು 2.50 ಲಕ್ಷ ಸೇವಂತಿಗೆ ಹೂವುಗಳು, ದೊಣ್ಣೆ ಮೆಣಸಿನಕಾಯಿ ಬಳಸಿ ಸೃಷ್ಟಿಸಿದ ಏಳು ಅದ್ಭುತಗಳ ಮಾದರಿಗಳು ನೋಡುಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಆಗ್ರಾದ ತಾಜ್‌ಮಹಲ್‌, ಇಟಲಿಯ ಪೀಸಾ ಗೋಪುರ, ರೋಮನ್‌ ಕಲೋಸಿಯಂ, ಈಜಿಪ್ಟ್‌ನ ಪಿರಮಿಡ್‌, ಫ್ರಾನ್ಸ್‌ನ ಐಫಲ್‌ ಗೋಪುರ, ಬ್ರೆಸಿಲ್‌ನ ಕ್ರೈಸ್ಟ್ ದಿ ರಿಡೀಮರ್ ಹಾಗೂ ಚೀನಾದ ಮಹಾಗೋಡೆ ಪ್ರತಿಕೃತಿಗಳು ಮಕ್ಕಳು, ಪುಟಾಣಿಗಳ ಮನ ಸೆಳೆಯುತ್ತಿವೆ. ಜನರು ಕುಟುಂಬ ಸಮೇತರಾಗಿ ಬಂದು ಫಲಪುಷ್ಪ ಪ್ರದರ್ಶನ ನೋಡುವ ಜತೆಗೆ ಮೊಬೈಲ್‌ನಲ್ಲಿ ‘ಸೆಲ್ಫಿ’ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ದಶಮಾನೋತ್ಸವದಲ್ಲಿ ಇಂದು..

ಬೆಳಿಗ್ಗೆ 9: ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಶ್ವಾನಗಳ ಪ್ರದರ್ಶನ

ಬೆಳಿಗ್ಗೆ 9: ಕಂದವಾರ ಕೆರೆ ಆವರಣದಲ್ಲಿ ಪ್ಯಾರಾಸೇಲಿಂಗ್, ಶ್ರೀನಿವಾಸ ಸಾಗರ ಕೆರೆಯಲ್ಲಿ ಜಲ ಕ್ರೀಡೆಗಳು

ಬೆಳಿಗ್ಗೆ 9: ನಗರದ ಹೊರವಲಯದ ಎಸ್‌ಜೆಸಿಐಟಿ ಕ್ಯಾಂಪಸ್‌ನಲ್ಲಿ 1500 ಮಕ್ಕಳಿಂದ ಆತ್ಮರಕ್ಷಣೆ ಕಲೆ ಪ್ರದರ್ಶನ

ಬೆಳಿಗ್ಗೆ 11.30: ಅಂಬೇಡ್ಕರ್ ಭವನದಲ್ಲಿ ಕೃಷಿ ಮತ್ತು ಕೃಷಿ ಅವಲಂಬಿತ ಚಟುವಟಿಕೆಗಳ ಕುರಿತು ವಿಚಾರ ಗೋಷ್ಠಿ

ಸಂಜೆ 4: ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯ ವೇದಿಕೆಯಲ್ಲಿ ದಶಮಾನೋತ್ಸವದ ಸಮಾರೋಪ ಸಮಾರಂಭ

ಸಂಜೆ 6: ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಸಂಜ 6.30: ಆಕ್ಸಿಜೆನ್ ಡ್ಯಾನ್ಸ್‌ ತಂಡದಿಂದ ನೃತ್ಯ ಪ್ರದರ್ಶನ

ರಾತ್ರಿ 8.15: ಸಮೀರ್‌ ರಾವ್ ತಂಡದವರಿಂದ ಕ್ಲಾಸಿಕಲ್ ಜುಗಲ್ಬಂದಿ

ರಾತ್ರಿ 9: ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ

ರಾತ್ರಿ 9.20: ನೆರಳು ಮತ್ತು ಮರಳು ಕಲೆ ಪ್ರದರ್ಶನ

ರಾತ್ರಿ 9.45ಕ್ಕೆ ವಿಜಯ ಪ್ರಕಾಶ್ ತಂಡದವರಿಂದ ಸಂಗೀತ ರಸ ಸಂಜೆ

ಪ್ರತಿಕ್ರಿಯಿಸಿ (+)