ಸೋಮವಾರ, ಡಿಸೆಂಬರ್ 9, 2019
22 °C

ಇವನು ‘ಬೆಲ್ ಬಾಟಂ’ ದಿವಾಕರ್

Published:
Updated:
ಇವನು ‘ಬೆಲ್ ಬಾಟಂ’ ದಿವಾಕರ್

ಅದು ಧರ್ಮಶ್ರೀ ಮಂಜುನಾಥ ದೇವಸ್ಥಾನದ ಆವರಣ. ಬೆಳಗಿನ ಎಳೆಕಿರಣಗಳು ಹಸಿರೆಲೆಗಳ ಸಂದಿಯಿಂದ ನುಸುಳಿ ನೆಲದೆದೆಯನ್ನು ಬೆಚ್ಚಗಾಗಿಸುತ್ತಿತ್ತು. ಹಿನ್ನೆಲೆಯಲ್ಲಿ ಮಂತ್ರಘೋಷ, ಅದಕ್ಕೆ ಸಾಥ್ ನೀಡುವ ಹಕ್ಕಿಗಳ ಕಲರವ... ಇಂಥ ಪ್ರಶಾಂತ ವಾತಾವರಣದಲ್ಲಿ ಹಳೆಯ ಪತ್ತೆದಾರಿ ಕಾದಂಬರಿಯ ಪುಟಗಳಿಂದ ಜೀವತಳೆದು ಎದ್ದುಬಂದಂಥ ಒಬ್ಬ ಡಿಟೆಕ್ಟಿವ್‌ ಕೈಯಲ್ಲಿ ಪಿಸ್ತೂಲು ಹಿಡಿದು ನಿಂತಿದ್ದ. ಹೆಗಲ ಮೇಲೆ ಒಂದು ಗೂಬೆ. ಪಿಸ್ತೂಲ್ ಬೆಂಕಿ ಉಗುಳುತ್ತಿದೆ... ದೇವಸ್ಥಾನದ ಆವರಣದಲ್ಲೆಂಥ ಗುಂಡಿಮ ಮೊರೆತ? ಯಾರೀ ಪಿಸ್ತೂಲುಧಾರಿ..?

ಅವನೇ ಡಿಟೆಕ್ಟಿವ್‌ ದಿವಾಕರ್! ಎಲ್ಲೋ ಎಂಬತ್ತರ ದಶಕದ ಕಥೆ ಕೇಳಿದ ಹಾಗಾಗುತ್ತಿದೆಯೇ? ನಿಮ್ಮ ಊಹೆ ಪೂರ್ತಿ ಸುಳ್ಳಲ್ಲ... ಡಿಟೆಕ್ಟಿವ್‌ ದಿವಾಕರ್ ಕಾಣಿಸಿಕೊಂಡಿದ್ದು ಪೋಸ್ಟರ್‌ನಲ್ಲಿ. ಅದು ‘ಬೆಲ್ ಬಾಟಂ’ ಸಿನಿಮಾ ಮುಹೂರ್ತ ಸಂದರ್ಭದಲ್ಲಿ ಕಂಡ ಪೋಸ್ಟರ್.

ಮೊದಲು ಗೂಬೆ ಚಿತ್ರ ಕೊಟ್ಟು ಸಿನಿಮಾ ಶೀರ್ಷಿಕೆ ಹುಡುಕಿ ಎಂದು, ನಂತರ ಒಂದು ಹುಡುಗಿಯ ಚಿತ್ರ ಕೊಟ್ಟು ನಾಯಕಿಯ ಹೆಸರು ಹುಡುಕಿ ಎಂದೆಲ್ಲ ಜನರನ್ನೇ ಪತ್ತೆದಾರಿಗಳನ್ನಾಗಿಸುತ್ತಿರುವ ‘ಬೆಲ್ ಬಾಟಂ’ ಚಿತ್ರತಂಡ ಪತ್ರಕರ್ತರ ಎದುರು ಕೂತಿತ್ತು. ಟಿ.ಕೆ. ದಯಾನಂದ ಅವರ ಕಥೆಗೆ ಜಯತೀರ್ಥ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಇದೊಂದು ಬಗೆಯಲ್ಲಿ ನಿರ್ದೇಶಕರುಗಳ ತಂಡ’ ಎಂದೇ ಮಾತಿಗಾರಂಭಿಸಿದರು. ಈ ತಂಡದಲ್ಲಿನ ರಿಷಬ್ ಶೆಟ್ಟಿ, ಜಯತೀರ್ಥ, ಶಿವಮಣಿ, ದಯಾನಂದ್ ಎಲ್ಲರೂ ನಿರ್ದೇಶಕರುಗಳೇ.

‘ಸಿನಿಮಾದ ಶೀರ್ಷಿಕೆಗೂ, ನಾಯಕನ ಮೀಸೆಗೂ, ನಾಯಕಿಯ ಜಡೆಗೂ ಖಂಡಿತ ಸಂಬಂಧವಿದೆ. ಡಿಟೆಕ್ಟೀವ್ ದಿವಾಕರ್ ಮತ್ತು ಕುಸುಮಾ ಎಂಬ ಪಾತ್ರಗಳ ಸುತ್ತಲೇ ಕಥೆ ಸುತ್ತುತ್ತದೆ.

‘ಇದು ಭರ್ಜರಿ ಮನರಂಜನೆ ಇರುವ ಕಥೆ’ ಎಂದರು ದಯಾನಂದ್. ‘ನನ್ನೆಲ್ಲ ಪ್ರತಿಭೆಯನ್ನು ವ್ಯಯಿಸಿದ್ದೇನೆ ಈ ಕಥೆಗೆ’ ಎಂದೂ ಅವರು ಹೇಳಿದರು. ಮೂಡಿ ನಂಜಪ್ಪ, ಗೂಬೆ ಖಾನ್, ಮರಕುಟುಕ, ಸಗಣಿ ಖಾನ್, ರೇಡಿಯೊ ರಾಜ್ ಹೀಗೆ ಈ ಸಿನಿಮಾದ ಪಾತ್ರಗಳ ಹೆಸರುಗಳೇ ಅವರ ಮಾತುಗಳನ್ನು ಪುಷ್ಟೀಕರಿಸುವ ಹಾಗಿವೆ. ‘ಕನ್ನಡದಲ್ಲಿ ಪತ್ತೆದಾರಿ ಕಾದಂಬರಿಗಳ ಒಂದು ಪರಂಪರೆಯೇ ಇದೆ. ನನ್ನ ಅಣ್ಣ ಅಂಥ ಪುಸ್ತಕಗಳನ್ನು ತಂದು ಓದುತ್ತಿದ್ದ. ಈ ಚಿತ್ರ ಅಂಥ ಕಾಮಬರಿಕಾರರಿಗೆ ನಾವು ಸಲ್ಲಿಸುತ್ತಿರುವ ಗೌರವವೂ ಹೌದು’ ಎನ್ನುವುದು ದಯಾನಂದ್‌ ಅವರ ವಿವರಣೆ.

80ರ ದಶಕದಲ್ಲಿ ನಡೆಯುವ ಪತ್ತೆದಾರಿ ಕಥೆಯನ್ನು ತೆರೆಯ ಮೇಲೆ ತರುತ್ತಿದ್ದಾರೆ ಜಯತೀರ್ಥ. ಪತ್ತೆದಾರಿ ತಂತ್ರಗಳು, ಪಾತ್ರಗಳು, ವೇಷಭೂಷಣ ಎಲ್ಲವೂ ಆ ಕಾಲದ್ದೇ ಆಗಿರುತ್ತವಂತೆ.

‘ನಾನು ನಾಯಕನಿಗೆ ಹೆಜ್ಜೆ ಹೆಜ್ಜೆಗೂ ಅಡೆತಡೆ ಉಂಟುಮಾಡುತ್ತಿರುತ್ತೇನೆ’ ಎಂದು ಹರಿಪ್ರಿಯಾ ತಮ್ಮ ಪಾತ್ರದ ಕುರಿತು ಹೇಳುತ್ತಿರುವ ಹಾಗೆಯೇ ಜಯತೀರ್ಥ ‘ಮತ್ತೇನೂ ಸುಳಿವು ಕೊಡಬೇಡಿ’ ಎಂಬ ಸೂಚನೆ ನೀಡಿದರು. ಜಯತೀರ್ಥ ನಿರ್ದೇಶನದ ಸಿನಿಮಾ ಎಂದು ತಿಳಿಯುತ್ತಿದ್ದ ಹಾಗೆಯೇ ಕಥೆ ಕೇಳುವ ಮೊದಲೇ ಹರಿಪ್ರಿಯಾ ನಟಿಸಲು ಒಪ್ಪಿಕೊಂಡುಬಿಟ್ಟರಂತೆ. ‘ಈಗಾಗಲೇ ತಾವೊಬ್ಬ ಒಳ್ಳೆಯ ನಿರ್ದೇಶಕ ಎಂದು ಸಾಬೀತು ಮಾಡಿಕೊಂಡಿರುವ ರಿಷಬ್ ಶೆಟ್ಟಿ, ಈ ಚಿತ್ರದ ಮೂಲಕ ಒಬ್ಬ ಒಳ್ಳೆಯ ನಟ ಎಂಬುದನ್ನೂ ಸಾಬೀತುಗೊಳಿಸಲಿದ್ದಾರೆ’ ಎಂಬುದು ಹರಿಪ್ರಿಯಾ ನಂಬಿಕೆ.

ಕಥೆಗೆ ತಕ್ಕ ಹಾಗೆ, ಆಧುನಿಕತೆಯ ಗಾಳಿ ಕಡಿಮೆ ಸೋಕಿರುವ ಪ್ರದೇಶಗಳಲ್ಲೇ ಚಿತ್ರೀಕರಿಸಲು ತಂಡ ಯೋಜಿಸಿಕೊಂಡಿದೆ. ಫೆ. 15ರಿಂದ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಬನವಾಸಿ, ಶಿವಮೊಗ್ಗ, ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಟೆಕ್ಟಿವ್‌ ದಿವಾಕರ್ ಚಿತ್ರೀಕರಣಗೊಳ್ಳಲಿದ್ದಾನೆ.‌

ಸಂತೋಷ್‌ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಛಾಯಾಗ್ರಹಣ ‘ಬೆಲ್‌ ಬಾಟಂ’ಗೆ ಇರಲಿದೆ.

ಪ್ರತಿಕ್ರಿಯಿಸಿ (+)