ಗುರುವಾರ , ಡಿಸೆಂಬರ್ 12, 2019
25 °C

ನಗ್ನನಾಗುವ ಪಕ್ರಿಯೆ ನಿರಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗ್ನನಾಗುವ ಪಕ್ರಿಯೆ ನಿರಂತರ

ಬೆಂಗಳೂರು: ‘ಯಾವುದನ್ನೋ ಹುಡುಕುತ್ತಾ, ಕಲಿಯುತ್ತಾ, ನಗ್ನನಾಗುವ ಪ್ರಕ್ರಿಯೆಯಲ್ಲಿ ನಿರಂತರ ತೊಡಗಿಸಿಕೊಂಡಿದ್ದೇನೆ...’

ತಮ್ಮ ಚೊಚ್ಚಲ ಕೃತಿ ‘ಇರುವುದೆಲ್ಲವ ಬಿಟ್ಟು...’ ಬಿಡುಗಡೆ ಸಂಭ್ರಮದಲ್ಲಿ ನಟ ಪ್ರಕಾಶ್‌ ರೈ ಅಂತರಂಗದ ಮಾತುಗಳನ್ನು ಹಂಚಿಕೊಂಡರು.

ಸಾವಣ್ಣ ಪ್ರಕಾಶನದ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ಜೀವನದಲ್ಲಿ ಬಂದವರ ಹೆಗಲ ಮೇಲೆ ಕೂತು ಬದುಕನ್ನು ನೋಡಿದ್ದೇನೆ. ಅದು ಸುಂದರವಾಗಿ ಕಾಣಿಸಿದ್ದು ಅವರಿಂದಲೇ. ಕಲಿಯುವ ಪಕ್ರಿಯೆಗಿಂತ, ಕಲಿತದ್ದನ್ನು ಮರೆಯುವುದು ನನಗಿಷ್ಟ. ನನ್ನೊಂದಿಗೆ ಹೆಜ್ಜೆಹಾಕಿದವರ ಜೊತೆಗಿನ ಸಂಭಾಷಣೆಗಳೇ ಬರಹದ ರೂಪ ಪಡೆದಿವೆ’ ಎಂದು ಹೇಳಿದರು.

‘ಈ ಪುಸ್ತಕ ಪ್ರಕಾಶ್‌ ಅವರ ವ್ಯಕ್ತಿತ್ವ ಎಂಬ ಸಿನಿಮಾದ ಟ್ರೇಲರ್‌ ಅಷ್ಟೆ. ಅವರೊಂದಿಗೆ ಒಡನಾಟ ಇಟ್ಟುಕೊಂಡಾಗಲಷ್ಟೇ ಈ ಸಿನಿಮಾ ನೋಡಲು ಸಾಧ್ಯ. ಅವರ ಮಾತು, ನಟನೆ ನನ್ನಲ್ಲಿ ಅಸೂಯೆ ಹುಟ್ಟಿಸುತ್ತದೆ’ ಎಂದು ನಟ ಸುದೀಪ್‌ ಹೇಳಿದರು.

ಪ್ರಕಾಶ್‌ ರೈ ಅವರನ್ನು ಕನ್ನಡದ ಅಕ್ಷರ ಪ್ರಪಂಚಕ್ಕೆ ಸ್ವಾಗತಿಸಲು ಖುಷಿಯಾಗುತ್ತದೆ ಎನ್ನುತ್ತಲೇ ಮಾತು ಆರಂಭಿಸಿದ ಕವಿ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ, ‘ನಾಯಕ ನಟರಿಗೆ ಯಾವಾಗಲೂ ಸ್ವಂತ ಮಾತು ಇರುವುದಿಲ್ಲ. ಬೇರೊಬ್ಬರು ಬರೆದ ಮಾತಿಗೆ ಅವರು ಧ್ವನಿಯಾಗುತ್ತಾರೆ. ಸ್ವಂತ ಮಾತು ಆಡುವ ಕೆಲವು ನಾಯಕರಲ್ಲಿ ಪ್ರಕಾಶ್‌ ಕೂಡಾ ಒಬ್ಬರು’ ಎಂದು ಹೇಳಿದರು.

‘ಇಷ್ಟು ಒಳ್ಳೆಯ ಬರಹಗಾರ ಇಷ್ಟು ವರ್ಷ ಬರೆಯದೆ ನಮಗೆಲ್ಲ ಅನುಕೂಲ ಮಾಡಿಕೊಟ್ಟರು. ಬದುಕಿನಿಂದ ಸಾಹಿತ್ಯ ಹುಟ್ಟಬೇಕು. ಆ ರೀತಿ ಹುಟ್ಟಿದ ಬರಹಗಳು ಸದಾ ಜೀವಂತವಾಗಿರುತ್ತದೆ. ಹರಿಯುವ ನದಿಗೆ ಕಥೆಗಳು ಹೆಚ್ಚಿರುತ್ತವೆ ಹೊರತು ನಿಂತ ಕೊಳಕ್ಕಲ್ಲ. ಹರಿಯುವ ನೀರಾಗಿರುವ ರೈ ಅವರು ಜೀವನಾನುಭವನ್ನು ದಾಖಲಿಸಬೇಕು’ ಎಂದು ಸಾಹಿತಿ ಜಯಂತ್‌ ಕಾಯ್ಕಿಣಿ ಪ್ರೀತಿಯಿಂದ ಒತ್ತಾಯಿಸಿದರು.

‘ಪರಿಸರ ಮಾಲಿನ್ಯಕ್ಕಿಂತ ಇಂದು ಮಾತಿನ ಮಾಲಿನ್ಯ ಹೆಚ್ಚಾಗಿದೆ. ಅದನ್ನು ಶುಚಿಗೊಳಿಸುವ ಪ್ರಯತ್ನವನ್ನು ಪ್ರಕಾಶ್‌ ಮಾಡುತ್ತಿದ್ದಾರೆ. ಇದು ಸಾಂಕ್ರಾಮಿಕವಾಗಬೇಕು’ ಎಂದು ಲೇಖಕಿ ವಿಜಯಮ್ಮ ಆಶಿಸಿದರು.

ಕೃತಿಯಲ್ಲಿನ ‘ನಾನು ಹೇಳದೆ ಬಿಟ್ಟಿದ್ದು ಸತ್ಯ’ ಎಂಬ ಅಧ್ಯಾಯವನ್ನು ನಟ ಅಚ್ಯುತ್‌ ಕುಮಾರ್‌ ಹಾಗೂ ‘ಕಾಸಿನ ಸರದ ಹ್ಯಾಪಿ ಜರ್ನಿ’ ಅಧ್ಯಾಯವನ್ನು ನಟಿ ಶ್ರುತಿ ಹರಿಹರನ್ ವಾಚಿಸಿದರು.

ಪುಸ್ತಕದ ಬೆಲೆ: ₹150

ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ಹಾಗೂ ಆನ್‌ಲೈನ್‌ನಲ್ಲೂ ಪುಸ್ತಕ ಲಭ್ಯ

ಕಾರ್ಯಕ್ರಮ ನೆನಪಿಸಿದ ಟ್ವಿಟರ್‌

‘ಈ ಕಾರ್ಯಕ್ರಮವಿರುವುದನ್ನು ನಾನು ಮರೆತಿದ್ದ ನಾನು ಇಂದು ಬೇರೆಲ್ಲಿಗೋ ಹೋಗಲು ಸಿದ್ಧತೆ ನಡೆಸಿದ್ದೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆಯನ್ನು ಟ್ವಿಟರ್‌ನಲ್ಲಿ ನೋಡಿದೆ. ಅದರಲ್ಲಿ ನನ್ನ ಹೆಸರೂ ಇರುವುದನ್ನು ನೋಡಿದಾಗ ಪ್ರಕಾಶ್‌ ಆಹ್ವಾನಿಸಿದ್ದು, ನೆನ‍‍ಪಾಯಿತು. ಬಳಿಕ ತರಾತುರಿಯಲ್ಲಿ ಇಲ್ಲಿಗೆ ಬಂದೆ’ ಎಂದು ಸುದೀಪ್‌ ಹೇಳಿದರು.

ಪ್ರತಿಕ್ರಿಯಿಸಿ (+)