ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರೇ ಗಣತಂತ್ರದ ನೈಜ ಮಾಲೀಕ

Last Updated 5 ಫೆಬ್ರುವರಿ 2018, 6:33 IST
ಅಕ್ಷರ ಗಾತ್ರ

ಯಾರು ಒಪ್ಪುತ್ತಾರೋ ಇಲ್ಲವೋ ನನ್ನೂರಿನ ಪೇಟೆಯ ಗೂಡಂಗಡಿಯವ ತರಿಸುವ ನಿತ್ಯ ಪೇಪರನ್ನು ಬಿಟ್ಟಿಯಾಗಿ ಓದಿಕೊಂಡು ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಕೊಡುತ್ತಿದ್ದ ಗ್ರಾಮದ ಹಿರಿಯ ನಿವೃತ್ತ ಸರ್ಕಾರಿ ಅಧಿಕಾರಿ ಒಬ್ಬರು ನಮಗೆಲ್ಲ ಒಂದರ್ಥದಲ್ಲಿ ಬೃಹಸ್ಪತಿ. ಜನತಂತ್ರದಲ್ಲಿ ಮತ ಇಂತಹವರಿಗೆ ಹಾಕಬೇಕು, ಇಂತಹ ಸಿದ್ಧಾಂತ ಬರಬೇಕು ಎಂದು ಪುಂಖಾನುಪುಂಖವಾಗಿ ಊರ ಜನತೆಗೆಲ್ಲ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಈ ನಿವೃತ್ತ ಮೇಷ್ಟ್ರು, ಅಟಲ್‌ಜೀಯವರ ಪೋಕ್ರಾನ್‌, ಇಂದಿರಾ ಅವರ ತುರ್ತು ಪರಿಸ್ಥಿತಿ, ಚರಣ್‌ ಸಿಂಗ್‌ ಅವರ ರೈತಪ್ರೇಮದಿಂದ ಹಿಡಿದು, ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣದವರೆಗೆ ವಿಮರ್ಶೆ ಮಾಡಬಲ್ಲ ಸಮರ್ಥ.

ನಮ್ಮ ಪಾಲಿಗೆ ಸಂಭಾವಿತ. ಅದ್ಯಾಕೋ ನಾವೆಲ್ಲ ಧಾವಿಸಿ ಮಾಹಿತಿ ಪಡೆಯುತ್ತಿದ್ದೆವು. ಈ ದೇಶ ಏನಾಗಬೇಕು ಎಂದು ಅವರ ಬಾಯಲ್ಲಿ ಕೇಳಿ ರೋಮಾಂಚನಗೊಳ್ಳುತ್ತಿದ್ದೆವು. ರಾಜಕೀಯ, ಚುನಾವಣೆ, ಮತದಾನ ಎಂದರೆ ನಮ್ಮೂರ ಮೇಷ್ಟ್ರ ಬಾಯಲ್ಲಿ ಬರುವ ಮಾತುಗಳೇ ನಮಗೆ ದಿಕ್ಕುದೆಸೆ. ನನಗೆ ಬಂದ ಪ್ರಥಮ ಮತದ ಹಕ್ಕನ್ನು ಚಲಾಯಿಸಿ, ಅವರ ಬಳಿ ಹೋಗಿ ಹೇಳಿದೆ– ‘ನಾನು ಮತ ಚಲಾಯಿಸಿದೆ’ ಅಂತ. ಅವರ ತೋರುಬೆರಳಲ್ಲಿ ಗುರುತು ಇರಲಿಲ್ಲ. ನನ್ನ ಪಾಲಿನ ಬೃಹಸ್ಪತಿ ನಿಟ್ಟುಸಿರು ಬಿಟ್ಟು ಹೇಳಿದರು– ಯಾರೂ ಯೋಗ್ಯರೇ ಕಾಣ್ತಿಲ್ಲ –ಅಂತ.

ಜನತಂತ್ರ ವ್ಯವಸ್ಥೆಯ ಬೇರಿನ ಬಗ್ಗೆ ಅವರಾಡುವ ಮಾತು ಕೇಳುತ್ತ ಬಂದ ನನ್ನ ಉತ್ಸಾಹ ಜರ್ರನೆ ಇಳಿಯಿತು. ಯಾರು ವಿದ್ಯಾವಂತ, ಬುದ್ಧಿವಂತರು, ಸುಸಂಸ್ಕೃತರು ಎಂದು ನಾವು ಅಂದುಕೊಳ್ಳುತ್ತೇವೋ ಅವರೇ ಮತಗಟ್ಟೆಗೆ ಬರಲಾಗದಿದ್ದರೆ ಪ್ರಜಾಪ್ರಭುತ್ವವನ್ನು ಯಾರು ಕಾಪಾ ಡಬೇಕು ? ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಜನರ ಸಮಸ್ಯೆ ಪರಿಹರಿಸುವುದಕ್ಕಿಂತ ಭಾಷಣಗಳಲ್ಲಿ ಮುಳುಗಿವೆ ಎಂದು ಆಪಾದಿಸುವವರು ಹೇರಳ. ಸತ್ಯಾಂಶ ಇರಬಹುದು. ಆದರೆ ಇದನ್ನೂ ಸರಿಪಡಿಸುವವರು ಯಾರು?

ಚಿಂತಕರ ಚಾವಡಿ ಎಂದೇ ಹೆಸರು ಪಡೆದ ಮೇಲ್ಮನೆಯಲ್ಲಿ ಹಿರಿಯ ಮುತ್ಸದ್ದಿ ಎಂ. ಸಿ. ನಾಣಯ್ಯ ಅವರೊಮ್ಮೆ, ‘ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಮಾಧ್ಯಮಗಳು ಮುಖ್ಯ. ಆದರೆ ಎಲ್ಲದಕ್ಕೂ ಶ್ರೀಸಾಮಾನ್ಯನೇ ವಾರಸುದಾರ. ಮತದಾರನೇ ಶ್ರೇಷ್ಠ’ ಎಂದಿದ್ದರು. ಒಪ್ಪುವ ಮಾತು. ಆದರೆ ಅವರು ಕೋಟ್ಯಧಿಪತಿ ಅಲ್ಲ ಎಂಬ ಕಾರಣಕ್ಕೆ ಸದನದಿಂದ ಹೊರಗಿದ್ದಾರೆ ಎಂಬ ವಿಷಯ ನನ್ನ ಇರಿಯುತ್ತದೆ. ಯೋಗ್ಯರನ್ನು ಕರೆಸಿಕೊಳ್ಳುವ ವಿದ್ಯಾವಂತರು ವಿದ್ಯಾರ್ಥಿಗಳು, ಸ್ವಾರ್ಥ ರಹಿತ ದೇಶ ಭಕ್ತರ ತಂಡವೊಂದು ಸಮಾಜದಲ್ಲಿ ಇರಲೇಬೇಕಲ್ಲ. ನಿಜ, ಪ್ರಜಾಪ್ರಭುತ್ವ ಎಂದರೆ ನಾವು ರಚಿಸುವ ಸರ್ಕಾರ ಅಲ್ಲ. ಬದಲಾಗಿ ನಮ್ಮೊಳಗೆ ನಾವು ಹಾಕಿಕೊಂಡಿರುವ ನಿಯಂತ್ರಣ ಎಂದು ಸಂವಿಧಾನ ರಚನಾ ಸಭೆಯಲ್ಲಿ ಆಚಾರ್ಯ ಕೃಪಲಾನಿ ಹೇಳಿದ್ದರು.

ವಿಶ್ವದಲ್ಲಿ ಯುವ ಜನಾಂಗವೇ ಹೆಚ್ಚು ಇರುವ ದೇಶ ಎಂದು ಗುರುತಿಸಿಕೊಂಡ ಭಾರತ, ಶ್ರೇಷ್ಠ ಭಾರತ ಆಗಬೇಕಾದರೆ ದೇಶಕಟ್ಟುವ ಮೊದಲ ಹೆಜ್ಜೆಯಾಗಿ ಜಾತಿ, ವೈಯಕ್ತಿಕ ಹಿತಾಸಕ್ತಿ ಮೀರಿ ದೇಶವೇ ಮುಖ್ಯ ಎಂಬ ನಿರ್ಧಾರಕ್ಕೆ ಬದ್ಧರಾದ ವ್ಯಕ್ತಿಗಳು ಶಾಸನ ಸಭೆಯೊಳಗೆ ಕಾಲಿಡಬೇಕು. ಅದಕ್ಕೆ ಅಷ್ಟೇ ಬದ್ಧತೆ ಇರುವ ಮತದಾರರಿಂದ ಮತ ಚಲಾವಣೆ ಆಗಬೇಕು. ಮಾದರಿ ಆಡಳಿತ ಇರಬೇಕು ಎಂಬ ಆಶಯ ಹೊಂದಿದ ಯುವಜನತೆ ನಿರ್ಲಿಪ್ತತೆ ಬಿಟ್ಟುಮತಗಟ್ಟೆಗೆ ದಾಪುಗಾಲು ಹಾಕಿ ಬಂದು ಮತಚಲಾಯಿಸುವ ಚಳವಳಿ ಮುಂಚೂಣಿಗೆ ಬರಬೇಕು. ಯಾರು ಗೆದ್ದರೇನಂತೆ ಎಂಬ ಸಿನಿಕತನ ಬಿಟ್ಟು ಯೋಗ್ಯರೊಬ್ಬರು ಚುನಾಯಿತರಾದರೆ ಉದ್ಯೋಗಗಳನ್ನಾದರೂ ಸೃಷ್ಟಿ ಮಾಡುವ ದೂರದೃಷ್ಟಿ ತೋರಬಲ್ಲ ಎಂಬ ಆಶಯ ಇದ್ದರೆ ಸಾಕು.

ಪ್ರಜಾಪ್ರಭುತ್ವ ಜೀವಂತ ಇರ ಬೇಕಾದರೆ ಆ ದೇಶದ ಜನರು ಜಾಗೃತ ರಾಗಬೇಕು. ಕಣ್ಣೆದುರೇ ನಡೆಯುವ ಭ್ರಷ್ಟಾಚಾರ, ಅಹಂ ತುಂಬಿದ ಆಡಳಿತ, ಸ್ವೇಚ್ಛಾಚಾರವನ್ನು ಕಂಡು ಮೌನವಾಗಿ ಸಹಿಸುತ್ತಾರೋ ಅಂತಹ ನಾಡು ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ. ಅದು ನಿಧಾನವಾಗಿ ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶ ಕಲ್ಪಿಸಿಕೊಡುತ್ತದೆ ಎಂಬ ವಿಚಾರವನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹೇಳಿದ್ದರು. ನಮ್ಮ ಮುಂದೆ ಈಗಿರುವ ಪ್ರಶ್ನೆ, ಕ್ಷಣಿಕ ತೃಪ್ತಿಗಾಗಿ ಆತ್ಮ ಗೌರವವನ್ನು ಮಾರಿಕೊಳ್ಳಬೇಕೋ ಅಥವಾ ನಾಡಿನ ಸಾಮಾನ್ಯ ಪ್ರಜೆಯಾಗಿ ಜಾಗೃತ ಜನಪ್ರತಿನಿಧಿಯನ್ನು ಆರಿಸಬೇಕೋ ಎಂಬುದಾಗಿದೆ. ಮತದಾನದ ದಿನ ಮುಖ ತಿರುವಿ ಮಲಗುವ ವಿದ್ಯಾವಂತನಿಗಿಂತ ತನ್ನ ವಿವೇಚನಾ ವ್ಯಾಪ್ತಿಯಲ್ಲಿ ಯೋಗ್ಯನಿಗೆ ಮತ ಚಲಾಯಿಸುವ ಜಾಗೃತ ಹಳ್ಳಿ ಹೈದನೇ ನಮ್ಮ ಪಾಲಿಗೆ ಪ್ರಜಾತಂತ್ರದ ನೈಜ ಮಾಲೀಕ.

ನನ್ನೊಬ್ಬನ ಮತದಿಂದ ದೇಶ ಬದಲಾಗದು ಎಂದು ಸಿನಿಕತನದಿಂದ ಹೊರಬಂದು, ಒಂದೊಂದು ಮತವೂ ದೇಶಕಟ್ಟುವ ತನ್ನ ಪಾಲಿನ ಇಟ್ಟಿಗೆ ಎಂದು ಯುವಜನರು ಮತದಾನ ಮಾಡಬೇಕು. ಮತದಾನಕ್ಕಿಂತ ಶಕ್ತಿಶಾಲಿ ಅಸ್ತ್ರ ಇನ್ನೊಂದಿಲ್ಲ. ಏಳು ಎದ್ದೇಳು, ಮುಂದಿನ ನಿನ್ನ ಭವಿಷ್ಯ ರೂಪಿಸುವ ಶಕ್ತಿ ನಿನ್ನೊಳಗೆ ಇದೆ. ಸ್ವಾಭಿಮಾನಿ ಬದುಕು ಕಟ್ಟಲು ಮೊದಲ ಹೆಜ್ಜೆ ಇಂದೇ ಇಡು ಎಂಬ ಸ್ವಾಮಿ ವಿವೇಕಾನಂ0ದರ ಮಾತುಗಳು ಅರ್ಥಪೂರ್ಣವಾಗಿ ಜಾರಿಯಾಗಬೇಕಾದರೆ ಯುವಜನರು ಮುಂದಿನ ಚುನಾವಣೆಗೆ ಮತಗಟ್ಟೆಗೆ ಧಾವಿಸಿ ಬರಬೇಕು. ಯೋಗ್ಯರಿಗೆ ಮತ ಹಾಕಬೇಕು. ದೇಶದ ಪ್ರತಿ ಪ್ರಜೆಯ ಹೃದಯ ಮಿಡಿತ ಮೇಳೈಸಿದಾಗಲಷ್ಟೇ ಜಯಭಾರತವಾಗಲಿದೆ.

ಕೋಟ ಶ್ರೀನಿವಾಸ ಪೂಜಾರಿ

(ಲೇಖಕರು ವಿಧಾನ ಪರಿಷತ್‌ನ ಸದಸ್ಯರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT