ಬುಧವಾರ, ಡಿಸೆಂಬರ್ 11, 2019
24 °C

ಗುಂಡ್ಲುಪೇಟೆ: ಕಸ ಹಾಕುವೆಡೆ ಸಾಹಿತಿಗಳ ಫ್ಲೆಕ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಕಸ ಹಾಕುವೆಡೆ ಸಾಹಿತಿಗಳ ಫ್ಲೆಕ್ಸ್‌

ಗುಂಡ್ಲುಪೇಟೆ: ಜ. 12, 13ರಂದು ಪಟ್ಟಣದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಳಕೆಯಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಬೃಹತ್ ಫ್ಲೆಕ್ಸ್‌ಗಳು ಈಗ ಗುರುಭವನದ ಕಸ ಹಾಕುವ ಜಾಗದಲ್ಲಿ ಅನಾಥವಾಗಿ ಬಿದ್ದಿವೆ.

ಸಾಹಿತ್ಯ ಸಮ್ಮೇಳನ ಪ್ರಯುಕ್ತ ಜ್ಞಾನಪೀಠ ಪುರಸ್ಕೃತ ಕನ್ನಡದ ಸಾಹಿತಿಗಳ ಬೃಹತ್ ಫ್ಲೆಕ್ಸ್‌ ಬೋರ್ಡ್‌ಗಳನ್ನು ಗುಂಡ್ಲುಪೇಟೆ-ಊಟಿ ಹೆದ್ದಾರಿಯ ಅಲ್ಲಲ್ಲಿ ಅಳವಡಿಸಲಾಗಿತ್ತು. ಸಮ್ಮೇಳನ ಮುಗಿದ ಬಳಿಕ ಅವುಗಳನ್ನು ಮನಬಂದಂತೆ ಎಸೆಯುವ ಮೂಲಕ ಹೆಮ್ಮೆಯ ಸಾಹಿತಿಗಳಿಗೆ ಅವಮಾನ ಮಾಡಲಾಗಿದೆ ಎಂದು ಸಾಹಿತ್ಯ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡೂ ದಿನ ಸಮ್ಮೇಳನ ನಡೆದ ಗುರುಭವನ ಕಟ್ಟಡದ ಹಿಂಭಾಗದಲ್ಲಿ ಇರುವ ಅಡುಗೆ ಕೋಣೆಯ ಗೋಡೆಗೆ ಈ ಫ್ಲೆಕ್ಸ್‌ಗಳನ್ನು ಒರಗಿಸಿ ಇರಿಸಲಾಗಿದೆ. ಇದೇ ಜಾಗದಲ್ಲಿ ಬಸ್ ನಿಲ್ದಾಣದ ಗೋಡೆಯೂ ಇದ್ದು, ಬಸ್ಸಿಗಾಗಿ ಬರುವ ಪ್ರಯಾಣಿಕರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಅಲ್ಲದೆ, ಗುರುಭವನದ ದ್ವಾರ ಸದಾ ತೆರೆದಿರುವುದರಿಂದ ನಾಯಿ ಮುಂತಾದ ಪ್ರಾಣಿಗಳು ಒಳಗೆ ಬಂದು ಗಲೀಜು ಮಾಡುತ್ತಿವೆ.

ಈ ಫ್ಲೆಕ್ಸ್‌ಗಳನ್ನು ಸಮ್ಮೇಳನಕ್ಕಾಗಿ ಮೈಸೂರಿನಿಂದ ತರಲಾಗಿತ್ತು. ಮತ್ತೆ ಅಲ್ಲಿಗೆ ವಾಪಸ್ ಕಳುಹಿಸಬೇಕಾಗಿದೆ. ಇವುಗಳನ್ನು ತಗೆದುಕೊಂಡು ಹೋಗಬೇಕಾದವರು ಇನ್ನೂ ಬಂದಿಲ್ಲ. ಆದ್ದರಿಂದ ಸಮಸ್ಯೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವೀ.ನಾ. ಚಿದಾನಂದಸ್ವಾಮಿ ತಿಳಿಸಿದರು.

ಮಕ್ಕಳಿಗೆ ಜ್ಞಾನಪೀಠ ಪುರಸ್ಕೃತರ ಬಗ್ಗೆ ಗೌರವ ಭಾವನೆ ಮೂಡುವಂತೆ ಅವರಿಗೆ ಕಲಿಸಲಾಗುತ್ತದೆ. ಆದರೆ, ಶಿಕ್ಷಕರ ಭವನದಲ್ಲೇ ಈ ರೀತಿ ಅಗೌರವ ತೋರುವ ರೀತಿಯಲ್ಲಿ ಅವರ ಫ್ಲೆಕ್ಸ್‌ಗಳು ಬಿದ್ದಿರುವುದನ್ನು ವಿದ್ಯಾರ್ಥಿಗಳು ನೋಡಿದರೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)