ಮಂಗಳವಾರ, ಡಿಸೆಂಬರ್ 10, 2019
20 °C

ಜನರಿಗೆ ಲೆಕ್ಕ ಕೊಟ್ಟ ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನರಿಗೆ ಲೆಕ್ಕ ಕೊಟ್ಟ ಪ್ರಧಾನಿ

ಬೆಂಗಳೂರು: ಮಹದಾಯಿ ನದಿ ನೀರಿನ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ, ಕರಾಳ ದಿನಾಚರಣೆ ಮಧ್ಯೆಯೇ ಇಲ್ಲಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ಮಹದಾಯಿ ವಿಷಯದಲ್ಲಿ  ಮೋದಿ ಮಹಾ ಮೌನ ತಾಳಿದರು. ಆದರೆ ಕಳೆದ ಮೂರು ಮುಕ್ಕಾಲು ವರ್ಷಗಳಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಕೊಟ್ಟ ದೊಡ್ಡ ಪಟ್ಟಿಯನ್ನೇ ಅವರು ಜನರ ಮುಂದಿಟ್ಟರು.

ಎಲ್ಲಿ ನೋಡಿದರೂ ಕಾಣುತ್ತಿದ್ದ ಜನ ಸಾಗರ, ‘ಮೋದಿ ಮೋದಿ’ ಎಂಬ ಉದ್ಘೋಷಗಳ ಮಧ್ಯೆಯೇ ಒಂದು ಗಂಟೆ ಕನ್ನಡ ಮತ್ತು ಹಿಂದಿಯಲ್ಲಿ  ಮೋದಿ ಭಾಷಣ ಮಾಡಿದರು.

‘ಕರ್ನಾಟಕ ಕಾಂಗ್ರೆಸ್‌ ಮುಕ್ತವಾಗಬೇಕು. ಕೇಸರಿ ಬಾವುಟ ಎಲ್ಲೆಲ್ಲೂ ಹಾರಾಡಿ, ನೂರಾರು ಕಮಲಗಳು ಅರಳಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನವ ಭಾರತ, ನವ ಕರ್ನಾಟಕ ನಿರ್ಮಾಣದ ಪರಿವರ್ತನೆ ಇಂದಿನಿಂದಲೇ ಆರಂಭವಾಗಿದೆ. ಅಭಿವೃದ್ಧಿ ಹೀನ ಹಾಗೂ ಭ್ರಷ್ಟಾಚಾರದಲ್ಲಿ ವಿವಿಧ ಸಾಧನೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್ ಸರ್ಕಾರದ ಪತನದ ಕ್ಷಣಗಣನೆ ಆರಂಭವಾಗಿದ್ದು,  ಹೊರ ನಡೆಯುವ ಬಾಗಿಲಿನಲ್ಲಿ ಸರ್ಕಾರ ನಿಂತಿದೆ. ಯುವಕರ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಅಪರಾಧ ಮುಕ್ತ, ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಮಯ ಬೇಕಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಮತ ಹಾಕುವ ಮೂಲಕವೇ ಯುವಕರ ಸರಣಿ ಹತ್ಯೆಗೆ ಉತ್ತರ ನೀಡಬೇಕು ಎಂದು ಹೇಳಿದ ಪ್ರಧಾನಿ ವಿಧಾನಸಭಾ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು.

ಕೇಂದ್ರದ ಬಜೆಟ್ ಮಂಡನೆ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಿದ ಅವರು, ಬಜೆಟ್‌ನ ಕೊಡುಗೆಗಳ ವಿವರವನ್ನೇ ಅಂಕಿ ಅಂಶಗಳ ಮೂಲಕ ನೀಡಿದರು.

ಕರ್ನಾಟಕಕ್ಕೆ ಕೊಟ್ಟ ಹಣವನ್ನು ಇಲ್ಲಿನ ಸರ್ಕಾರ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಇಂತಹ ಸರ್ಕಾರ ನಿಮಗೆ ಬೇಕೆ ಎಂದು ಪ್ರಶ್ನಿಸಿದ ಅವರು, ಭಾಷಣದುದ್ದಕ್ಕೂ ಕಾಂಗ್ರೆಸ್‌ ಸರ್ಕಾರವನ್ನು ವಾಚಾಮಗೋಚರವಾಗಿ ಬೈದಾಡಿದರು.

ಬೈಗುಳಗಳ ಸರಮಾಲೆ:

*ಶೇ 10ರಷ್ಟು ಕಮಿಷನ್ ಪಡೆಯುವ ಸರ್ಕಾರ ಇಲ್ಲಿದೆ. ಕಮಿಷನ್ ಕೊಡದೇ ಇದ್ದರೆ ಯಾವ ಕೆಲಸವೂ ಆಗದು.

*ಕಮಿಷನ್ ಆಸೆಗೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಬಡವರ ಬಗ್ಗೆ ಕಳಕಳಿಯಿಂದಲ್ಲ.

*ನಮ್ಮದು ಉದ್ಯಮಿ ಸ್ನೇಹಿ, ಬಡವರ ಪರ ಸರ್ಕಾರ. ಇಲ್ಲಿನದು ಕೊಲೆಗಳ ಸ್ನೇಹಿ ಸರ್ಕಾರ.

*ಬಿಲ್ಡರ್‌, ಮರಳು, ಭೂಮಿ, ಉಕ್ಕು, ವರ್ಗಾವಣೆ ಮಾಫಿಯಾದ ರಾಜ್ಯಭಾರ ಇಲ್ಲಿ ನಡೆಯುತ್ತಿದೆ.

*ಇದು ನಂಗಾನಾಚ್ ಸರ್ಕಾರ.

*ಉಕ್ಕಿನ ಮೇಲ್ಸೇತುವೆ ಹೆಸರಿನಲ್ಲಿ ದೊಡ್ಡ ವ್ಯಕ್ತಿಗಳು ಕೋಟಿಗಟ್ಟಲೆ ಮೊತ್ತದ ಆಟವಾಡಲು ಮುಂದಾಗಿದ್ದರು.

*ಭ್ರಷ್ಟಾಚಾರ, ವಂಶ ಪಾರಂಪರ್ಯ, ಓಲೈಕೆ, ಜಾತಿವಾದ ಹಾಗೂ ವಿಭಜನೆ ರಾಜಕಾರಣ ಇಲ್ಲಿ ವಿಜೃಂಭಿಸುತ್ತಿದೆ.

*ಕಾಂಗ್ರೆಸ್‌ನವರು ಜನರ ಉದ್ಧಾರಕ್ಕೆ ಏನೂ ಮಾಡಿಲ್ಲ. ಅವರ ಉದ್ಧಾರಕ್ಕೆ ಮಾತ್ರ ಕೆಲಸ ಮಾಡುತ್ತಾರೆ.

*ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಪರಾಧಿಗಳು ರಾಜಾರೋಷವಾಗಿ ಇಲ್ಲಿ ಓಡಾಡುತ್ತಾರೆ.

*ಶ್ರೀಸಾಮಾನ್ಯರಿಗೆ ಭದ್ರತೆ, ನೆಮ್ಮದಿಯೇ ಇಲ್ಲವಾಗಿದೆ.

*ಬಿಜೆಪಿ ಕಾರ್ಯಕರ್ತರ ಹತ್ಯೆ ಎಗ್ಗಿಲ್ಲದೇ ನಡೆಯುತ್ತಿದೆ. ಇದು ಸಮಾಜವನ್ನು ಆತಂಕಕ್ಕೆ ದೂಡುತ್ತಿದೆ.

*ಕೆಲವು ಸಚಿವರು ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.

ಕೊಟ್ಟ ಕೊಡುಗೆಯ ವಿವರ:

*ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ₹73,000 ಕೋಟಿ ನೀಡಿತ್ತು. ನಾವು  ₹ 2 ಲಕ್ಷ ಕೋಟಿ ನೀಡಿದ್ದೇವೆ.

*ಮುದ್ರಾ ಯೋಜನೆಯಡಿ ₹1 ಲಕ್ಷ ಕೋಟಿ ಅಡಮಾನ ರಹಿತ ಸಾಲ ನೀಡಿದ್ದೇವೆ.

*ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3.36 ಲಕ್ಷ ಮನೆ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ 38,000 ಮನೆಗಳನ್ನು ಮಾತ್ರ ಬಡವರಿಗೆ ನೀಡಿದೆ.

*ಉಜ್ವಲ ಯೋಜನೆಯಡಿ 8.5 ಲಕ್ಷ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದೇವೆ.

* ಯುಪಿಎ ಸರ್ಕಾರದ ಅವಧಿಯಲ್ಲಿ 950 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಇತ್ತು. ನಮ್ಮ ಸರ್ಕಾರ ಬಂದ ಮೇಲೆ 1,600 ಕಿ.ಮೀ ಉದ್ದದ ಹೆದ್ದಾರಿ ಅಭಿವೃದ್ಧಿ ಪಡಿಸಿದ್ದೇವೆ.

*ಕೃಷಿ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿಗಾಗಿ ₹40,000 ಕೋಟಿ ನೀಡಿದ್ದೇವೆ.

*ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹ 836 ಕೋಟಿ ನೀಡಿದ್ದೇವೆ. ₹ 143 ಕೋಟಿ ಕೆಲಸವಾಗಿದ್ದು, ಉಳಿದಿದ್ದು ಖಜಾನೆಯಲ್ಲಿ ಕೊಳೆಯುತ್ತಿದೆ.

ರಾಜ್ಯದಲ್ಲೂ ಬಿಜೆಪಿ ಬಂದರೆ ಅಭಿವೃದ್ಧಿಗೆ ವೇಗ

‘ಬಿಜೆಪಿ ಅಧಿಕಾರಕ್ಕೆ ಬಂದರೆ ₹1 ಲಕ್ಷ ಕೋಟಿ ಮೊತ್ತವನ್ನು ನೀರಾವರಿಗೆ ಮೀಸಲಿಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ ನೀರಾವರಿ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಲಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

‘ಯಡಿಯೂರಪ್ಪನವರು ರೈತನ ಮಗ. ರೈತರ ಬಗ್ಗೆ ಅವರ ಹೃದಯದಲ್ಲಿ ಏನಿದೆ ಎಂಬುದು ನನಗೆ ಗೊತ್ತಿದೆ. ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದೂ ಅವರು ಕರೆ ನೀಡಿದರು.

ಮೋದಿ ಮಾತುಗಳಿಗೆ ಪರಮೇಶ್ವರ ತಿರುಗೇಟು

ಬೆಂಗಳೂರು: ರಾಜ್ಯ ಸರ್ಕಾರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಆರೋಪಗಳ ಸುರಿಮಳೆಗೈದ ಬೆನ್ನಲ್ಲೆ ಮಾಧ್ಯಮಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ತಿರುಗೇಟು ನೀಡಿದರು.

ಮೋದಿ ಎತ್ತಿದ ಪ್ರತಿಯೊಂದು ಪ್ರಶ್ನೆಗಳನ್ನು ಪಟ್ಟಿ ಮಾಡಿದ ಪರಮೇಶ್ವರ, ಎಲ್ಲದಕ್ಕೂ ಉತ್ತರಗಳನ್ನು ನೀಡಿದರು. ಅಲ್ಲದೆ ಮೋದಿಗೆ ಪ್ರಶ್ನೆಗಳನ್ನೂ ಕೇಳಿದರು.

* ‘ಭ್ರಷ್ಟಾಚಾರ ಮುಕ್ತ ಕರ್ನಾಟಕ’ ಮಾಡುತ್ತೇನೆ ಎಂದು ಘೋಷಿಸುವಾಗ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಯಡಿಯೂರಪ್ಪ ತಮ್ಮ ಪಕ್ಕದಲ್ಲಿದ್ದರು ಎಂಬುದನ್ನು ಮೋದಿ ಮರೆತಿದ್ದೇಕೆ?

* ಶೇ 10ರಷ್ಟು ಕಮಿಷನ್‌ ಇಲ್ಲದೆ ಇಲ್ಲಿ ಕೆಲಸ ಆಗುವುದಿಲ್ಲ ಎಂದು ಹೇಳಿದ್ದಾರೆ. ಯಾವುದರಲ್ಲಿ ಕಮಿಷನ್‌ ತೆಗೆದುಕೊಳ್ಳಲಾಗುತ್ತಿದೆ ಎನ್ನುವುದನ್ನು ದಾಖಲೆ ಸಹಿತ ತೋರಿಸಲಿ.

* ಉಕ್ಕಿನ ಸೇತುವೆ ಯೋಜನೆಯನ್ನೇ ಸರ್ಕಾರ ಕೈ ಬಿಟ್ಟಿದೆ. ಹೀಗಿದ್ದರೂ ಆ ಯೋಜನೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದಿರುವುದು ಎಷ್ಟು ಸರಿ?

* ದೇಶದಲ್ಲಿ 4 ಕೋಟಿ ಜನ ಕಗ್ಗತ್ತಲಲ್ಲಿ ಇದ್ದಾರೆ ಎನ್ನುವ ಮೋದಿ, ಬೆಳಕಿನಲ್ಲಿರುವ ಕರ್ನಾಟಕದ 6 ಕೋಟಿ ಜನರ ಬಗ್ಗೆ ಮಾತನಾಡುವುದಿಲ್ಲ ಏಕೆ?

* ಬೆಂಗಳೂರು ಉಪನಗರ ಯೋಜನೆಗೆ ₹ 17 ಸಾವಿರ ಕೋಟಿ ಕೇಂದ್ರ ನೀಡಿದೆ ಎಂದೂ ಮೋದಿ ಹೇಳಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು ತಲಾ ಶೇ 20. ಉಳಿದ ಶೇ 60 ಹಣ ಹಣಕಾಸು ಸಂಸ್ಥೆಗಳದ್ದು. ಎಲ್ಲ ನಾವೇ ನೀಡಿದ್ದೇವೆ ಎನ್ನುವುದು ಸುಳ್ಳು ಅಲ್ಲವೇ?

* ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತ ವಿರೋಧಿ ಎನ್ನುವ ಮೋದಿ, ಮಹದಾಯಿ ನದಿ ನೀರಿನ ವಿಚಾರದ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಮಹದಾಯಿ ಹೋರಾಟದಿಂದ ಈಗ ರಾಜ್ಯದಲ್ಲಿ ಬೆಂಕಿ ಹತ್ತಿಕೊಂಡಿದೆ. ಆದರೂ, ಕುಡಿಯುವ ಅಗತ್ಯಕ್ಕೆ 7 ಟಿಎಂಸಿ ಅಡಿ ನೀರು ಬಿಡಿಸಲು ಅವರಿಗೆ ಆಗುತ್ತಿಲ್ಲ.

* ರೈತರ ಉತ್ಪನ್ನಗಳಿಗೆ ಮೂರೂವರೆ ಪಟ್ಟು ಬೆಲೆ ಬರುವಂತೆ ಮಾಡುತ್ತೇನೆ ಎಂದು ಹೇಳುವ ಮೋದಿ, ಅದು ಹೇಗೆ ಸಾಧ್ಯ ಎಂದೂ ವಿವರಿಸಬೇಕಿತ್ತು. ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುಮಾರು 12 ಸಾವಿರ ರೈತರಿಗೆ ಕೇಂದ್ರ ಯಾವುದೇ ಪರಿಹಾರ ನೀಡಿಲ್ಲ.

*ಸಹಕಾರಿ ಸಂಸ್ಥೆಗಳಲ್ಲಿರುವ ₹ 50 ಸಾವಿರವರೆಗಿನ ಸಾಲವನ್ನು ಕರ್ನಾಟಕ ಸರ್ಕಾರ ಮನ್ನಾ ಮಾಡಿದ್ದರಿಂದ 22.50 ಲಕ್ಷ ರೈತರಿಗೆ ಅನುಕೂಲವಾಗಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲ ಮನ್ನಾ ಬಗ್ಗೆ ಅವರು ಯಾವುದೇ ಪ್ರಸ್ತಾವ ಮಾಡಿಲ್ಲ.

* ದೇಶವನ್ನು ಕಾಂಗ್ರೆಸ್‌ ಮುಕ್ತ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಆದರೆ, 2019ರಲ್ಲಿ ಕೇಂದ್ರದಲ್ಲಿ ರಾಹುಲ್‌ ನೇತೃತ್ವದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಬಿಜೆಪಿ ಮುಕ್ತವಾಗಲಿದೆ.

* 3.36 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇವೆ. ಅದರಲ್ಲಿ 38,000 ಮಾತ್ರ ನಿರ್ಮಾಣ ಆಗಿದೆ ಎಂದೂ ಅವರು ಹೇಳಿದ್ದಾರೆ. ಇದು ತಪ್ಪು ಮಾಹಿತಿ. 15 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

* ಸ್ಮಾರ್ಟ್‌ ಸಿಟಿ ವಿಳಂಬವಾಗಲು ಕೇಂದ್ರ ಸರ್ಕಾರವೇ ಕಾರಣ. ಯೋಜನೆಗೆ ತಗಲುವ ವೆಚ್ಚದಲ್ಲಿ ಶೇ 35ರಷ್ಟು ಮಾತ್ರ ಕೇಂದ್ರ ನೀಡುತ್ತದೆ. ಆದರೆ, ಯೋಜನೆಯ ರೂಪುರೇಷೆಗೆ ಮಂಜೂರಾತಿ, ಹಣ ಬಿಡುಗಡೆ ತಡವಾಗಿದ್ದರಿಂದ ಅನುಷ್ಠಾನ ವಿಳಂಬವಾಗಿದೆ.

* ಕರ್ನಾಟಕ ಅಪರಾಧಗಳ ರಾಜ್ಯ ಎಂದು ಮೋದಿ ಕರೆದಿದ್ದಾರೆ. ಆದರೆ, ಇಡೀ ದೇಶದಲ್ಲಿ ಅತೀ ಹೆಚ್ಚು ಅಪರಾಧಗಳು ನಡೆದ ರಾಜ್ಯಗಳ ಪಟ್ಟಿಯಲ್ಲಿ ಅವರದ್ದೇ ಪಕ್ಷದ ಆಡಳಿತ ಇರುವ ಉತ್ತರ ಪ್ರದೇಶ (ಶೇ 9.5) ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ (ಶೇ 8.9) ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ಮೊದಲ 10 ರಾಜ್ಯಗಳ ಪಟ್ಟಿಯಲ್ಲೇ ಇಲ್ಲ.

* ನಿಯಮ ಪಾಲಿಸಿದ ಬಳಿಕವೇ ಕೇಂದ್ರದ ಅನುದಾನ ಬಿಡುಗಡೆಯಾಗುತ್ತದೆ. ರಾಜ್ಯ ಇನ್ನೂ 2 ಲಕ್ಷ ಕೋಟಿ ಹಣ ಬಳಕೆ ಮಾಡಿದ ದಾಖಲೆ ನೀಡಿಲ್ಲ ಎಂದು ಮೋದಿ ಆರೋಪಿಸಿದ್ದಾರೆ. ಹಾಗಿದ್ದರೆ, ಯೋಜನೆ ಮಂಜೂರಾತಿ ವೇಳೆ ನಾಲ್ಕು ವರ್ಷಗಳಿಂದ ರಾಜ್ಯಕ್ಕೆ ಹಣ ನೀಡುತ್ತ ಬಂದಿರುವುದು ಹೇಗೆ?

* ರಾಜಕೀಯ ಉದ್ದೇಶಕ್ಕಾಗಿ ಕರ್ನಾಟಕದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಮೋದಿ, ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ.

* ಮೂರು ತಿಂಗಳು ಸಮಯ ಕೊಡಿ. ಮನೆಮನೆಗೆ ಹೋಗಿ ಪಕ್ಷವನ್ನು ಅಧಿಕಾರಕ್ಕೆ ತಂದು, ಪ್ರಧಾನಿ ನೆರವಿನೊಂದಿಗೆ ಅಭಿವೃದ್ಧಿಯ ಹೊಳೆ ಹರಿಸುವೆ

– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* ರಾಹುಲ್‌ ಗಾಂಧಿ ಭೋಗ ಜೀವಿ. ಮೋದಿ ಕರ್ಮ ಯೋಗಿ. ಗಾಂಧಿ–ನೆಹರೂ ವಂಶಸ್ಥರು ಈ ದೇಶಕ್ಕೆ ಬೇಡ. ದೇಶಕ್ಕಾಗಿ ದುಡಿಯುವ ಕಣ್ಮಣಿ ಮೋದಿ ಬೇಕು

– ಅನಂತಕುಮಾರ್‌, ಕೇಂದ್ರ ಸಂಸದೀಯ ಸಚಿವ

* ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕದ ಭೇಟಿ ರಾಜ್ಯ ರಾಜಕಾರಣ ಮತ್ತು ವಿಧಾನಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ

– ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)