ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧವಾಗಿ ಬಂತು ಕುಸುಬೆ ಬೆಳೆ

ಭೀಮನಕೆರೆ: ಕಡಿಮೆ ನೀರಿನಲ್ಲೇ ಉತ್ತಮ ಇಳುವರಿ, ರೈತರಲ್ಲಿ ಮೂಡಿದ ಸಂತಸ
Last Updated 4 ಫೆಬ್ರುವರಿ 2018, 7:18 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಕೃಷಿಗೆ ವೈವಿಧ್ಯತೆ ತುಂಬುವ ನಿಟ್ಟಿನಲ್ಲಿ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರ ಸಮೀಪದ ಭೀಮನೆರೆ ಗ್ರಾಮದ ರೈತರಿಗೆ ಕುಸುಬೆ ಬೆಳೆಯಲು ಪ್ರೋತ್ಸಾಹ ನೀಡಿದೆ.

ಸಂತೆಬೆನ್ನೂರು ಅಲ್ಲದೇ ದಾವಣಗೆರೆಯ ವಿವಿಧೆಡೆ ಸುಮಾರು 250 ಎಕರೆ ಪ್ರದೇಶದಲ್ಲಿ ಈ ಬಾರಿ ರೈತರು ಕುಸುಬೆ ಬೆಳೆದಿದ್ದು, ಸಮೃದ್ಧ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

‘ಒಣ ಹವೆಯಲ್ಲೂ ಸಮೃದ್ಧವಾಗಿ ಬೆಳೆದು ಇಳುವರಿ ನೀಡುವ ಪ್ರಭೇದ ಕುಸುಬೆ. ಬಿತ್ತನೆ ಸಮಯದಲ್ಲಿ ಭೂಮಿಯಲ್ಲಿ ತೇವಾಂಶ ಇದ್ದರೆ ಸಾಕು. ಆನಂತರ ಕೊಯ್ಲಿನವರೆಗೂ ನೀರುಣಿಸುವ ಅಗತ್ಯ ಇರುವುದಿಲ್ಲ. ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭಾಂಶ ನೀಡುವ ಬೆಳೆ ಇದಾಗಿದ್ದು, ಮಳೆ ಕೊರತೆಯಲ್ಲೂ ಪರ್ಯಾಯ ಆರ್ಥಿಕ ಬೆಳೆ ಇದು. ಮಹಾರಾಷ್ಟ್ರದ ಪರ್ಬಿಣಿ ಸಂಸ್ಥೆ ನೆರವಿನಿಂದ ಕೃಷಿ ಸಂಶೋಧನಾ ಕೇಂದ್ರದ ಮೂಲಕ ಉಚಿತ ಬಿತ್ತನೆ ಬೀಜ ನೀಡಿದೆ ಎಂದು ಮಾಹಿತಿ ನೀಡುತ್ತಾರೆ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ರಾಮಪ್ಪ ಪಟೇಲ್‌.

‘ಕೃಷಿ ತಜ್ಞರ ಸಲಹೆ ಮೇರೆಗೆ 1 ಎಕರೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಕುಸುಬೆ ಬಿತ್ತನೆ ಮಾಡಿದ್ದೇನೆ. ಒಂದು ಎಕರೆಗೆ 5 ಕೆ.ಜಿ. ಬಿತ್ತನೆ ಬೀಜ ಬಳಸಿದ್ದೇನೆ. ಹಚ್ಚ ಹಸಿರಿನಲ್ಲಿ ಸೊಂಪಾಗಿ ಬೆಳೆದು ನಿಂತಿದೆ. ಚಿತ್ತಾಕರ್ಷಕ ಬಣ್ಣಗಳ ಹೂವಿನಿಂದ ಕಂಗೊಳಿಸಿದೆ. 3 ತಿಂಗಳಲ್ಲಿ ಬೆಳೆ ಕೈ ಸೇರಲಿದೆ. ಗ್ರಾಮದಲ್ಲಿ ಹಲವು ರೈತರು ಕುಸುಬೆ ಬೆಳೆದಿದ್ದಾರೆ’ ಎನ್ನುತ್ತಾರೆ ಭೀಮನೆರೆಯ ರೈತ ವಿಶ್ವನಾಥ್.

ಪ್ರತಿ ಎಕರೆಗೆ 7 ರಿಂದ 8 ಕ್ವಿಂಟಲ್ ಇಳುವರಿ ಬರಲಿದೆ. ಪ್ರಸ್ತುತ ಮಾರುಕಟ್ಟೆ ಧಾರಣೆ ₹ 4 ಸಾವಿರದಿಂದ ₹ 5 ಸಾವಿರದ ಆಸುಪಾಸಿನಲ್ಲಿದೆ. ಜಿಗಿ ಹುಳು ಬಾಧೆ ಕಂಡುಬಂದಲ್ಲಿ ಔಷಧಿ ಸಿಂಪಡಿಸಲು ಕೃಷಿ ತಜ್ಞರು ಸಲಹೆ ನೀಡಿದ್ದಾರೆ. ಬೆಳೆ ಚೆನ್ನಾಗಿ ಬಂದಿದೆ ಎಂದು ಸಂತೋಷ ಹಂಚಿಕೊಳ್ಳುತ್ತಾರೆ ಅವರು.

ಬಿಳಿ ಬಣ್ಣದ ತುಸು ಶಂಖಾಕೃತಿಯ ಕುಸುಬೆ ಬೀಜ. ಒಳ ಭಾಗದಲ್ಲಿ ಕೊಬ್ಬಿನಾಂಶ ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಬೇಕಾದ ಕೊಬ್ಬಿನಾಂಶವಾಗಿದ್ದು, ಉತ್ತಮ ಪೌಷ್ಟಿಕಾಂಶಗಳಿವೆ. ಈ ಭಾಗದಲ್ಲಿ ಹಿಂದೆಲ್ಲಾ ಅಕ್ಕಡಿ ಬೆಳೆಯಾಗಿ ಇದನ್ನು ಬೆಳೆಯುತ್ತಿದ್ದರು. ಕೆಲ ಬಗೆಯ ಖಾದ್ಯಗಳನ್ನೂ ತಯಾರಿಸಲು ಬಳಸಲಾಗುತ್ತಿತ್ತು ಎನ್ನುತ್ತಾರೆ ರೈತರು.

ಕುಸುಬೆಯಿಂದ ಅಡುಗೆ ಎಣ್ಣೆ ಉತ್ಪಾದನೆ ಮಾಡಲಾಗುವುದು. ಉತ್ತರ ಕರ್ನಾಟದಕಲ್ಲಿ ಕಸುಬೆ ಎಣ್ಣೆ ವಿವಿಧ ಖಾದ್ಯ ತಯಾರಿಸಲು ಬಳಸುವರು. ಇದರಲ್ಲಿ ಕೆಟ್ಟ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ. ವಿಟಮಿನ್ ‘ಎ’ ಅಧಿಕ ಪ್ರಮಾಣದಲ್ಲಿರುವುದನ್ನು ತಜ್ಞರು ಸಂಶೋಧನೆಯಿಂದ ಪ್ರಮಾಣೀಕರಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಾರುಕಟ್ಟೆ ಸೌಲಭ್ಯ ಇದೆ ಎನ್ನುತ್ತಾರೆ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರ ಪ್ರಾಧ್ಯಾಪಕ ರಾಮಪ್ಪ ಪಟೇಲ್.
– ಕೆ.ಎಸ್‌.ವೀರೇಶ್ ಪ್ರಸಾದ್

*
ದಾವಣಗೆರೆ ಜಿಲ್ಲೆಯಲ್ಲಿ 250 ಎಕರೆ ಪ್ರದೇಶದಲ್ಲಿ ಕುಸುಬೆ ಬೆಳೆಗೆ ಪ್ರೋತ್ಸಾಹ ನೀಡಲಾಗಿದೆ. ಕ್ಷೇತ್ರೋತ್ಸವ ಸಿದ್ಧತೆ ನಡೆಯುತ್ತಿದೆ.
–ರಾಮಪ್ಪ ಪಟೇಲ್, ಪ್ರಾಧ್ಯಾಪಕ. ಕೃಷಿ ಸಂಶೋಧನಾ ಕೇಂದ್ರ, ಕತ್ತಲಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT