ಸೋಮವಾರ, ಡಿಸೆಂಬರ್ 9, 2019
17 °C
ಖಾಸಗಿ ಮಸೂದೆ ಮಂಡಿಸಿದ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ

ಆಟಿಸಂಗೆ ಉತ್ತಮ ಚಿಕಿತ್ಸೆ ಖಾಸಗಿ ಮಸೂದೆ ಮಂಡನೆ

ಪಿಟಿಐ Updated:

ಅಕ್ಷರ ಗಾತ್ರ : | |

ಆಟಿಸಂಗೆ ಉತ್ತಮ ಚಿಕಿತ್ಸೆ ಖಾಸಗಿ ಮಸೂದೆ ಮಂಡನೆ

ನವದೆಹಲಿ: ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ನಿಂದ (ಎಎಸ್‌ಡಿ–ನರ ಸಂಬಂಧಿ ನ್ಯೂನತೆ) ಬಳಲುತ್ತಿರುವವರಿಗೆ ಸೂಕ್ತ ಸಮಯದಲ್ಲಿ ಕೈಗೆಟುಕುಗುವ ದರದಲ್ಲಿ ಚಿಕಿತ್ಸೆ ಲಭ್ಯವಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು ಎಂದು ಆಗ್ರಹಿಸುವ ಖಾಸಗಿ ಮಸೂದೆಯನ್ನು ಎನ್‌ಸಿ‍ಪಿ ಸಂಸದೆ ಸುಪ್ರಿಯಾ ಸುಳೆ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಆಟಿಸಂನಿಂದ ಬಳಲುತ್ತಿರುವವರ ಹಕ್ಕುಗಳಿಗೂ ಮನ್ನಣೆ ಸಿಗುವುದರ ಜೊತೆಗೆ ಅವರಿಗೆ ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ‘ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ (ಪರಿಗಣನೆ ಮತ್ತು ಚಿಕಿತ್ಸೆ)–2017’ ಎಂಬ ಮಸೂದೆಯನ್ನು ಮಂಡಿಸಲಾಗಿದೆ.

ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ ಎಂಬುದು ನೌರವ್ಯೂಹಕ್ಕೆ ಸಂಬಂಧಿಸಿದ ಕಾಯಿಲೆಗಳ ಗುಂಪಾಗಿದ್ದು, ಮಾನವ ದೇಹದ ಕೇಂದ್ರ ನರವ್ಯೂಹ ವ್ಯವಸ್ಥೆಯ ನಿಧಾನ ಬೆಳವಣಿಗೆಯಿಂದ ಕಂಡು ಬರುತ್ತದೆ. ಈ ಕಾಯಿಲೆಗಳು ವ್ಯಕ್ತಿಯ ಸಂವಹನ, ಕಲಿಕಾ, ಸಾಮಾಜಿಕ ಗ್ರಹಿಕಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ. ಒಂದು ವರ್ಷ ವಯಸ್ಸಿಗಿಂತಲೂ ಕೆಳಗಿನ ಮಕ್ಕಳಲ್ಲಿ ಎಎಸ್‌ಡಿ ಹೆಚ್ಚಾಗಿ ಕಂಡು ಬರುತ್ತದೆ.

ಮಸೂದೆಯಲ್ಲೇನಿದೆ?: ಎಎಸ್‌ಡಿಯಿಂದ ಬಳಲುತ್ತಿರುವವರಿಗೆ ಕೌನ್ಸೆಲಿಂಗ್‌, ಚಿಕಿತ್ಸೆ ಮತ್ತು ನಂತರದ ಆರೈಕೆಯನ್ನು ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೀಡಬೇಕು ಎಂದು ಮಸೂದೆ ಹೇಳುತ್ತದೆ.

ವೈದ್ಯರ ರೋಗಿಗಳ ಅನುಪಾತವನ್ನು ಕಾಪಾಡುವುದಕ್ಕಾಗಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ರೋಗ ತಜ್ಞರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಮಸೂದೆ ಒತ್ತಾಯಿಸಿದೆ.

ಮಸೂದೆ ಪ್ರಕಾರ, ಪ್ರತಿ ಆಸ್ಪತ್ರೆಯಲ್ಲಿ ಕನಿಷ್ಠ 40 ರೋಗಿಗಳಿಗೆ ಒಬ್ಬ ವೈದ್ಯ ಇರಬೇಕು.

ಆಟಿಸಂ ಮತ್ತು ಇತರೆ ನರವ್ಯೂಹ ಸಂಬಂಧಿ ಕಾಯಿಲೆಗಳಿಗೆ ಏನು ಕಾರಣ ಎಂಬುದನ್ನು ಪತ್ತೆ ಹಚ್ಚಲು ಅಧ್ಯಯನ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರ ಹಣ ನೀಡಬೇಕು ಎಂದೂ ಮಸೂದೆಯಲ್ಲಿ ಹೇಳಲಾಗಿದೆ.

ಸರ್ಕಾರಕ್ಕೆ ಸಾಧ್ಯ-ಸುಳೆ: ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ ಸವಾಲನ್ನು ಎದುರಿಸಲು ಅಗತ್ಯವಾದ ಸಮಗ್ರ ಕಾನೂನು ದೇಶದಲ್ಲಿ ಇಲ್ಲ ಎಂಬ ಅಂಶವನ್ನು ಸುಪ್ರಿಯಾ ಸುಳೆ ಅವರು ಮಸೂದೆಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

‘ಗರ್ಭಿಣಿಯರ ತಪಾಸಣೆಗೆ ಉತ್ತೇಜನ ನೀಡುವುದು, ಸೂಕ್ತ ಸಮಯದಲ್ಲಿ ಅವರಿಗೆ ಚುಚ್ಚುಮದ್ದುಗಳು ಸಿಗುವಂತೆ ಮಾಡುವುದು ಮತ್ತು ಅವರು ಹಿಮೋಗ್ಲೋಬಿನ್‌ ಮಟ್ಟವನ್ನು ಕಾಯ್ದುಕೊಳ್ಳುವಂತೆ ಮಾಡುವುದರಿಂದ ಎಎಸ್‌ಡಿ ಪ್ರಕರಣಗಳು ಕಡಿಮೆಯಾಗುವಂತೆ ಸರ್ಕಾರ ಮಾಡಬಹುದು’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)