ಭಾನುವಾರ, ಡಿಸೆಂಬರ್ 8, 2019
24 °C

ನನ್ನದು ಸಾವಿರಾರು ಮಂದಿಯ ಕುಟುಂಬ

Published:
Updated:
ನನ್ನದು ಸಾವಿರಾರು ಮಂದಿಯ ಕುಟುಂಬ

ಚೆನ್ನಾಗಿ ಓದಿ, ಉದ್ಯೋಗ ಪಡೆದು ಅಪ್ಪ–ಅಮ್ಮನ ಕಷ್ಟ ನೀಗಿಸಬೇಕೆಂಬ ಕನಸು ಕಂಡವಳು ನಾನು. ಹಳ್ಳಿ ಹುಡುಗಿಯಾಗಿದ್ದ ನಾನು ಮುಂದೊಂದು ದಿನ ಕಾರ್ಮಿಕ ನಾಯಕಿ ಆಗುತ್ತೇನೆಂಬ ಕನಸೂ ಕಂಡಿರಲಿಲ್ಲ. ಆದರೆ, ಬಡತನವನ್ನು ಮೀರಬೇಕೆಂಬ ಮಹತ್ವಾಕಾಂಕ್ಷೆ, ಛಲ ನನ್ನಂಥ ಸಾಮಾನ್ಯ ಹುಡುಗಿಯನ್ನು ಹೋರಾಟಕ್ಕೆ ಧುಮುಕುವಂತೆ ಮಾಡಿತು. ಇಂದು ಅದೇ ಹೋರಾಟವೇ ನನ್ನ ಬದುಕಾಗಿದೆ.

ನಾನು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ವೀರಕಪುತ್ರ ಗ್ರಾಮದವಳು. ಬಾಲ್ಯ ಕಳೆದಿದ್ದು ಅಲ್ಲಿಯೇ. ಕುಟುಂಬದ ಕುಲಕಸುಬು ಮಡಿಕೆ ತಯಾರಿಕೆ. ಕೋಲಾರವೆಂದರೆ ಸಾಕು, ಅದು ಬರಗಾಲದ ಪ್ರದೇಶವೆಂದು ಮತ್ತೆ ಹೇಳಬೇಕಿಲ್ಲ. ಒಂದು ಹೊತ್ತಿನ ಊಟಕ್ಕಾಗಿ ಇಡೀ ಕುಟುಂಬವೇ ದುಡಿಯಬೇಕಿತ್ತು. ನನಗೋ ಓದಬೇಕೆಂಬ ಅದಮ್ಯ ಹಂಬಲ. ಚಪ್ಪಲಿ ಕೊಳ್ಳಲು ತ್ರಾಣವಿಲ್ಲದ ನಮಗೆ ಓದು ಗಗನ ಕುಸುಮವಾಗಿತ್ತು. ಆದರೆ ಪಟ್ಟುಬಿಡದೆ ಶಾಲೆಯ ಮೆಟ್ಟಿಲೇರಿದೆ.

ಟೇಕಲ್‌ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಆಯಿತು. ವೀರಕಪುತ್ರದಿಂದ ಟೇಕಲ್‌ಗೆ ಮೂರು ಕಿ.ಮೀ.ನಡೆದೇ ಹೋಗುತ್ತಿದ್ದೆ. ಬೆಳಗಿನ ತಿಂಡಿ ಅಂದರೇನು ಗೊತ್ತಿರಲಿಲ್ಲ. ಶಾಲೆಯಲ್ಲಿ ಮಧ್ಯಾಹ್ನ ಕೊಡುತ್ತಿದ್ದ ಉಪ್ಪಿಟ್ಟು ಹಸಿವು ನೀಗಿಸುತ್ತಿತ್ತು. ಆಗ ಹುಣಸೇಕೋಟೆಯಲ್ಲಿ ಅನಸೂಯಾ ಎನ್ನುವ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಬಹಳಷ್ಟು ದಲಿತ ಸಂಘಟನೆಗಳು ಹೋರಾಟ ನಡೆಸಿದ್ದವು. ನನಗೆ ಅಷ್ಟಾಗಿ ತಿಳಿವಳಿಕೆ ಇರದ ವಯಸ್ಸದು. ಆದರೆ, ಮಹಿಳೆ ಮೇಲೆ ಅತ್ಯಾಚಾರ ಆಗಿದ್ದರ ಬಗ್ಗೆ ಆಕ್ರೋಶವಿತ್ತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಬಂಗಾರಪೇಟೆಗೆ ಹೋಗಬೇಕಿತ್ತು. ಹಳ್ಳಿಯಿಂದ ನಗರಕ್ಕೆ ಹೇಗೆ ಹೋಗಬೇಕು? ಎಲ್ಲಿ ಉಳಿಯಬೇಕು ಅನ್ನುವ ಬಗ್ಗೆ ಆತಂಕವಿತ್ತು. ನಮಗೆ ಪಾಠ ಮಾಡುತ್ತಿದ್ದ ದಾಕ್ಷಾಯಣಿ ಮಿಸ್ ನನ್ನನ್ನೂ ಸೇರಿದಂತೆ 25 ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡು ಪರೀಕ್ಷೆ ಬರೆಸಿದರು. ಅಂದು ಪರೀಕ್ಷೆ ಬರೆದ ಹೆಣ್ಣುಮಕ್ಕಳಲ್ಲಿ ನಾನೊಬ್ಬಳೇ ಪಾಸಾದೆ.

ಬರಗಾಲದ ಕಾರಣದಿಂದ ಪಿಯುಸಿ ಓದುವ ಹೊತ್ತಿಗೆ ನಮ್ಮ ಕುಟುಂಬ ಬೆಂಗಳೂರಿನ ಕುಂಬಳಗೋಡು ಪ್ರದೇಶಕ್ಕೆ ವಲಸೆ ಬಂತು. ಓದು ಅರ್ಧಕ್ಕೆ ಬಿಡಲು ಇಷ್ಟವಿರಲಿಲ್ಲ. ಕುಂಬಳಗೋಡು ತಾಯಿಯ ತವರುಮನೆ. ಅಲ್ಲಿ ಅಜ್ಜ–ಅಜ್ಜಿ ಮತ್ತು ಸಂಬಂಧಿಕರಿದ್ದರು. ಅವರ ಮನೆಯಲ್ಲೇ ನಮ್ಮ ಕುಟುಂಬವೂ ನೆಲೆಸಿತು. ನಮ್ಮನೆಯ ಹೆಂಗಸರಿಗೆ ದೊಡ್ಡದೊಡ್ಡ ಪಾತ್ರೆಗಳಲ್ಲಿ ಅಡುಗೆ ಮಾಡುವುದೇ ದೊಡ್ಡ ಕಾಯಕವಾಗಿತ್ತು.

ಹಳ್ಳಿಯಲ್ಲಿ ಬೆಳೆದಿದ್ದ ನನಗೆ ಬೆಂಗಳೂರು ದೊಡ್ಡ ಭೂತದಂತೆ ಕಾಡತೊಡಗಿತ್ತು. ದ್ವಿತೀಯ ಪಿಯುಸಿಗೆ ಸೇರಲು ಕೈಯಲ್ಲಿ ಕಾಸಿರಲಿಲ್ಲ. ದೊಡ್ಡ ಮಾವ ತಮ್ಮ ಹೆಂಡತಿಯ ಚಿನ್ನದ ಕಿವಿಯೋಲೆ ಮಾರಿ ಕಾಲೇಜಿಗೆ ಸೇರಿಸಿದರೆ, ಚಿಕ್ಕ ಮಾವ ನಿನ್ನಂಥ ಹಳ್ಳಿಹುಡುಗಿ ಇಲ್ಲಿ ಪಾಸಾಗಲ್ಲ ಅಂತ ಸವಾಲೆಸೆದರು. ಅಂತೂ ಪಿಯುಸಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದೆ. ಅವು ಕಷ್ಟದ ದಿನಗಳು. ಪೊರಕೆ ಕಡ್ಡಿ ಕೊಯ್ಯುವುದು, ಸೌದೆ ಆರಿಸುವುದು, ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಪಾಠ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿ ಕೊಡುತ್ತಿದ್ದ ನೂರು ರೂಪಾಯಿ ಓದಿನ ಖರ್ಚಿಗೆ ಒದಗುತ್ತಿತ್ತು.

ಹಣದ ತಾಪತ್ರಯದಿಂದ ಪದವಿ ಓದಲು ಆಗಲಿಲ್ಲ. ಸಿಸ್ಟಂ ಡೈಮೆನ್ಷನ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದೆ. ಸೀರೆ ಉಟ್ಟೇ ಕೆಲಸಕ್ಕೆ ಹೋಗುತ್ತಿದ್ದೆ. ನೇಲ್ ಪಾಲಿಷ್, ಲಿಪ್‌ಸ್ಟಿಕ್ ಅನ್ನು ಬೆರಗಿನಿಂದ ನೋಡಿದ್ದೆ. ಕಾಯಂ ನೌಕರರನ್ನು ಕೆಲಸದಿಂದ ತೆಗೆಯಬೇಕೆಂದು ಕಾರ್ಖಾನೆ ಮಾಲೀಕರು ಯೋಜನೆ ರೂಪಿಸಿದ್ದರು. ಇದನ್ನು ಯೂನಿಯನ್ ವಿರೋಧಿಸಿತು. ಒಮ್ಮೆ ಕಾರ್ಮಿಕ ಸಭೆಗೆ ಹೋಗುವ ಅವಕಾಶವೂ ಸಿಕ್ಕಿತ್ತು. ಕೊನೆಗೆ ಮಾಲೀಕರು ತಮ್ಮ ಪ್ರಸ್ತಾವ ಕೈಬಿಟ್ಟರು. ಇದರಿಂದ ನನ್ನಲ್ಲಿ ತುಸು ಆತ್ಮವಿಶ್ವಾಸ ಮೂಡಿತು. ಆಗ ಓವರ್ ಟೈಮ್ ಮಾಡಿದರೆ ಕಾರ್ಖಾನೆ ಕ್ಯಾಂಟೀನ್‌ನಲ್ಲಿ ಮಸಾಲೆದೋಸೆ ಕೊಡುತ್ತಿದ್ದರು. ಮಸಾಲೆದೋಸೆ ನನ್ನಂಥ ಹಳ್ಳಿಹುಡುಗಿಗೆ ಆಕರ್ಷಣೆಯಾಗಿತ್ತು. ಕೆಲಸ ಮಾಡುತ್ತಲೇ ಕಾರ್ಮಿಕ ಸಂಘಟನೆಯ ಕೆಲಸದಲ್ಲೂ ತೊಡಗಿಸಿಕೊಂಡೆ.

ಗೇರುಪಾಳ್ಯದಲ್ಲಿ ನಡೆದ ಕಾರ್ಮಿಕರ ಹೋರಾಟದಲ್ಲಿ ನನ್ನನ್ನು ಬಂಧಿಸಿ ಜೈಲಿನಲ್ಲಿಟ್ಟರು. ಮಧ್ಯರಾತ್ರಿ ಇನ್‌ಸ್ಪೆಕ್ಟರ್ ನನ್ನನ್ನು ಕರೆದು ‘ನೋಡಮ್ಮ ವಯಸ್ಸಿನ ಹುಡುಗಿ ನೀನು. ಮುಂದೆ ಹೋರಾಟ ಮಾಡಲ್ಲ ಅಂತ ಬರೆದುಕೊಟ್ರೆ ಬಿಟ್ಟುಬಿಡ್ತೀನಿ’ ಅಂದ್ರು. ನಾನು ‘ಹೋರಾಟ ನಿಲ್ಲಿಸಲ್ಲ’ ಅಂದೆ. ನನ್ನ ಮಾತಿನಿಂದ ಅವರಿಗೆ ಸಿಟ್ಟು ಬಂತು. ಅಪರಾಧಿಗಳಂತೆ ಕೈಕೋಳ ತೊಡಿಸಿ ಮರುದಿನ ನ್ಯಾಯಾಲಯಕ್ಕೆ ಕರೆದೊಯ್ದರು. ಆಗ ನಮ್ಮ ಕಾರ್ಮಿಕ ಸಂಘಟನೆಯವರು ನನ್ನನ್ನು ನೋಡಿ ಜೋರಾಗಿ ಚಪ್ಪಾಳೆ ತಟ್ಟಿ ಆತ್ಮವಿಶ್ವಾಸ ತುಂಬಿದರು. ಇದು ನನ್ನೊಳಗಿನ ಹೋರಾಟಗಾರ್ತಿಯ ಬದ್ಧತೆಯನ್ನು ಹೆಚ್ಚಿಸಿತು.

ಜೈಲಿಗೆ ಹೋಗಿ ಬಂದಿದ್ದರಿಂದ ಊರಿನ ಮರ್ಯಾದೆ ಹೋಯಿತು ಎಂದು ಕುಂಬಳಗೋಡಿನ ಜನರು ಗಲಾಟೆ ಮಾಡಿದರು. ಆಗ ನನ್ನ ತಾಯಿ, ‘ನನ್ನ ಮಗಳು ನ್ಯಾಯಕ್ಕಾಗಿ ಜೈಲಿಗೆ ಹೋಗಿದ್ದಾಳೆ, ಯಾವುದೇ ಕೆಟ್ಟ ಕೆಲಸ ಮಾಡಿ ಅಲ್ಲ’ ಎಂದು ನನ್ನ ನಡೆಯನ್ನು ಸಮರ್ಥಿಸಿಕೊಂಡರು. ಆದರೆ, ಪದೇಪದೇ ಹೋರಾಟದಲ್ಲಿ ಭಾಗವಹಿಸುತ್ತಿದ್ದರಿಂದ ತಾಯಿ ಕೆಲವು ಬಾರಿ ಕೋಪಿಸಿಕೊಂಡು ನನ್ನನ್ನು ಮನೆಯಿಂದ ಹೊರಹಾಕಿದ್ದೂ ಉಂಟು. ಹೋರಾಟದ ಹಿಂದಿನ ಕಾರಣ ಅರಿತಾಗ ಮನೆಯಲ್ಲೂ ಪ್ರೋತ್ಸಾಹ ದೊರೆಯಿತು. ಚರ್ಚೆ, ಜಗಳ, ಮುನಿಸು ಸಹಜವಾಗಿದ್ದವು.

ಈ ನಡುವೆ ನನಗೆ ಮದುವೆಯ ಪ್ರಸ್ತಾಪಗಳು ಬರತೊಡಗಿದವು. ಆದರೆ, ಬಡತನ, ಅಪ್ಪ–ಅಮ್ಮನ ಕಷ್ಟ ನೋಡಿ ಮದುವೆಯ ಕುರಿತು ಆಸಕ್ತಿ ಇಲ್ಲದಂತಾಯಿತು. ಮತ್ತಷ್ಟು ಓದಬೇಕು, ಉನ್ನತ ಹುದ್ದೆ ಪಡೆಯಬೇಕೆಂಬ ಹಂಬಲದಿಂದ ಮದುವೆ ತಿರಸ್ಕರಿಸಿದೆ. ಜೈಲಿಗೆ ಹೋಗಿ ಬಂದಿದ್ದರಿಂದ ಕೆಲಸದ ಸ್ಥಳದಲ್ಲಿ ಕಿರಿಕಿರಿ ಮಾಡತೊಡಗಿದ್ದರು. ಅದೇ ಸಮಯಕ್ಕೆ ಕುಂಬಳಗೋಡಿನ ಗ್ರಾಮ ಪಂಚಾಯ್ತಿ ಚುನಾವಣೆ ಬಂತು. ಅಲ್ಲಿ ಸ್ಪರ್ಧಿಸಿ ಹೆಚ್ಚು ಮತಗಳಿಂದ ಗ್ರಾ.ಪಂ. ಸದಸ್ಯೆಯಾಗಿ ಆಯ್ಕೆಯಾದೆ. ಇತ್ತ ಕಾರ್ಮಿಕ ಹೋರಾಟವೂ ಜತೆಯಾಗಿತ್ತು.

ಕೆಲಸ ಬಿಟ್ಟು ಪೂರ್ಣಾವಧಿ ಚಳವಳಿಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ಆಗ ಮೊದಲ ಬಾರಿಗೆ ಸೆಂಟರ್ ಫಾರ್ ಟ್ರೇಡ್ ಯೂನಿಯನ್‌ನಲ್ಲಿ (ಸಿಐಟಿಯು) ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಜವಾಬ್ದಾರಿ ಹೆಗಲೇರಿತು. ಮಹಿಳೆಯಾಗಿ ಇದನ್ನು ಹೇಗೆ ನಿಭಾಯಿಸುತ್ತಾಳೆ ಅನ್ನುವ ಸವಾಲುಗಳಿದ್ದವು. ಆದರೆ, ಸಿಐಟಿಯುನಲ್ಲಿ ಇದಕ್ಕೆ ಒಳ್ಳೆಯ ವಾತಾವರಣವಿತ್ತು. ದೇಶದಲ್ಲಿ ಮೊದಲ ಬಾರಿಗೆ ಅಂಗನವಾಡಿ ಮಹಿಳೆಯರನ್ನು ಸಂಘಟಿಸಿದ್ದ ವಿಮಲಾ ರಣದೀವೆ ಅವರ ಆದರ್ಶವೂ ಕಣ್ಣೆದುರಿಗಿತ್ತು. 1994ರಲ್ಲಿ ಬಳ್ಳಾರಿಯಲ್ಲಿ ಮೊದಲ ಬಾರಿಗೆ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಸಿದೆ. ಅಲ್ಲಿಂದ ಶುರುವಾದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟವನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದೇನೆ.

ಈ ನಡುವೆ ಇತರ ಕಾರ್ಮಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದೆ. ಹೆಜ್ಜಾಲದ ಬೆಳ್ಳಿಯಪ್ಪ ಟೆಕ್ಸ್‌ಟೈಲ್ಸ್‌ನಲ್ಲಿ ಯೂನಿಯನ್  ಒಪ್ಪಿಕೊಳ್ಳಲು ಆಡಳಿತ ಮಂಡಳಿ ತಯಾರಿರಲಿಲ್ಲ. ಅವರ ಪರವಾಗಿ ಹೋರಾಟ ಮಾಡುವಾಗ ಗೋಲಿಬಾರ್‌ ನಡೆಯಿತು. ಮೂವರು ಕಾರ್ಮಿಕರು ಸ್ಥಳದಲ್ಲೇ ಸತ್ತರು. ಗಲಾಟೆಯಲ್ಲಿ ನನ್ನ ಸೀರೆ ಸೀರೆ ರಕ್ತಮಯವಾಗಿ, ಹರಿದುಹೋಗಿತ್ತು. ‘ನನ್ನ ಮೇಲೆಯೇ ಗುಂಡು ಹಾರಿಸಿ’ ಎಂದು ಆಕ್ರೋಶದಿಂದ ಪೊಲೀಸರಿಗೆ ಎದುರು ನಿಂತೆ. ನನ್ನ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಲಾಯಿತು.

ಬಿಪಿಎಲ್ ಕಾರ್ಮಿಕರ ಹೋರಾಟ ನಡೆದಾಗ ನನ್ನನ್ನು ಇತರ ಕಾರ್ಮಿಕರೊಂದಿಗೆ ಬಂಧಿಸಿ ಕಲಬುರ್ಗಿಯ ಜೈಲಿನಲ್ಲಿಟ್ಟರು. ಆಗ ಜೈಲಿನ ನರಕ ಏನೆಂದು ಅರಿವಾಯಿತು. ಜರಡಿ ಹಿಡಿಯದ ಜೋಳದ ಹಿಟ್ಟಿನ ರೊಟ್ಟಿ, ಹುಳುಗಳು ತೇಲುತ್ತಿದ್ದ ಸಾರನ್ನೇ ತಿನ್ನಬೇಕಾಗಿತ್ತು. ಹಸಿವೆ ತಾಳಲಾರದೇ ಬರೀ ಅಕ್ಕಿಯನ್ನೂ ತಿಂದಿದ್ದಿದೆ. ಅಲ್ಲಿನ ಅವ್ಯವಸ್ಥೆ ನೋಡಿ ಜೈಲಿನಲ್ಲೂ ಹೋರಾಟ ಮಾಡಿ ಮೂಲಸೌಕರ್ಯ ಪಡೆದೆವು. ಸ್ವಲ್ಪ ದಿನಗಳ ನಂತರ ಬಿಡುಗಡೆಯಾಯಿತು.

ಕಳೆದ ಏಪ್ರಿಲ್‌ನಲ್ಲಿ 40 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ಪರವಾಗಿ ಹೋರಾಟ ಮಾಡಿದ್ದು ಇತಿಹಾಸ. ಸರ್ಕಾರವನ್ನು ಎದುರು ಹಾಕಿಕೊಂಡು ದಶಕಗಳ ಹೋರಾಟಕ್ಕೆ ಸೂಕ್ತ ಪ್ರತಿಫಲ ದೊರಕಿಸಬೇಕೆಂಬ ಛಲದಿಂದ ಹಗಲೂ–ರಾತ್ರಿ ಕಷ್ಟಪಟ್ಟೆವು. ಕೊನೆಗೂ ನಮ್ಮ ಹೋರಾಟ ಯಶಸ್ವಿಯಾಯಿತು. ಇತ್ತೀಚೆಗೆ ನಗರದ ಅಕ್ರಮ–ಸಕ್ರಮ ಯೋಜನೆಯಲ್ಲಿ ಉಂಟಾದ ಅನ್ಯಾಯ ಪ್ರಶ್ನಿಸಿ ಕೈಗೊಂಡ ಹೋರಾಟದಲ್ಲಿ ಗೇಟ್ ಹತ್ತುವಾಗ ಪೊಲೀಸರು ನನ್ನ ಕಾಲು ಹಿಡಿದು ಜೋರಾಗಿ ಎಳೆದುಬಿಟ್ಟರು. ಕೆಳಗೆ ಬಿದ್ದಿದ್ದರಿಂದ ಕಾಲುಗಳಿಗೆ ತುಂಬಾ ನೋವಾಗಿದೆ. ನೋವು ಅಂತ ಮನೆಯಲ್ಲಿ ಕೂತರೆ ಹೋರಾಟ ಮುಂದುವರಿಯದು. ಅಷ್ಟಕ್ಕೂ ಹೋರಾಟಗಾರರಿಗೆ ಮನೆ ಎಲ್ಲಿರುತ್ತೆ ಹೇಳಿ?

ಇಂದಿಗೂ ಸಂಪಂಗಿರಾಮನಗರದ ಅಂಗನವಾಡಿ ಕಾರ್ಯಕರ್ತೆಯರ ಕಚೇರಿಯೇ ನನ್ನ ಮನೆ. ಕುಂಬಳಗೋಡಿನ ಮನೆಗೆ ಅಪರೂಪಕ್ಕೆ ಹೋಗ್ತೀನಿ. ಹೋರಾಟಕ್ಕೆ ಬರದಿದ್ದರೆ ಬರೀ ವರಲಕ್ಷ್ಮಿಯಾಗಿ, ಯಾರದೋ ಹೆಂಡತಿಯಾಗಿ, ಒಂದೆರೆಡು ಮಕ್ಕಳ ತಾಯಿಯಾಗಿ ಇರುತ್ತಿದ್ದೆ. 23 ವರ್ಷಗಳ ಹೋರಾಟದ ಬದುಕಿನಲ್ಲಿ ಸಾವಿರಾರು ಮಂದಿಯ ಒಡನಾಟದಿಂದ ನನ್ನ ಕುಟುಂಬ ವಿಶಾಲವಾಗಿದೆ. ಅನ್ಯಾಯವನ್ನು ಪ್ರಶ್ನಿಸುವ ನಾಯಕಿಯಾದ ಬಗ್ಗೆ ಹೆಮ್ಮೆ ಇದೆ.


ಪರಿಚಯ
*ಹೆಸರು: 
ವರಲಕ್ಷ್ಮಿ ಎಸ್‌.
* ಹುಟ್ಟಿದ್ದು: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ವೀರಕಪುತ್ರ
* ಕುಟುಂಬ: ಸುಬ್ರಾಯಪ್ಪ (ತಂದೆ), ಸರೋಜಮ್ಮ (ತಾಯಿ), ವೇದಾ (ಅಕ್ಕ), ನಟರಾಜ್ (ಅಣ್ಣ), ರೇಣುಕಾ (ತಂಗಿ)
* ಹೋರಾಟ: ಅಂಗನವಾಡಿ, ಬಿಸಿಯೂಟ, ಗಾರ್ಮೆಂಟ್ ಮತ್ತು ಕಾರ್ಮಿಕ ಹೋರಾಟಗಳಲ್ಲಿ ನೇತೃತ್ವ, ಪ್ರಸ್ತುತು ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ. ಸಂಪರ್ಕ ಸಂಖ್ಯೆ: 94480 87189

ಪ್ರತಿಕ್ರಿಯಿಸಿ (+)