ಮಂಗಳವಾರ, ಡಿಸೆಂಬರ್ 10, 2019
20 °C
ಅಂಗವಿಕಲರು, ಅಶಕ್ತರನ್ನು ಹೊತ್ತೊಯ್ಯಲು ಸಜ್ಜಾದ 300 ಜನರ ತಂಡ

ಮಹೋತ್ಸವಕ್ಕೆ ಎಪ್ಪತ್ತೈದು ಡೋಲಿಗಳು ಸಿದ್ಧ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಮಹೋತ್ಸವಕ್ಕೆ ಎಪ್ಪತ್ತೈದು ಡೋಲಿಗಳು ಸಿದ್ಧ

ಶ್ರವಣಬೆಳಗೊಳ: ಶ್ರಮ ಸಂಸ್ಕೃತಿಗೆ ಹೆಸರಾದ ಡೋಲಿ ಹೊರುವ ಕಾಯಕಜೀವಿಗಳು ಈ ಬಾರಿಯ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಜಾರ್ಖಂಡ್‌ನಿಂದ ಬಂದಿದ್ದಾರೆ.

ಡೋಲಿ ಹೊರುವ ಸ್ಥಳೀಯರು ಇದ್ದರೂ ಮಹೋತ್ಸವಕ್ಕೆ ಬರುವ ವೃದ್ಧರು, ಅಶಕ್ತರು, ಅಂಗವಿಕಲರ ಬೇಡಿಕೆ ಪೂರೈಸುವ ಸಲುವಾಗಿ ಜೈನ ಮಠ ಜಾರ್ಖಂಡ್‌ನ ಶಿಖರ್ಜಿಯಿಂದ 300 ಡೋಲಿವಾಲಾಗಳನ್ನು ಕರೆಸಿಕೊಂಡಿದೆ.

ವಿಂಧ್ಯಗಿರಿಯನ್ನು ಹತ್ತಿ ಬಾಹುಬಲಿಗೆ ನಡೆಯುವ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲಾಗದವರನ್ನು ಹೊತ್ತೊಯ್ಯಲು ವಿಶೇಷವಾದ ಪರಿಣತಿ ಪಡೆದಿರುವ ಇವರು, ಯಾತ್ರಾರ್ಥಿಗಳಿಗೆ ನೆರವಾಗಲಿದ್ದಾರೆ.

ಡೋಲಿ ಎಂದರೇನು?:

ವಯೋವೃದ್ಧರು, ಅಂಗವಿಕಲರು, ಅಸಹಾಯಕ ಭಕ್ತಾದಿಗಳಿಗಾಗಿ ಬಿದಿರಿನ ಬೊಂಬುಗಳಿಂದ ವಿಶೇಷವಾಗಿ ಸಿದ್ಧಪಡಿಸಲಾಗಿರುವ ಆಸನ ಇದಾಗಿದೆ. ಒಟ್ಟು 75 ಡೋಲಿ ಸಿದ್ಧಗೊಂಡಿದ್ದು, ಒಂದು ಡೋಲಿಯನ್ನು ನಾಲ್ವರು ಹೊತ್ತೊಯ್ಯುತ್ತಾರೆ.

ಬೆಟ್ಟ ಹತ್ತುವಾಗ ಕೈಯಲ್ಲಿ 5 ಅಡಿ ಬಿದಿರಿನ ಕೋಲನ್ನು ಊರುಗೋಲನ್ನಾಗಿ ಬಳಸುತ್ತಾರೆ. ಹೊತ್ತ ನಾಲ್ವರೂ ಒಂದೇ ವೇಗದಲ್ಲಿ ನಡೆಯಲಿದ್ದು, ಯಾತ್ರಾರ್ಥಿಗಳಿಗೆ ಆಯಾಸ, ತೊಂದರೆಯಾಗಗದಂತೆ ಕರೆದುಕೊಂಡು ಹೋಗಿ ಬರುತ್ತಾರೆ.

ವಿಂಧ್ಯಗಿರಿ ಬೆಟ್ಟ ಭೂಮಟ್ಟದಿಂದ 470 ಅಡಿ ಮೇಲಿದ್ದು, ಬಾಹುಬಲಿ ಮೂರ್ತಿಯ ದರ್ಶನ ಮಾಡಲು 630 ಮೆಟ್ಟಿಲು ಹತ್ತಬೇಕು. ಈ ಬಾರಿ ಪುರಾತತ್ವ ಇಲಾಖೆಯು ಡೋಲಿ ಹೊರುವವರಿಗಾಗಿಯೇ ಪ್ರತ್ಯೇಕ ಮೆಟ್ಟಿಲು ನಿರ್ಮಿಸಿದೆ.

‘ಭಕ್ತಾದಿಗಳನ್ನು ಬೆಟ್ಟದ ಮೇಲೆ ಹೊತ್ತೊಯ್ಯುವ ಕಾರ್ಯಕ್ಕೆ ಸಜ್ಜಾಗಿದ್ದೇವೆ. ಡೋಲಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ತೂಕದ ಆಧಾರದ ಮೇಲೆ ದರ ನಿಗದಿಪಡಿಸಲಾಗುತ್ತದೆ. ಶುಲ್ಕವನ್ನು ಸ್ಥಳೀಯ ಜೈನ ಮಠದ ಆಡಳಿತ ಮಂಡಳಿ ನಿರ್ಧರಿಸುತ್ತದೆ’ ಎನ್ನುತ್ತಾರೆ ಜಾರ್ಖಂಡ್‌ ಡೋಲಿವಾಲಾ ಮನೋಜ್.

ಈ ಶ್ರಮಜೀವಿಗಳ ಹಿನ್ನಲೆಯೇ ಕುತೂಹಲಕಾರಿಯಾಗಿದೆ. ಕಾರ್ಮಿಕರು ಜಾರ್ಖಂಡ್‌ನ ಗಿರಿಡಿ ಜಿಲ್ಲೆಯ ಮಧುವನ ಸ್ಥಳದವರಾಗಿದ್ದು, ಇದು ಜೈನ ಧರ್ಮದ 20 ತೀರ್ಥಂಕರರು ಮೋಕ್ಷ ಹೊಂದಿದ ಪ್ರಸಿದ್ಧ ಸಿದ್ಧಕ್ಷೇತ್ರ ಸಮ್ಮೇದ ಶಿಖರ್ಜಿಯ ತಪ್ಪಲಿನಲ್ಲಿದೆ. ಈ ಬೆಟ್ಟ ಹತ್ತಿ ಇಳಿಯಲು ಯಾತ್ರಾರ್ಥಿಗಳು ಮಧುವನದಿಂದ 27 ಕಿ.ಮೀ. ಕಾಲ್ನಡಿಗೆಯಲ್ಲೇ ಕ್ರಮಿಸಿ ಬರಬೇಕಾಗಿದ್ದು, ಬೆಟ್ಟವನ್ನು ಹತ್ತಿ ಇಳಿಯಲಾಗದವರು ಡೋಲಿವಾಲಾಗಳ ಸಹಾಯದಿಂದ ದರ್ಶನ ಪಡೆಯುತ್ತಾರೆ.

ಈಗಾಗಲೇ ಸ್ಥಳೀಯ ಡೋಲಿವಾಲಾಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋದಾಗ ದರ್ಶನಕ್ಕೆ ಕನಿಷ್ಠ 1ರಿಂದ 2 ತಾಸು ಸಮಯ ನೀಡುತ್ತಿದ್ದಾರೆ. ಒಬ್ಬ ಡೋಲಿವಾಲಾಗೆ ಮಠದ ಆಡಳಿತ ಮಂಡಳಿ ತಿಂಗಳಿಗೆ ₹ 10,000 ವೇತನ ನಿಗದಿ ಮಾಡಿದೆ. ಒಬ್ಬ ಯಾತ್ರಾರ್ಥಿಗೆ ₹ 700 ಶುಲ್ಕ ನಿಗದಿ ಮಾಡಲಾಗಿದೆ’ ಎನ್ನುತ್ತಾರೆ ಸ್ಥಳೀಯ ಡೋಲಿವಾಲಾ ರಮೇಶ್.

‘ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಅನುಭವವುಳ್ಳ ಡೋಲಿವಾಲಾಗಳನ್ನು ಕರೆಸಲಾಗಿದೆ. ಸ್ಥಳೀಯ ಡೋಲಿವಾಲಾಗಳಿಗೆ ವೇತನ ನಿಗದಿಪಡಿಸಲಾಗಿದೆ. ಜಾರ್ಖಂಡ್‌ ಡೋಲಿವಾಲಾಗಳಿಗೆ ಇನ್ನು ದರ ನಿಗದಿ ಮಾಡಿಲ್ಲ’ ಎಂದು ಮಠದ ವ್ಯವಸ್ಥಾಪಕ ಬಿ.ವಿ.ದೇವರಾಜ್‌ ತಿಳಿಸಿದರು.

ಶಕ್ತಿಯ ರಹಸ್ಯವೇನು?

ಈ ಡೋಲಿವಾಲಾಗಳು ಹಿತಮಿತವಾದ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ. ನಡಿಗೆಯೇ ಅವರ ದೈನಂದಿನ ಕಸರತ್ತು. ಎಣ್ಣೆಯಿಂದ ಕರಿದ ಪದಾರ್ಥ ಹೆಚ್ಚು ತಿನ್ನುವುದಿಲ್ಲ.

‘ಮಧುವನ ಬೆಟ್ಟ ಹತ್ತಿ ಇಳಿಯುವಾಗ ಅಲ್ಲಲ್ಲಿ ಚಹಾದ ಅಂಗಡಿಗಳಿದ್ದು, ವಿಶ್ರಾಂತಿಗಾಗಿ ನಿಲ್ಲಿಸಿದಾಗ ಹೆಚ್ಚಾಗಿ ಚಹಾ ಮತ್ತು ನಿಂಬೆ ಹಣ್ಣಿನ ಜ್ಯೂಸ್‌ ಸೇವಿಸುತ್ತೇವೆ. 16 ಕಿ.ಮೀ. ದೂರ ಕ್ರಮಿಸಿದ ನಂತರ ಜಲಮಂದಿರದ ಬಳಿ ಒಂದು ಗಂಟೆ ವಿಶ್ರಾಂತಿಗಾಗಿ ನಿಲ್ಲಿಸಿದಾಗ ದಪ್ಪ ಅವಲಕ್ಕಿ, ಬೆಲ್ಲ ಮತ್ತು ಈರುಳ್ಳಿಯನ್ನು ಹೆಚ್ಚಾಗಿ ತಿನ್ನುತ್ತೇವೆ. ಕೆಲವೊಮ್ಮೆ ಅನ್ನ– ಸಾಂಬಾರ್ ಕೂಡ ತಿನ್ನುತ್ತೇವೆ. 50ರಿಂದ 80 ಕೆ.ಜಿ. ತೂಕದ ಒಬ್ಬ ವ್ಯಕ್ತಿಯಿಂದ ₹ 4 ಸಾವಿರದಿಂದ ₹ 8 ಸಾವಿರ ಶುಲ್ಕ ಪಡೆಯತ್ತೇವೆ’ ಎಂದು ಜಾರ್ಖಂಡ್‌ನ ಡೋಲಿವಾಲಾ ಸಿಯಾರಂ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)