ಬಜೆಟ್ ಸಭೆ ಬಹಿಷ್ಕರಿಸಿದ ಎಡಗೈ ಮುಖಂಡರು

7

ಬಜೆಟ್ ಸಭೆ ಬಹಿಷ್ಕರಿಸಿದ ಎಡಗೈ ಮುಖಂಡರು

Published:
Updated:

ಬೆಂಗಳೂರು: ದಲಿತ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ನಡೆಸಿದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಒಳ ಮೀಸಲಾತಿ ವಿಚಾರ ಪ್ರಸ್ತಾಪವಾಗಿ ಎಡಗೈ ಸಮುದಾಯದ ಮುಖಂಡರು ಸಭೆ ಬಹಿಷ್ಕರಿಸಿದರು.

ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಭೆ ಆರಂಭದಲ್ಲೇ ಎಡಗೈ ಸಮುದಾಯದ ಮುಖಂಡರಾದ ಮಾರಸಂದ್ರ ಮುನಿಯಪ್ಪ ಮತ್ತು ಎನ್. ಮೂರ್ತಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಇದು ಬಜೆಟ್ ಪೂರ್ವಭಾವಿ ಸಭೆ, ಈ ಕುರಿತು ಸಲಹೆಗಳನ್ನು ಕೊಡಿ’ ಎಂದು ಮನವಿ ಮಾಡಿದರು.

‘ಆಯೋಗದ ವರದಿ ಜಾರಿ ಬಗ್ಗೆ ನನಗೂ ಬದ್ಧತೆ ಇದೆ. ಅಡ್ವೊಕೇಟ್ ಜನರಲ್ ಅವರಿಂದ ಕಾನೂನು ಸಲಹೆ ಕೇಳಿದ್ದೇನೆ. ವರದಿ ಬಂದ ಕೂಡಲೇ ಸಂಪುಟ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಕೇಂದ್ರಕ್ಕೆ ಕಳುಹಿಸುತ್ತೇನೆ’ ಎಂದರು.

ಇದಕ್ಕೆ ಸುಮ್ಮನಾಗದ ಮುಖಂಡರು, ‘ಎಷ್ಟು ದಿನಗಳಲ್ಲಿ ಶಿಫಾರಸು ಮಾಡಲಾಗುತ್ತದೆ ಎಂಬುದನ್ನು ಈಗಲೇ ತಿಳಿಸಬೇಕು’ ಎಂದು ಪಟ್ಟು ಹಿಡಿದರು. ‘ಕುಳಿತಲ್ಲೆ ದಿನಾಂಕ ನಿಗದಿ ಮಾಡಲು ಆಗುವುದಿಲ್ಲ. ಬಜೆಟ್ ಸಭೆ ನಡೆಸಲು ಬಿಡದೆ ಹೀಗೆ ಬಲವಂತ ಮಾಡಿದರೆ ಸಭೆಯಿಂದ ನಾನೇ  ಎದ್ದು ಹೋಗುತ್ತೇನೆ’ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಮುಖಂಡರು, ‘ನೀವು ಹೋಗುವುದು ಬೇಡ, ನಾವೇ ಹೋಗುತ್ತೇವೆ. ಆದರೆ, ಮೊದಲಿಂದಲೂ ಶೋಷಿತರ ಪರವಾದ ನಿಲುವು ಹೊಂದಿದ್ದೀರಿ ಎಂಬ ಕಾರಣಕ್ಕೆ ನಿಮ್ಮ ಮೇಲೆ ಒತ್ತಡ ಹೇರುತ್ತಿದ್ದೇವೆ’ ಎಂದು ತಿಳಿಸಿ ಹೊರ ನಡೆದರು. ಉಳಿದ ಮುಖಂಡರೊಂದಿಗೆ ಸಿದ್ದರಾಮಯ್ಯ ಸಭೆ ಮುಂದುವರಿಸಿದರು.

‘ಸಿದ್ದರಾಮಯ್ಯಗೆ ಬುದ್ದಿ ಕಲಿಸುತ್ತೇವೆ’

ಸಭೆಯಿಂದ ಹೊರ ಬಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಎನ್‌. ಮೂರ್ತಿ,  ‘ಸಂವಿಧಾನಾತ್ಮಕ ಹಕ್ಕು ಪಡೆದುಕೊಳ್ಳಲು ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ಬುದ್ದಿ ಕಲಿಸುತ್ತೇವೆ. ಕಾಂಗ್ರೆಸ್‌ಗೆ ದಲಿತರ ಮತಗಳೇ ತಳಪಾಯ ಎಂಬುದನ್ನು ಅವರು ಮರೆಯಬಾರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾನೂನು ಸಲಹೆ ಪಡೆಯುವ ಅಗತ್ಯ ಇಲ್ಲದಿದ್ದರೂ ಸರ್ಕಾರ ವಿನಾಕಾರಣ ವಿಳಂಬ ಮಾಡುತ್ತಿದೆ. ಹೀಗಾಗಿ ಬಜೆಟ್ ಪೂರ್ವಭಾವಿ ಸಭೆ ಬಹಿಷ್ಕರಿಸಿದ್ದೇವೆ’ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry