ಭಾನುವಾರ, ಡಿಸೆಂಬರ್ 8, 2019
24 °C

ಐಸಿಸಿ ವಿಶ್ವಕಪ್‌ ತಂಡದಲ್ಲಿ ಭಾರತದ ಐದು ಮಂದಿ

Published:
Updated:
ಐಸಿಸಿ ವಿಶ್ವಕಪ್‌ ತಂಡದಲ್ಲಿ ಭಾರತದ ಐದು ಮಂದಿ

ದುಬೈ: ಭಾರತ ತಂಡದ ನಾಯಕ ಪೃಥ್ವಿ ಶಾ, ಮನ್ಜೋತ್ ಕಾಲ್ರಾ, ಶುಭಮನ್‌ ಗಿಲ್‌, ಅನುಕೂಲ್‌ ರಾಯ್‌ ಮತ್ತು ಕಮಲೇಶ್‌ ನಾಗರಕೋಟಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಭಾನುವಾರ ಪ್ರಕಟಿಸಿ ರುವ ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಪೃಥ್ವಿ ಶಾ ನೇತೃತ್ವದ ಭಾರತ ತಂಡ ಶನಿವಾರ ನಡೆದ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ವಿಶ್ವಕಪ್‌ನಲ್ಲಿ ನಾಲ್ಕನೇ ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆದಿತ್ತು.

ನಾಯಕ ಪೃಥ್ವಿ (261), ಮನ್ಜೋತ್‌ (252) ಮತ್ತು ಶುಭಮನ್‌ ಗಿಲ್‌ (372) ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಗಿಲ್‌, ಟೂರ್ನಿಯ ಶ್ರೇಷ್ಠ ಆಟಗಾರ ಗೌರವಕ್ಕೂ ಭಾಜನರಾಗಿದ್ದರು.

ಎಡಗೈ ಸ್ಪಿನ್ನರ್‌ ಅನುಕೂಲ್‌ ರಾಯ್‌ (14 ವಿಕೆಟ್‌) ಟೂರ್ನಿಯಲ್ಲಿ ಜಂಟಿಯಾಗಿ ಗರಿಷ್ಠ ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ವೇಗದ ಬೌಲರ್‌ ಕಮಲೇಶ್‌ (9 ವಿಕೆಟ್‌) ಕೂಡ ಗಮನ ಸೆಳೆದಿದ್ದರು. ದಕ್ಷಿಣ ಆಫ್ರಿಕಾದ ನಾಯಕ ರೆನಾರ್ಡ್‌ ವ್ಯಾನ್‌ ಟೊಂಡರ್‌ ಅವರು ವಿಶ್ವಕಪ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ರೆನಾರ್ಡ್‌ ಈ ಬಾರಿಯ ವಿಶ್ವಕಪ್‌ನಲ್ಲಿ 6 ಪಂದ್ಯಗಳಿಂದ 348ರನ್‌ ಗಳಿಸಿದ್ದರು. ಕೆನ್ಯಾ ವಿರುದ್ಧ ಅವರು 143ರನ್‌ ಬಾರಿಸಿದ್ದರು.

ಈ ಬಾರಿಯ ಟೂರ್ನಿಯಲ್ಲಿ ಗರಿಷ್ಠ ರನ್‌ (418) ಗಳಿಸಿದ್ದ ವೆಸ್ಟ್‌ ಇಂಡೀಸ್‌ನ ಲಿಕ್‌ ಅಥನಜೆ ಅವರನ್ನು 12ನೇ ಆಟಗಾರನನ್ನಾಗಿ ತಂಡಕ್ಕೆ ಸೇರಿಸಲಾಗಿದೆ. ವೆಸ್ಟ್‌ ಇಂಡೀಸ್‌ನ ಹಿರಿಯ ಆಟಗಾರ ಇಯಾನ್‌ ಬಿಷಪ್‌, ಭಾರತದ ಅಂಜುಮ್‌ ಚೋಪ್ರಾ, ನ್ಯೂಜಿಲೆಂಡ್‌ನ ಜೆಫ್‌ ಕ್ರೋವ್‌, ಆಸ್ಟ್ರೇಲಿಯಾದ ಟಾಮ್‌ ಮೂಡಿ ಮತ್ತು ಪತ್ರಕರ್ತ ಶಶಾಂಕ್‌ ಕಿಶೋರ್‌ ಅವರಿದ್ದ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ.

ತಂಡ ಇಂತಿದೆ: ಪೃಥ್ವಿ ಶಾ, ಮನ್ಜೋತ್‌ ಕಾಲ್ರಾ ಮತ್ತು ಶುಭಮನ್‌ ಗಿಲ್‌ (ಮೂವರೂ ಭಾರತ), ಫಿನ್‌ ಅಲೆನ್‌ (ನ್ಯೂಜಿಲೆಂಡ್‌), ರೆನಾರ್ಡ್‌ ವ್ಯಾನ್‌ ಟೊಂಡರ್‌ (ನಾಯಕ), ವಾಂಡಿಲ್‌ ಮಕವೆಟು (ವಿಕೆಟ್‌ ಕೀಪರ್‌), (ಇಬ್ಬರೂ ದಕ್ಷಿಣ ಆಫ್ರಿಕಾ), ಅನುಕೂಲ್‌ ರಾಯ್‌ ಮತ್ತು ಕಮಲೇಶ್‌ ನಾಗರಕೋಟಿ (ಇಬ್ಬರೂ ಭಾರತ), ಗೆರಾಲ್ಡ್‌ ಕೊಯೆಟ್‌ಜಿ (ದಕ್ಷಿಣ ಆಫ್ರಿಕಾ), ಖ್ವಾಯಿಸ್‌ ಅಹಮದ್‌ (ಅಫ್ಗಾನಿಸ್ಥಾನ), ಶಾಹೀನ್‌ ಅಫ್ರಿದಿ (ಪಾಕಿಸ್ತಾನ), ಅಲಿಕ್‌ ಅಥನಜೆ (ವೆಸ್ಟ್‌ ಇಂಡೀಸ್‌, 12ನೇ ಆಟಗಾರ).

ಪ್ರತಿಕ್ರಿಯಿಸಿ (+)