ಶುಕ್ರವಾರ, ಡಿಸೆಂಬರ್ 6, 2019
24 °C

ಶಾಹಿದ್ ಬದುಕಿನ ಬೆರಗುಗಳು

Published:
Updated:
ಶಾಹಿದ್ ಬದುಕಿನ ಬೆರಗುಗಳು

ಬಂಧು-ಮಿತ್ರರು 'ಬೇಡ' ಎಂದರು. ಪತ್ನಿ ಮೀರಾ ಹೇಳಿದ್ದು: 'ಯಾವುದಕ್ಕೂ ಯೋಚಿಸಿ'. ಆರಾಮ ಕುರ್ಚಿ ಮೇಲೆ ಕುಳಿತ ಶಾಹಿದ್ ಕಪೂರ್ ಮನಸ್ಸು ಜೋಕಾಲಿ. ಸಂಜಯ್ ಲೀಲಾ ಬನ್ಸಾಲಿ 'ಪದ್ಮಾವತ್' ಸಿನಿಮಾದಲ್ಲಿ ರಜಪೂತ ರಾಜನ ಪಾತ್ರಕ್ಕೆ ಆಹ್ವಾನ ಕೊಟ್ಟಾಗ ಶಾಹಿದ್ ಪರಿಸ್ಥಿತಿ ಹೀಗಾಗಿತ್ತು.

ನಿರ್ದೇಶಕ ಬನ್ಸಾಲಿ ಆರಾಧಕರಲ್ಲಿ ಶಾಹಿದ್ ಕೂಡ ಒಬ್ಬರು. ಏಕ್ ದಂ ಅವಕಾಶ ತಿರಸ್ಕರಿಸಲು ಸಾಧ್ಯವಿರಲಿಲ್ಲ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ನಟಿಸಲು ನಿಕ್ಕಿಯಾಗಿ ಎರಡು ತಿಂಗಳಾದ ಮೇಲೆ ತನಗೆ ಬುಲಾವು ಬಂದದ್ದು ಶಾಹಿದ್ ಯೋಚಿಸಲು ಇನ್ನೊಂದು ಕಾರಣ. ಅದು ಅತಿಥಿ ಪಾತ್ರ ಇರಬಹುದೇ ಎಂಬ ಗುಮಾನಿ ತಲೆಯಲ್ಲಿ. ಯಾವುದಕ್ಕೂ ಒಮ್ಮೆ ಕಂಡು ಬರೋಣ ಎಂದುಕೊಂಡು ಬನ್ಸಾಲಿ ಕಚೇರಿಗೆ ಹೋದರು. ಮನೆಗೆ ಮರಳುವಷ್ಟರಲ್ಲಿ ಆ ಪಾತ್ರ ಒಪ್ಪಿಕೊಳ್ಳಲು ನಿರ್ಧರಿಸಿದ್ದರು.

ಈಗ ವಿವಾದಗಳ ಎಡರುಗಳ ನಡುವೆಯೂ 'ಪದ್ಮಾವತ್' ಸಿನಿಮಾ ತೆರೆಕಂಡಿದೆ. ಬರುತ್ತಿರುವ ಪ್ರತಿಕ್ರಿಯೆಗಳಲ್ಲೂ ರಣವೀರ್ ಸಿಂಗ್ ಮೆಚ್ಚುಗೆಯದ್ದೇ ಸಿಂಹಪಾಲು. ಅದರಿಂದ ಶಾಹಿದ್ ಅವರಿಗೆ ಬೇಸರವೇನೂ ಇಲ್ಲ.

ಹದಿನಾಲ್ಕು ವರ್ಷಗಳ ಸುದೀರ್ಘ ಸಿನಿಮಾ ಅನುಭವದ ನಂತರ ಬನ್ಸಾಲಿ ಅವಕಾಶ ಕೊಟ್ಟದ್ದು ಈ ನಟನಿಗೆ ಮುಖ್ಯವೆನಿಸಿದೆ. ಮೊದಲ ಸಿನಿಮಾ 'ಇಷ್ಕ್ ವಿಷ್ಕ್' ತೆರೆಕಂಡ ಮೇಲೆ ನಕ್ಷತ್ರಗಳನ್ನು ಎಟುಕಿಸಿಕೊಂಡಷ್ಟು ಹಿಗ್ಗಿದ್ದ ಶಾಹಿದ್, ಆಮೇಲೆ 'ಜಬ್ ವಿ ಮೆಟ್' ಸಿನಿಮಾ ಯಶಸ್ಸಿನಿಂದ ಕೆಲವು ಮೆಟ್ಟಿಲುಗಳನ್ನೇರಿದ್ದರು. ಆದರೂ ತಲೆ ತುಂಬ ಗೊಂದಲಗಳು. 23ರ ವಯಸ್ಸಿನಲ್ಲೇ ಕರೀನಾ ಕಪೂರ್ ಪ್ರೇಮದಾಸನಾಗಿದ್ದ ಅವರಿಗೆ ಆಮೇಲೆ ಬದುಕಿನ ಸತ್ಯ ದರ್ಶನಗಳಾಗುತ್ತಾ ಬಂತು.

ಶಾಹಿದ್ ಸಿನಿಮಾ ನಾಯಕ ಆದದ್ದೂ ಸಿನಿಮೀಯವೇ. ಅವರಪ್ಪ ಪಂಕಜ್ ಕಪೂರ್ ತಣ್ಣಗಿನ ಅಭಿನಯಕ್ಕೆ ಹೆಸರಾದವರು. ಅಮ್ಮ ನೀಲಿಮಾ ಅಜೀಂ ನಟಿಯಷ್ಟೇ ಅಲ್ಲ; ನೃತ್ಯಗಾರ್ತಿಯೂ ಹೌದು. ಹಾಗಿದ್ದರೂ ಅಪ್ಪ-ಅಮ್ಮ ಮಗನ ಹೆಸರನ್ನು ಯಾರಿಗೂ ಶಿಫಾರಸು ಮಾಡಲಿಲ್ಲ. ಏನಿಲ್ಲವೆಂದರೂ ನೂರು ಆಡಿಷನ್ ಗಳನ್ನು ಎದುರಿಸಿ, ನಿರಾಶನಾಗಿ ಮರಳಿದ್ದ ಶಾಹಿದ್ ತನ್ನ ವೃತ್ತಿ ಬದುಕನ್ನು ತಾನಾಗಿಯೇ ರೂಪಿಸಿಕೊಂಡರು.

ಬಾಲ್ಯದಲ್ಲಿಯೇ ನೃತ್ಯದಲ್ಲಿ ಶಾಹಿದ್‌ಗೆ ಇನ್ನಿಲ್ಲದ ಆಸಕ್ತಿ. ಅಮ್ಮನ ಶಾಸ್ತ್ರೀಯ ನೃತ್ಯದ ಪ್ರೇರೇಪಣೆ ಒಂದು ಕಡೆ. ಮೈಕಲ್ ಜಾಕ್ಸನ್ ಮೇಲಿನ ಅಭಿಮಾನ ಇನ್ನೊಂದು ಕಡೆ. ಮುಂಬೈನಲ್ಲಿ ಒಮ್ಮೆ ಮೈಕಲ್ ಜಾಕ್ಸನ್ ಕಾರ್ಯಕ್ರಮ ನಿಗದಿಯಾಯಿತು. ತನ್ನ ಪಾಕೆಟ್ ಮನಿಯನ್ನೆಲ್ಲ ಜೋಡಿಸಿಕೊಂಡು ಆ ಕಾರ್ಯಕ್ರಮಕ್ಕೆ ಟಿಕೆಟ್ ಕೊಂಡುಕೊಂಡಿದ್ದರು.

ಶ್ಯಾಮಕ್ ದಾವರ್ ನೃತ್ಯ ಸಂಸ್ಥೆಗೆ ಸೇರಿದ ಶಾಹಿದ್, ಕೆಲವೇ ತಿಂಗಳಲ್ಲಿ ಪ್ರಮುಖ ನೃತ್ಯಗಾರನ ಸ್ಥಾನ ಕಂಡುಕೊಂಡರು. ದೇಶದ ವಿವಿಧೆಡೆ ಪ್ರದರ್ಶನಗಳನ್ನು ನೀಡಿದರು. ಅದಕ್ಕಾಗಿ ಹಣವೂ ಸಿಗುತ್ತಿತ್ತು. ಅದನ್ನು ಸೇರಿಸಿಕೊಂಡು ನಟನಾಗಬೇಕೆಂಬ ಸಿದ್ಧತೆಗೆ ಕೈಹಾಕಿದ್ದು.

ದೊಡ್ಡ ಸ್ಟಾರ್ ಆಗದ ಅವರು ಸದಾ ಪ್ರಯೋಗಗಳಿಗೆ ಒಡ್ಡಿಕೊಂಡರು. ಚಾಕೊಲೆಟ್ ಬಾಯ್, ಮಾದಕದ್ರವ್ಯ ವ್ಯಸನಿ ಪಾಪ್ ಗಾಯಕ, ವಿಶಾಲ್ ಭಾರದ್ವಾಜ್ ರೂಪಿಸಿದ ಶೇಕ್ಸ್ ಪಿಯರ್ ನಾಟಕಗಳ ಪ್ರೇರಿತ ಪಾತ್ರಗಳಿಗೆ ಜೀವ ತುಂಬಿದ್ದೇ ಇದಕ್ಕೆ ಸಾಕ್ಷಿ.

ಒಂದು ದಿನ ಹದಿನೈದು ತಾಸಿನ ಚಿತ್ರೀಕರಣ ಮುಗಿಸಿಕೊಂಡು ಶಾಹಿದ್ ಮನೆಗೆ ಬಂದರು. 'ಹೇಗಿತ್ತು ದಿನ?'  ಹೆಂಡತಿ ಕೇಳಿದರು. 'ಇವತ್ತು ಒಂದು ಶಾಟ್ ಕೂಡ ಚಿತ್ರೀಕರಿಸಲಿಲ್ಲ. ಆದರೂ ನನಗೆ ಖುಷಿ. ನಾಳೆಗೆ ನಾವು ಅಷ್ಟು ಚೆನ್ನಾಗಿ ಸಿದ್ಧರಾದೆವು' ಎಂದು ಶಾಹಿದ್ ಪ್ರತಿಕ್ರಿಯಿಸಿದ್ದರು. ಬನ್ಸಾಲಿ ಬೈಯ್ಗುಳಗಳನ್ನೂ ಜೀರ್ಣಿಸಿಕೊಂಡಿರುವ ಅವರಿಗೆ ಪುಟ್ಟ ಕಂದ ಮಿಶಾಳನ್ನು ನೋಡಿದರೆ ದಣಿವೆಲ್ಲ ಮಾಯವಾಗುವುದಂತೆ.

ಅವಕಾಶಕ್ಕಾಗಿ ಪಡಿಪಾಟಲು ಪಟ್ಟು, ಮೂರು ಸಲ ಭಗ್ನಪ್ರೇಮಿಯಾಗಿ, ಮೂವತ್ತು ವಯಸ್ಸು ದಾಟಿದ ಮೇಲೆ ಕಾಲೇಜು ಹುಡುಗಿಯನ್ನು ಮದುವೆಯಾಗಿ, ಈಗ ಹೀಗೆಲ್ಲ ಇರುವ ಶಾಹಿದ್ ಬದುಕಿನಲ್ಲಿ ಒಂದಿಷ್ಟು ಬೆರಗುಗಳಂತೂ ಇವೆ.

ಪ್ರತಿಕ್ರಿಯಿಸಿ (+)