7
ರಾಷ್ಟ್ರೀಯ ಕಿಸಾನ್‌ ಮಹಾಸಭಾ ನೇತೃತ್ವದಲ್ಲಿ ಹೋರಾಟ

ಸಾಲಮನ್ನಾ: 23ರಂದು ಸಂಸತ್‌ಗೆ ಮುತ್ತಿಗೆ

Published:
Updated:
ಸಾಲಮನ್ನಾ: 23ರಂದು ಸಂಸತ್‌ಗೆ ಮುತ್ತಿಗೆ

ಚಾಮರಾಜನಗರ: ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕೃಷಿ ಸಾಲ ಮನ್ನಾ ಹಾಗೂ ಡಾ.ಎಂ.ಎಸ್‌. ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯಿಸಿ ಫೆ. 23ರಂದು ಸಂಸತ್‌ ಭವನಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್‌ ಶನಿವಾರ ಹೇಳಿದರು.

ಅಂದು ದೇಶದಾದ್ಯಂತ 10 ಲಕ್ಷಕ್ಕೂ ಹೆಚ್ಚು ರೈತರು ದೆಹಲಿಗೆ ತೆರಳಿ ರಾಷ್ಟ್ರೀಯ ಕಿಸಾನ್‌ ಮಹಾಸಭಾ ನೇತೃತ್ವದಲ್ಲಿ ಹೋರಾಟ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಗಾಲ, ಸಾಲದ ಒತ್ತಡ ದಿಂದ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

ಕೃಷಿ ಸಾಲಮನ್ನಾ ಮಾಡಬೇಕು. ಎಲ್ಲ ಆಹಾರ ಉತ್ಪನ್ನಗಳಿಗೆ ನ್ಯಾಯ ಯುತ ಬೆಲೆ ಕಲ್ಪಿಸುವ ಸ್ವಾಮಿನಾಥನ್‌ ವರದಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಮುತ್ತಿಗೆ ಪ್ರತಿಭಟನೆಗೆ ಪ್ರಮುಖ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.

ದೆಹಲಿಯಲ್ಲಿ ನಡೆಯುವ ಹೋರಾಟಕ್ಕೆ ರಾಜ್ಯದಿಂದಲೂ ಹೆಚ್ಚಿನ ರೈತರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜಕೀಯ ಪ್ರೇರಿತ ಬಜೆಟ್‌: ಕೇಂದ್ರ ಸರ್ಕಾರ 4 ವರ್ಷಗಳಲ್ಲಿ ಕೃಷಿ ಗೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿ ರಾಜಕೀಯ ಪ್ರೇರಿತ ಬಜೆಟ್‌ ಮಂಡಿಸಿದೆ ಎಂದು ಟೀಕಿಸಿದರು.

ಬಜೆಟ್‌ನ ಯೋಜನೆಗಳ ಲಾಭ ತಕ್ಷಣದಲ್ಲಿಯೇ ರೈತರಿಗೆ ಸಿಗದು. ಅದು ಮುಂದಿನ ವರ್ಷ ಕೇಂದ್ರ ಸರ್ಕಾರದ ಚುನಾವಣೆ ವೇಳೆಗೆ ದೊರೆಯುತ್ತದೆ. ಇದು ಚುನಾವಣೆ ಹಾದಿ ಸುಲಭ ವಾಗಿಸಿ ಕೊಳ್ಳುವ ತಂತ್ರ ಎಂದರು.

ಬಜೆಟ್‌ನಲ್ಲಿ ರೈತ ಉತ್ಪನ್ನಗಳ ಉತ್ಪಾದಕ ಕಂಪೆನಿಗಳಿಗೆ ಸಂಪೂರ್ಣ ವರಮಾನ ತೆರಿಗೆ ವಿನಾಯಿತಿ ಘೋಷಣೆ ಸ್ವಾಗತಾರ್ಹ. ಆದರೆ, ರೈತರ ತುರ್ತು ಸಮಸ್ಯೆಗಳಿಗೆ ಪರಿಹಾರ ಸೂಚಿಸಿಲ್ಲ. ರೈತರಿಗೆ ನೆರವಾಗುವಂತೆ ಬಜೆಟ್, ಯೋಜನೆಗಳು ಶೀಘ್ರ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸಕಾಲ ದಲ್ಲಿ ಕಬ್ಬು ಕಟಾವು ಮಾಡಬೇಕು ಎಂದು ಆದೇಶ ನೀಡಿದ್ದರು. ಬಣ್ಣಾರಿ ಸಕ್ಕರೆ ಕಾರ್ಖಾನೆ ನಿರ್ಲಕ್ಷ್ಯವಹಿಸುತ್ತಿದೆ. ತಡವಾಗಿ ಕಟಾವು ಮಾಡುವ ಜತೆಗೆ, ರೈತರಿಂದ ಹೆಚ್ಚುವರಿ ಯಾಗಿ ಶುಲ್ಕ ಪಡೆಯುತ್ತಿದೆ ಎಂದು ದೂರಿದರು.

ಕಾರ್ಖಾನೆಗಳ ನಿರ್ಲಕ್ಷ್ಯತನ ಹಾಗೂ ಹೆಚ್ಚುವರಿ ಶುಲ್ಕ ಪಡೆಯುತ್ತಿರು ವುದರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ತಾಲ್ಲೂಕು ಅಧ್ಯಕ್ಷರಾದ ಮಹದೇವಸ್ವಾಮಿ, ಬಸವಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry