ಬುಧವಾರ, ಡಿಸೆಂಬರ್ 11, 2019
16 °C
ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ ರಾಜ್ಯ ಸರ್ಕಾರ

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆಗೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆಗೆ ಚಿಂತನೆ

ಹರಪನಹಳ್ಳಿ: ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ ಕಲ್ಪಿಸುವ ಉದ್ದೇಶದಿಂದ ಹರಪನಹಳ್ಳಿ ತಾಲ್ಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರಿಸಲು ಸರ್ಕಾರ ಚಿಂತನೆ ನಡೆಸಿದ್ದು, ಈ ಕುರಿತು ಕಂದಾಯ ಇಲಾಖೆಯ (ಭೂಮಾಪನ) ಅಧೀನ ಕಾರ್ಯದರ್ಶಿ ಸಿ.ಪುಟ್ಟನಂಜಯ್ಯ ಜಿಲ್ಲಾಧಿಕಾರಿಗೆ ವರದಿ ನೀಡುವಂತೆ ಪತ್ರ ಬರೆದಿದ್ದಾರೆ.

ಡಿ.26ರಂದು ಹರಪನಹಳ್ಳಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿಗೆ ಹೈದರಾಬಾದ್ ಕರ್ನಾಟಕ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಅಡ್ವೊಕೆಟ್‌ ಜನರಲ್ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯನ್ಮುಖರಾಗಿದ್ದು, ಸೌಲಭ್ಯ ಕಲ್ಪಿಸುವ ಕುರಿತು ವರದಿ ಕೇಳಿದ್ದಾರೆ ಎನ್ನಲಾಗಿದೆ.

ಪತ್ರದಲ್ಲಿ ಏನೀದೆ?

‘ಹರಪನಹಳ್ಳಿ ತಾಲ್ಲೂಕು ಹಿಂದೆ ಬಳ್ಳಾರಿ ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟಿದ್ದು, ಜಿಲ್ಲೆಗಳ ಪುನರ್ ವಿಂಗಡಣೆಯಿಂದಾಗಿ ಪ್ರಸ್ತುತ ದಾವಣಗೆರೆ ಜಿಲ್ಲೆಯ ಆಡಳಿತ ವ್ಯಾಪ್ತಿಯಲ್ಲಿದೆ. ಹೈದರಾಬಾದ್ ಕರ್ನಾಟಕ 371 ‘ಜೆ’ ವಿಶೇಷ ಸ್ಥಾನಮಾನದಿಂದ ವಂಚಿತವಾಗಿರುವ ಹರಪನಹಳ್ಳಿ ತಾಲ್ಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಗೊಳಿಸುವ ಬಗ್ಗೆ ಆಡಳಿತಾತ್ಮಕ ಸಾಧ್ಯತೆಗಳ ಬಗ್ಗೆ ಹಾಗೂ ಕಾರ್ಯ ಸಾಧು ಬಗ್ಗೆ ಪರಿಶೀಲಿಸಿ ಪ್ರಸ್ತಾವ ಸಲ್ಲಿಸುವಂತೆ ಕೋರಲಾಗಿದೆ.

ಕಳೆದ ಜ ೨೨ರಂದು ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಪುಟ್ಟನಂಜಯ್ಯ ಈ ವಿಚಾರ ಉಲ್ಲೇಖಿಸಿದ್ದಾರೆ. ಹಾಗೆಯೇ ಅತೀ ಜರೂರು ಎಂದೂ ನಮೂದಿಸಿದ್ದಾರೆ.

ಹಿಂದೆ 371 ‘ಜೆ’ ಕಲಂ ಸೌಲಭ್ಯ ಕಲ್ಪಿಸುವ ಕುರಿತು ವರದಿ ಸಲ್ಲಿಸುವಂತೆ ಸರ್ಕಾರ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು. ಅದರಂತೆ ಇಲ್ಲಿಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಗಾರರು, ಪ್ರಗತಿಪರ ಚಿಂತಕರು, ಸಂಘಟನೆಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿದ್ದ ಜಿಲ್ಲಾಧಿಕಾರಿಗಳು ಸಭೆಯಲ್ಲಿ ವ್ಯಕ್ತವಾಗಿದ್ದ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.

ಇದೀಗ ಸರ್ಕಾರ ಹರಪನಹಳ್ಳಿ ತಾಲ್ಲೂಕನ್ನು ಪುನಃ ಬಳ್ಳಾರಿ ಜಿಲ್ಲೆಗೆ ಸೇರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಬಳಿ ವರದಿ ಕೇಳಿರುವುದರಿಂದ ಯಾವ ರೀತಿಯ ವರದಿ ನೀಡುತ್ತಾರೆ ಎಂಬ ಕುತೂಹಲ ಮೂಡಿದೆ.

2015 ಡಿಸೆಂಬರ್ 13ರಂದು ಶಾಸಕ ಎಂ.ಪಿ.ರವೀಂದ್ರ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ತಾಲ್ಲೂಕಿನ ಸ್ವಾಮೀಜಿಗಳು, ರಾಜಕೀಯ ಪಕ್ಷಗಳ ಮುಖಂಡರು, ಪ್ರಗತಿಪರ ಚಿಂತಕರು, ಹೋರಾಟಗಾರರು, ಸಾಹಿತಿಗಳು ಸಭೆ ನಡೆಸಿ ಹರಪನಹಳ್ಳಿಗೆ ಹೈದರಾಬಾದ್ ಕರ್ನಾಟಕ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿಗೆ ಒತ್ತಾಯಿಸಲಾಗಿತ್ತು.

ಇದಾಗಿ ಒಂದು ವರ್ಷ ಕಳೆದರೂ ಮುಖ್ಯಮಂತ್ರಿಯಿಂದ ಯಾವುದೇ ಸ್ಪಂದನೆ ಸಿಗದಿದ್ದಾಗ ಹೋರಾಟಗಾರರು 2016 ಜುಲೈ 21ರಂದು ಹರಪನಹಳ್ಳಿ ಬಂದ್‌ ನಡೆಸಿದ್ದರು.

1997ರಲ್ಲಿ ಜಿಲ್ಲೆಗಳ ಪುನರ್‌ ರಚನೆ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಗೆ ಹರಪನಹಳ್ಳಿ ಸೇರ್ಪಡೆಗೊಂಡಿದ್ದರೂ ಬಳ್ಳಾರಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿದೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಇಂದಿಗೂ ಬಳ್ಳಾರಿ ಸೊಗಡನ್ನು ಮಡಿಲಲ್ಲಿ ಕಟ್ಟಿಕೊಂಡಿದೆ. 2013–14ರವರೆಗೂ ಹರಪನಹಳ್ಳಿಗೆ ಹೈ.ಕ ಪ್ರದೇಶ ಮಂಡಳಿಯ ಅನುದಾನ ಬಂದಿದೆ. ಈಗಲೂ ಕೂಡ ಪದವೀಧರ ಕ್ಷೇತ್ರ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಬಳ್ಳಾರಿ ಜಿಲ್ಲೆಗೆ ಮತದಾನ ಮಾಡಲಾಗುತ್ತಿದೆ. ಬಿ.ಎಸ್.ಎನ್.ಎಲ್, ಎಲ್‌ಐಸಿ, ಅಂಚೆ ಇಲಾಖೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

-ಬಿ.ಜಿ.ಪ್ರಹ್ಲಾದಗೌಡ

ಪ್ರತಿಕ್ರಿಯಿಸಿ (+)