ಬುಧವಾರ, ಡಿಸೆಂಬರ್ 11, 2019
16 °C

ಒಳಗೊಳ್ಳುವಿಕೆ ಶಿವದ ಬೆಳಗು

Published:
Updated:
ಒಳಗೊಳ್ಳುವಿಕೆ ಶಿವದ ಬೆಳಗು

ಖ್ಯಾತಿ ಪ್ರಖ್ಯಾತಿ ಸುಖ್ಯಾತಿ ವಿಖ್ಯಾತಿ ಈ ಎಲ್ಲ ಬಗೆಯ ಕೀರ್ತಿ ಪರಿಚಿತತ್ವಕ್ಕೂ ಬಹುತೇಕವಾಗಿ ಏಕಮುಖ ಚಲನೆ ಇರುತ್ತದೆ. ಅಂದರೆ ತನ್ನ ಸಾಧನೆಯ ಶಕ್ತಿಗೆ ಅನುಗುಣವಾಗಿ ವ್ಯಕ್ತಿ ಸಮಾಜದಲ್ಲಿ ನಾಡಿನಲ್ಲಿ ದೇಶದಲ್ಲಿ ಜಗತ್ತಿನಲ್ಲಿ ಎಲ್ಲರಿಗೂ ಗೊತ್ತಾದವನಾಗಿರುತ್ತಾನೆ. ಅವನ ಸಾಧನೆ ಈ ಬಗೆಯ ಪರಿಚಯಕ್ಕೆ ಕಾರಣಮೂಲವಾಗಿರುತ್ತದೆ.

ಆದರೆ ಇದರ ಇನ್ನೊಂದು ಮುಖ ಅವನಿಗೆ ಸಂಬಂಧಿಸಿದ್ದು. ಅವನು ಎಲ್ಲರಿಗೆ ಗೊತ್ತಿದ್ದರೂ ಆ ಎಲ್ಲರೂ ಅವನಿಗೆ ಗೊತ್ತಿರುವುದಿಲ್ಲ. ಅರಿವಿನ ಪರಿ ಎಂಬುದು ಅಪರಿಮಿತದ ಬೆರಗಿನ ವಿಚಾರ. ಮನುಷ್ಯ ಮಾತ್ರದವನ ಅರಿವಿನ ಅಗಾಧತೆ ಎಂಬುದು ಮಿತಿ-ಸಾಂದ್ರತೆಗಳ ಮಹಾಬೆರಗು. ವ್ಯಕ್ತಿಯ ತಿಳಿವಳಿಕೆ ನಿರ್ದಿಷ್ಟ ವಸ್ತುವಿಚಾರದ ಪರಿಮಿತಿಯಲ್ಲಿ ವ್ಯವಹರಿಸಿದ್ದು ಅದರ ಆಚೆಗಿನ ವಸ್ತುವಿಸ್ತಾರ ಅವನಿಗೇ ಅಪರಿಚಿತ. ಶರಣ ಉರಿಲಿಂಗಪೆದ್ದಿಯವರು ಈ ವಿಚಾರವನ್ನು ಒಂದು ದೃಷ್ಟಾಂತದ ಮೂಲಕ ಸೊಗಸಾಗಿ ನಿರ್ವಚಿಸಿದ್ದಾರೆ. ಆ ವಚನ ಇಂತಿದೆ :

ಮಹಾರಾಜನನೆಲ್ಲರೂ ಬಲ್ಲರು, ಆ ರಾಜನು ಆರನೂ ಅರಿಯನು

ಅರಿಯನಾಗಿ ಪದವಿಲ್ಲ ಫಲವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ.

ಮಹಾರಾಜಾದಿರಾಜ ಶಿವನನೆಲ್ಲರೂ ಬಲ್ಲರು, ಆ ಶಿವನು ಅರಿಯನು

ಅರಿಯನಾಗಿ ಪದವಿಲ್ಲ ಭೋಗವಿಲ್ಲ ಪರಿಣಾಮವಿಲ್ಲ.

ಇದು ಕಾರಣ ಶಿವನನರಿದ ಸದ್ಭಕ್ತರ ಸಂಗದಿಂದ

ಆ ಮಹಾಶಿವನು ತನ್ನನ್ನು ಅರಿವಂತೆ ಮಾಡಿಕೊಂಡನಾಗಿ

ಪದ ಫಲ ಭೋಗ ಪರಿಣಾಮ ಮತ್ತೆ ಉಂಟೇ?

-ಇಲ್ಲಿ ಪರಿಚಯವೆಂಬುದು ಏಕಮುಖ ಚಲನೆಯಾದಾಗ ವ್ಯಕ್ತಿಯ ಅರಿವಿನ ಇನ್ನೊಂದು ಮುಖ ಪರಿಣಾಮಿಯ ಸಾರ್ಥಕತೆಯಿಲ್ಲದ ಸೋಲಿನ ಮುಖವಾಗುತ್ತದೆ. ಅದಕ್ಕಿಂತ ಭಿನ್ನವಾಗಿ ತನ್ನನರಿದವರ ಸಂಗಕ್ಕೆ ಸ್ನೇಹಕ್ಕೆ ಒಡನಾಟಕ್ಕೆ ತನ್ನನ್ನೇ ತಾನು ತನ್ನ ಸಾಧನೆಯ ಫಲಶ್ರುತಿಯನ್ನು ಅರ್ಪಿಸಿಕೊಂಡಾಗ ಅಲ್ಲಿನ ಅರಿವು ಏಕಮುಖವಾದದ್ದಾಗದೆ ಪರಸ್ಪರ ಫಲಪ್ರದ ಭೋಗ ಪರಿಣಾಮಿಯ ಗುಣದಲ್ಲಿ ಮಹಾಬೆಳಗಿನ ಸ್ವರೂಪದ್ದಾಗುತ್ತದೆ.

ಭಕ್ತರು ಶರಣರು ಶಿವನನ್ನು ಅರಿತರು ಆದರೆ ಶಿವ ತನ್ನನ್ನು ಅರಿತ ಭಕ್ತರ ಶರಣರ ಕಾರಣದಿಂದಾಗಿ ಅಂದರೆ ಅವರನ್ನು ಅವರ ಸಾಧನೆ ಸಿದ್ಧಿಯ ಪರಿಣಾಮವನ್ನು ಅರಿತುಕೊಳ್ಳುವ ಮೂಲಕ ತನ್ನನ್ನು ಅರಿಯುವಂತೆ ಮಾಡಿದ್ದಾನೆ.

ಹೀಗಿರುವಾಗ ಅವನ ಫಲತೃಪ್ತಿಯೆಂಬುದು ಭಕ್ತ ಶರಣರ ಪರಿಣಾಮದಲ್ಲಿ ಆದ್ಯಂತಗೊಳ್ಳುವುದು. ಇಂಥ ಅರಿವು ಅಲ್ಲಮ ಹೇಳುವ ಪದವನರ್ಪಿಸಬಹುದಲ್ಲದೆ ಪದಾರ್ಥವನ್ನರ್ಪಿಸಲಾಗದು ಎಂಬ ಭಾವವೇದ್ಯ ಬಗೆಯದು. ಮಹಾರಾಜನ ಅರಿವಿನ ಮಿತಿ ಮಹಾದೇವನ ಅರಿವಿನ ಬೆರಗು ಇವುಗಳ ಹೋಲಿಕೆಯಲ್ಲಿ ಸಾಧಕನ ಸಾಧನೆ ಸಿದ್ಧಿಯ ಗತಿಗಂತವ್ಯ ಗುಣವನ್ನು ಉರಿಲಿಂಗಪೆದ್ದಿಗಳು ಸೂಕ್ಷ್ಮವಾಗಿ ಅಭಿವ್ಯಂಜಿಸಿದ್ದಾರೆ. ಇದು ಶಿವನನರಿದ ಸದ್ಭಕ್ತರ ಸಂಗದ ಪರಿಣಾಮದ ಫಲಶ್ರುತಿಗೆ ಸಂಬಂಧಿಸಿದ್ದು. ಇದು ಒಳಗೊಳ್ಳುವಿಕೆಯಲ್ಲಿ ಶಿವದ ಬೆಳಗನ್ನು ಕಾಣುವ ಶರಣಮಾರ್ಗದ ನಡೆ.

ಪ್ರತಿಕ್ರಿಯಿಸಿ (+)