ಶುಕ್ರವಾರ, ಡಿಸೆಂಬರ್ 13, 2019
27 °C

ಬಜೆಟ್ ಭರವಸೆಗೂ ವಾಸ್ತವಕ್ಕೂ ಅಂತರ

ಅನ್ನಪೂರ್ಣಾ ಸಿಂಗ್ Updated:

ಅಕ್ಷರ ಗಾತ್ರ : | |

ಬಜೆಟ್ ಭರವಸೆಗೂ ವಾಸ್ತವಕ್ಕೂ ಅಂತರ

ನವದೆಹಲಿ: ಮುಂದಿನ ಹಣಕಾಸು ವರ್ಷದ ಕೇಂದ್ರ ಬಜೆಟ್‌ನಲ್ಲಿ ಗ್ರಾಮೀಣ ಭಾರತ, ಕೃಷಿಕರು ಮತ್ತು ಬಡವರ ಉದ್ಧಾರಕ್ಕೆ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಲಾಗಿದ್ದರೂ, ಈ ಎಲ್ಲ ಬಜೆಟ್‌ ಪ್ರಸ್ತಾವಗಳಿಗೂ ವಾಸ್ತವ ಸಂಗತಿಗೂ ಅಜಗಜಾಂತರ ಅಂತರ ಇದೆ.

ರೈತರು, ಬಡವರು ಸೇರಿದಂತೆ ಅಸಂಖ್ಯಾತ ಮುಗ್ಧರು, ಬಜೆಟ್‌ ಮಂಡನೆ ದಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದ್ದನ್ನೇ ನಂಬಿ ಬಿಡುತ್ತಾರೆ. ಸಚಿವರು ನೀಡಿದ ಭರವಸೆಗಳು ಎಷ್ಟರಮಟ್ಟಿಗೆ ಈಡೇರಲಿವೆ ಎನ್ನುವುದನ್ನು ಪರಾಮರ್ಶಿಸಲು ಅವರಿಗೆ ವ್ಯವಧಾನವೇ ಇರಲಾರದು.

2014ರ ಚುನಾವಣಾ ಪ್ರಚಾರದ ವೇಳೆ ಇದೇ ಅರುಣ್‌ ಜೇಟ್ಲಿ ಅವರು, ₹ 5 ಲಕ್ಷದವರೆಗೆ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಿಸಲಾಗುವುದು ಎಂದು ಹೇಳಿದ್ದರು. ಆದರೆ, ಸ್ವತಃ ಅವರೇ  ಐದನೇ ಬಜೆಟ್‌ ಮಂಡಿಸಿದರೂ ಅವರಿಂದ ಈ ಮಿತಿ ಹೆಚ್ಚಳ ಸಾಧ್ಯವಾಗಿಲ್ಲ. ಎನ್‌ಡಿಎ ಸರ್ಕಾರ ಜನತೆಗೆ ನೀಡಿರುವ ಭರವಸೆಗಳು ಮತ್ತು ಅವುಗಳನ್ನು ಈಡೇರಿಸಲು ಇದುವರೆಗೂ ಸಾಧ್ಯವಾಗದಿರುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

ಆರೋಗ್ಯ ವಿಮೆಗೆ ಹೆಚ್ಚುವರಿ ನಿಧಿ ಇಲ್ಲ: ಅದೇ ರೀತಿ ಈ ಬಾರಿಯೂ ಬಜೆಟ್‌ನಲ್ಲಿ ಭರವಸೆಗಳಿಗೇನೂ ಕೊರತೆ ಇಲ್ಲ.  ಉದಾಹರಣೆಗೆ, 80  ಕೋಟಿಗಳಷ್ಟು ಬಡವರಿಗೆ ವಾರ್ಷಿಕ ₹ 5 ಲಕ್ಷವರೆಗಿನ ಆರೋಗ್ಯ ವಿಮೆ ಘೋಷಿಸಲಾಗಿದೆ.

ಈ ಯೋಜನೆ ಕಾರ್ಯಗತಗೊಳಿಸಲು ವರ್ಷಕ್ಕೆ ₹ 12 ಸಾವಿರ ಕೋಟಿ ಬೇಕಾಗಲಿದೆ. ಆದರೆ, ಬಜೆಟ್‌ನಲ್ಲಿ ಕೇವಲ ₹ 2,000 ಕೋಟಿಗಳನ್ನಷ್ಟೇ ಹಂಚಿಕೆ ಮಾಡಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಕೃಷಿ ಉತ್ಪಾದನಾ ವೆಚ್ಚದ 1.5 ಪಟ್ಟು ಹೆಚ್ಚಿಸಲಾಗುವುದು ಎಂದು ಪ್ರಕಟಿಸಲಾಗಿದೆ. ಆದರೆ, ಇದಕ್ಕಾಗಿ ಹೆಚ್ಚುವರಿ ನಿಧಿಯನ್ನೇನೂ ನಿಗದಿಪಡಿಸಿಲ್ಲ.

ಇದೊಂದು ಮೇಲ್ನೋಟಕ್ಕೆ ಜನಪ್ರಿಯ ಮತ್ತು ರೈತ ಕೇಂದ್ರಿತ ಬಜೆಟ್‌ ಎಂಬಂತೆ ಕಂಡು ಬರುತ್ತದೆ. ದೊಡ್ಡ ಮೊತ್ತದ ಹತ್ತಾರು ಯೋಜನೆಗಳನ್ನು ಪ್ರಕಟಿಸಲಾಗಿದೆ. ಬಜೆಟ್‌ ಗೌಜು ಗದ್ದಲದ ದೂಳು ಅಡರುವ ಮುನ್ನವೇ, ಸರ್ಕಾರಿ ಅಧಿಕಾರಿಗಳು ಈ ಎಲ್ಲ ಯೋಜನೆಗಳಿಗೆ ಬಜೆಟ್‌ಗೆ ಹೊರತಾದ ರೂಪದಲ್ಲಿ ಹಣ ಹೊಂದಿಸಲು ಅನುಸರಿಸಲಿರುವ ಮಾರ್ಗೋಪಾಯಗಳ ಬಗ್ಗೆ ವಿವರಣೆ ನೀಡಲು ಆರಂಭಿಸಿದ್ದಾರೆ. ಬೇರೆ ಸಂಪನ್ಮೂಲಗಳಿಂದ ಹಣ ಸಂಗ್ರಹಿಸಲಾಗುವುದು ಎಂದು ಪ್ರತಿಪಕ್ಷಗಳ ಟೀಕೆಗೆ ಸಮಜಾಯಿಷಿ ನೀಡಲಾಗುತ್ತಿದೆ.

2022ರ  ವೇಳೆಗೆ ರೈತರ ವರಮಾನವನ್ನು ದುಪ್ಪಟ್ಟುಗೊಳಿಸಲಾಗುವುದು ಎಂದು 2014ರಿಂದಲೇ ಪ್ರಧಾನಿ ನರೇಂದ್ರ ಮೋದಿ ಹೇಳುತ್ತ ಬಂದಿದ್ದಾರೆ. ತರಕಾರಿಗಳ  ಅದರಲ್ಲೂ ವಿಶೇಷವಾಗಿ ಈರುಳ್ಳಿ, ಟೊಮೆಟೊ ಮತ್ತು ಆಲೂಗೆಡ್ಡೆಗಳ ಬೆಲೆ ಏರಿಳಿತ ತಡೆಯಲು ಹಸಿರು ಕಾರ್ಯಕ್ರಮ (ಆಪರೇಷನ್‌ ಗ್ರೀನ್‌) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೃಷಿ ಸಲಕರಣೆ ತಯಾರಿಕಾ ಸಂಸ್ಥೆಗಳಿಗೆ ಶೇ 100ರಷ್ಟು ತೆರಿಗೆ ಪರಿಹಾರ ಒದಗಿಸಲಾಗಿದೆ. ಮುಂದಿನ ಮುಂಗಾರು ಫಸಲಿನ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ 1.5ಪಟ್ಟು ಹೆಚ್ಚಿಸಲಾಗುವುದು ಎಂದು ಹೇಳಿದೆ. ಏರುಗತಿಯಲ್ಲಿ ಇರುವ ಹಣದುಬ್ಬರದ ಕಾರಣಕ್ಕೆ ಈ ಭರವಸೆಯನ್ನು ಹೇಗೆ ಈಡೇರಿಸಲಾಗುವುದು ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ.

ಮಧ್ಯಮ ವರ್ಗಕ್ಕೆ ಹೆಚ್ಚು ಪ್ರಯೋಜನ ಇಲ್ಲ: ಮಧ್ಯಮವರ್ಗದ ವೇತನ ವರ್ಗಕ್ಕೂ ಈ ಬಜೆಟ್‌ನಲ್ಲಿ ಹೆಚ್ಚಿನ ಪ್ರಯೋಜನ ಆಗಿಲ್ಲ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಗಾತ್ರವನ್ನು ₹ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಆದಾಯ ತೆರಿಗೆ ಕಾಯ್ದೆಯಡಿ, ಸದ್ಯಕ್ಕೆ ವಾರ್ಷಿಕ ₹ 2.50 ಲಕ್ಷದವರೆಗೆಗಿನ ಆದಾಯಕ್ಕೆ ತೆರಿಗೆ ವಿನಾಯ್ತಿ ಇದೆ.

ಈ ಸ್ಟ್ಯಾಂಡರ್ಡ್‌ ಡಿಡಕ್ಷನ್‌ದಿಂದಾಗಿ ಈ ಮೊತ್ತ ಈಗ ₹ 2.90 ಲಕ್ಷಕ್ಕೆ ಏರಿಕೆಯಾಗಲಿದೆ. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಘೋಷಿಸುವುದರ ಜತೆಗೆ ಜೇಟ್ಲಿ ಅವರು ತೆರಿಗೆ ವಿನಾಯ್ತಿಯಿಂದ ₹ 34,200ಗಳ ವೈದ್ಯಕೀಯ ಮತ್ತು ಸಾರಿಗೆ ಮರುಪಾವತಿ ಸೌಲಭ್ಯ ಕೈಬಿಟ್ಟಿದ್ದಾರೆ.

ಇದರಿಂದ ವೇತನ ವರ್ಗಕ್ಕೆ ವಾಸ್ತವದಲ್ಲಿ ಕೇವಲ ₹ 5,800 ಮಾತ್ರ ಪ್ರಯೋಜನ ಆಗಲಿದೆ. ತೆರಿಗೆ ವಿನಾಯ್ತಿ ಮಿತಿಯನ್ನು ₹ 2.90 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದಷ್ಟೇ ಅಧಿಕಾರಿಗಳೂ ವಿವರಣೆ ನೀಡುತ್ತಾರೆ. ಅದರಿಂದ ಎಷ್ಟು ಪ್ರಯೋಜನ ದೊರೆಯಲಿದೆ ಎನ್ನುವುದನ್ನು ಅವರು ವಿವರಿಸುವ ಗೋಜಿಗೆ ಹೋಗಿಲ್ಲ.

ಆತಂಕದಲ್ಲಿ ಹೂಡಿಕೆದಾರ: ಕೆಲ ತೆರಿಗೆ ಪ್ರಸ್ತಾವಗಳನ್ನು ಮರಳಿ ಜಾರಿಗೆ ತಂದಿರುವುದರಿಂದ ಷೇರುಪೇಟೆಯಲ್ಲಿನ ಹೂಡಿಕೆದಾರರು ಆತಂಕಗೊಂಡಿದ್ದಾರೆ.

ಷೇರುಪೇಟೆ ವಹಿವಾಟಿನ ಲಾಭವು ₹ 1 ಲಕ್ಷ ದಾಟಿದ್ದರೆ ಅದಕ್ಕೆ ಶೇ 10ರಷ್ಟು ದೀರ್ಘಾವಧಿ ಲಾಭ ಗಳಿಕೆ ತೆರಿಗೆ ವಿಧಿಸಿರುವುದು ವಹಿವಾಟುದಾರರಲ್ಲಿ  ಆತಂಕ ಮೂಡಿಸಿದೆ. ಷೇರುಪೇಟೆ ಕುಸಿತಗೊಂಡು, ಒಂದೇ ದಿನದಲ್ಲಿ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಲೆಕ್ಕದಲ್ಲಿ ₹ 5 ಲಕ್ಷ ಕೋಟಿಗಳಷ್ಟು ಕೊಚ್ಚಿಕೊಂಡು ಹೋಗಿದೆ.

ಎರಡು ದಶಕಗಳಿಂದ ಕಸ್ಟಮ್ಸ್‌ ಸುಂಕ ಕಡಿಮೆ ಮಾಡುತ್ತ ಬರಲಾಗಿತ್ತು. ಆದರೆ, ಈ ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ. ಸ್ವಯಂ ಸಂರಕ್ಷಣಾ ನೀತಿಯು ಇನ್ನೊಂದು ಬಗೆಯ ಭಯೋತ್ಪಾದನೆ ಆಗಿದೆ ಎಂದು ವಿದೇಶಗಳಲ್ಲಿ ಹೇಳಿಕೊಂಡು ತಿರುಗುವ ಪ್ರಧಾನಿ ಮೋದಿ ಅವರ ನಿಲುವಿಗೆ ಇದು ಸಂಪೂರ್ಣ ವ್ಯತಿರಿಕ್ತವಾಗಿದೆ.

‘ಇದೊಂದು ದೇಶಿ ತಯಾರಿಕಾ ರಂಗದ ಸಂರಕ್ಷಣಾ ನೀತಿಯಲ್ಲ. ಸ್ವದೇಶಿ ತಯಾರಕರಿಗೆ ಸಮಾನ ಅವಕಾಶ ಒದಗಿಸುವ ಉದ್ದೇಶ ಇದರ ಹಿಂದೆ ಅಡಗಿದೆ’ ಎಂದು ಜೇಟ್ಲಿ ಸಬೂಬು ಹೇಳಿದ್ದಾರೆ. ಹೀಗೆ ಬಜೆಟ್‌ನಲ್ಲಿ ಭರವಸೆಗಳೇನೋ ಭರಪೂರ ಪ್ರಮಾಣದಲ್ಲಿ ಇವೆ. ಆದರೆ, ಅಂಕಿ ಅಂಶಗಳು ಮಾತ್ರ ಬೇರೆಯೇ ಆದ ಕಥೆ ಹೇಳುತ್ತವೆ. ಬಜೆಟ್ ಭರವಸೆಗೂ ವಾಸ್ತವಕ್ಕೂ ಅಜಗಜಾಂತರ ಇದೆ.

ಪ್ರತಿಕ್ರಿಯಿಸಿ (+)