ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಮರದಿಂದ ಬಿದ್ದು ಕೈದಿ ಸಾವು

Last Updated 4 ಫೆಬ್ರುವರಿ 2018, 20:27 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಸತಿಗೃಹದ ಆವರಣದಲ್ಲಿರುವ ತೆಂಗಿನ ಮರದಿಂದ ಬಿದ್ದು ಕೆ.ಮಹಮದ್ (47) ಎಂಬ ಕೈದಿ ಮೃತಪಟ್ಟಿದ್ದಾರೆ.

ಶನಿವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

‘ಗಂಡನಿಗೆ ಸರಿಯಾಗಿ ಮರ ಹತ್ತಲು ಬರುತ್ತಿರಲಿಲ್ಲ. ಆದರೂ, ಜೈಲು ಅಧಿಕಾರಿಗಳು ತೆಂಗಿನ ಕಾಯಿ ಕೀಳುವಂತೆ ಬಲವಂತ ಮಾಡುತ್ತಿದ್ದರು. ಹೀಗಾಗಿ, ಗಂಡನ ಸಾವಿಗೆ ಅವರೇ ನೇರ ಹೊಣೆ’ ಎಂದು ಮೃತರ ಪತ್ನಿ ಶಂಶುದಾ ಆರೋಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಲಕ್ಕಿನಕೊಪ್ಪ ಗ್ರಾಮದ ಮಹಮದ್, ಎರಡನೇ ಪತ್ನಿಯನ್ನು ಕೊಲೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 13 ವರ್ಷಗಳಿಂದ ಜೈಲಿನಲ್ಲಿದ್ದರು. ಅವರು ಸೇರಿದಂತೆ ನಾಲ್ವರು ಕೈದಿಗಳು ಬೆಳಿಗ್ಗೆ ವಸತಿಗೃಹದ ಆವರಣ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಅಧಿಕಾರಿಯೊಬ್ಬರ ಸೂಚನೆಯಂತೆ ಕಾಯಿ ಕೀಳಲು ಮರ ಹತ್ತಿದ್ದರು. ಮರದ ತುದಿಗೆ ಹೋದಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ ಎನ್ನಲಾಗಿದೆ.

ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಅಧಿಕಾರಿಗಳು ತಕ್ಷಣ ತಮ್ಮ ವಾಹನದಲ್ಲೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆಯೇ ಮಹಮದ್ ಕೊನೆಯುಸಿರೆಳೆದಿದ್ದಾರೆ.

‘ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೈಲಿನಿಂದ ಕರೆ ಮಾಡಿದ್ದ ಸಿಬ್ಬಂದಿ, ಮರದಿಂದ ಬಿದ್ದು ಗಾಯವಾಗಿದೆ ಎಂದಷ್ಟೇ ಹೇಳಿದರು. ಪುನಃ 2 ಗಂಟೆಗೆ ಕರೆ ಮಾಡಿ, ಸತ್ತು ಹೋದ ವಿಷಯ ತಿಳಿಸಿದರು. ತಕ್ಷಣ ಹೊರಟು ಬೆಂಗಳೂರಿಗೆ ಬಂದೆವು. ನಡೆದ ಘಟನೆ ಬಗ್ಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ’ ಎಂದು ಮೃತರ ಅಣ್ಣ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.

ದೂರು ಕೊಟ್ಟರೆ ಕ್ರಮ: ‘ಕಾಯಿ ಕೀಳಲು ಮಹಮದ್‌ಗೆ ಯಾರೂ ಹೇಳಿರಲಿಲ್ಲ. ವಸತಿಗೃಹದಲ್ಲಿ ಬೆಳೆದಿದ್ದ ಗಿಡಗಳನ್ನು ಕತ್ತರಿಸಲಷ್ಟೇ ಅವರಿಗೆ ಸೂಚಿಸಲಾಗಿತ್ತು’ ಎಂದು ಕಾರಾಗೃಹದ ಸಿಬ್ಬಂದಿ ಹೇಳಿಕೆ ಕೊಟ್ಟಿದ್ದಾರೆ. ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಧಿಕಾರಿಗಳ ವಿರುದ್ಧ ಮೃತರ ಸಂಬಂಧಿಕರು ದೂರು ಕೊಟ್ಟರೆ, ಆ ನಿಟ್ಟಿನಲ್ಲೂ ತನಿಖೆ ನಡೆಸುತ್ತೇವೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದ್ದಾರೆ.

ಬೇಸರ ವ್ಯಕ್ತಪಡಿಸಿದ್ದ ಪತಿ

ಇತ್ತೀಚೆಗೆ ಪರೋಲ್ ರಜೆ ಮೇಲೆ ಮನೆಗೆ ಬಂದಿದ್ದ ಪತಿ, ‘ನಾನು ಯಾವತ್ತೂ ಮನೆಗೆಲಸ ಮಾಡಿದವನಲ್ಲ. ಆದರೆ, ಅಧಿಕಾರಿಗಳ ಮನೆಗಳಲ್ಲಿ ಈಗ ಬಟ್ಟೆ, ಪಾತ್ರೆಗಳನ್ನು ತೊಳೆಯುತ್ತಿದ್ದೇನೆ. ಶೌಚಾಲಯವನ್ನೂ ಸ್ವಚ್ಛಗೊಳಿಸುತ್ತಿದ್ದೇನೆ. ಅಧಿಕಾರಿಗಳು ಕಾಯಿ ಕೀಳಲು ಪ್ರತಿ ಬಾರಿ ನನ್ನನ್ನೇ ಮರ ಹತ್ತಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾಗಿ ಶಂಶುದಾ ತಿಳಿಸಿದರು. ಈ ಬಗ್ಗೆ ದೂರು ನೀಡುತ್ತೇನೆ ಎಂದರು.

ಕಾರಾಗೃಹದಲ್ಲೂ ಆರ್ಡರ್ಲಿ ಪದ್ಧತಿ!

‘ಪೊಲೀಸ್ ಆರ್ಡರ್ಲಿ ವ್ಯವಸ್ಥೆ ಮಾದರಿಯಲ್ಲೇ ಕಾರಾಗೃಹದ ಅಧಿಕಾರಿಗಳು ಮನೆ ಚಾಕರಿಗೆ ಬಂದಿಗಳನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ಇತ್ತೀಚೆಗೆ ಸನ್ನಡತೆ ಮೇಲೆ ಬಿಡುಗಡೆಯಾದ ಕೆಲವರು ಆರೋಪಿಸಿದ್ದಾರೆ.

‘ಜೈಲು ಆವರಣದಲ್ಲಿ ವಾಸಿಸುವ ಅಧಿಕಾರಿಗಳು, ಅಧೀಕ್ಷಕರ ಲಿಖಿತ ಆದೇಶದ ಮೇರೆಗೆ ಬಂದಿಗಳನ್ನು ವಸತಿಗೃಹಗಳ ಸ್ವಚ್ಛತಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು’ ಎಂದು 1978ರ ಕಾರಾಗೃಹಗಳ ಕೈಪಿಡಿ ಹೇಳುತ್ತದೆ.

‘ಆದರೆ, ಬಂದಿಗಳ ಕೆಲಸವು ಮನೆ ಬಾಗಿಲವರೆಗೆ ನೀರು ಪೂರೈಸುವ ಹಾಗೂ ಆವರಣದ ಕಸ ಗುಡಿಸುವ ಕಾರ್ಯಗಳಿಗೆ ಮಾತ್ರ ಸೀಮಿತವಾಗಿರಬೇಕು. ಯಾವುದೇ ಕಾರಣಕ್ಕೂ ಅವರು ಮನೆ ಪ್ರವೇಶಿಸುವಂತಿಲ್ಲ’ ಎಂದು ಕೈಪಿಡಿಯ ಕಲಂ 418ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ನಿಯಮದ ಉಲ್ಲಂಘನೆಯಾಗುತ್ತಿದೆ ಎಂಬುದು ಕೆಲವರ ಆರೋಪ.

‘ತಮ್ಮ ಶಿಕ್ಷೆಯ ಅವಧಿಯಲ್ಲಿ 1/3 ಭಾಗದಷ್ಟು ಶಿಕ್ಷೆ ಪೂರ್ಣಗೊಳಿಸಿರುವ ಹಾಗೂ ಉತ್ತಮ ನಡತೆ ಹೊಂದಿರುವ ಬಂದಿಗಳಿಗೆ ಜೈಲಿನ ಹೊರಭಾಗವನ್ನು ಸ್ವಚ್ಛಗೊಳಿಸಲು ಅವಕಾಶ ಕೊಡಬೇಕು. ಅವರಿಗೆ ಹೈನುಗಾರಿಕೆ, ಹಂದಿ ಸಾಗಣೆಯಂತಹ ಕೃಷಿ ಚಟುವಟಿಕೆ ಬಗ್ಗೆ ತರಬೇತಿಯನ್ನೂ ನೀಡಬೇಕು ಎಂದು ಕೈಪಿಡಿ ಹೇಳುತ್ತದೆ. ಇದೇ ನೆಪದಲ್ಲಿ ಬಂದಿಗಳನ್ನು ಹೊರಗೆ ಕರೆದೊಯ್ಯುವ ಅಧಿಕಾರಿಗಳು, ಅವರಿಂದ ಮನೆಗಳ ಚಾಕರಿ ಮಾಡಿಸಿಕೊಳ್ಳುತ್ತಾರೆ’ ಎಂದು ಇತ್ತೀಚೆಗೆ ಬಿಡುಗಡೆಯಾದ ವ್ಯಕ್ತಿಯೊಬ್ಬರು ದೂರಿದರು.

‘ಮರದಿಂದ ಬಿದ್ದು ಮೃತಪಟ್ಟಿರುವ ಮಹಮದ್ ಹಾಗೂ ನಾನು ಒಂದೇ ಬ್ಯಾರಕ್‌ನಲ್ಲಿದ್ದೆವು. ಅಧಿಕಾರಿಗಳ ಮನೆಗಳಲ್ಲಿ ನಾವಿಬ್ಬರೂ ಅಡುಗೆ ಕೆಲಸ ಮಾಡಿದ್ದೆವು. ಹಬ್ಬಗಳ ಸಂದರ್ಭದಲ್ಲಿ ಗೋಡೆಗೆ ಸುಣ್ಣ ಬಳಿದಿದ್ದೆವು. ಅವರ ಬಲವಂತದಿಂದಲೇ ಆತ ಮರ ಹತ್ತಿರುತ್ತಾನೆ. ಹೀಗಾಗಿ, ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT