ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯೆ– ಪ್ರತಿಕ್ರಿಯೆ: ಸಂಘ ಪರಿವಾರ, ಪಿಎಫ್‌ಐ ಸೆಣಸಾಟ

ಘರ್ಷಣೆಗಳ ಹಿಂದಿನ ಮರ್ಮ
Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿಯಲ್ಲಿ ನಡೆಯುವ ಪ್ರತಿಯೊಂದು ಕೊಲೆಯೂ ಮತೀಯ ದೃಷ್ಟಿಯ ಕ್ರಿಯೆ–ಪ್ರತಿಕ್ರಿಯೆಗಳಾಗಿಯೇ ಪ್ರತಿಬಿಂಬಿತವಾಗು
ತ್ತಿವೆ. ವೈಯಕ್ತಿಕ ದ್ವೇಷ, ಆಸ್ತಿ ಜಗಳದ ಹತ್ಯೆಗಳೂ ಇದೇ ಸ್ವರೂಪ ಪಡೆದುಕೊಳ್ಳುತ್ತಿವೆ. ಕೊಲೆ ನಡೆದರೆ ‘ಅವರದ್ದು ಕ್ರಿಯೆ; ಅದಕ್ಕೆ ನಮ್ಮ ಪ್ರತಿಕ್ರಿಯೆ’ ಎಂದು ಹಂತಕರನ್ನು ಬೆಂಬಲಿಸುವ ವಿವಿಧ ಸಂಘಟನೆಗಳ ಮುಖಂಡರಿಂದ ಹೇಳಿಕೆಗಳು ಹೊರಬೀಳುತ್ತವೆ.

ಫಾಸ್ಟ್‌ ಫುಡ್‌ ಮಳಿಗೆ ನಡೆಸುತ್ತಿದ್ದ ಆಕಾಶ್ ಭವನ ನಿವಾಸಿ ಅಬ್ದುಲ್‌ ಬಶೀರ್‌ ಎಂಬುವವರ ಹತ್ಯೆ ನಡೆಯಿತು. ದೀಪಕ್ ರಾವ್ ಕೊಲೆಗೆ ಸೇಡು ತೀರಿಸಲು ಈ ಕೊಲೆ ಮಾಡಿದ್ದೇವೆ ಎಂದು ಬಂಧಿತ ಆರೋ‍ಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲವು ದಶಕಗಳಿಂದ ಈಚೆಗೆ ನಡೆದಿರುವ ಕೋಮು ಹಿಂಸೆಯ ಪ್ರಕರಣಗಳು, ಮತೀಯ ದ್ವೇಷದ ಕೊಲೆಗಳು, ಕೊಲೆ ಯತ್ನ ಪ್ರಕರಣಗಳನ್ನು ಅವಲೋಕಿಸಿದರೆ ಇಂತಹ ಕೃತ್ಯಗಳನ್ನು ‘ಕ್ರಿಯೆ’ ಮತ್ತು ‘ಪ್ರತಿಕ್ರಿಯೆ’ಯ ಹೆಸರಿನಲ್ಲಿ ಬಲವಾಗಿ ಸಮರ್ಥಿಸುವವರ ದೊಡ್ಡ ಗುಂಪು ಕಾಣುತ್ತದೆ. ಪ್ರಬಲವಾದ ದ್ವೇಷದ ಗೋಡೆಯೊಂದನ್ನು ಕಟ್ಟುತ್ತಿರುವುದಕ್ಕೆ ಕುರುಹುಗಳು ಕಾಣಿಸುತ್ತವೆ.

‘ದೀಪಕ್‌ ರಾವ್‌ ಕೊಲೆಗೆ ಪ್ರತೀಕಾರವಾಗಿ ಅಬ್ದುಲ್ ಬಶೀರ್ ಕೊಲೆಯಾದರೆ ನಮಗೆ ಏನೂ ಚಿಂತೆ ಇಲ್ಲ. ಸಮಾಜ ಈಗ ರೊಚ್ಚಿಗೆದ್ದಿದೆ. ನಮ್ಮವರಿಗೆ ಏನಾದರೂ ಆದರೆ ಸ್ಪಂದಿಸಲು ಒಂದು ವರ್ಗ ಸಿದ್ಧವಾಗಿದೆ. ಅಂತಹವರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ’ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡುವ ಮೂಲಕ ಕ್ರಿಯೆ–ಪ್ರತಿಕ್ರಿಯೆಯ ಸಮರಗಳಿಗೆ ಸಮರ್ಥನೆ ನೀಡಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಲವು ದಶಕಗಳಿಂದ ‘ಸಂಘ ಪರಿವಾರದ ಪ್ರಯೋಗಶಾಲೆ’ ಎಂದೇ ಹೆಸರಾಗಿತ್ತು. ಸಮಾಜ ವಿಜ್ಞಾನಿಗಳು, ಚಿಂತ
ಕರು ಮತ್ತು ರಾಜಕೀಯ ಪಕ್ಷಗಳ ವಲಯದಲ್ಲಿ ಈ ಜಿಲ್ಲೆಯನ್ನು ಇದೇ ಹೆಸರಿನಿಂದ ಗುರುತಿಸಲಾಗುತ್ತಿತ್ತು. ಈಗ ಇದೇ ಅಂಗಳ ಮುಸ್ಲಿಂ ಮತೀಯವಾದಿ ಸಂಘಟನೆಗಳ ಕೋಮವಾದದ ಪ್ರಯೋಗ ಶಾಲೆಯೂ ಆಗಿದೆ ಎಂಬುದನ್ನು ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಹತ್ಯೆಗಳು, ಕೊಲೆಯತ್ನಗಳು ನಿರೂಪಿಸುತ್ತವೆ.

ಸಂಘ ಪರಿವಾರದ ಭಾಗವಾಗಿರುವ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌ ಮತ್ತು ಸಂಘ ಪರಿವಾರದ ಭಾಗವಲ್ಲ ಎಂದು ಹೇಳುತ್ತಿರುವ ಶ್ರೀರಾಮ ಸೇನೆಯಂತಹ ಸಂಘಟನೆಗಳ ಅನೇಕ ಮುಖಂಡರು, ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಕೈಗೆ ರಕ್ತದ ಕಲೆಗಳನ್ನು ಅಂಟಿಸಿಕೊಂಡಿರುವುದು ಕಾಣಿಸುತ್ತಿದೆ.

ಮುಸ್ಲಿಮರ ಪರವಾದ ದೊಡ್ಡ ದನಿ ತಾನು ಎಂದು ಬಿಂಬಿಸಿಕೊಳ್ಳುತ್ತಿರುವ ಪಿಎಫ್‌ಐ ಮತ್ತು ಅದರ ರಾಜಕೀಯ ಮುಖವಾಣಿಯಾಗಿರುವ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಮುಖಂಡರು, ಕಾರ್ಯಕರ್ತರ ಕೈಗಳಿಗೂ ಮತೀಯ ದ್ವೇಷದ ಹತ್ಯೆಗಳ ನೆತ್ತರು ಅಂಟಿದೆ.

ಐದು ದಶಕಗಳ ನಂಟು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಭಾವಿಯಾಗಿದ್ದ ಕಾಂಗ್ರೆಸ್‌ ಮುಖಂಡ ಕಲ್ಲಡ್ಕ ಇಸ್ಮಾಯಿಲ್ ಕೊಲೆ ಪ್ರಕರಣ ಕರಾವಳಿಯಲ್ಲಿ ಹೆಚ್ಚು ಸುದ್ದಿಯಾಗಿದ್ದ ಮತೀಯ ದ್ವೇಷದ ಕೊಲೆ ಪ್ರಕರಣ. 1976ರಲ್ಲಿ ನಡೆದ ಆ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್‌, ಅವರ ನಿಕಟ ಸಂಬಂಧಿಗಳು ಸೇರಿದಂತೆ ಸಂಘ ಪರಿವಾರದ ಹಲವು ಕಾರ್ಯಕರ್ತರು ಆರೋಪಿಗಳ ಸ್ಥಾನದಲ್ಲಿ ನಿಂತಿದ್ದರು. ಅಂದಿನಿಂದ ಈವರೆಗೆ ಹಲವು ಮಂದಿ ಮುಸ್ಲಿಮರನ್ನು ಆರ್‌ಎಸ್‌ಎಸ್‌, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಅಥವಾ ಬೆಂಬಲಿಗರು ಮತೀಯ ದ್ವೇಷದ ಅಮಲಿನಲ್ಲಿ ಹತ್ಯೆ ಮಾಡಿರುವುದು ಮತೀಯ ದ್ವೇಷದ ಹಿಂಸಾಕೃತ್ಯಗಳ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಕಾಣಿಸುತ್ತದೆ.

‘ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳ ಜತೆ ನಂಟಿದ್ದ ಗೂಂಡಾಗಳು ಮೊದಲು ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳಲ್ಲಿ ಸಕ್ರಿಯರಾಗಿದ್ದ ಮುಖಂಡರು, ಮುಸ್ಲಿಮರ ಪರವಾಗಿ ದನಿ ಎತ್ತುತ್ತಿದ್ದ ಮುಸಲ್ಮಾನರನ್ನು ಕೊಲೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ’ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹನೀಫ್‌ ಖಾನ್ ಕೊಡಾಜೆ ಆರೋಪಿಸುತ್ತಾರೆ.

ಪಿಎಫ್‌ಐ ಕಾರ್ಯಕರ್ತರಾಗಿದ್ದ ಬಂಟ್ವಾಳ ಗೂಡಿನ ಬಳಿಯ ಇಕ್ಬಾಲ್‌, ಮೈಸೂರು ಜೈಲಿನಲ್ಲಿ ಕೊಲೆಯಾದ ಪಿಎಫ್‌ಐ ಕಾರ್ಯಕರ್ತ ಮುಸ್ತಫಾ ಕಾವೂರು, ಬೆಂಜನಪದವು ಬಳಿ ಕೊಲೆಯಾದ ಎಸ್‌ಡಿಪಿಐ ಕಾರ್ಯಕರ್ತ ಅಶ್ರಫ್‌ ಕಲಾಯಿ ಸೇರಿದಂತೆ ಕೆಲವು ಪ್ರಕರಣಗಳನ್ನು ಅವರು, ಹಿಂದುತ್ವ ಪರ ಸಂಘಟನೆಗಳ ವಿರುದ್ಧದ ಆರೋಪಕ್ಕೆ ಪುರಾವೆಯಾಗಿ ನೀಡುತ್ತಾರೆ.

ಪಿಎಫ್‌ಐಗೆ ಅಂಟಿದ ರಕ್ತದ ಕಲೆ:

ಇತ್ತ ಹಿಂದುತ್ವ ಪರ ಸಂಘಟನೆಗಳ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಕೆಲವರು ಸೇರಿದಂತೆ ಹಲವು ಮಂದಿ ಹಿಂದೂಗಳು ಮತೀಯ ದ್ವೇಷದ ಜ್ವಾಲೆಯಲ್ಲಿ ಹತರಾಗಿ ಹೋಗಿದ್ದಾರೆ. ಮಂಗಳೂರಿನಲ್ಲಿ ಪ್ರಭಾವಿ ವಲಯವನ್ನು ಸೃಷ್ಟಿಸಿಕೊಂಡಿದ್ದ ಕ್ಯಾಂಡಲ್‌ ಸಂತು, ಪೊಳಲಿ ಅನಂತು, ಸುಖಾನಂದ ಶೆಟ್ಟಿ, ಬೆಂಜನಪದವು ರಾಜೇಶ್ ಪೂಜಾರಿ, ಮೂಡುಬಿದಿರೆ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ ಹೀಗೆ ಹಲವು ಮಂದಿ ಮತೀಯ ದ್ವೇಷದ ಕತ್ತಿಯ ಅಲುಗಿಗೆ ಬಲಿಯಾಗಿದ್ದಾರೆ. ಇವರಲ್ಲಿ ಕೆಲವರ ಕೊಲೆಗಳಲ್ಲಿ ಹಿಂದಿನ ಕೆಎಫ್‌ಡಿ ಕಾರ್ಯಕರ್ತರು ಭಾಗಿಯಾಗಿದ್ದರೆ, ಉಳಿದವರ ಕೊಲೆಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರು ಆರೋಪಿಗಳ ಸ್ಥಾನದಲ್ಲಿ ನಿಂತಿರುವುದು ಪೊಲೀಸ್‌ ದಾಖಲೆಗಳಲ್ಲಿ ಸಿಗುತ್ತದೆ.

ಪ್ರಶಾಂತ್‌ ಪೂಜಾರಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳು ಪಿಎಫ್‌ಐ ಕಾರ್ಯಕರ್ತರು. ಶರತ್‌ ಮಡಿವಾಳ ಕೊಲೆಯಲ್ಲಿ ದೂರದ ಚಾಮರಾಜನಗರ ಜಿಲ್ಲೆಯ ಪಿಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಭಾಗಿಯಾಗಿರುವುದು ಪತ್ತೆಯಾಗಿದೆ. ಸುಖಾನಂದ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಖಾದರ್ ಕುಳಾಯಿಗೆ ಈಗ ಪಿಎಫ್‌ಐ ಸುರತ್ಕಲ್‌ ವಲಯ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಸಂಘ ಪರಿವಾರದ ಮುಖಂಡರು ಬೆರಳು ತೋರುತ್ತಾರೆ.

‘ಪ್ರತಿಕ್ರಿಯೆ’ಯ ನೆಪ

ಎರಡೂ ಕಡೆಯವರು ಮಾಡುತ್ತಿರುವ ಸಾಲು, ಸಾಲು ಹತ್ಯೆಗಳು, ಕೊಲೆ ಯತ್ನ, ಹಿಂಸಾಕೃತ್ಯಗಳನ್ನು ಪ್ರತಿಕ್ರಿಯೆಯ ನೆಪವೊಡ್ಡಿ ಸಮರ್ಥಿಸಿಕೊಳ್ಳುತ್ತಾರೆ.

‘ಮುಸ್ಲಿಮರು ಹಲವು ವರ್ಷಗಳಿಂದ ನಮ್ಮನ್ನು ಹಿಂಸಿಸುತ್ತಿದ್ದಾರೆ. ಲವ್‌ ಜಿಹಾದ್, ಗೋವುಗಳ ಕಳ್ಳಸಾಗಣೆ, ಕೊಲೆಗಳನ್ನು ಮಾಡುತ್ತಿದ್ದಾರೆ. ಆ ಎಲ್ಲ ಕ್ರಿಯೆ’ಗಳಿಂದ ಬೇಸತ್ತ ನಮ್ಮ ಯುವಕರು ಈಗ ಪ್ರತಿಕ್ರಿಯೆ ನೀಡುತ್ತಿದ್ದಾರೆ’ ಎಂಬ ಉತ್ತರ ಆರ್‌ಎಸ್‌ಎಸ್‌, ಬಜರಂಗದಳ, ಹಿಂದೂ ಜಾಗರಣ ವೇದಿಕೆ ನಾಯಕರಿಂದ ಬರುತ್ತಿದೆ.

‘ನೀವು ಸಂಘ ಪರಿವಾರದ ಪ್ರಯೋಗಶಾಲೆಯ ಮುಖ್ಯ ವಿಜ್ಞಾನಿಯೇ’  ಎಂದು ಕಲ್ಲಡ್ಕ ಪ್ರಭಾಕರ ಭಟ್‌ ಅವರನ್ನು ‘ಪ್ರಜಾವಾಣಿ’ ಪ್ರಶ್ನಿಸಿದಾಗ ಜೋರಾಗಿ ನಕ್ಕ ಅವರು, ‘ನಾನು ಮುಖ್ಯ ವಿಜ್ಞಾನಿ ಹೌದೋ, ಅಲ್ಲವೋ ಗೊತ್ತಿಲ್ಲ. ಸಂಘಟನೆ ನೀಡಿದ ಕೆಲಸವನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡುತ್ತಿದ್ದೇನೆ’ ಎಂದರು.‌

‘ಶಾಂತಿ ಶಾಂತಿ ಎಂಬ ಕೆಟ್ಟ ಭಾವನೆಯಿಂದ ಏಟು ತಿನ್ನುವ ಕಾಲ ಮುಗಿಯಿತು. ಹಾಗೆ ಮಾಡಿದರೆ ದೇಶ ಉಳಿಯುವುದಿಲ್ಲ. ನಮ್ಮದು ಕ್ರಿಯೆಯಲ್ಲ. ಪ್ರತಿಕ್ರಿಯೆಯಷ್ಟೆ. ನೋವಾದಾಗ, ತಿರುಗಿ ಹೊಡೆದಾಗ ತಪ್ಪು ಎಂಬುದು ಸರಿಯಲ್ಲ’ ಎಂದು ಭಟ್‌ ಹೇಳುತ್ತಾರೆ.

‘ಮಿಥುನ್ ಕಲ್ಲಡ್ಕ ನಿಮ್ಮ ಶಿಷ್ಯ ಅಲ್ಲವೇ’ ಎಂಬ ಪ್ರಶ್ನೆಗೆ, ‘ನನ್ನ ಶಿಷ್ಯ ಅಂತಲ್ಲ. ಹಿಂದೂಗಳ ರಕ್ಷಣೆಗಾಗಿ ಆತ ನಿಂತಿದ್ದಾನೆ. ಮೈಮೇಲೆ ಏರಿ ಬಂದವನನ್ನು ಅವನು ಬಿಟ್ಟು ಕೊಡುವುದಿಲ್ಲ’ ಎಂದು ಭಟ್ ಪ್ರತಿಕ್ರಿಯಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲು, ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್‌, ಬಜರಂಗದಳದ ದಕ್ಷಿಣ ಕರ್ನಾಟಕ ಪ್ರಾಂತ್ಯ ಸಂಚಾಲಕ ಶರಣ್‌ ಪಂಪ್‌ವೆಲ್‌ ಕೂಡ ಇದೇ ಧಾಟಿಯಲ್ಲಿ ಹಿಂದುತ್ವ ಪರ ಸಂಘಟನೆಗಳ ಸದಸ್ಯರ  ಕೃತ್ಯಗಳನ್ನು ‘ಪ್ರತಿಕ್ರಿಯೆ’ಯ ಹೆಸರಿನಲ್ಲಿ ಸಮರ್ಥಿಸಿಕೊಂಡರು.

ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಆ ಸಂಘಟನೆ ಹಾಗೂ ರಾಜಕೀಯ ಪಕ್ಷದ ಮುಖಂಡರು ‘ಪ್ರತಿಕ್ರಿಯೆ’ಯನ್ನೇ ನೆಪವಾಗಿ ಬಳಸುತ್ತಾರೆ. ಆದರೆ, ಸೇಡಿನ ಕೊಲೆ ನಡೆಯುತ್ತಿದೆ ಎಂದು ಅವರು ಸ್ಪಷ್ಟವಾಗಿ ಒಪ್ಪಿಕೊಳ್ಳುವುದಿಲ್ಲ.

‘ಆರ್‌ಎಸ್‌ಎಸ್‌ ಈ ದೇಶದ ಶತ್ರು ಎಂದು ಪಿಎಫ್‌ಐ ಮತ್ತು ಎಸ್‌ಡಿಪಿಐ ನಿರ್ಧರಿಸಿದೆ. ಅವರನ್ನು ನಾವು ವಿರೋಧಿಸುತ್ತೇವೆ. ಆರ್‌ಎಸ್‌ಎಸ್‌ ದೀರ್ಘ ಕಾಲದಿಂದ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳನ್ನು ನಡೆಸುತ್ತಾ ಬಂದಿದೆ. ಈಗ ಮುಸ್ಲಿಮರು ಸಂಘಟಿತರಾಗುತ್ತಿರುವುದರಿಂದ ಪ್ರತಿರೋಧ ತೋರುತ್ತಿದ್ದಾರೆ’ ಎನ್ನುತ್ತಾರೆ ಹನೀಫ್‌ ಖಾನ್ ಕೊಡಾಜೆ.

ಪಿಎಫ್‌ಐ ರಾಷ್ಟ್ರೀಯ ಸಮಿತಿ ಸದಸ್ಯ ಅಬ್ದುಲ್ ರಝಾಕ್‌ ಕೆಮ್ಮಾರ ಕೂಡ ಇದೇ ಧಾಟಿಯಲ್ಲಿ ವಾದಿಸುತ್ತಾರೆ. ‘ಮುಸ್ಲಿಮರು ನಿರಂತರ ದಾಳಿಗಳಿಂದ ರೋಸಿ ಹೋಗಿದ್ದಾರೆ. ಈಗ ಪ್ರತಿರೋಧ ತೋರುತ್ತಿದ್ದಾರೆ. ಆದರೆ, ಹಿಂದುತ್ವ ಪರ ಸಂಘಟನೆಗಳು ನಡೆಸುತ್ತಿರುವ ದಾಳಿಗಳ ಪ್ರಮಾಣಕ್ಕೂ ಮುಸ್ಲಿಮರ ಪ್ರತಿರೋಧದ ಪ್ರಮಾಣಕ್ಕೂ ಭಾರಿ ವ್ಯತ್ಯಾಸವಿದೆ’ ಎನ್ನುತ್ತಾರೆ.

ಬದಲಾಗುತ್ತಿದೆ ಕಾರ್ಯತಂತ್ರ!

‘ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯ ಮತೀಯವಾದಿ ಸಂಘಟನೆಗಳು ಹಿಂಸಾಕೃತ್ಯ ನಡೆಸುವಲ್ಲಿ ಕಾರ್ಯತಂತ್ರಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ. ನೇರವಾಗಿ ಕಾರ್ಯಕರ್ತರಿಗೆ ಕತ್ತಿ ಕೊಟ್ಟು ಕಣಕ್ಕಿಳಿಸುವ ಬದಲಿಗೆ ತಮ್ಮದೇ ರೌಡಿ ಗುಂಪುಗಳನ್ನು ಕಟ್ಟಿಕೊಳ್ಳುತ್ತಿವೆ. ಸಂಘಟನೆಗಳ ಜೊತೆ ಅಧಿಕೃತವಾಗಿ ನಂಟು ಹೊಂದಿಲ್ಲದ ಇವರಿಗೆ ಕೋಮು ದ್ವೇಷದ ವಿಷವನ್ನು ತಲೆಗೆ ತುಂಬಿ ಅನ್ಯ ಧರ್ಮೀಯರ ನೆತ್ತರು ಹರಿಸುವಂತೆ ಪ್ರಚೋದಿಸುತ್ತಿರುವ ಪ್ರಕರಣಗಳು ಇತ್ತೀಚೆಗೆ ನಡೆಯುತ್ತಿವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ನಿಖರ ಅಂಕಿ ಅಂಶ ಇಲ್ಲ

ಮತೀಯ ಹಿಂಸೆಯಲ್ಲಿ ಸತ್ತವರ ಸಂಖ್ಯೆಯ ಕುರಿತು ಸಂಘಪರಿವಾರ ಮತ್ತು ಪಿಎಫ್‌ಐ ಪ್ರಮುಖರು  ತಮ್ಮದೇ ಆದ ಅಂಕಿ ಅಂಶ ನೀಡಿ ‍ಪ್ರತಿ‍‍ಪಾದನೆಗೆ ತೊಡಗುತ್ತಾರೆ.

ನಾಲ್ಕು ದಶಕಗಳಲ್ಲಿ 22 ಜನ ಮುಸ್ಲಿಮರು ಸತ್ತಿದ್ದಾರೆ ಎಂದು ಪಿಎಫ್‌ಐನ ಸಾಮಾಜಿಕ ಜಾಲ ತಾಣಗಳಲ್ಲಿ ಹೇಳಿಕೊಳ್ಳಲಾಗುತ್ತದೆ. ಸಂಘಪರಿವಾರದ ಪ್ರಮುಖರು ಈ ಸಂಖ್ಯೆ 60–70 ದಾಟುತ್ತದೆ ಎನ್ನುತ್ತಾರೆ. ನಿಖರ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ವಿವರಣೆ ನೀಡುತ್ತಾರೆ.

(ಮಾಫಿಯಾ ಜಾಡು: ಆಡಳಿತದ ವೈಫಲ್ಯ ಪಾಡು ನಾಳಿನ ಸಂಚಿಕೆಯಲ್ಲಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT