ಬುಧವಾರ, ಡಿಸೆಂಬರ್ 11, 2019
23 °C

ಜನಾಕರ್ಷಿಸಿದ ಅಮೆಜಾನ್‌ ಮೀನಿನ ಜೋಡಿ..!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಜನಾಕರ್ಷಿಸಿದ ಅಮೆಜಾನ್‌ ಮೀನಿನ ಜೋಡಿ..!

ವಿಜಯಪುರ: ಉತ್ತರ ಅಮೆರಿಕದ ಅಮೆಜಾನ್ ಕೊಳ್ಳದ ಅಪರೂಪದ ಮೀನಿನ ತಳಿಯಿದು. ‘ಅಲಿಗೇಟರ್‌ ಗಾರ್‌’ ಹೆಸರಿನಲ್ಲಿ ಅಮೆಜಾನ್‌ ನದಿ ಪಾತ್ರದಲ್ಲಿ ಶತಮಾನಗಳಿಂದಲೂ ನೆಲೆ ಕಂಡುಕೊಂಡಿರುವ ಮೀನಿದು.

ಮೊಸಳೆಯ ಮೂತಿ, ಮೀನಿನ ದೇಹ ಹೊಂದಿರುವ ಈ ಅಲಿಗೇಟರ್‌ ಗಾರ್‌ ಎಲ್ಲರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇದನ್ನು ವೀಕ್ಷಿಸಲು ನಾವು ಇದೀಗ ಅಮೆಜಾನ್‌ ನದಿ ಪಾತ್ರಕ್ಕೆ ಹೋಗಬೇಕಿಲ್ಲ.

ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್ ಸಭಾಂಗಣಕ್ಕೆ ತೆರಳಿದರೆ ಸಾಕು. ಮೀನುಗಾರಿಕೆ ಇಲಾಖೆ, ಭೂತನಾಳದ ಮೀನುಗಾರಿಕೆ ಸಂಶೋಧನಾ ಮಾಹಿತಿ ಕೇಂದ್ರದ ವತಿಯಿಂದ ಏರ್ಪಡಿಸಿರುವ ಮತ್ಸ್ಯ ಪ್ರದರ್ಶನದಲ್ಲಿ ಈ ಮೀನಿನ ಜೋಡಿ ವೀಕ್ಷಿಸಬಹುದು.

ಈ ಮೀನು ಒಂದೂವರೆ ಕ್ವಿಂಟಲ್‌ನಿಂದ ಎರಡು ಕ್ವಿಂಟಲ್‌ವರೆಗೂ ತೂಗುತ್ತದೆ. ಇದರ ಕಿಮ್ಮತ್ತು ₹ 5 ಲಕ್ಷ. ಹಾಲಿ ಪ್ರದರ್ಶನದಲ್ಲಿರುವ ಮೀನಿನ ಜೋಡಿ ಬೆಲೆ ₹ 50,000ದಿಂದ 60,000.

ಇದೇ ಅಮೆಜಾನ್‌ ಕೊಳ್ಳದಲ್ಲಿ ವಾಸಿಸುವ ‘ಅರಾಫೈಮಾ’ ಎಂಬ ಮೀನು ಸಹ ಪ್ರದರ್ಶನದಲ್ಲಿದೆ. ಇದರ ಮೌಲ್ಯ ಹಾಲಿ ₹ 50,000 ಇದ್ದರೆ, ಎರಡು ಕ್ವಿಂಟಲ್‌ ತೂಗಿದ ಸಂದರ್ಭ ₹ 3 ಲಕ್ಷದ ಆಸುಪಾಸಿರಲಿದೆ ಎಂದು ಭೂತನಾಳ ಬಳಿಯ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ.ಎಸ್‌.ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮತ್ಸ್ಯ ಲೋಕ ಅನಾವರಣ...

ಆನ್‌ಲೈನ್‌ ಟ್ರೇಡಿಂಗ್‌ ಸೆಂಟರ್‌ನ ಸಭಾಂಗಣದೊಳಗೆ ಕಾಲಿಡುತ್ತಿದ್ದಂತೆ ಮತ್ಸ್ಯ ಲೋಕ ಪ್ರವೇಶಿಸಿದ ಅನುಭವ ದಕ್ಕುತ್ತದೆ. ಸಾಗರದಾಳದಲ್ಲೂ ಇಷ್ಟೊಂದು ನಮೂನೆಯ ಮೀನಿನ ತಳಿ ವೀಕ್ಷಿಸಲು ಕಷ್ಟಸಾಧ್ಯ.

ದೇಶ–ವಿದೇಶದ ವಿವಿಧ ತಳಿಯ ಮೀನುಗಳು ವೀಕ್ಷಣೆಗೆ ಇಲ್ಲಿ ಲಭ್ಯ. 55 ತಳಿಯ ಅಲಂಕಾರಿಕ ಮೀನುಗಳನ್ನು ಒಂದೇ ಸೂರಿನಡಿ ವೀಕ್ಷಿಸಬಹುದು. ವಾಸ್ತು ಮೀನು ಪ್ರದರ್ಶನಕ್ಕಿವೆ. ಇವುಗಳ ಮೌಲ್ಯ ₹ 50000ದಿಂದ ಹಿಡಿದು ₹ 10 ಲಕ್ಷದವರೆಗಿದೆ.

ವಾಸ್ತು ಮೀನು ಎಂದು ಕರೆಯಲ್ಪಡುವ ತಳಿಯ ಮೀನಿನ ದೇಹದ ಗಾತ್ರ, ಅದರ ಮೇಲೆ ಚೀನಿ ಭಾಷೆಯ ಸಂಖ್ಯೆಗಳು ಮೂಡಿದ್ದರೆ ಮೌಲ್ಯ ಹಲವು ಪಟ್ಟು ಹೆಚ್ಚಿರಲಿದೆ ಎಂದು ವಿಜಯಕುಮಾರ ಹೇಳಿದರು.

ಕೆಂಪು ಟೋಪಿಯ ಮೀನು...

ಬೆಳ್ಳಿಯ ದೇಹ ಬಣ್ಣ ಹೊಂದಿ, ಸೌಂದರ್ಯದ ಖನಿಯಂತೆ ಕಾಣುವ ಈ ಮೀನು ತಲೆಗೆ ಕೆಂಪು ಟೋಪಿ ಧರಿಸಿದಂತೆ ಗೋಚರಿಸುತ್ತದೆ. ರೆಡ್ಕ್ಯಾಪ್ ಹೆಡ್‌ಗೋಲ್ಡ್ ಇದರ ನಾಮಾಂಕಿತ.

ತ್ರಿಕೋನಾಕೃತಿಯ ದೇಹ ರಚನೆ, ಬೆಳ್ಳಿಯ ಆಭರಣದಂತೆ ತೋರುವ ‘ಸೀ ಎಂಜೆಲ್’, ತಲೆಯ ಮೇಲೆ ಚೆಂಡು ಇರಿಸಿದಂತೆ ತೋರುವ ‘ಫ್ಲವರ್‌ ಹಾರ್ನ್‌’ ಬಾಳೆಹಣ್ಣಿನ ಬಣ್ಣದಂತೆ ಕಂಗೊಳಿಸುತ್ತಿದ್ದ ಬನಾನಾ ಯಲ್ಲೋ ಕಲರ್ ಫಿಷ್ ಸಹ ಪ್ರದರ್ಶನದಲ್ಲಿದ್ದು, ಗಮನ ಸೆಳೆದವು.

ಹೊದಿಕೆಯಂತಹ ದೇಹ ರಚನೆ ಹೊಂದಿದ ಉದ್ದ ಬಾಲದ ಡೈಮಂಡ್ ಫಿಷ್, ರೆಡ್ ಪ್ಯಾರೇಟ್, ಬ್ಲ್ಯಾಕ್ ಟೈಗರ್, ಗೋಲ್ಡ್ ಫಿಷ್, ಗಪ್ಪಿ, ಸಲಮಾಂಡರ್, ವೆನಿಲ್ಲಾ ಕಾರ್ಪ್‌, ಗ್ರೀನ್ ಟೆರರ್, ಗೌರಾಮಿ, ಬ್ಲ್ಯಾಕ್, ವೈಟ್ ಆ್ಯಂಡ್ ಮೌಲಿ, ಬಿಗ್‌ಸೈಜ್ ಅಲ್ಬಿನೋ ಟೈಗರ್... ಮೊದಲಾದ ತಳಿಯ ಮೀನುಗಳು ಪುಟ್ಟ ಅಕ್ವೇರಿಯಂಗಳಲ್ಲಿ ಗಮನ ಸೆಳೆಯುತ್ತಿವೆ.

ಮೀನುಗಾರಿಕೆಗೆ ಸಂಬಂಧಿಸಿದಂತೆ ವಿಷಯಾಧಾರಿತ ವೈಜ್ಞಾನಿಕ ಮಾಹಿತಿಗಳು, ಜಲಕೃಷಿಯಲ್ಲಿ ನವೀನ ತಂತ್ರಜ್ಞಾನದ ಪರಿಚಯ, ಮೌಲ್ಯವರ್ಧಿತ ಮೀನು ಉತ್ಪನ್ನಗಳ ತಯಾರಿಕೆ ಹಾಗೂ ಪ್ರಾತ್ಯಕ್ಷಿತೆ, ರೈತರ ಕೃಷಿ ಹೊಂಡಗಳಲ್ಲಿ ಸಾಕಣೆಗೆ ಸೂಕ್ತವಾದ ಮೀನಿನ ತಳಿಗಳ ಪರಿಚಯ, ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಸುಧಾರಿತ ಅಮೂರ್ ಸಾಮಾನ್ಯ ಗೆಂಡೆ ಮೀನು ತಳಿಯ ಪರಿಚಯವೂ ಸಹ ಪ್ರದರ್ಶನದಲ್ಲಿದ್ದು, ಆಸಕ್ತರಿಗೆ ಮೀನುಗಾರಿಕೆಯ ಮಾಹಿತಿ ಉಣಬಡಿಸಿತು.

* * 

ವಿಶೇಷ ಅನುಭವ ದೊರಕಿತು. ಮಕ್ಕಳು ಮೀನುಗಳನ್ನು ನೋಡಿ ಖುಷಿಪಟ್ಟರು. ಒಂದೇ ಸೂರಿನಡಿ ಹಲ ತಳಿಯ ಮೀನು ವೀಕ್ಷಿಸುವ ಅವಕಾಶ ದೊರಕಿದೆ. ಆಸಕ್ತರಿಗೆ ಮಾಹಿತಿಯೂ ಲಭ್ಯವಾಯ್ತು

ವಿಜಯಕುಮಾರ ಅಥರ್ಗಾ, ವೀಕ್ಷಕ

ಪ್ರತಿಕ್ರಿಯಿಸಿ (+)