ಶುಕ್ರವಾರ, ಡಿಸೆಂಬರ್ 13, 2019
27 °C
ಜೈನಕಾಶಿಯತ್ತ ಸಂತರು, ಲಕ್ಷಾಂತರ ಭಕ್ತರ ಮುಖ; ಮಹಾಮಜ್ಜನದ ಸಂಭ್ರಮಕ್ಕೆ ಕಾತರ...

ಶ್ರವಣಬೆಳಗೊಳ: ಇತಿಹಾಸ ಸಾರುವ ಚಿಕ್ಕಬೆಟ್ಟದ ಬಸದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರವಣಬೆಳಗೊಳ: ಇತಿಹಾಸ ಸಾರುವ ಚಿಕ್ಕಬೆಟ್ಟದ ಬಸದಿಗಳು

ಶ್ರವಣಬೆಳಗೊಳ: ಮನೋಲ್ಲಾಸಕ್ಕೆ ಪ್ರವಾಸವಾದರೆ, ಮನಃಶಾಂತಿಗೆ ತೀರ್ಥಯಾತ್ರೆ ಎಂದಾಗ ಶ್ರವಣಬೆಳಗೊಳ ನೆನಪಾಗದಿರದು. 2300 ವರ್ಷಗಳ ಇತಿಹಾಸವನ್ನು ತನ್ನೊಡಲಿನಲ್ಲಿ ಇಟ್ಟುಕೊಂಡಿರುವ ಜೈನಕಾಶಿಯಲ್ಲಿ ಬಾಹುಬಲಿಯ 58.8 ಅಡಿ ಏಕಶಿಲಾ ಮೂರ್ತಿ ಇದೆ. ವಿಂಧ್ಯಗಿರಿ, ಚಂದ್ರಗಿರಿ, ನಗರ ಹಾಗೂ ಸುತ್ತಮುತ್ತ ಸುಮಾರು 40 ಬಸದಿಗಳಿವೆ.

ಚಂದ್ರಗಿರಿ ಚಿಕ್ಕಬೆಟ್ಟ 3ನೇ ಶತಮಾನದಿಂದ ಚಂದ್ರಗುಪ್ತ ಹಾಗೂ ಭದ್ರಬಾಹು ಮುನಿಗಳಿಂದ ಪ್ರಖ್ಯಾತಿ ಹೊಂದಿದೆ. ಈ ಬೆಟ್ಟಕ್ಕೆ ಪ್ರಾಚೀನದಲ್ಲಿ ಹೃಷಿಗಿರಿ, ಕಳ್ವಪ್ಪು, ಕಟವಪ್ರ ಹೆಸರಿನಿಂದ ಕರೆಯಲಾಗುತ್ತಿತ್ತು. ಭೂಮಟ್ಟದಿಂದ 200 ಅಡಿ ಎತ್ತರದಲ್ಲಿದ್ದು, 240 ಮೆಟ್ಟಿಲು ಹೊಂದಿದೆ. 14 ಬಸದಿಗಳು, ಅಪೂರ್ವ ಶಾಸನಗಳು, ನಿಶಿಧಿ ಮಂಟಪಗಳು, ಸ್ಮಾರಕಗಳು, ರನ್ನ ಹಾಗೂ ಚಾವುಂಡರಾಯನ ಹಸ್ತಾಕ್ಷರ, ಭದ್ರಬಾಹು ಮುನಿಗಳ ಚರಣ, ಚಂದ್ರಗುಪ್ತ ಮೌರ್ಯ ಮುನಿಯ ಚರಣಗಳಿದ್ದು ಸಾಧಕರ ತಾಣವಾಗಿದೆ.

ಪಟ್ಟಣದ ಅತ್ಯಂತ ಎತ್ತರದ ಮಾನಸ್ತಂಭ ಮತ್ತು ಬ್ರಹ್ಮಸ್ತಂಭಗಳಿಂದ ಕಂಗೊಳಿಸುವ ಈ ಬೆಟ್ಟದಲ್ಲಿ ಲೆಕ್ಕಿದೊಣೆ, ದೇವರದೊಣೆ ಮತ್ತು ಕಂಚಿನದೊಣೆಗಳಿದ್ದು, ಅಂದಿನ ನೀರಿನ ಸಮರ್ಪಕ ಬಳಕೆಗೆ ಸಾಕ್ಷಿಯಾಗಿದೆ.

14 ಬಸದಿಗಳು ವಿವರ

ಶಾಂತಿನಾಥ ಬಸದಿ:
10ನೇ ಶತಮಾನ ಅಂತ್ಯದಲ್ಲಿ ಕಟ್ಟಿದ್ದು, 16ನೇ ತೀರ್ಥಂಕರ ಶಾಂತಿನಾಥನ ಕಾಯೋತ್ಸರ್ಗದ ಮೂರ್ತಿಯಿದೆ. 11 ಅಡಿ ಎತ್ತರದ ಈ ವಿಗ್ರಹ ಚಿಕ್ಕಬೆಟ್ಟದಲ್ಲಿರುವ ಎತ್ತರದ ಮೂರ್ತಿಗಳಲ್ಲಿ ದ್ವಿತೀಯ ಸ್ಥಾನವಿದೆ.

ಸುಪಾರ್ಶ್ವನಾಥ ಬಸದಿ: 7ನೇ ತೀರ್ಥಂಕರ ಸುಪಾರ್ಶ್ವನಾಥ ಸ್ವಾಮಿಯ ಪರ್ಯಂಕಾಸನದ 3.9 ಅಡಿ ಎತ್ತರದ ಮೂರ್ತಿಯಿರುವ ಇದನ್ನು ಗಂಗರ ಕಾಲದಲ್ಲಿ ನಿರ್ಮಿಸಲಾಗಿದ್ದು, ಸರಳ ಹಾಗೂ ಚಿಕ್ಕ ಬಸದಿಯಾಗಿದೆ.

ಚಂದ್ರಪ್ರಭ (ವಕ್ರಗಚ್ಛ ಬಸದಿ) ಬಸದಿ: 8ನೇ ತೀರ್ಥಂಕರ ಚಂದ್ರಪ್ರಭ ಸ್ವಾಮಿಯ 3.5 ಅಡಿ ಎತ್ತರದ ಮೂರ್ತಿಯ ಬಸದಿಯನ್ನು 10ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ತೀರ್ಥಂಕರರ ಪೀಠಭಾಗದಲ್ಲಿರುವ ಶಾಸನದ ಆಧಾರದಿಂದ ವಕ್ರಗಚ್ಛ ಬಸದಿ ಎಂದು ಕರೆಯಲಾಗಿದೆ.

ಚಾವುಂಡರಾಯ ಬಸದಿ: 10ನೇ ಶತಮಾನದಲ್ಲಿ ಕಗ್ಗಲ್ಲಿನಲ್ಲಿ ನಿರ್ಮಿಸಿರುವ ಇದು ಕನ್ನಡ ನಾಡಿನಲ್ಲಿ ಕಂಡು ಬರುವ ಸುಂದರ ದೇವಾಲಯಗಳಲ್ಲಿ ಒಂದು. 22ನೇ ತೀರ್ಥಂಕರ ನೇಮಿನಾಥ ಸ್ವಾಮಿಯ ಮೂರ್ತಿಯಿರುವ ಈ ಬಸದಿಯನ್ನು ಗಂಗರ ಪ್ರಧಾನ ಮಂತ್ರಿ ಮತ್ತು ದಂಡನಾಯಕ ಚಾವುಂಡರಾಯ ನಿರ್ಮಿಸಿದ್ದು, ಇದನ್ನು ಶಾಸನಗಳಲ್ಲಿ ತ್ರೈಲೋಕ್ಯರಂಜನ ಎಂದೂ ಬೊಪ್ಪಚೈತ್ಯಾಲಯವೆಂದೂ ಕರೆಯಲಾಗಿದೆ.

ಚಾವುಂಡರಾಯನ ಮಗ ಜಿನದೇವಣ್ಣನು ಮೇಲಂತಸ್ತಿನಲ್ಲಿ ಬಸದಿ ನಿರ್ಮಿಸಿ ಪಾರ್ಶ್ವನಾಥ ತೀರ್ಥಂಕರರ ಮೂರ್ತಿ ಪ್ರತಿಷ್ಠಾಪಿಸಿ ದ್ದಾನೆ. ಕಟಾಂಜನದ ಮೇಲಿನ ಸ್ನಿಗ್ಧ ನಸುನಗೆಯ ಸುಂದರ ಕನ್ಯೆಯ ಶಿಲ್ಪವಿದ್ದು, ಮೊನಾಲಿಸಾಳ ನಗುವಿನ ನೆನಪು ತರುತ್ತದೆ.

ಎರಡುಕಟ್ಟೆ ಬಸದಿ: ಪ್ರಥಮ ತೀರ್ಥಂಕರ ಆದಿನಾಥ ಸ್ವಾಮಿಯ ಪರ್ಯಂಕಾಸನದ 3.2 ಅಡಿ ಎತ್ತರದ ಮೂರ್ತಿ ಇದ್ದು, ಕ್ರಿ.ಶ.1117ರಲ್ಲಿ ಹೊಯ್ಸಳರ ದಂಡನಾಯಕ ಗಂಗರಾಜನ ಮಡದಿ ಲಕ್ಷ್ಮೀಮತಿ ಕಟ್ಟಿಸಿದ್ದಾಳೆ. ಈ ಬಸದಿಯ ಮುಂದಿನ ಜಗಲಿಯ ಎರಡೂ ಕಡೆ ಮೆಟ್ಟಿಲು ಇರುವುದರಿಂದ ಎರಡು ಕಟ್ಟೆ ಬಸದಿ ಎಂದು ಕರೆಯುತ್ತಾರೆ.

ಸವತಿ ಗಂಧಾವರಣ ಬಸದಿ: 16ನೇ ತೀರ್ಥಂಕರ ನೇಮಿನಾಥ ಸ್ವಾಮಿಯ ಪರ್ಯಂಕಾಸನದ 3.4 ಅಡಿ ಎತ್ತರದ ವಿಗ್ರಹವಿರುವ ಇದನ್ನು ಹೊಯ್ಸಳರ ದೊರೆ ವಿಷ್ಣುವರ್ಧನನ ಪಟ್ಟದರಾಣಿ ಶಾಂತಲೆ ಕ್ರಿ.ಶ.1123ರಲ್ಲಿ ಕಟ್ಟಿಸಿದ್ದಾಳೆ.

ತೇರಿನ ಬಸದಿ: ಈ ಬಸದಿಯನ್ನು ರಾಜಶ್ರೇಷ್ಠಿಗಳಾದ ಪೊಯ್ಸಳಶೆಟ್ಟಿ ಮತ್ತು ನೇಮಿಸೆಟ್ಟಿಯವರ ಮಾತೆಯರಾದ ಮಾಚಿಕಬ್ಬೆ ಮತ್ತು ಶಾಂತಿಕಬ್ಬೆಯರು ಕ್ರಿ.ಶ.1117ರಲ್ಲಿ ನಿರ್ಮಿಸಿ, ಬಾಹುಬಲಿ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ. ಈ ಬಸದಿಯ ಮುಂದೆ ತೇರಿನಾಕಾರದ ಬಲಿಪೀಠ ಇರುವುದರಿಂದ ತೇರಿನ ಬಸದಿ ಎನ್ನುತ್ತಾರೆ.

ಶಾಂತೀಶ್ವರ ಬಸದಿ: 16ನೇ ತೀರ್ಥಂಕರ ಶಾಂತಿನಾಥ ಸ್ವಾಮಿಯ 5.2 ಅಡಿ ಎತ್ತರದ ಮೂರ್ತಿಯಿರುವ ಇದನ್ನು ಕ್ರಿ.ಶ. 1117 ರಲ್ಲಿ ಗಂಗರಾಜನ ಸಹೋದರ ಬೊಮ್ಮಣ್ಣನ ಮಗನಾದ ಹಿರಿಏಚಿಮಯ್ಯ ನಿರ್ಮಿಸಿದನು.

ಮಜ್ಜಿಗಣ ಬಸದಿ: 14ನೇ ತೀರ್ಥಂಕರ ಅನಂತನಾಥ ಸ್ವಾಮಿಯ 3.8 ಅಡಿ ಖಡ್ಗಾಸನದ ಮೂರ್ತಿಯಿರುವ ಇದನ್ನು 11ನೇ ಶತಮಾನದಲ್ಲಿ ಮಜ್ಜಿಗಣ ನಿರ್ಮಿಸಿದ್ದಾನೆ.

ಶಾಸನ ಬಸದಿ: ಕ್ರಿ.ಶ. 1118ರಲ್ಲಿ ಹೊಯ್ಸಳರ ದಂಡನಾಯಕ ಗಂಗರಾಜನ ಪತ್ನಿ ಮತ್ತು ತಾಯಿ ಪೋಚಿಕಬ್ಬೆಯರು ಕಟ್ಟಿಸಿದ ಈ ಜಿನಾ ಲಯದಲ್ಲಿ ಆದಿನಾಥರ ಮೂರ್ತಿಯಿದೆ. ಬಸದಿ ದ್ವಾರದ ಬಳಿ ಶಾಸನ ಇರುವುದ ರಿಂದ ಶಾಸನ ಬಸದಿ ಎನ್ನುವರು.

ಚಂದ್ರಗುಪ್ತ ಬಸದಿ: ಇದು ಚಿಕ್ಕ ಬೆಟ್ಟದ ಪುರಾತನ ಬಸದಿ. 3 ಗರ್ಭಗುಡಿ ಹೊಂದಿದೆ. 23ನೇ ತೀರ್ಥಂಕರ ಪಾರ್ಶ್ವನಾಥ ಸ್ವಾಮಿ ಮೂರ್ತಿಯಿದ್ದು, ಚಂದ್ರಗುಪ್ತ ಮೌರ್ಯನ ಹೆಸರಿನಿಂದ ಕರೆಯಲಾಗುತ್ತದೆ.

ಕತ್ತಲೆ ಬಸದಿ: ಪ್ರಥಮ ತೀರ್ಥಂಕರ ಆದಿನಾಥರ ಮೂರ್ತಿ ಇರುವ ಈ ಬಸದಿಯನ್ನು ಹೊಯ್ಸಳರ ದಂಡನಾ ಯಕ ಗಂಗರಾಜನು ತನ್ನ ತಾಯಿ ಪೋಚಿಕಬ್ಬೆಗಾಗಿ ಕ್ರಿ.ಶ.1118ರಲ್ಲಿ ನಿರ್ಮಿಸಿದ್ದಾನೆ. ಇಲ್ಲಿ ಕತ್ತಲೆ ಹೆಚ್ಚು ಇರುವ ಕಾರಣ ಕತ್ತಲೆ ಬಸದಿ ಎಂದು ಕರೆಯಲಾಗುತ್ತದೆ.

ಪಾರ್ಶ್ವನಾಥ ಬಸದಿ: 11ನೇ ಶತಮಾನ ದಲ್ಲಿ ನಿರ್ಮಿಸಿರುವ ಎತ್ತರವಾದ ಪಾರ್ಶ್ವನಾಥ ತೀರ್ಥಂಕರರ ಮೂರ್ತಿ ಕಾಣಬಹುದು. ಮೂರ್ತಿಯು ಕಮಲ ಪೀಠದಲ್ಲಿ ನಿಂತಿದ್ದು, ಇದನ್ನು ಅಂತರಾಳ ಪಾರ್ಶ್ವನಾಥ ಎಂದು ಕರೆಯುತ್ತಾರೆ.

ಭದ್ರಬಾಹು ಗುಹೆ: ಪೂರ್ವ ಭಾಗದಲ್ಲಿ ರುವ ಭದ್ರಬಾಹು ಗುಹೆ ಒಂಟಿಯಾಗಿ ನಿಂತ ಸಹಜ ಗುಹೆ. ಭದ್ರಬಾಹು ಮತ್ತು ಚಂದ್ರಗುಪ್ತ ಮುನಿಗಳು ಕ್ರಿ.ಶ. 3ನೇ ಶತಮಾನದಲ್ಲಿ ಇಲ್ಲಿ ಸಮಾಧಿ ಮರಣ ಹೊಂದಿದರೆಂಬ ಐತಿಹ್ಯ ವಿದ್ದು, ಗುಹೆಯಲ್ಲಿ ಕಾಣುವ ಪಾದಗಳು ಭದ್ರಬಾಹು ಮುನಿಯ ಪಾದ ಚಿಹ್ನೆಗಳಾಗಿವೆ.

ಒಂದೇ ಜಾಗದಲ್ಲಿ 14 ಬಸದಿ ಕಾಣ ಬಹುದಾಗಿದ್ದು, ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಿತ್ಯ ಬೆಳಿಗ್ಗೆ, ಸಂಜೆ ಪೂಜಾ ಕಾರ್ಯಗಳು ನೆರವೇರುತ್ತಿದೆ.

-ಬಿ.ಪಿ.ಜಯಕುಮಾರ್‌

ಪ್ರತಿಕ್ರಿಯಿಸಿ (+)