ಸೋಮವಾರ, ಡಿಸೆಂಬರ್ 9, 2019
24 °C

ಕಾಲೇಜು ಸೇರಲು ನಿರುತ್ಸಾಹ ಕಳವಳಕಾರಿ ವಿದ್ಯಮಾನ

Published:
Updated:
ಕಾಲೇಜು ಸೇರಲು ನಿರುತ್ಸಾಹ  ಕಳವಳಕಾರಿ ವಿದ್ಯಮಾನ

ನಮ್ಮ ರಾಜ್ಯದಲ್ಲಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಎರಡು ವರದಿಗಳು ಈಗ ಹೊರಬಿದ್ದಿವೆ. ಒಂದು ವರದಿ ನಮಗೆ ನಾವೇ ಹೆಮ್ಮೆಪಟ್ಟುಕೊಳ್ಳುವಂತೆ ಮಾಡಿದರೆ, ಮತ್ತೊಂದು ವರದಿ ಚಿಂತೆಗೆ ಗುರಿ ಮಾಡುವಂತಿದೆ. ನಮ್ಮಲ್ಲಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳು ಇಡೀ ದೇಶದಲ್ಲಿಯೇ ಉತ್ತಮ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಹೇಳಿದೆ. ಇದು ಖುಷಿ ಕೊಡುವ ಸಂಗತಿ.

ಪ್ರಾಥಮಿಕ ಶಾಲೆಗಳಲ್ಲಿನ ಕಲಿಕಾ ಗುಣಮಟ್ಟ ತಿಳಿದುಕೊಳ್ಳಲು ಮಂಡಳಿ ದೇಶದಾದ್ಯಂತ ಪ್ರಾಯೋಗಿಕವಾಗಿ 3, 5 ಮತ್ತು 8ನೇ ತರಗತಿ ಮಕ್ಕಳಿಗೆ ಸಾಮರ್ಥ್ಯ ಪರೀಕ್ಷೆ ನಡೆಸಿತ್ತು. ಅದರಲ್ಲಿ ನಮ್ಮ ರಾಜ್ಯದ 3 ಮತ್ತು 5ನೇ ತರಗತಿಯ ಮಕ್ಕಳು ದೇಶದಲ್ಲಿಯೇ ಮೊದಲಿಗರಾಗಿದ್ದಾರೆ. ಇಲ್ಲಿಯೂ ಹುಡುಗರಿಗಿಂತ ಹುಡುಗಿಯರೇ ಹೆಚ್ಚು ಬುದ್ಧಿವಂತರು ಎಂಬುದೂ ಸಾಬೀತಾಗಿದೆ. 8ನೇ ತರಗತಿಗೆ ಬಂದರೆ ನಮ್ಮದು ರಾಜಸ್ಥಾನದ ನಂತರ ಎರಡನೇ ಸ್ಥಾನ.

ಪ್ರಾಥಮಿಕ ಶಿಕ್ಷಣದಲ್ಲಿ ಇದೇನೂ ಸಣ್ಣ ಸಾಧನೆಯಲ್ಲ. ಆದರೆ ಉನ್ನತ ಶಿಕ್ಷಣದ ವಿಷಯಕ್ಕೆ ಬಂದರೆ ಕರ್ನಾಟಕ ಬಹಳ ಹಿಂದೆ ಉಳಿದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ವರದಿ ಬಹಿರಂಗಪಡಿಸಿದೆ. ನಮ್ಮಲ್ಲಿ 18 ರಿಂದ 23ರ ವಯೋಮಾನದವರಲ್ಲಿ ಶೇ 26.5ರಷ್ಟು ಯುವಜನ ಮಾತ್ರ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ನಮ್ಮ ನೆರೆಯ ಆಂಧ್ರ, ಮಹಾರಾಷ್ಟ್ರ, ಕೇರಳ, ತೆಲಂಗಾಣ, ತಮಿಳುನಾಡು ಈ ವಿಷಯದಲ್ಲಿ ನಮಗಿಂತ ಮುಂದೆ ಇವೆ. ತಮಿಳುನಾಡಿನಲ್ಲಿ ಈ ವಯೋಮಾನದ ಸರಿಸುಮಾರು ಅರ್ಧದಷ್ಟು ಯುವಜನ ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಹಾಗಿದ್ದರೆ ನಾವು ಇಷ್ಟೊಂದು ಹಿಂದೆ ಉಳಿಯಲು ಕಾರಣ ಏನು? ಪ್ರಾಥಮಿಕ, ಮಾಧ್ಯಮಿಕ ಹಂತ ಮುಗಿಸಿ ಪಿಯುಗೆ ಬರುವ ವಿದ್ಯಾರ್ಥಿಗಳೆಲ್ಲರೂ ಮುಂದೆ ಏಕೆ ಉನ್ನತ ಶಿಕ್ಷಣದ ಕಡೆ ಒಲವು ತೋರಿಸುತ್ತಿಲ್ಲ? ಕಾಲೇಜು ಓದುವವರ ಸಂಖ್ಯೆ ಏಕೆ ಕಡಿಮೆಯಾಗುತ್ತಿದೆ? ಇದು ಗಂಭೀರವಾದ ವಿಚಾರ.

ಈ ಬಗ್ಗೆ ಚಿಂತನೆ ನಡೆಯಬೇಕು. ಏಕೆಂದರೆ ಪ್ರೌಢಶಾಲೆವರೆಗಿನ ಶಿಕ್ಷಣವು ವಿದ್ಯಾರ್ಥಿಗೆ ಪ್ರಾಥಮಿಕ ತಿಳಿವಳಿಕೆ ಕೊಡುತ್ತದೆ ಅಷ್ಟೆ. ಕೌಶಲ ಬೆಳೆಯಬೇಕಾದರೆ, ಜ್ಞಾನಾಧಾರಿತ ಸಮಾಜ ನಿರ್ಮಾಣ ಆಗಬೇಕಾದರೆ ಉನ್ನತ ಶಿಕ್ಷಣ ಬೇಕೇಬೇಕು. ಆದ್ದರಿಂದ ಉನ್ನತ ಶಿಕ್ಷಣದ ಮಹತ್ವವನ್ನು ನಿರ್ಲಕ್ಷಿಸುವಂತೆಯೇ ಇಲ್ಲ. ಈಗೇನೋ ಈ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಜತೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದಾರೆ.

ಪಿಯು ಮಂಡಳಿಯು ಪದವಿ ಪೂರ್ವ ಹಂತದಲ್ಲಿ ಅನೇಕ ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದೆ, ಉಪನ್ಯಾಸಕರಿಗೆ ಕಾರ್ಯಾಗಾರ ನಡೆಸಿದೆ. ಈ ಉಪಕ್ರಮಗಳು ಸ್ವಾಗತಾರ್ಹ.

ಆದರೆ ನಮಗೆ ಬೇಕಿರುವುದು ಫಲಿತಾಂಶ. ಅದಕ್ಕೆ ಪೂರಕವಾಗಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು, ಕೌಶಲ ಬೆಳೆಸಿಕೊಳ್ಳಬೇಕು. ಆದ್ದರಿಂದ ಒಂದೆರಡು ಸಭೆ– ಕಾರ್ಯಾಗಾರ ನಡೆಸಿದರಷ್ಟೇ ಸಾಲದು. ದಾಖಲಾತಿ ಹಿನ್ನಡೆಗೆ ಕಾರಣಗಳನ್ನು ಪತ್ತೆ ಹಚ್ಚಬೇಕು. ಲೋಪಗಳು– ಕೊರತೆಗಳನ್ನು ನಿವಾರಿಸಬೇಕು. ಅದಕ್ಕಾಗಿ ಸರಿಯಾದ ಕಾರ್ಯಯೋಜನೆ ರೂಪಿಸಬೇಕು. ಅಷ್ಟೇ ಮುತುವರ್ಜಿಯಿಂದ ಅನುಷ್ಠಾನಕ್ಕೆ ತರಬೇಕು.

‘ಪ್ರತಿಯೊಂದು ಮಗುವಿಗೂ ಶಿಕ್ಷಣ ಸಿಗಬೇಕು’ ಎನ್ನುವ ಧ್ಯೇಯವನ್ನು ಮತ್ತಷ್ಟು ವಿಸ್ತರಿಸಿ ‘ಶಾಲೆ ಸೇರಿದ ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಬೇಕು’ ಎಂಬ ಗುರಿ ಇಟ್ಟುಕೊಳ್ಳಬೇಕು.

ಪ್ರತಿಕ್ರಿಯಿಸಿ (+)