ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬದುಕಿಗೆ ವರದಾನವಾಗಿ ಬಂತು ಚೆಕ್‌ ಡ್ಯಾಂ

Last Updated 5 ಫೆಬ್ರುವರಿ 2018, 7:15 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಗ್ರಾಮಾಂತರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಂಡ ಚೆಕ್‌ ಡ್ಯಾಂ ನಿರ್ಮಾಣ ಇಲ್ಲಿ ಕ್ರಾಂತಿಯನ್ನೇ ಮಾಡಿದೆ. ರೈತ ಸಮುದಾಯದಲ್ಲಿ ಭರವಸೆಯನ್ನು ಮೂಡಿಸಿದೆ.

ನದಿ ಮೂಲಗಳು ಇಲ್ಲದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಮಳೆಯೇ ಆಶ್ರಯ. ಈ ಮಳೆ ಕೈಕೊಟ್ಟರೆ ಬೆಳೆಗಾರರೆದೆಲ್ಲ ವರ್ಷಪೂರ್ತಿ ಗೋಳು. ಈಚೆಗಿನ ವರ್ಷಗಳಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟದಲ್ಲಿ ರೈತರ ಬದುಕು ದುಸ್ತರವಾಗಿದೆ. ಕೊಳವೆ ಬಾವಿ ಕೊರೆಸಿ ರೈತರು ಹಣವನ್ನಷ್ಟೇ ಅಲ್ಲ. ಭೂಮಿಯನ್ನೂ ಮಾರಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ.

1200ಕ್ಕೂ ಹೆಚ್ಚು ಅಡಿ ಅಳಕ್ಕೆ ಇಳಿದ ಅಂತರ್ಜಲಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿಲ್ಲ. ನೀರು ಸಿಕ್ಕರೂ 6–7 ತಿಂಗಳಲ್ಲೇ ಮತ್ತೆ ಒಣಗಿದ ಉದಾಹರಣೆಗಳು ಸಾಕಷ್ಟು. ಇದು ರೈತರಲ್ಲಿ ನಿರಾಸೆಯ ಕಾರ್ಮೋಡ ಕವಿಯುವಂತೆ ಮಾಡಿದೆ.

ಇಂತಹ ಪರಿಸ್ಥಿತಿ ಎದುರಿಸುತ್ತಿರುವ ಈ ಕ್ಷೇತ್ರದ ರೈತರಿಗೆ ವರವಾಗಿ ಬಂದಿದ್ದು ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿದ ಚೆಕ್‌ ಡ್ಯಾಂಗಳು. ಇದಕ್ಕೆ ಶಾಸಕ ಬಿ.ಸುರೇಶ್‌ಗೌಡ ಅವರ ಒತ್ತಾಸೆಯೂ ಬಹುಮಟ್ಟಿಗೆ ಕಾರಣವಾಗಿದೆ.

ಕ್ಷೇತ್ರದ ರೈತರ ಬವಣೆ, ಪಡುವ ಕಷ್ಟವನ್ನು ಕಂಡು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಚೆಕ್‌ ಡ್ಯಾಂ ನಿರ್ಮಾಣ ಅಶಾದಾಯಕವಾಗಿ ಕಂಡಿದೆ. ಈ ಆಶಯದಿಂದಲೇ ಚೆಕ್ ಡ್ಯಾಂ ನಿರ್ಮಾಣಕ್ಕೆ ನಾಂದಿಯಾಗಿದೆ.

ಕ್ಷೇತ್ರದ ಪ್ರಮುಖ ಬೆಳೆ: ಕ್ಷೇತ್ರದಲ್ಲಿ ಅಡಿಕೆ, ಹೂವು, ತರಕಾರಿ, ಬಾಳೆ, ತೆಂಗು ಬೆಳೆಗಾರರು ಪ್ರಮುಖವಾಗಿದ್ದಾರೆ. ಒಟ್ಟಾರೆ ಶೇ 90ರಷ್ಟು ರೈತರು ಕೃಷಿ ಅವಲಂಬಿತರು. ನೀರಿಲ್ಲದೇ ಪರಿತಪಿಸುತ್ತಿದ್ದ ಈ ರೈತರಿಗೆ ಚೆಕ್‌ ಡ್ಯಾಂಗಳು ಈಗ ವರದಾನವಾಗಿ ಗೋಚರಿಸಿವೆ.

‘ನಮ್ಮೂರಿನಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಮಾಡಿದ ಬಳಿಕ ನಮ್ಮ ಕೊಳವೆ ಬಾವಿಗಳಲ್ಲಿ, ಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಬತ್ತಿ ಹೋಗಿದ್ದ ಬಾವಿಗಳು ಮತ್ತೆ ಜೀವ ಪಡೆದಿವೆ ಎಂದು ಪಾಲಸಂದ್ರ ಗ್ರಾಮದ ರೈತ ಅಶೋಕ್ ಚೆಕ್‌ ಡ್ಯಾಂ ನಿರ್ಮಾಣದಿಂದ ಆಗಿರುವ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಮಳೆ ಇಲ್ಲದೇ ಬಾವಿಗಳಲ್ಲೂ ನೀರಿಲ್ಲದೇ ದಿಕ್ಕು ತೋಚದೇ ಇದ್ದಾಗ ಶಾಸಕರು ಒತ್ತಾಸೆಯಿಂದ ಚೆಕ್‌ ಡ್ಯಾಂ ನಿರ್ಮಿಸಿದರು. ನಮ್ಮ ತೋಟಗಳೂ ಉಳಿದುಕೊಂಡವು. ಈಗ ನಮ್ಮಂತಹ ಅಡಿಕೆ, ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಲು ಇದು ಕಾರಣವಾಗಿದೆ ಎಂದು ರೈತ ತಿಮ್ಮಪ್ಪ ಶಾಸಕರ ಕಾರ್ಯವನ್ನು ಶ್ಲಾಘಿಸುತ್ತಾರೆ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸೋರೇಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇನಹಳ್ಳಿ, ಹುಚ್ಚಬಸವನಹಳ್ಳಿ, ಮಸ್ಕಲ್, ವರದನಹಳ್ಳಿ, ಸ್ವಾಂದೇನಹಳ್ಳಿ, ಡಣಾನಾಯಕನಪುರ ಹೀಗೆ ಅನೇಕ ಕಡೆಗಳಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ. ಡಣಾನಾಯಕನಪುರ ಮತ್ತು ಕಾಡಗುಜ್ಜನಹಳ್ಳಿ ಹತ್ತಿರ ಹೊಸ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಇವೆಲ್ಲ ಶಾಸಕರ ವಿಶೇಷ ಆಸಕ್ತಿಯಿಂದ ಕೈಗೊಂಡ ಕಾರ್ಯಗಳು ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಗಳು ಹೇಳುತ್ತಾರೆ.

ಚೆಕ್‌ ಡ್ಯಾಂನಿಂದ ಮತ್ತೆ ನೀರು ಬಂತು

ಬೃಹತ್ ಗಾತ್ರದ ಚೆಕ್‌ ಡ್ಯಾಂಗಳು ನಿರ್ಮಾಣಗೊಂಡ ಬಳಿಕ ನಮ್ಮೂರಿನ ಮರಳು ಬಾವಿಗಳು, ಕೊಳವೆ ಬಾವಿಗಳು ಮರುಪೂರಣಗೊಂಡಿವೆ (ರಿ ಚಾರ್ಜ್). ಇದರಿಂದ ನೀರು ಪಡೆದು ಬಳಕೆ ಮಾಡುತ್ತಿದ್ದೇವೆ ಎಂದು ಬೊಮ್ಮನಹಳ್ಳಿ ಗ್ರಾಮದ ರೈತ ನಾಗರಾಜು ಹೇಳಿದರು.

ಚೆಕ್ ಡ್ಯಾಂ; ರೈತರಿಗೆ ಪ್ರಯೋಜನ

ಸಣ್ಣ ನೀರಾವರಿ ಇಲಾಖೆಯಿಂದ ₹ 1 ಕೋಟಿ, ₹ 50 ಲಕ್ಷ ಹೀಗೆ ಒಂದೊಂದು ಚೆಕ್‌ ಡ್ಯಾಂಗೆ ವೆಚ್ಚ ಮಾಡಲಾಗಿದೆ. ಹತ್ತು ವರ್ಷದಲ್ಲಿ ಅಂದಾಜು ₹ 35 ಕೋಟಿ ಮೊತ್ತದಲ್ಲಿ ಚೆಕ್‌ ಡ್ಯಾಂಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ವಿವರಿಸುತ್ತಾರೆ.

ಊರ್ಡಿಗೆರೆ, ಗೂಳೂರು, ಮಸ್ಕಲ್, ಪಾಲಸಂದ್ರ, ಸೋರೇಕುಂಟೆ, ಹೊನ್ನುಡಿಕೆ, ಅರೆಗುಜ್ಜನಹಳ್ಳಿ, ಸೋಂದೇನಹಳ್ಳಿ ಪಂಚಾಯಿತಿ ಸೇರಿದಂತೆ ಅನೇಕ ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ದೇವರ ಅಮಾನಿಕೆರೆ, ನಾಗವಲ್ಲಿಯಲ್ಲಿ ರಾಜಗಾಲುವೆ ತೆರವು, ಸೇತುವೆ ನಿರ್ಮಾಣವನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೈಗೊಳ್ಳಲಾಗಿದೆ ಎಂದು ಶಾಸಕರು ವಿವರಿಸಿದರು.

‘ಕ್ಷೇತ್ರದಲ್ಲಿನ ದೊಡ್ಡ ದೊಡ್ಡ ಹಳ್ಳಗಳನ್ನು ಹತ್ತಿ ಇಳಿದು, ಎಲ್ಲೆಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡದಿರೆ ರೈತರಿಗೆ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಖುದ್ದು ಪರಿಶೀಲನೆ ನಡೆಸಲಾಯಿತು. ಓಡುವ ನೀರಿಗೆ ಅಡ್ಡ ಕಟ್ಟೆ ಕಟ್ಟಿ ಅದನ್ನು ಬಳಸಿಕೊಂಡು ರೈತರಿಗೆ ಹೇಗೆ ಅನುಕೂಲ ಮಾಡಿಕೊಡಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆ ನಡೆಸಿ ಬಳಿಕ ಕೈಗೊಂಡ ಕಾಮಗಾರಿ ನಿರೀಕ್ಷೆಯಂತೆ ರೈತರಿಗೆ ಪ್ರಯೋಜನವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT