ಸೋಮವಾರ, ಡಿಸೆಂಬರ್ 9, 2019
22 °C
ಅರ್ಹತೆ ಆಧರಿಸಿ ವಲಸೆ ಸೌಲಭ್ಯ ನೀತಿಗೆ ಬೆಂಬಲ

ಭಾರತ ಸಂಜಾತ ಉದ್ಯೋಗಿಗಳಿಂದ ರ‍್ಯಾಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತ ಸಂಜಾತ ಉದ್ಯೋಗಿಗಳಿಂದ ರ‍್ಯಾಲಿ

ವಾಷಿಂಗ್ಟನ್‌: ಅರ್ಹತೆ ಆಧರಿಸಿ ವಲಸೆ ಸೌಲಭ್ಯ ನೀಡುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿ, ಅಮೆರಿಕದಲ್ಲಿರುವ ನೂರಾರು ಭಾರತೀಯ ಉದ್ಯೋಗಿಗಳು ಶ್ವೇತಭವನದ ಮುಂಭಾಗ ರ‍್ಯಾಲಿ ನಡೆಸಿದರು.

ಗ್ರೀನ್‌ ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಟ್ರಂಪ್‌ ಅವರ ನಿರ್ಧಾರದಿಂದ ಅನುಕೂಲವಾಗಲಿದೆ.

ಕಳೆದ ಹಲವು ದಶಕಗಳಿಂದಲೂ ಅಮೆರಿಕದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುವ ಪರಿಣತ ಉದ್ಯೋಗಿಗಳ ಜತೆ ಅವರ ಮಕ್ಕಳು ಮತ್ತು ಪತ್ನಿಯರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ದೂರದ ಕ್ಯಾಲಿಫೋರ್ನಿಯಾ, ಟೆಕ್ಸಾಸ್‌, ಷಿಕಾಗೊದಿಂದ ಕೆಲವರು ವಿಮಾನದಲ್ಲಿ ಬಂದಿದ್ದರೆ, ಇನ್ನು ಕೆಲವರು ಫ್ಲಾರಿಡಾ, ನ್ಯೂಯಾರ್ಕ್‌, ಮೆಸಾಚುಸೆಟ್ಸ್ ಮುಂತಾದಲ್ಲಿಂದ ನೂರಾರು ಕಿ.ಮೀ ದೂರ ರಸ್ತೆ ಮಾರ್ಗವಾಗಿ ಬಂದು ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ದೇಶಕ್ಕೆ ಇಂತಿಷ್ಟೇ ಕಾನೂನುಸಮ್ಮತ ಶಾಶ್ವತ ನಿವಾಸಿ ಮಿತಿಯನ್ನು ನಿಲ್ಲಿಸಬೇಕು ಎಂದು ಟ್ರಂಪ್‌ ಅವರನ್ನು ಒತ್ತಾಯಿಸಿದರು.

‘ಅರ್ಹತೆ ಆಧಾರದ ವಲಸೆ ನೀತಿ ಜಾರಿಗೆ ಬಂದಾಗ ಮಾತ್ರವೇ ಅಮೆರಿಕದಲ್ಲಿ ಸಮೃದ್ಧಿ ಮತ್ತು ವೇಗದ ಆರ್ಥಿಕ ಬೆಳವಣಿಗೆ ಸಾಧ್ಯ’ ಎಂದು ಅಮೆರಿಕವನ್ನು ತಮ್ಮ ಶಾಶ್ವತ ನೆಲೆಯಾಗಿಸಿಕೊಳ್ಳಲು ಬಯಸಿರುವ ಕುಶಲ ಭಾರತೀಯರನ್ನುದ್ದೇಶಿಸಿ ಮಾತನಾಡಿದ ರಿಪಬ್ಲಿಕನ್ ಹಿಂದೂ ಮೈತ್ರಿ ಸಂಘಟನೆಯ ಕೃಷ್ಣ ಬನ್ಸಲ್‌ ಹೇಳಿದರು.

ವಿಸ್ತೃತ ವಲಸೆ ನೀತಿ ಸಿದ್ಧಪಡಿಸಲು ಶ್ವೇತಭವನ ಮತ್ತು ಸಂಸದರಿಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.

ವಿಶ್ವದ ಬಹುತೇಕ ರಾಷ್ಟ್ರಗಳು 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಗ್ರೀನ್‌ ಕಾರ್ಡ್‌ ಪಡೆಯುತ್ತಿದ್ದರೆ, ಭಾರತದ ಅತ್ಯುನ್ನತ ಕುಶಲಿಗರು ಮಾತ್ರ ಇದಕ್ಕಾಗಿ 12 ರಿಂದ 70 ವರ್ಷಗಳಿಗೂ ಹೆಚ್ಚು ಕಾಲ ಕಾಯಬೇಕಾಗಿದೆ’ ಎಂದು 13 ವರ್ಷದ ವಿದ್ಯಾರ್ಥಿನಿ ಅಕ್ಷಿತಾ ರಮೇಶ್‌ ಹೇಳಿದಳು.

ತಂಜಾವೂರಿನಲ್ಲಿ ಜನಿಸಿದ ಅಕ್ಷಿತಾ ಒಂದೂವರೆ ವರ್ಷದವಳಿದ್ದಾಗ ತಂದೆ ರಮೇಶ್‌ ರನಾಥನ್‌ ಅವರೊಂದಿಗೆ ಅಮೆರಿಕಕ್ಕೆ ಬಂದವಳು. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರಮೇಶ್‌ ಎಚ್‌– 1ಬಿ ವೀಸಾ ಹೊಂದಿದ್ದಾರೆ.

‘ನನಗೆ ಗೊತ್ತಿರುವ ನಾಡು ಇದೊಂದೇ. ನನ್ನ ಸಂತೋಷ, ಸಾಧನೆ ಎಲ್ಲವನ್ನೂ ಈ ನೆಲದಲ್ಲೇ ಅನುಭವಿಸಿದ್ದೇನೆ. ಹೀಗಿರುವಾಗ ನಾನು ಅನ್ಯ ದೇಶದಲ್ಲಿ ಜನಿಸಿದವಳೆಂಬ ಒಂದೇ ಕಾರಣಕ್ಕೆ, ಅಲ್ಲಿ ವಾಸಿಸದೇ ಇದ್ದರೂ ನನ್ನಂತಹವರನ್ನು ಹೀಗೆ ನಡೆಸಿಕೊಳ್ಳುವುದು ಸರಿಯೇ’ ಎಂದು ಆಕೆ ಪ್ರಶ್ನಿಸಿದಳು.

ಶ್ವೇತಭವನದ ಆವರಣದಲ್ಲಿ ಅಧ್ಯಕ್ಷ ಟ್ರಂಪ್‌ ಅವರ ಪರವಾಗಿ ನಡೆದ ಅಪರೂಪದ ರ‍್ಯಾಲಿ ಇದಾಗಿದೆ.

ಪ್ರತಿಕ್ರಿಯಿಸಿ (+)