ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ನಂಟು ಬಿಡದ ತೆಲುಗುದೇಶಂ

‘ಕೇಂದ್ರದ ಮಲತಾಯಿ ಧೋರಣೆ’ಗೆ ಅಸಮಾಧಾನ ಬಹಿರಂಗ l ಟಿಡಿಪಿಯಿಂದ ಕಾಯ್ದು ನೋಡುವ ತಂತ್ರ
Last Updated 4 ಫೆಬ್ರುವರಿ 2018, 20:13 IST
ಅಕ್ಷರ ಗಾತ್ರ

ಹೈದರಾಬಾದ್‌: ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಜತೆಗಿನ ಮುನಿಸಿನ ಹೊರತಾಗಿಯೂ ಸದ್ಯಕ್ಕೆ ಎನ್‌ಡಿಎ ನಂಟು ಕಡಿದುಕೊಳ್ಳುವುದಿಲ್ಲ ಎಂದು ತೆಲುಗುದೇಶಂ (ಟಿಡಿಪಿ) ಭಾನುವಾರ ಸ್ಪಷ್ಟಪಡಿಸಿದೆ.

ಆ ಮೂಲಕ ‘ಎನ್‌ಡಿಎಗೆ ತೆಲುಗುದೇಶಂ ಡೈವೋರ್ಸ್‌ ನೀಡಲಿದೆ’ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದೆ.

ಎನ್‌ಡಿಎದಿಂದ ಹೊರಬರದಿದ್ದರೂ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಆದ ಅನ್ಯಾಯ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಟಿಡಿಪಿ ಸ್ಪಷ್ಟವಾಗಿ ಹೇಳಿದೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನಿವಾಸದಲ್ಲಿ ಭಾನುವಾರ ನಡೆದ ಟಿಡಿಪಿ ಸಂಸದೀಯ ಪಕ್ಷದ ಸಭೆಯ ನಂತರ ನಾಯಕ ಹಾಗೂ ಕೇಂದ್ರ ಸಚಿವ ವೈ.ಎಸ್‌. ಚೌಧರಿ ಅವರು ಪಕ್ಷದ ನಿಲುವು ಸ್ಪಷ್ಟಪಡಿಸಿದ್ದಾರೆ.

ಕಳೆದ ನಾಲ್ಕು ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರ ರಾಜ್ಯದ ಬೇಡಿಕೆ ಈಡೇರಿಸದಿದ್ದರೆ ಪಕ್ಷದ ಸಂಸದರು ಸಂಸತ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ತಾರತಮ್ಯದ ವಿರುದ್ಧ ಧ್ವನಿ: ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಕೇಂದ್ರ ಅನುದಾನ ನೀಡುತ್ತಿದೆ ಎಂದು ಟಿಡಿಪಿ ಸಂಸದ ಟಿ.ಜಿ. ವೆಂಕಟೇಶ್‌ ಆರೋಪಿಸಿದ್ದಾರೆ.

ಎನ್‌ಡಿಎ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳನ್ನು ಕೇಂದ್ರ ಸಂಪೂರ್ಣವಾಗಿ ಕಡೆಗಣಿಸಿದೆ. ಟಿಡಿಪಿಯಂತಹ ಮಿತ್ರಪಕ್ಷವನ್ನು ಕಳೆದುಕೊಂಡರೆ ಅದು ಎನ್‌ಡಿಎಗೆ ಆಗುವ ದೊಡ್ಡ ಹಾನಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌, ವಿಶಾಖಪಟ್ಟಣಕ್ಕೆ ಪ್ರತ್ಯೇಕ ರೈಲ್ವೆ ವಲಯ, ಪೋಲಾವರಂ ನೀರಾವರಿ ಯೋಜನೆ ಮತ್ತು ರಾಜಧಾನಿ ಅಮರಾವತಿ ನಿರ್ಮಾಣ ಯೋಜನೆಗೆ  ಅನುದಾನಯಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರ ಭೇಟಿಯಾಗುವುದಾಗಿ ಮತ್ತೊಬ್ಬ ಸಂಸದ ಆವಂತಿ ಶ್ರೀನಿವಾಸ ತಿಳಿಸಿದ್ದಾರೆ.

**

ಕೇಂದ್ರದ ಮಲತಾಯಿ ಧೊರಣೆಗೆ ನಾಯ್ಡು ಮುನಿಸು!

ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಮಲತಾಯಿ ಧೊರಣೆಯ ಬಗ್ಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಮುಖ್ಯಸ್ಥ ಎನ್‌. ಚಂದ್ರಬಾಬು ನಾಯ್ಡು ಮುನಿಸಿಕೊಂಡಿದ್ದಾರೆ.

ಬಿಜೆಪಿ ಜತೆ ಮುನಿಸಿಕೊಂಡಿರುವ ಎನ್‌ಡಿಎದ ಮತ್ತೊಂದು ಅಂಗಪಕ್ಷ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಜತೆ ನಾಯ್ಡು ಶನಿವಾರ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಆದರೆ, ಈ ವರದಿಯನ್ನು ಪಕ್ಷದ ನಾಯಕ ವೈ.ಎಸ್‌. ಚೌಧರಿ ತಳ್ಳಿ ಹಾಕಿದ್ದಾರೆ.

ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಗೃಹ ಸಚಿವ ರಾಜನಾಥ ಸಿಂಗ್‌ ಅವರು ನಾಯ್ಡು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.

ಯಾವುದೇ ಕಾರಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಅವರು ಕಿವಿಮಾತು ಹೇಳಿದ್ದಾರೆ. ಸಂಯಮ ಕಾಯುವಂತೆ ಮನವೊಲಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

**

ಕಳೆದ ನಾಲ್ಕು ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಟಿಡಿಪಿ ಸಂಸದರಿಗೆ, ನಾಯಕರಿಗೆ ಅಸಮಾಧಾನವಿದೆ. ನಮ್ಮ ಮನವಿಗೆ ಕಿವಿಗೊಡದಿದ್ದರೆ ಪ್ರತಿಭಟಿಸುತ್ತೇವೆ.

–ವೈ.ಎಸ್‌. ಚೌಧರಿ, ಕೇಂದ್ರ ಸಚಿವ, ಟಿಡಿಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT