ಬುಧವಾರ, ಡಿಸೆಂಬರ್ 11, 2019
16 °C
ಜಲಮೂಲಕ್ಕೆ ಸುರಿಯಲಾಗುತ್ತಿದೆ ಕಸ, ಕಟ್ಟಡ ತ್ಯಾಜ್ಯ

ಬತ್ತಿದ ಕೋಣನಕುಂಟೆ ಕೆರೆ– ಕಾಯಕಲ್ಪ ಮರೀಚಿಕೆ

ಎನ್‌. ನವೀನ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಬತ್ತಿದ ಕೋಣನಕುಂಟೆ ಕೆರೆ– ಕಾಯಕಲ್ಪ ಮರೀಚಿಕೆ

ಬೆಂಗಳೂರು: ಬೇಸಿಗೆಗೆ ಮುನ್ನವೇ ಈ ಕೆರೆ ಸಂಪೂರ್ಣ ಬತ್ತಿ ಹೋಗಿದೆ. ಅದರ ಒಡಲಲ್ಲಿ ಕಸ, ಪ್ಲಾಸ್ಟಿಕ್‌ ತಾಜ್ಯ ಹಾಗೂ ಕಟ್ಟಡ ತ್ಯಾಜ್ಯ ರಾಶಿ ಬಿದ್ದಿದೆ. ಅಲ್ಲಲ್ಲಿ ಕಸದ ರಾಶಿಗೆ ಬೆಂಕಿ ಹಚ್ಚಿರುವ ಕುರುಹುಗಳಿವೆ. ಇವುಗಳ ನಡುವೆ ಈ ಜಲಮೂಲದಲ್ಲಿ ಕಳೆ ಸಸ್ಯಗಳು ಸೊಂಪಾಗಿ ಬೆಳೆದಿವೆ.

ಕನಕಪುರ ರಸ್ತೆಯ ಬಳಿ ಇರುವ ಕೋಣನಕುಂಟೆ ಕೆರೆಯ ದುಸ್ಥಿತಿ ಇದು. ಈ ಬಾರಿ ಮಳೆಗಾಲದಲ್ಲಿ ಈ ಕೆರೆ ಭರ್ತಿಯಾಗಿತ್ತು. ಎಷ್ಟು ವೇಗವಾಗಿ ಈ ಕೆರೆ ತುಂಬಿತೋ, ಅಷ್ಟೇ ವೇಗವಾಗಿ ನೀರು ಬತ್ತಿಹೋಗಿದೆ. ಇದು ಈಗ ಜಾನುವಾರುಗಳು ಮೇಯುವ ತಾಣವಾಗಿ, ಮಕ್ಕಳ ಆಟದ ಮೈದಾನವಾಗಿ ಪರಿವರ್ತನೆಯಾಗಿದೆ.

ಅರಣ್ಯ ಇಲಾಖೆ ಅಧೀನದಲ್ಲಿದ್ದ ಈ ಕೆರೆಯನ್ನು 8 ವರ್ಷಗಳ ಹಿಂದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹಸ್ತಾಂತರಿಸಲಾಗಿತ್ತು. ಆರಂಭದಲ್ಲಿ ಅರಣ್ಯ ಇಲಾಖೆಯು ಕೆರೆಯ ಅರ್ಧ ಭಾಗದವರೆಗೆ ತಂತಿ ಬೇಲಿ ಅಳವಡಿಸಿತ್ತು. ಬಿಡಿಎಗೆ ಹಸ್ತಾಂತರಿಸುವ ವೇಳೆ, ಉಳಿದ ಭಾಗಕ್ಕೆ ತಂತಿ ಬೇಲಿಯನ್ನು ಬಿಬಿಎಂಪಿ ಅಳವಡಿಸಿತ್ತು.

(ತಂತಿ ಬೇಲಿಯನ್ನು ಮುರಿದು, ಕಟ್ಟಡ ತ್ಯಾಜ್ಯವನ್ನು ಸುರಿಯಲಾಗಿದೆ –ಪ್ರಜಾವಾಣಿ ಚಿತ್ರಗಳು/ ಚಂದ್ರಹಾಸ ಕೋಟೆಕಾರ್‌)

2017ರ ಜುಲೈನಲ್ಲಿ ಬಿಬಿಎಂಪಿಗೆ ಈ ಜಲಮೂಲವನ್ನು ಹಸ್ತಾಂತರಿಸಲಾಯಿತು. ಆದರೆ, ಪಾಲಿಕೆಯು ಜಲಮೂಲವನ್ನು ಅಭಿವೃದ್ಧಿ ಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಅಳವಡಿಸಿರುವ ತಂತಿ ಬೇಲಿಯೂ ಅಲ್ಲಲ್ಲಿ ಮುರಿದುಹೋಗಿದೆ. ಕೊಳಚೆ ನೀರನ್ನು ಇಲ್ಲಿಗೆ ಹರಿಯಬಿಡಲಾಗುತ್ತಿದೆ.

‘ಕೆರೆ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ನೀಡಿದ ಬಳಿಕ ಜಲಮೂಲವನ್ನು ಅಭಿವೃದ್ಧಿ ಪಡಿಸುತ್ತೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಜಗನ್ನಾಥ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಲೀಕತ್ವದ ಗೊಂದಲ:

ಭೂದಾಖಲೆಗಳ ಪ್ರಕಾರ ಇದು ಸರ್ಕಾರಿ ಭೂಮಿ. ಆದರೆ, ಗ್ರಾಮದ ಕೆಲವರು ಹೇಳುವ ಪ್ರಕಾರ ಇದು ಖಾಸಗಿ ಜಮೀನು. ಕೆರೆ ಮಾಲೀಕತ್ವದ ಬಗ್ಗೆ ಗ್ರಾಮಸ್ಥರಲ್ಲಿ ಗೊಂದಲ ಇದೆ.

ಈ ಜಾಗವು ಗ್ರಾಮದ 8 ಜನರ ಹೆಸರಿನಲ್ಲಿತ್ತು. ಅದನ್ನು ಅವರು ಖೋಡೆಸ್‌ ಡಿಸ್ಟಿಲರೀಸ್‌ ಸಂಸ್ಥೆಗೆ ಮಾರಾಟ ಮಾಡಿದ್ದರು. ಆದರೆ, ಅರಣ್ಯ ಇಲಾಖೆಯವರು ತಂತಿ ಬೇಲಿ ಅಳವಡಿಸಲು ಮುಂದಾದಾಗ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಭೂಮಿಯ ಮಾಲೀಕತ್ವಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 25 ವರ್ಷಗಳಿಂದ ಪ್ರಕರಣ ನಡೆಯುತ್ತಿದೆ ಎಂದು ಕೋಣನಕುಂಟೆ ಗ್ರಾಮದ ಜಗದೀಶ್‌ ತಿಳಿಸಿದರು.

ಗ್ರಾಮದಲ್ಲೇ ಹುಟ್ಟಿ ಬೆಳೆದ ಗೋವಿಂದ ಅವರ ಪ್ರಕಾರ, ಇದು ಗ್ರಾಮದ ಕೆರೆ. ‘ಕೆರೆಯಂಗಳದಲ್ಲಿ ಆಟವಾಡುತ್ತಿದ್ದ ನೆನಪುಗಳು ಇನ್ನೂ ಜೀವಂತವಾಗಿವೆ’ ಎಂದು ಅವರು ತಿಳಿಸಿದರು.

ಕೆರೆಯಂಗಳದಲ್ಲಿ ಕಸ ಸುರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಅವ್ಯವಸ್ಥೆಯ ಆಗರವಾಗಿರುವ ಕೆರೆಯನ್ನು ಪಾಲಿಕೆಯು ಕೂಡಲೇ ಅಭಿವೃದ್ಧಿ ಪಡಿಸಬೇಕು ಎಂದು ಅವರು ಒತ್ತಾಯಿಸಿದರು.

‘ಒತ್ತುವರಿದಾರರಿಗೆ ಕಡಿವಾಣ ಹಾಕಲಿ’:

ಅರಣ್ಯ ಇಲಾಖೆಯವರು ಎರಡು ಬಾರಿ ತಂತಿ ಬೇಲಿ ಅಳವಡಿಸಲು ಮುಂದಾಗಿದ್ದರು. ಆದರೆ, ಭೂಗಳ್ಳರು ಇದಕ್ಕೆ ತಡೆಯೊಡ್ಡಿದ್ದರು. ಕೆರೆಯ ಸುತ್ತಲೂ ಒತ್ತುವರಿಯಾಗಿದೆ. ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ದೂರಿದರು.

ಕೆರೆ ಅಭಿವೃದ್ಧಿಗೆ ಮುಂದಾದ ಸಂಘಟನೆ

‘ನೀರಿನ ಹಕ್ಕಿಗಾಗಿ ಜನಾಂದೋಲನ ಕರ್ನಾಟಕ’ ಸಂಘಟನೆಯು ಸ್ಥಳೀಯರು ಹಾಗೂ ಸರ್ಕಾರದ ಸಹಯೋಗದಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿದೆ. ಸಾರಕ್ಕಿ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ಈ ಸಂಘಟನೆ ಕಾನೂನು ಹೋರಾಟ ನಡೆಸಿತ್ತು. ಅದರ ಫಲವಾಗಿ ಸಾರಕ್ಕಿ ಜಲಮೂಲ ಅಭಿವೃದ್ಧಿಯಾಗುತ್ತಿದೆ. ಇದೇ ಮಾದರಿಯಲ್ಲೇ ಚುಂಚಘಟ್ಟ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೋಣನಕುಂಟೆ ಕೆರೆಗೂ ಕಾಯಕಲ್ಪ ನೀಡುವ ಗುರಿಯನ್ನು ಸಂಘಟನೆ ಹೊಂದಿದೆ.

‘ಸ್ವಯಂಸೇವಕರ ಪಡೆಯನ್ನು ಕಟ್ಟಿಕೊಂಡು ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಜೀವಜಲವನ್ನು ಉಳಿಸುವ ಕಾರ್ಯದಲ್ಲಿ ಸ್ಥಳೀಯರನ್ನು ತೊಡಗಿಸಿಕೊಳ್ಳುತ್ತಿದ್ದೇವೆ. ಕೋಣನಕುಂಟೆ ಕೆರೆಯನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದೆವು. ಈ ಬಗ್ಗೆ ಸ್ಥಳೀಯರ ಬಳಿ ಪ್ರಸ್ತಾಪಿಸಿದಾಗ, ಅದರ ಮಾಲೀಕತ್ವದ ಬಗ್ಗೆ ಗ್ರಾಮಸ್ಥರಲ್ಲಿ ಗೊಂದಲ ಇದ್ದದ್ದು ಗಮನಕ್ಕೆ ಬಂತು. ನೀವು ಕೆರೆಯ ಅಭಿವೃದ್ಧಿ ಬಗ್ಗೆ ಮಾತನಾಡಿದರೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗುತ್ತದೆ ಎಂದು ಕೆಲವರು ತಿಳಿಸಿದ್ದರು. ಆದರೆ, ದಾಖಲೆಗಳ ಪ್ರಕಾರ ಅದು ಸರ್ಕಾರಿ ಭೂಮಿಯಾಗಿದೆ’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಎಂ.ಈಶ್ವರಪ್ಪ ತಿಳಿಸಿದರು.

‘ಕೆರೆಯನ್ನು ಅಭಿವೃದ್ಧಿಪಡಿಸಲು ಪಾಲಿಕೆ ಮುಂದಾದರೆ ನಾವು ಅಗತ್ಯ  ಬೆಂಬಲ ನೀಡಲಿದ್ದೇವೆ’ ಎಂದರು.

ಖೋಡೆ ಸಂಸ್ಥೆಯಿಂದ ಒತ್ತುವರಿ

ಭೂ ದಾಖಲೆಗಳ ಇಲಾಖೆಯು ಕೆರೆ ಒತ್ತುವರಿ ತೆರವು ಸದನ ಸಮಿತಿಯ ಸೂಚನೆ ಮೇರೆಗೆ ಈ ಕೆರೆಯ ಸರ್ವೆ ನಡೆಸಿದೆ. ಖೋಡೆಸ್‌ ಡಿಸ್ಟಿಲರೀಸ್‌ ಸಂಸ್ಥೆ, ಐಎಸ್‌ಎಸ್‌ ಪ್ರೌಢಶಾಲೆ ಹಾಗೂ ಕೆಲ ಖಾಸಗಿ ವ್ಯಕ್ತಿಗಳು ಜಲಮೂಲದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದಾಗಿ ನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಖೋಡೆಸ್‌ ಡಿಸ್ಟಿಲರೀಸ್‌ ಸಂಸ್ಥೆಯು 30 ಗುಂಟೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದೆ. 4.5 ಗುಂಟೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ. ಸ್ಮಶಾನಕ್ಕಾಗಿ ಸುಮಾರು 14 ಗುಂಟೆ ಜಾಗವನ್ನು ಒತ್ತುವರಿ ಮಾಡಲಾಗಿದೆ. ರಸ್ತೆಗಾಗಿ ಸುಮಾರು 1 ಗುಂಟೆ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಅಂಕಿ–ಅಂಶ

9 ಎಕರೆ 18 ಗುಂಟೆ

ಮೂಲ ಕೆರೆಯ ವಿಸ್ತೀರ್ಣ

7 ಎಕರೆ 5 ಗುಂಟೆ

ಈಗಿನ ವಿಸ್ತೀರ್ಣ

37 ಗುಂಟೆ

ಖಾಸಗಿ ಒತ್ತುವರಿ

1 ಎಕರೆ 15 ಗುಂಟೆ

ಸರ್ಕಾರಿ ಒತ್ತುವರಿ

* ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಪಾಲಿಕೆ ವಿಫಲವಾಗಿವೆ. ಕೋಣನಕುಂಟೆ ಕೆರೆ ಭೂಗಳ್ಳರ ಪಾಲಾಗುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕು.

– ಎಂ.ಈಶ್ವರಪ್ಪ, ‘ನೀರಿನ ಹಕ್ಕಿಗಾಗಿ ಜನಾಂದೋಲನ ಕರ್ನಾಟಕ’ದ ರಾಜ್ಯ ಸಂಚಾಲಕ

ಪ್ರತಿಕ್ರಿಯಿಸಿ (+)