‘ಕೊಳೆಯುತ್ತಿದೆ ಮೇವು’

7

‘ಕೊಳೆಯುತ್ತಿದೆ ಮೇವು’

Published:
Updated:
‘ಕೊಳೆಯುತ್ತಿದೆ ಮೇವು’

ಬೆಂಗಳೂರು: ಜಾನುವಾರು ಮೇವು ನಿಧಿಯಿಂದ ಹೆಸರಘಟ್ಟ ಹೋಬಳಿಗೆ ಕಳೆದ ವರ್ಷ ನೀಡಿದ್ದ ಮೇವು ಇಲ್ಲಿನ ತೋಟಗಾರಿಕೆ ಸಂಸ್ಥೆಯ ಅವರಣದಲ್ಲಿಯೇ ಕೊಳೆಯುತ್ತಿದೆ. 20 ಟನ್‌ ಮೆಕ್ಕೆಜೋಳದ ಕಡ್ಡಿಯನ್ನು ಹೋಬಳಿಗೆ ನೀಡಲಾಗಿತ್ತು. ಆದರೆ, ಇಲ್ಲಿನ ಪಶುಪಾಲನ ಇಲಾಖೆ ಅಧಿಕಾರಿಗಳು ಒಂದೆರಡು ಟನ್‌ನಷ್ಟು ಮೇವುಗಳನ್ನಷ್ಟೇ ವಿತರಿಸಿ, ಮರೆತು ಬಿಟ್ಟರು.

‘ಜಾನುವಾರುಗಳಿಗೆ ಮೇವಿಲ್ಲ ಎಂದು ರೈತರು ಒಂದು ಹೊರೆಗೆ ₹10 ರಿಂದ ₹15 ಕೊಟ್ಟು ಬೇರೆಡೆಗಳಿಂದ ಮೇವು ತಂದರು. ಸಕಾಲದಲ್ಲಿ ಮೇವು ವಿತರಣೆಯಾಗದೆ ಈಗ ಅದು ಕೊಳೆಯುತ್ತಿದೆ’ ಎಂದು ಗ್ರಾಮದ ರೈತ ಶಾಂತಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

‘ಮೆಕ್ಕೆಜೋಳದ ಕಡ್ಡಿಯನ್ನು ಒಂದು ವರ್ಷದವರೆಗೆ ಹಾಗೆ ಇಟ್ಟರೇ ಕಡ್ಡಿಯಲ್ಲಿ ಹುಳುಗಳಾಗುತ್ತವೆ. ಕಡ್ಡಿಯು ಟೊಳ್ಳಾಗುವುದರಿಂದ ದನಗಳು ತಿನ್ನುವುದಿಲ್ಲ. ಈಗಿರುವ ಮೇವನ್ನು ಸುಡುವುದು ಬಿಟ್ಟು ಬೇರೇನಕ್ಕೂ ಉಪಯೋಗವಿಲ್ಲ’ ಎಂದು ರೈತ ಬಸವರಾಜು ಬೇಸರ ವ್ಯಕ್ತಪಡಿಸಿದರು. ‘ನಮಗೆ ಅಗತ್ಯ ವಿದ್ದಾಗ ಮೇವು ವಿತರಿಸಿ ಎಂದು ಅಧಿಕಾರಿಗಳನ್ನು ಕೇಳಿದರೆ, ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ದೂರಿದರು.

ಪಶುಪಾಲನ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಸೋಮಶೇಖರ್, ‘ವಿತರಣೆಯಾಗದ ಮೇವುನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸುವ ಪ್ರಯತ್ನ ಮಾಡಿದ್ದೀವಿ. ಆದರೆ, ಇಲ್ಲಿಂದ ಕಳುಹಿಸುವ ವೆಚ್ಚ ತುಂಬಾ ದುಬಾರಿಯಾಗಿದೆ’ ಎಂದರು.

‘ಮೇವುನ್ನು ಇಲ್ಲಿಯ ರೈತರಿಗೆ ಕಡಿಮೆ ದರದಲ್ಲಿ ವಿತರಿಸುವ ಪ್ರಯತ್ನ ಮಾಡುತ್ತೇನೆ. ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಮೇವಿನ ಅಭಾವ ಇಲ್ಲ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry