ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಹಳತು -ಹೊಸತು ಜತೆಯಾಗಲಿ'

ಕವಿದನಿ ಸಮಾರೋಪ ಸಮಾರಂಭದಲ್ಲಿ ಎಚ್‌.ಆರ್‌.ಲೀಲಾವತಿ ಸಲಹೆ
Last Updated 4 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸುಗಮ ಸಂಗೀತಗಾರರು ಕವಿಗಳ ನಾಲ್ಕೈದು ಗೀತೆಗಳನ್ನೇ ಹತ್ತಾರು ವೇದಿಕೆಗಳಲ್ಲಿ ಪದೇಪದೇ ಹಾಡುತ್ತಾರೆ. ಅವುಗಳ ಜತೆಗೆ ಹೊಸ ಗೀತೆಗಳನ್ನೂ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಗಾಯಕಿ ಎಚ್‌.ಆರ್‌.ಲೀಲಾವತಿ ಸಲಹೆ ನೀಡಿದರು.

ಹೊಂಬಾಳೆ ಪ್ರತಿಭಾರಂಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕವಿದನಿ’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ಸುಗಮ ಸಂಗೀತಗಾರರಿಗೆ ಹಿಂದಿನ ತಲೆಮಾರಿನ ಕವಿಗಳ ಪರಿಚಯ ಇಲ್ಲ. ಜೋಗದ ಸಿರಿ ಬೆಳಕಿನಲ್ಲಿ, ಬೆಣ್ಣೆ ಕದ್ದ ನಮ್ಮ ಕೃಷ್ಣ ಸೇರಿ ನಾಲ್ಕೈದು ಗೀತೆಗಳನ್ನಷ್ಟೇ ಅವರು ಹಾಡುತ್ತಾರೆ. ಹಳೇ ಕವಿತೆಗಳ ಜತೆಗೆ ಹೊಸ ಕವಿತೆಗಳನ್ನೂ ಹಾಡುವ ಮೂಲಕ ಕನ್ನಡತನವನ್ನು ಪ್ರತಿ ಮನೆಗೂ ಮುಟ್ಟಿಸಬೇಕು ಎಂದು ಹೇಳಿದರು.

ಸಾಹಿತ್ಯ ಇಲ್ಲದೆ ಸುಗಮ ಸಂಗೀತ ಇಲ್ಲ. ಸಂಗೀತಕ್ಕೆ ಸಾಹಿತ್ಯದ ಅವಶ್ಯಕತೆ ಇಲ್ಲದಿರಬಹುದು. ಆದರೆ, ಭಾವಕ್ಕೆ ಅರ್ಥ ಕೊಡುವುದು ಸಾಹಿತ್ಯ. ಕೆಲ ಸಂಗೀತ ಶೈಲಿಗಳಿಗೆ ಅಕ್ಷರ ಬೇಕು. ಜನಪದ, ಗಮಕ, ಕೀರ್ತನೆ, ಸುಗಮ ಸಂಗೀತ ಹಾಗೂ ಚಿತ್ರಗೀತೆಗಳಿಗೆ ಸಾಹಿತ್ಯ ಬೇಕು ಎಂದು ಅಭಿಪ್ರಾಯಪಟ್ಟರು.

ಕವಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ, ‘ಕವಿಗಳ ಕಾವ್ಯವು ವಿಚಾರ ಸಂಕಿರಣಗಳಲ್ಲಿ ಮಾತ್ರ ಚರ್ಚೆಗೆ ಒಳಪಡುತ್ತಿತ್ತು. ಆದರೆ, ಸುಗಮ ಸಂಗೀತಗಾರು ಕವಿತೆಗಳನ್ನು ಹಾಡುವ ಮೂಲಕ ಮನೆ ಮನ ತಲುಪಿಸಿದರು. ಹೀಗಾಗಿ ಕವಿಗಳು ಗಾಯಕರಿಗೆ ಆಭಾರಿ ಆಗಿರಬೇಕು’ ಎಂದರು.

ನವೋದಯ ಕಾಲದ ಕವಿಗಳ ಸಾಹಿತ್ಯವನ್ನು ಹೊಸ ಪೀಳಿಗೆಯು ಓದುತ್ತಿಲ್ಲ. ಅವರಿಗೆ ಕವಿಗಳ ಪರಿಚಯ ಮಾಡಿಸಬೇಕು ಎಂದು ಹೇಳಿದರು.

ಸನ್ಮಾನ: ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ, ಚಿತ್ರಕಲಾವಿದ ಎಂ.ಎಸ್‌.ಮೂರ್ತಿ, ಲೇಖಕ ಜಿ.ಪಿ.ರಾಮಣ್ಣ, ತಬಲ ವಾದಕ ಎಸ್‌.ಮಧುಸೂದನ್‌, ಕೊಳಲು ವಾದಕ ಎಲ್‌.ಎನ್‌.ವಸಂತ್‌ ಕುಮಾರ್‌ ಹಾಗೂ ಎಂ.ಆರ್‌.ಸತ್ಯನಾರಾಯಣ ಅವರನ್ನು ಸನ್ಮಾನಿಸಲಾಯಿತು.

ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ಪಾರ್ವತಿಸುತ ಹಾಗೂ ಪುತ್ತೂರು ನರಸಿಂಹ ನಾಯಕ ಅವರು ಕವಿಗಳ ಕವಿತೆಗಳನ್ನು ಹಾಡಿದರು.

‘ರಜತ ಕವಿ ದರ್ಶನ’ ಬಿಡುಗಡೆ

ಲೇಖಕ ಜಿ.ಪಿ.ರಾಮಣ್ಣ ಅವರ ‘ರಜತ ಕವಿ ದರ್ಶನ’ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕವಿದನಿಯ 25 ಕವಿಗಳ ಪರಿಚಯ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಬೆಲೆ ₹150.

ಇದೇ ವೇಳೆ, ರಾಜು ಮಳವಳ್ಳಿ ಸಂಪಾದಕತ್ವದ ‘ಕವಿದನಿ ದರ್ಪಣ’ ಎಂಬ ನೆನಪಿನ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT