ಮಂಗಳವಾರ, ಡಿಸೆಂಬರ್ 10, 2019
26 °C

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದಾಗ ಸಭಿಕರು ‘ಓ’ ಎಂದು ಸಂಭ್ರಮಿಸಿದರು.

‘ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮಗೆಲ್ಲ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡರು, ಮಹಾತ್ಮ ಬಸವೇಶ್ವರರು, ಮಾದಾರ ಚೆನ್ನಯ್ಯ, ವೀರರಾಣಿ ಕಿತ್ತೂರು ಚೆನ್ನಮ್ಮಾ, ಸಂಗೊಳ್ಳಿ ರಾಯಣ್ಣ, ಶಿಶುನಾಳ ಷರೀಫ, ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾಪುರುಷರ ನಾಡು ಕರ್ನಾಟಕ. ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಲು ಬಿಜೆಪಿಯನ್ನು ಗೆಲ್ಲಿಸಿ’ ಎಂದು ಮೋದಿ ಕನ್ನಡದಲ್ಲೇ ಕೋರಿದರು.

ಭಾಷಣದ ಕೊನೆಯಲ್ಲಿ ಕೂಡ ಕನ್ನಡ ಬಳಸಿದ ಮೋದಿ, ‘ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದರು.

ಸಚಿವ ಹೆಗಡೆಗೆ ಹರ್ಷೋದ್ಗಾರ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನರೇಂದ್ರ ಮೋದಿ ಉಲ್ಲೇಖಿಸಿದಾಗ ಸಭಿಕರ ಕಡೆಯಿಂದ ಹರ್ಷೋದ್ಗಾರ ಕೇಳಿಬಂತು.

ಭಾಷಣ ಆರಂಭಿಸಿದ ಮೋದಿ, ಕೇಂದ್ರ ಸಚಿವ ಅನಂತಕುಮಾರ್, ಸದಾನಂದಗೌಡ, ಯಡಿಯೂರಪ್ಪ, ಎಸ್‌.ಎಂ. ಕೃಷ್ಣ, ಜಗದೀಶ ಶೆಟ್ಟರ್, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲರ ಹೆಸರುಗಳನ್ನು ಹೇಳಿದರು. ಯಾರ ಹೆಸರು ಉಲ್ಲೇಖಿಸಿದಾಗಲೂ ಜನರಿಂದ ಸ್ಪಂದನೆ ಇರಲಿಲ್ಲ. ಸಚಿವ ಸಹೋದ್ಯೋಗಿ ಅನಂತಕುಮಾರ ಹೆಗಡೆ ಎಂದು ಹೇಳುತ್ತಿದ್ದಂತೆ ‘ಹೋ’ ಎಂದು ಕೂಗು ಎಲ್ಲ ದಿಕ್ಕಿನಿಂದ ಹರಿದುಬಂತು.

ಯಡಿಯೂರಪ್ಪ ಭಾಷಣ ಮಾಡುವಾಗ ಹೆಗಡೆ ಹೆಸರು ಉಲ್ಲೇಖಿಸಿದರು. ಆಗಲೂ ಜನ ‘ಹೋ’ ಎಂದರು.

ಪಕೋಡ ಮಾರಾಟ: ಬಂಧನ

ಬೆಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆ ನಡೆಯುತ್ತಿದ್ದ ಅರಮನೆ ಮೈದಾನದ ಹೊರಗಿನ ರಸ್ತೆಯಲ್ಲಿ ಪಕೋಡ ಮಾರಾಟ ಮಾಡಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ಘಟಿಕೋತ್ಸವ ಸಂದರ್ಭದಲ್ಲಿ ಧರಿಸುವ ಸಮವಸ್ತ್ರ ಹಾಕಿಕೊಂಡೇ ಬಂದಿದ್ದ ವಿದ್ಯಾರ್ಥಿಗಳು, ಮೊದಲೇ ತಯಾರಿಸಿಕೊಂಡು ತಂದಿದ್ದ ಪಕೋಡವನ್ನು ರಸ್ತೆ ಬದಿ ನಿಂತಿದ್ದ ಜನರಿಗೆ ಮಾರಾಟ ಮಾಡಿದರು. ‘₹ 10ಕ್ಕೆ ಒಂದು ಪ್ಲೇಟ್ ಪಕೋಡ’ ಎಂಬ ಮೋದಿ ಭಾವಚಿತ್ರ ಒಳಗೊಂಡ ಫಲಕಗಳನ್ನು ಹಿಡಿದು ರಸ್ತೆಯಲ್ಲಿ ಓಡಾಡಿದರು. ಇದನ್ನು ಗಮನಿಸಿದ ಪೊಲೀಸರು, ಎಲ್ಲರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.

ದೂಳಿನ ಅಬ್ಬರ, ಡಿಜಿಟಲ್‌ ಸ್ಕ್ರೀನ್‌...

ಅರಮನೆ ಮೈದಾನದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಭಾರಿ ದೂಳು ಆವರಿಸಿತ್ತು.

ಪ್ರಧಾನಿ ಬರುವ ಮುನ್ನ ಕಲಾವಿದರು, ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದರಿಂದ ದೂಳು ಮತ್ತಷ್ಟು ಹೆಚ್ಚಾಯಿತು. ಮಕ್ಕಳನ್ನು ಕರೆತಂದಿದ್ದ ಮಹಿಳೆಯರು ಪರದಾಡಿಕೊಂಡು ಹೊರ ನಡೆದರು.

ಕುರ್ಚಿ ಇಲ್ಲದ ಜಾಗದಲ್ಲಿದ್ದ ಜನ ಪೇಪರ್ ಹಾಸಿಕೊಂಡು ನೆಲದಲ್ಲೇ ಕುಳಿತು ಡಿಜಿಟಲ್ ಸ್ಕ್ರೀನ್‌ಗಳಲ್ಲಿ ಮೋದಿ ಭಾಷಣ ಕೇಳಿದರು.

ಮುಖ್ಯ ಕಾರ್ಯದರ್ಶಿಯಿಂದ ಸ್ವಾಗತ: ಪ್ರಧಾನಿ ನರೇಂದ್ರ ಮೊದಿಯನ್ನು ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮತ್ತು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಸ್ವಾಗತಿಸಿದರು. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಹೂಗುಚ್ಛ ನೀಡಿ ಮೋದಿ ಅವರನ್ನು ಬರ ಮಾಡಿಕೊಂಡರು.

 

ಪ್ರತಿಕ್ರಿಯಿಸಿ (+)