ಉಪಚುನಾವಣಾ ಫಲಿತಾಂಶದ ಪಾಠಗಳು!

7
ರಾಜಸ್ಥಾನದ ಉಪಚುನಾವಣೆ ಸಂದೇಶವು ವಿಭಜಕ ರಾಜಕಾರಣದ ಹಿನ್ನಡೆಯನ್ನು ಸೂಚಿಸುತ್ತಿದೆಯೇ?

ಉಪಚುನಾವಣಾ ಫಲಿತಾಂಶದ ಪಾಠಗಳು!

Published:
Updated:

ರಾಜಸ್ಥಾನದಲ್ಲಿ ಈಚೆಗೆ ನಡೆದ ಉಪಚುನಾವಣೆಗೂ ಮುನ್ನ ಜನರ ಭಾವನೆಗಳನ್ನು ಕೆರಳಿಸಿ ಸಾಂಸ್ಕೃತಿಕ ಪ್ರಶ್ನೆಗಳ ಸುತ್ತ ಗಲಾಟೆಯೆಬ್ಬಿಸಲು ಅಲ್ಲಿನ ಆಳುವ ಪಕ್ಷಕ್ಕೆ ಸರಿಯಾದ ನೆವ ಸಿಕ್ಕಿರಲಿಲ್ಲ. ಬಿಜೆಪಿ ತನ್ನ ‘ಮಿತ್ರ’ನೆಂದು ಭ್ರಮಿಸಿದ್ದ ಕರ್ಣಿಸೇನಾದ ಕೈಗೆ ಕಡೆಗೂ ಒಂದು ಜನಪ್ರಿಯ ಸಿನಿಮಾದ ಪಿಳ್ಳೆನೆವ ಸಿಕ್ಕಿತು. ಈ ಸಿನಿಮಾದ ನಟಿ, ನಿರ್ದೇಶಕರಾದಿಯಾಗಿ ಎಲ್ಲರ ಕೈಕಾಲು, ಕಣ್ಣು ತೆಗೆಯುತ್ತೇವೆಂದು ಮತದಾನ ನಡೆಯುವ ತನಕ ಸ್ವಘೋಷಿತ ನಾಯಕರು ಚೀರುತ್ತಲೇ ಇದ್ದರು. ಕೇಂದ್ರದ ಗೃಹಮಂತ್ರಿಯಿಂದ ಹಿಡಿದು, ಬಿಜೆಪಿ ಆಡಳಿತದ ರಾಜ್ಯಗಳ ಗೃಹಮಂತ್ರಿಗಳವರೆಗೂ ಯಾರೂ ಈ ಬಗ್ಗೆ ತುಟಿಪಿಟಕ್ಕೆನ್ನದೆ ಈ ಚೀರಾಟಗಳಿಗೆ ಕುಮ್ಮಕ್ಕು ಕೊಡುತ್ತಲೇ ಇದ್ದರು.

ಪಂಜಾಬಿನ ಕಾಂಗ್ರೆಸ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಮೊದಮೊದಲು ಈ ಶಕ್ತಿಗಳನ್ನು ಬೆಂಬಲಿಸಿದರು. ಹೈಕಮಾಂಡ್ ತಿವಿದ ಮೇಲೆ, ‘ಪದ್ಮಾವತ್’ ಸಿನಿಮಾದ ಪ್ರದರ್ಶನಕ್ಕೆ ಪಂಜಾಬ್ ಸರ್ಕಾರ ರಕ್ಷಣೆ ನೀಡುತ್ತದೆಂದು ಹೇಳಿ ತೆಪ್ಪಗಾದರು. ನಮ್ಮ ಕೋರ್ಟುಗಳು ಕೂಡ ‘ವಿಷಯ ಕೋರ್ಟಿನಲ್ಲಿರುವುದರಿಂದ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎನ್ನಲು ಬಹುಕಾಲ ತೆಗೆದುಕೊಂಡವು.

ಆದರೆ ರಾಜಸ್ಥಾನ ಲೋಕಸಭಾ ಉಪಚುನಾವಣೆ ನಡೆಯಲಿದ್ದ ಕಾಲದಲ್ಲೇ ‘ಪದ್ಮಾವತಿ’ ಅಲಿಯಾಸ್ ‘ಪದ್ಮಾವತ್’ ಎಂಬ ಸಿನಿಮಾದ ಬಗ್ಗೆ ಯಾಕೆ ಅಷ್ಟೊಂದು ಗಲಾಟೆ ಎಬ್ಬಿಸಲಾಯಿತು; ಗಲಾಟೆ ಎಬ್ಬಿಸಿದವರ ರಾಜಕೀಯ ಉದ್ದೇಶಗಳೇನು- ಇವೆಲ್ಲ ದೇಶದ ಉಳಿದ ರಾಜ್ಯಗಳ ಜನರಿಗೆ ಸರಿಯಾಗಿ ಅರ್ಥವಾಗಿರಲಿಕ್ಕಿಲ್ಲ. ಆದರೆ ರಾಜಸ್ಥಾನದ ಅಜ್ಮೇರ್ ಮತ್ತು ಅಲ್ವಾರ್ ಲೋಕಸಭಾ ಕ್ಷೇತ್ರ ಹಾಗೂ ಮಂಡಲಗಡ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಈ ಸಿನಿಮಾ ಸುತ್ತಲ ತರಲೆಯೆಲ್ಲ ನಿಜವಾದ ಸಮಸ್ಯೆಗಳಿಂದ ಜನರನ್ನು ಬೇರೆಡೆ ಸೆಳೆಯುವ ಕಳ್ಳತಂತ್ರ ಎಂಬುದು ಮತದಾನಕ್ಕೆ ಮೊದಲೇ ಅರ್ಥವಾದಂತಿತ್ತು.

ಕೊಟ್ಟ ಭರವಸೆಗಳನ್ನು ಗಾಳಿಗೆ ತೂರುತ್ತಾ, ನೋಟು ರದ್ದತಿಯ ಆಟದಿಂದ ತೆರಿಗೆ, ಬಜೆಟ್ಟುಗಳ ಆಟಗಳತ್ತ ಜಿಗಿಯುತ್ತಿರುವ ಕೇಂದ್ರ ಸರ್ಕಾರ; ರಾಜಮನೆತನದ ವಸುಂಧರಾ ರಾಜೇ ಅವರ ಮರುಳುಮಾತಿನಲ್ಲಿ ಸ್ಥಗಿತಗೊಂಡ ರಾಜ್ಯ ಸರ್ಕಾರ- ಈ ಎರಡರ ಬಗೆಗೂ ರಾಜಸ್ಥಾನದಲ್ಲಿ ಹಬ್ಬಿದ್ದ ಅತೃಪ್ತಿ ಮತದಾನದಲ್ಲಿ ಸ್ಫೋಟಗೊಂಡಿದೆ; ಅದರಲ್ಲೂ ಮುಖ್ಯವಾಗಿ, ಬಿಜೆಪಿಯ ಸಾಂಪ್ರದಾಯಿಕ ಭದ್ರಕೋಟೆಗಳಾಗಿದ್ದ ಅಜ್ಮೇರ್ ಮತ್ತು ಅಲ್ವಾರ್ ಎಂಬ ಎರಡು ಲೋಕಸಭಾ ಕ್ಷೇತ್ರಗಳಲ್ಲಿ!

ರಾಜಸ್ಥಾನದ ಈ ಎರಡು ಲೋಕಸಭಾ ಕ್ಷೇತ್ರಗಳ 16 ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆದಿರುವುದನ್ನು ಅಂಕಿಅಂಶಗಳು ತೋರಿಸಿವೆ. ಇಲ್ಲಿನ ಪಟ್ಟಣಗಳಲ್ಲಿ ಬಿಜೆಪಿಯ ಬೆಂಬಲಿಗರಾದ ವರ್ತಕರು ಕೂಡ ಬಿಜೆಪಿಯ ವಿರುದ್ಧ ನಿರ್ಣಾಯಕವಾಗಿ ಮತ ಚಲಾಯಿಸಿರುವುದರ ಹಿಂದೆ ಜಿಎಸ್‌ಟಿ ಹಾಗೂ ನಿರ್ನೋಟೀಕರಣದ ವಿರುದ್ಧದ ಸಿಟ್ಟೂ ಸೇರಿಕೊಂಡಂತಿದೆ.

ಚುನಾವಣೆಯಲ್ಲಿ ಹಿಂದೂ ಮತಗಳು ಧ್ರುವೀಕರಣವಾಗಲೆಂಬ ಲೆಕ್ಕಾಚಾರದಿಂದ ಫೇಸ್ ಬುಕ್ಕಿನಲ್ಲಿ ಮುಸ್ಲಿಮರ ವಿರುದ್ಧ ಅಸಹ್ಯಕರವಾದ ಅಪಪ್ರಚಾರ ಮಾಡಿದ ಅಲ್ವಾರ್ ಕ್ಷೇತ್ರದ ಶಾಸಕನ ಕ್ಷೇತ್ರದಲ್ಲೇ ಕಾಂಗ್ರೆಸ್ 25 ಸಾವಿರ ಮತಗಳ ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಮಂಡಲಗಡ ಕ್ಷೇತ್ರದ ಬೆಹ್ರಾರಿನಲ್ಲಿ ಹರಿಯಾಣದ ಪೆಹಲೂಖಾನರನ್ನು ‘ಗೋರಕ್ಷಣೆ’ಯ ಹೆಸರಿನಲ್ಲಿ ಪುಂಡರು ಕೊಂದಿದ್ದರು; ಈ ಕ್ಷೇತ್ರದಲ್ಲಿ ಗೋ-ರಾಜಕಾರಣವೂ ಬಿಜೆಪಿಗೆ ತಿರುಗುಬಾಣವಾಗಿದೆ. ನಲವತ್ತು ವರ್ಷದ ಸಚಿನ್ ಪೈಲಟ್ ಕಳೆದೆರಡು ವರ್ಷಗಳಿಂದ ಕ್ರಮಬದ್ಧವಾಗಿ ಕೆಲಸ ಮಾಡಿದ ರೀತಿಯಿಂದ ಹಾಗೂ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಮತ್ತೆ ಮೇಲೆದ್ದಿದೆ.

ಸಾಮಾನ್ಯವಾಗಿ ಉಪಚುನಾವಣೆಗಳ ಪ್ರಚಾರಕ್ಕೆ ಪ್ರಧಾನಮಂತ್ರಿಯಂಥವರು ಬರುವುದು ಕಡಿಮೆ. ಈ ಸಲ ಮೋದಿ ಪ್ರಚಾರದ ನಂತರವೂ ಬಿಜೆಪಿ ಲಕ್ಷಗಟ್ಟಲೆ ಅಂತರದ ಸೋಲಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬಿದ್ದ ಈ ಹೊಡೆತ ಬಿಜೆಪಿಯೇ ಆಡಳಿತದಲ್ಲಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಕೊಟ್ಟ ತೀರ್ಪಿನಂತೆ ಕಂಡರೆ ಅಚ್ಚರಿಯಲ್ಲ.

ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿರುವಾಗ, ಬಿಜೆಪಿ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಸೋತಿರುವುದಷ್ಟೇ ಅಲ್ಲ, ಈ ಮೂರೂ ಚುನಾವಣೆಗಳಲ್ಲಿ ಬಿಜೆಪಿಯ ವಶದಲ್ಲಿದ್ದ ಕ್ಷೇತ್ರಗಳನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಈಗ ವಸುಂಧರಾ ರಾಜೇ ಅವರ ಬದಲಿಗೆ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಿದರೂ, ರಾಜಸ್ಥಾನದಲ್ಲಿ ಬಿಜೆಪಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆಲ್ಲಲಾರದು.

ರಾಜಸ್ಥಾನದಲ್ಲಿನ ತಮ್ಮ ಪಕ್ಷದ ಸಾಧನೆಯು ಕರ್ನಾಟಕದಲ್ಲಿ ಚುನಾವಣೆಗೆ ಮೊದಲೇ ಬೀಗುತ್ತಿರುವ ಕಾಂಗ್ರೆಸ್ಸಿಗೆ ವಿಶ್ವಾಸ ತುಂಬಿರಬಹುದು. ಆದರೆ ರಾಜಸ್ಥಾನಕ್ಕೂ ಕರ್ನಾಟಕಕ್ಕೂ ಸಾವಿರಾರು ಮೈಲಿಗಳ ಅಂತರವಿದೆ. ಒಂದು ರಾಜ್ಯದಲ್ಲಿ ಬೀಸಿದ ಗಾಳಿ ಇನ್ನೊಂದು ರಾಜ್ಯದಲ್ಲಿ ಬೀಸುತ್ತದೆಯೆಂದು ಕಾಂಗ್ರೆಸ್ ತಿಳಿದಿದ್ದರೆ ಅದು ಮೂರ್ಖತನ. ಆದರೂ ಈ ಫಲಿತಾಂಶದಿಂದ ಒಂದು ಅಂಶ ಸ್ಪಷ್ಟವಾಗಿದೆ: ಕಳೆದ ವಿಧಾನಸಭೆಯ ಚುನಾವಣೆಯಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ ಮಾಡಿದಂಥ ಉಗ್ರ ಧ್ರುವೀಕರಣ ರಾಜಸ್ಥಾನದಲ್ಲಿ ವಿಫಲವಾದಂತೆ, ಕರ್ನಾಟಕದಲ್ಲೂ ವಿಫಲವಾಗಲಿದೆಯೆಂದು ಕಾಂಗ್ರೆಸ್ ನಿರೀಕ್ಷಿಸಬಹುದು.

ಈ ಹಿಂದೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ಮಂದಗಾಮಿ ಬಲಪಂಥೀಯತೆಗೆ ಸಿಕ್ಕಷ್ಟು ಬೆಂಬಲ ಕೂಡ ಈ ಸಲ ಸಂವಿಧಾನವನ್ನೇ ಉಡಾಯಿಸುತ್ತೇವೆಂದು ಕೂಗುತ್ತಿರುವ ಉಗ್ರಗಾಮಿ ಕೋಮುವಾದಿ ರಾಜಕಾರಣಕ್ಕೆ ಸಿಕ್ಕಲಾರದು. ನೆಮ್ಮದಿಯಾಗಿ ಇರಲು ಬಯಸುವ ಸಾಮಾನ್ಯ ಜನ ಹಾಗೂ ಬಹುಸಂಖ್ಯೆಯ ಮಹಿಳೆಯರು ಈ ಬಗೆಯ ವಿಭಜಕ ರಾಜಕಾರಣವನ್ನು ಕರ್ನಾಟಕದಲ್ಲಿ ತಿರಸ್ಕರಿಸುತ್ತಲೇ ಬಂದಿದ್ದಾರೆ.

ಈ ಚುನಾವಣಾ ಫಲಿತಾಂಶ ಬಂದ ದಿನವೇ ಲೋಕಸಭೆ ಹಾಗೂ ವಿಧಾನಸಭೆಗಳೆರಡಕ್ಕೂ ಏಕಕಾಲಕ್ಕೆ ಚುನಾವಣೆ ನಡೆಸುವ ಮಾತು ಮತ್ತೆ ಕೇಳಿ ಬಂದಿರುವುದು ಅಚ್ಚರಿಯಲ್ಲ. ಈ ವರ್ಷ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ ವಿಧಾನಸಭಾ ಚುನಾವಣೆಗಳ ಜೊತೆಗೇ ಲೋಕಸಭಾ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಮುಂದಾದರೆ, ಅದು ಕಳೆದ ನಾಲ್ಕು ವರ್ಷಗಳ ತನ್ನ ವೈಫಲ್ಯವನ್ನು ಒಪ್ಪಿಕೊಂಡಂತಾಗುತ್ತದೆಯೇ ಹೊರತು ಅದರಲ್ಲಿ ದೇಶಕ್ಕೆ ಚುನಾವಣೆಗಳ ಹೊರೆ ಉಳಿಸುವ ಮಹೋದ್ದೇಶವೇನೂ ಇದ್ದಂತಿಲ್ಲ!

‘ಈ ರಾಜ್ಯಗಳ ಜೊತೆಗೆ ಲೋಕಸಭೆಗೂ ಚುನಾವಣೆ ನಡೆಸಿ, ಮುಳುಗಲಿರುವ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ತಾನೂ ಮುಳುಗುವ ಸಾಹಸವನ್ನು ಪ್ರಧಾನಮಂತ್ರಿ ಮಾಡಬಲ್ಲರೇ ಎಂದು ಮಣಿಶಂಕರ್ ಅಯ್ಯರ್ ಕೆಣಕಿದ್ದಾರೆ. ಸೋಲಿನ ಹತಾಶೆಯಲ್ಲಿ ಮನುಷ್ಯನ ಮನಸ್ಸು ಪಾಠ ಕಲಿಯುತ್ತದೋ, ಆತ್ಮಹತ್ಯಾತ್ಮಕ ನಿರ್ಧಾರಗಳಿಗೆ ಕೈ ಹಾಕುತ್ತದೋ ಎಂಬುದರ ಬಗ್ಗೆ ಮನೋವಿಶ್ಲೇಷಕರು ಕೂಡ ಖಚಿತ ಉತ್ತರ ನೀಡಲಾರರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry