ಶುಕ್ರವಾರ, ಡಿಸೆಂಬರ್ 13, 2019
27 °C

ಘಟಾನುಘಟಿಗಳು ಪ್ಯಾಡ್ ಹಿಡಿದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಘಟಾನುಘಟಿಗಳು ಪ್ಯಾಡ್ ಹಿಡಿದರು

ಸಾಮಾಜಿಕ ಜವಾಬ್ದಾರಿಯ ಕಲಾಮಾಧ್ಯಮ ಸಿನಿಮಾ’ ಎನ್ನುವುದು ಎಂಬುದು ನಟ ಅಕ್ಷಯ್‌ ಕುಮಾರ್ ಅವರ ಮಾತು. ಅವರು ಸಿನಿಮಾಗಳೂ ಇದನ್ನೇ ನಿರೂಪಿಸಿವೆ. ಕಡಿಮೆ ಖರ್ಚಿನಲ್ಲಿ ಸ್ಯಾನಿಟರಿ ಪ್ಯಾಡ್‌ ತಯಾರಿಸುವ ಯಂತ್ರವನ್ನು ಅನ್ವೇಷಿಸಿದ ಅರುಣಾಚಲಂ ಮುರುಗನಾಥಂ ಜೀವನದಿಂದ ಸ್ಫೂರ್ತಿ ಪಡೆದಿರುವ ‘ಪ್ಯಾಡ್‌ಮನ್‌’ ಚಿತ್ರದ ಪ್ರಚಾರದ ಜೊತೆಗೆ ಸಾಮಾಜಿಕ ಜಾಗೃತಿಯನ್ನೂ ಮೂಡಿಸಬೇಕು ಎಂದು ಆರಂಭಿಸಿದ ‘ಪ್ಯಾಡ್‌ಮನ್‌ ಚಾಲೆಂಜ್‌’ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸೆಲೆಬ್ರೆಟಿಯೊಬ್ಬರು ಸ್ಯಾನಿಟರಿ ನ್ಯಾಪ್ಕಿನ್ ಹಿಡಿದು ಫೋಟೊ ಹಾಕುತ್ತಾರೆ. ಬಳಿಕ ಅವರಿಷ್ಟದ ಸೆಲೆಬ್ರೆಟಿಗೆ ಹೀಗೆ ನ್ಯಾಪ್ಕಿನ್ ಹಿಡಿದು ಫೋಟೊ ಹಾಕುವಂತೆ ಸವಾಲು ಹಾಕುತ್ತಾರೆ. ಮೊದಲು ಈ ಚಾಲೆಂಜ್‌ ಆರಂಭಿಸಿದ್ದು ಅರುಣಾಚಲಂ ಮುರುಗನಾಥಂ. ಕೈಲಿ ಸ್ಯಾನಿಟರಿ ಪ್ಯಾಡ್‌ ಹಿಡಿದು ತೆಗೆಸಿಕೊಂಡ ಫೋಟೊ ಹಾಕಿ, ‘ನಾನು ಸ್ಯಾನಿಟರಿ ಪ್ಯಾಡ್ ಹಿಡಿದುಕೊಂಡಿದ್ದೇನೆ. ಅದರಲ್ಲಿ ನಾಚಿಕೆ ಪಟ್ಟುಕೊಳ್ಳುವುದು ಏನೂ ಇಲ್ಲ’ ಎಂದು ಬರೆದುಕೊಂಡಿದ್ದರು. ಅದನ್ನು ಅಕ್ಷಯ್‌ಕುಮಾರ್‌, ಟ್ವಿಂಕಲ್‌ ಖನ್ನಾ ಅವರಿಗೆ ಟ್ಯಾಗ್‌ ಮಾಡಿದ್ದರು.

ಚಾಲೆಂಜ್‌ ಸ್ವೀಕರಿಸಿದ ಟ್ವಿಂಕಲ್‌ ಖನ್ನಾ ಅವರು ಸೋನಂ ಕಪೂರ್‌, ರಾಧಿಕಾ ಆಪ್ಟೆ ಅವರನ್ನು ಟ್ಯಾಗ್‌ ಮಾಡಿದ್ದರು. ಈಗ ಅಮೀರ್‌ಖಾನ್‌, ಆಲಿಯಾ ಭಟ್‌, ದೀಪಿಕಾ ಪಡುಕೋಣೆ ಸಹ ಈ ಚಾಲೆಂಜ್‌ ಸ್ವೀಕರಿಸಿ ಸ್ಯಾನಿಟರಿ ಪ್ಯಾಡ್‌ ಹಿಡಿದು ತೆಗೆಸಿಕೊಂಡ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ಅವರು ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು ಅವರನ್ನು ಟ್ಯಾಗ್‌ ಮಾಡಿದ್ದರು. ಅವರೂ ಇದೀಗ ಚಾಲೆಂಜ್‌ ಪೂರ್ಣಗೊಳಿಸಿದ್ದಾರೆ.

ರಾಜ್‌ಕುಮಾರ್‌ ರಾವ್‌ ಜೊತೆಗಿನ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅನಿಲ್‌ ಕಪೂರ್‌, ‘ಪುರುಷರು ಮುಜುಗರವಿಲ್ಲದೆ ಸ್ಯಾನಿಟರಿ ಪ್ಯಾಡ್ ಖರೀದಿಸಬೇಕು. ಆಗ ಮಾತ್ರ ಜಗತ್ತು ಸುಂದರವಾಗಿರುತ್ತೆ’ ಎಂದು ಬರೆದುಕೊಂಡಿದ್ದಾರೆ.

ಆದಿತಿ ರಾವ್‌ ಹೈದರಿ, ಸ್ವರಾ ಭಾಸ್ಕರ್‌, ವರುಣ್‌ ಧವನ್‌, ಪರಿಣಿತಿ ಚೋಪ್ರಾ, ಅರ್ಜುನ್‌ ಕಪೂರ್‌ ಎಲ್ಲರೂ ಚಾಲೆಂಜ್‌ ಸ್ವೀಕರಿಸಿ, ತಮ್ಮ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಶಾರುಖ್‌ ಖಾನ್‌, ಅಮಿತಾಬ್‌ ಬಚ್ಚನ್‌ ಅವರಿಗೂ ಚಾಲೆಂಜ್ ಮಾಡಲಾಗಿದೆ. ಅವರಿನ್ನೂ ಪ್ರತಿಕ್ರಿಯಸಬೇಕಷ್ಟೇ.

‘ಚಿತ್ರದ ಪ್ರಚಾರಕ್ಕಾಗಿ ಚಾಲೆಂಜ್‌ ಆರಂಭಿಸಲಾಗಿದೆ. ಸಾಮಾಜಿಕ ಕಳಕಳಿ ಇದರಲ್ಲಿ ಇಲ್ಲ’ ಎಂದು ನೆಟಿಜನ್ನರು ಆರೋಪಿಸಿದ್ದಾರೆ.

‘ಸಿನಿಮಾ ನಿರ್ಮಾಣ ಮಾಡುವ ಮೊದಲು ಇಂತಹ ಜಾಗೃತಿ ಕಾರ್ಯಕ್ರಮ ಯಾಕೆ ಮಾಡಲಿಲ್ಲ. ಸಿನಿಮಾಕ್ಕಾಗಿ ಏನೂ ಬೇಕಾದರೂ ಈ ಸೆಲೆಬ್ರಿಟಿಗಳು ಮಾಡುತ್ತಾರೆ. ಇದು ಕಪಟ ವೇಷ ಅಲ್ಲವೇ?’ ಎಂದು ಕೆಲವರು ಟ್ವಿಂಕಲ್‌ ಖನ್ನಾ ಅವರನ್ನು ಪ್ರಶ್ನಿಸಿದ್ದಾರೆ. 

ಪ್ರತಿಕ್ರಿಯಿಸಿ (+)