ಬುಧವಾರ, ಡಿಸೆಂಬರ್ 11, 2019
26 °C

ಅಯ್ಯೋ, ಇದು ಹಾವಲ್ಲ

Published:
Updated:
ಅಯ್ಯೋ, ಇದು ಹಾವಲ್ಲ

ರಾಜ ಗಾಂಭೀರ್ಯದ ಬಿಳಿ ಗರುಡ (Haliastur Indus) ದೊಡ್ಡ ದೇಹದ ಸುಂದರ ಪಕ್ಷಿ. ಎತ್ತರದ ಮರಗಳ ರೆಂಬೆಗಳ ತುದಿಯಿಂದಲೋ, ಬಂಡೆಗಳ ಮೇಲಿಂದಲೋ ಆಹಾರಕ್ಕಾಗಿ ಹೊಂಚುಹಾಕುತ್ತೆ ಈ ಗರುಡ. ಮೀನುಗಾರರು ತಂದ ಮೀನನ್ನು ಆರಿಸುವುದು ವಾಡಿಕೆ. ಅವರು ತಮಗೆ ಬೇಡವೆಂದು ಬಿಸುಟ ಮೀನು, ಏಡಿ ಅಥವಾ ಜಲಚರಗಳನ್ನು ಮೇಲಕ್ಕೆ ಒಯ್ದು ತಿನ್ನುತ್ತದೆ.

ಕೆಲ ಸಣ್ಣಪುಟ್ಟ ಹಕ್ಕಿಗಳು ಬೇಟೆಯಾಡುವ ಹುಳು, ಹುಪ್ಪಟೆ, ಮೀನುಗಳನ್ನೂ ಇದು ಚಾಣಾಕ್ಷತನದಿಂದ ಕಬಳಿಸುತ್ತದೆ. ನಮ್ಮ ದೇಶದ ವಿವಿಧ ರಾಜ್ಯಗಳು, ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಕಂಡು ಬರುತ್ತದೆ. ಈ ಪಕ್ಷಿ ವಿಷ್ಣುವಿನ ವಾಹನವೆಂದೇ ಪುರಾಣಗಳಲ್ಲಿ ಮಹತ್ವ ಪಡೆದಿದೆ. ಬೆಂಗಳೂರಿನ ಲಾಲ್‌ಬಾಗ್, ಕೆಲ ದೊಡ್ಡ ಕೆರೆಗಳು, ನಗರದಂಚಿನ ನೀರಿನ ಪ್ರದೇಶಗಳು ಇದರ ಸುರಕ್ಷಿತ ತಾಣಗಳು.

ತಿಪ್ಪಗೊಂಡನಹಳ್ಳಿಯ ಜಲಾಶಯದ ದಡದಲ್ಲಿ ಈ ಗರುಡ ಹವ್ಯಾಸಿ ಛಾಯಾಗ್ರಾಹಕ ಪ್ರಸನ್ನ ವೆಂಕಟೇಶ್‌ ಅವರ ಕ್ಯಾಮೆರಾಕ್ಕೆ ಸೆರೆ ಸಿಕ್ಕಿದೆ. ಮೀನುಗಾರರು ಬಿಸುಟ ಕಳೆಯ ದಂಟನ್ನೇ ಪುಟ್ಟ ಹಾವೆಂದು ಭಾವಿಸಿ ಕಾಲುಗುರಿಗೆ ಸಿಕ್ಕಿಸಿ ಮೇಲಕ್ಕೆ ಹಾರಿತು. ಗಾಳಿಯಲ್ಲೇ ಅದನ್ನೊಮ್ಮೆ  ಪರಿಶೀಲಿಸಿದ ಗರುಡ ಪೆಚ್ಚಾದ. ಶೋಭಾ ಲಿಮಿಟೆಡ್ ಸಂಸ್ಥೆಯಲ್ಲಿ ಅಧಿಕಾರಿಯಾಗಿರುವ ಕುಮಾರ್ ಹತ್ತು ವರ್ಷಗಳಿಂದ ವನ್ಯಜೀವಿ, ವನ್ಯಪಕ್ಷಿ ಛಾಯಾಗ್ರಹಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

ಈ ಚಿತ್ರ ತೆಗೆಯಲು ಬಳಕೆಯಾದ ಕ್ಯಾಮೆರಾ ನಿಕಾನ್ D4, 500 ಎಂ.ಎಂ. ಫೋಕಲ್ ಲೆಂಗ್ತ್ ಜೂಂ ಲೆನ್ಸ್‌, ಅಪರ್ಚರ್ F4, ಷಟರ್ ವೇಗ 1/5000 ಸೆಕೆಂಡ್,  ಐಎಸ್ಒ 400, ಎಕ್ಸ್‌ಪೋಷರ್ ಕಾಂಪನ್ಶೇಶನ್ (-) 0.3 ಮತ್ತು ಟ್ರೈಪ್ಯಾಡ್ ಬಳಕೆಯಾಗಿದೆ.

ಈ ಚಿತ್ರದ ತಾಂತ್ರಿಕ ಮತ್ತು ಕಲಾತ್ಮಕ ಅನುಸಂಧಾನದ ಪ್ರಯತ್ನವನ್ನು ಹೀಗೆ ಮಾಡಬಹುದು...

*ರಭಸದಿಂದ ಮೇಲಕ್ಕೆ ಹಾರುತ್ತಿರುವ ಪಕ್ಷಿಯ ಸೂಕ್ಷ್ಮ ಮುಖಭಾವ, ಕಣ್ಣಿನ ದೃಷ್ಟಿ, ಬಿಚ್ಚಿದ ರೆಕ್ಕೆಗಳ ಅಂತರಕ್ಕೆ, ಮೆಲ್ಪದರಕ್ಕೆ ಸರಿಹೊಂದುವ ಕಾಲುಗಳ ಮಾಟ, ಅಲ್ಲಿ ಸಿಕ್ಕಿಸಿರುವ ಕಳೆಯ ದಂಟು ಇತ್ಯಾದಿ ವಿವರಗಳು ಸಮರ್ಪಕವಾಗಿ ದಾಖಲಾಗಿವೆ.

*ಹೀಗೆ ಎಲ್ಲವನ್ನೂ ಸಮರ್ಪಕವಾಗಿ ದಾಖಲಿಸಲು ಅತಿ ಹೆಚ್ಚಿನ ಷಟರ್ ವೇಗ ಮತ್ತು ಡೆಪ್ತ್ ಆಫ್ ಫೀಲ್ದ್ ಕಾಯ್ದುಕೊಳ್ಳುವುದು ಅಗತ್ಯ. ಜೊತೆಗೆ ಪ್ರತಿಯೊಂದು ಭಾಗದ ವರ್ಣ ಪ್ರಸರಣ ಹಾಗೂ ಛಾಯಾಂತರವೂ ಮುಖ್ಯ. ಈ ಚಿತ್ರದಲ್ಲಿ ತಾಂತ್ರಿಕ ಅಂಶಗಳೆಲ್ಲವೂ ಸಮರ್ಪಕವಾಗಿವೆ.

*ಇದು ವನ್ಯಪಕ್ಷಿಯ ಚಲನಶೀಲ ಚಿತ್ರಣ. ಆದರೆ ಚಿತ್ರಕಲೆಯ ಅನೇಕ ಆಯಾಮಗಳು ಇಲ್ಲಿ ತಂತಾನೇ ರೂಪುಗೊಂಡಿವೆ. ಚಿತ್ರಣದ ಪ್ರಭಾವ, ಜೀವಂತಿಕೆ, ವಿಷಯ ಜ್ಞಾನ, ವಸ್ತುಗಳ ಸಮಗ್ರತೆ, ನಿರೂಪಿಸಿದ ವಸ್ತುಗಳ ಸಮತೋಲನ, ಭಾವ ನಿರೂಪಣೆಯಲ್ಲಿನ ಅಖಂಡತೆ (ಇನ್‌ಫಿನಿಟಿ), ವಸ್ತುವಿನ ಮುಂಭಾಗದೆಡೆಗಿನ ರಿಲೀಫ್ ಮತ್ತು ಸಂಯೋಜನೆ ಗಮನಾರ್ಹ.

*ಚಿತ್ರವನ್ನು ಪ್ರತಿಬಾರಿ ಗಮನಿಸಿದಾಗಲೂ ಹೊಸ ಕಲಾತ್ಮಕ ಅಂಶಗಳು ಅನುಭವಕ್ಕೆ ಬರುತ್ತವೆ. ಹೀಗೆ ಅನುಭವ ದಾಟಿಸುವ ಚಿತ್ರಗಳು ಛಾಯಾಗ್ರಾಹಕನ ಪರಿಶ್ರಮಕ್ಕೆ ಸಾರ್ಥಕತೆಯ ಭಾವ ನೀಡುತ್ತವೆ.

ಪ್ರತಿಕ್ರಿಯಿಸಿ (+)