ಬುಧವಾರ, ಡಿಸೆಂಬರ್ 11, 2019
26 °C

ಹೊಸ ಕಾಲದಲ್ಲಿ ಕಾಂಗ್ರೆಸ್‌ ನಿಲುವು ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ಕಾಲದಲ್ಲಿ ಕಾಂಗ್ರೆಸ್‌ ನಿಲುವು ಬದಲು

ಹೊಸಪೇಟೆ: ‘ನಾವೆಲ್ಲ ಹೊಸ ಯುಗದಲ್ಲಿದ್ದೇವೆ. ಹಾಗಾಗಿ ಪಕ್ಷದ ನಿಲುವು ಈಗ ಬದಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚಿಸಿಯೇ ಆನಂದ ಸಿಂಗ್‌, ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಹಾಗೂ ಜೆ.ಡಿ.ಎಸ್‌. ಶಾಸಕ ಎಸ್‌. ಭೀಮಾ ನಾಯ್ಕ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡಿದ್ದೇವೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದೇ 10ರಂದು ಇಲ್ಲಿ ಆಯೋಜಿಸಿರುವ ಕಾಂಗ್ರೆಸ್‌ ಸಮಾವೇಶದ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್‌ ಗಾಂಧಿ ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಆನಂದ್‌ ಸಿಂಗ್‌, ಬಿ.ನಾಗೇಂದ್ರ ವಿರುದ್ಧ ಗುರುತರ ಆರೋಪಗಳಿಲ್ಲ. ಅಲ್ಲದೇ ಅವುಗಳು ಇಲ್ಲಿಯವರೆಗೆ ಸಾಬೀತಾಗಿಲ್ಲ. ಸಚಿವ ಸಂತೋಷ್‌ ಲಾಡ್‌ ಹಾಗೂ ನನ್ನ ಮೇಲೆಯೂ ಆರೋಪಗಳಿದ್ದವು. ಅವು ಸಾಬೀತಾಗಲಿಲ್ಲ’ ಎಂದು ಬಿಜೆಪಿ ಮಾದರಿಯಲ್ಲಿ ಸಮರ್ಥಿಸಿಕೊಂಡರು.

‘ಕಾಂಗ್ರೆಸ್‌ ಸೇರಿರುವ ಶಾಸಕರು ಯಾವುದೇ ಷರತ್ತು ಹಾಕದೆ ಪಕ್ಷ ಸೇರಿದ್ದಾರೆ. ಜೆಡಿಎಸ್‌ನ ಏಳು ಜನ ಬಂಡಾಯ ಶಾಸಕರು ಸೇರಿದಂತೆ ಯಾರಿಗೂ ಟಿಕೆಟ್‌ ಕೊಡುವುದು ಖಚಿತವಾಗಿಲ್ಲ. ಎಲ್ಲರೂ ಪಕ್ಷದ ಸಂಘಟನೆಗೆ ಶ್ರಮಿಸುವರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ, ನನಗಾಗಲಿ ಟಿಕೆಟ್‌ ಹಂಚಿಕೆ ಮಾಡುವ ಅಧಿಕಾರ ಇಲ್ಲ’ ಎಂದರು.

‘ಒಳ್ಳೆಯ ಮುಹೂರ್ತದಲ್ಲಿ ಬಿ. ನಾಗೇಂದ್ರ ಕಾಂಗ್ರೆಸ್‌ ಪಕ್ಷಕ್ಕೆ ಸೇರುವರು. ಕಂಪ್ಲಿ ಶಾಸಕ ಟಿ.ಎಚ್‌. ಸುರೇಶ್‌ ಬಾಬು ನನ್ನ ಒಳ್ಳೆಯ ಸ್ನೇಹಿತ. ಅವರು ಕಾಂಗ್ರೆಸ್‌ ಸೇರುವುದರ ಬಗ್ಗೆ ಚರ್ಚೆಯಾಗಿಲ್ಲ. ಕಾಂಗ್ರೆಸ್‌ ಮುಖಂಡ ಎಚ್‌.ಆರ್‌. ಗವಿಯಪ್ಪ ಅವರು ಪಕ್ಷ ಬಿಡುವುದಿಲ್ಲ ಎಂಬ ಭರವಸೆ ಇದೆ. ಚುನಾವಣೆಯ ವೇಳೆ ಪಕ್ಷ ಸೇರುವವರು, ತೊರೆಯುವವರು ಇದ್ದೇ ಇರುತ್ತಾರೆ’ ಎಂದರು.

‘ರಮೇಶ ಜಾರಕಿಹೊಳಿ ಜತೆಗಿದ್ದಾರೆ’

‘ಸಹಕಾರ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಯಾರೂ ಪಕ್ಷದಿಂದ ದೂರವಾಗಿಲ್ಲ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುತ್ತೇವೆ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಈ ಮೊದಲು ಹೊಸಪೇಟೆಯಲ್ಲಿ ಕಾಂಗ್ರೆಸ್‌ ರಾಜ್ಯಮಟ್ಟದ ಪರಿಶಿಷ್ಟ ಪಂಗಡ (ಎಸ್ಟಿ) ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಈಗ ಅದನ್ನು ಕಾಂಗ್ರೆಸ್‌ ಸಮಾವೇಶವಷ್ಟೇ ಮಾಡುತ್ತಿದ್ದೇವೆ. ಇದನ್ನು ಜಾರಕಿಹೊಳಿ ಅವರನ್ನು ಗುರಿಯಾಗಿರಿಸಿ ಬದಲಿಸಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದುದು’ ಎಂದು ತಿಳಿಸಿದರು.

‘ವಿಜಯನಗರ ಸಾಮ್ರಾಜ್ಯ ಜಾತ್ಯತೀತತೆಗೆ ಸಂಕೇತ. ಇಂದಿಗೂ ಈ ಪ್ರದೇಶ ಸಮಾನತೆ, ಸಹೋದರತೆಗೆ ಹೆಸರಾಗಿದೆ. ಇಡೀ ರಾಷ್ಟ್ರ, ರಾಜ್ಯಕ್ಕೆ ದೊಡ್ಡ ಸಂದೇಶ ಹೋಗಬೇಕೆಂಬ ಕಾರಣಕ್ಕೆ ರಾಹುಲ್‌ ಗಾಂಧಿಯವರು ಇದೇ 10ರಿಂದ ಹೊಸಪೇಟೆಯಿಂದ ಪ್ರಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಒಳ್ಳೆಯ ಆಡಳಿತ ಕೊಡುವ ಸದುದ್ದೇಶದಿಂದ ಅವರು ನಾಲ್ಕು ದಿನ ಹೈದರಾಬಾದ್‌ ಕರ್ನಾಟಕದಲ್ಲಿ ಪ್ರವಾಸ ಕೈಗೊಳ್ಳುವರು’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)