ಸೋಮವಾರ, ಡಿಸೆಂಬರ್ 9, 2019
25 °C

‘ಕೈ’ ಸರ್ವೆಗೆ ಮೊರೆ; ಬಿಜೆಪಿಯಲ್ಲಿ ಬೇಗುದಿ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

‘ಕೈ’ ಸರ್ವೆಗೆ ಮೊರೆ; ಬಿಜೆಪಿಯಲ್ಲಿ ಬೇಗುದಿ

ವಿಜಯಪುರ: ದಶಕದ ಹಿಂದೆ ನೂತನವಾಗಿ ರಚನೆಯಾದ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ಈ ಹಿಂದಿನ ಎರಡೂ ಚುನಾವಣೆಯಲ್ಲಿ ‘ಕೈ’ ವಶವಾಗಿದೆ. ಹ್ಯಾಟ್ರಿಕ್‌ ಕನಸಿನೊಂದಿಗೆ ‘ಕೈ’ ಪಡೆ ಅಭ್ಯರ್ಥಿಯ ಆಯ್ಕೆಗೆ ಸಮೀಕ್ಷೆಯ ಮೊರೆ ಹೊಕ್ಕಿದೆ.

ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎ.ಎಸ್‌.ಪಾಟೀಲ ನಡಹಳ್ಳಿ ಇದೀಗ ‘ಕೈ’ ಬಿಟ್ಟು ತೆನೆ ಹೊತ್ತಿದ್ದು, ತಮ್ಮ ಪತ್ನಿಯನ್ನು ಕಣಕ್ಕಿಳಿಸುವ ಮೂಲಕ, ತಮ್ಮ ಕುಟುಂಬವೇ ಮೂರನೇ ಅವಧಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸಿದ್ದಾರೆ. ಹಿಂದಿನ ಎರಡು ಚುನಾವಣೆಗಳಲ್ಲಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದ, ಬಿಜೆಪಿ ಈ ಬಾರಿ ಕ್ಷೇತ್ರದಲ್ಲಿ ‘ಕಮಲ’ ಅರಳಿಸಲು ಕಸರತ್ತು ನಡೆಸಿದೆ.

ಅಲ್ಪಸಂಖ್ಯಾತರ ಮತಗಳು ಇಲ್ಲಿ ನಿರ್ಣಾಯಕ. ದಲಿತರು, ಹಿಂದುಳಿದ ವರ್ಗದವರು ಯಾರಿಗೆ ಬೆಂಬಲಿಸುತ್ತಾರೆ ಅವರ ಗೆಲುವು ಕಟ್ಟಿಟ್ಟ ಬುತ್ತಿ. ಅಭ್ಯರ್ಥಿ ಘೋಷಣೆಗೂ ಮುನ್ನ ಆಕಾಂಕ್ಷಿಗಳು ಈ ನಿಟ್ಟಿನಲ್ಲಿ ತಮ್ಮ ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಜೆಡಿಎಸ್‌... 

ಕ್ಷೇತ್ರದ ಹಾಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು, ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ದೇವರಹಿಪ್ಪರಗಿಯಲ್ಲಿ ಹ್ಯಾಟ್ರಿಕ್‌ ಗೆಲುವಿಗಾಗಿ ರಣತಂತ್ರ ರೂಪಿಸಿ, ವರ್ಷದಿಂದ ಎಚ್‌.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ಮಾತನ್ನೇ ಎಲ್ಲೆಡೆ ಹೇಳಿಕೊಂಡಿದ್ದರು.

ಟಿಕೆಟ್‌ ಘೋಷಣೆ ಸಂದರ್ಭ ನಡಹಳ್ಳಿ ತನ್ನ ಸಹೋದರ ಶಾಂತನಗೌಡ ಎಸ್‌.ಪಾಟೀಲರನ್ನು ಜೆಡಿಎಸ್ ಹುರಿಯಾಳಾಗಿಸುತ್ತಾರೆ ಎಂಬ ನಿರೀಕ್ಷೆ ಕ್ಷೇತ್ರದ ಮತದಾರರದ್ದಾಗಿತ್ತು. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ತಮ್ಮ ಪತ್ನಿ ಮಹಾದೇವಿಯನ್ನು ಕಣಕ್ಕಿಳಿಸಲು ಸಕಲ ತಯಾರಿ ನಡೆಸಿದ್ದಾರೆ. ಇದು ನಡೆದರೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಸತಿ–ಪತಿಯ ಸ್ಪರ್ಧೆಗೆ 2018ರ ವಿಧಾನಸಭಾ ಚುನಾವಣೆ ಸಾಕ್ಷಿಯಾಗಲಿದೆ. ಪಕ್ಷದ ಮುಖಂಡ ಎಸ್‌.ವಿ.ಪಾಟೀಲ ಸಹ ಆಕಾಂಕ್ಷಿ.

ಬಿಜೆಪಿಯಲ್ಲಿ ತಿಕ್ಕಾಟ

ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಚಿವ ಸಾಸನೂರ ಪುತ್ರ ಸೋಮನಗೌಡ ಬಿ.ಪಾಟೀಲ (ಸಾಸನೂರ), ಮಾಜಿ ಶಾಸಕ ಕುಮಾರಗೌಡ ಮೊಮ್ಮಗ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ನಡುವೆ ತೀವ್ರ ಪೈಪೋಟಿ ನಡೆದಿದೆ.

ಸೋಮನಗೌಡ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 8096 ಮತಗಳ ಅಂತರದಿಂದ ಸೋತಿದ್ದು, ಇದೀಗ ಮತ್ತೆ ಹುರಿಯಾಳಾಗುವ ತಯಾರಿ ನಡೆಸಿದ್ದಾರೆ. ಅನುಕಂಪದ ಅಲೆ ಗಿಟ್ಟಿಸಿಕೊಳ್ಳುವ ಯತ್ನದಲ್ಲಿ ತಲ್ಲೀನರಾಗಿದ್ದಾರೆ.

ರಾಜುಗೌಡ ಪಾಟೀಲ ಸಹ ಕೆಜೆಪಿಯಿಂದ ಸ್ಪರ್ಧಿಸಿದ್ದು, ಬಿಎಸ್‌ವೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಟಿಕೆಟ್‌ ಪೈಪೋಟಿ ಬಿಜೆಪಿ–ಕೆಜೆಪಿ ಎಂದೇ ನಡೆದಿದೆ. ಈಚೆಗೆ ಡಾ.ಬಿ.ಎಸ್.ಪಾಟೀಲ ನಾಗರಾಳಹುಲಿ, ಕಾಶೀನಾಥ ಮಸಬಿನಾಳ ಹೆಸರು ಚಾಲ್ತಿಯಲ್ಲಿವೆ.

ಕಾಂಗ್ರೆಸ್‌...

ಹಾಲಿ ಶಾಸಕ ನಡಹಳ್ಳಿ ಸ್ವಪಕ್ಷೀಯ ಸರ್ಕಾರದ ವಿರುದ್ಧವೇ ಧ್ವನಿ ಎತ್ತುತ್ತಿದ್ದಂತೆ, ಕಾಂಗ್ರೆಸ್‌ ಚುನಾವಣೆಗೆ ಹುರಿಯಾಳು ಸಿದ್ಧಗೊಳಿಸುವ ಕಸರತ್ತು ನಡೆಸಿತ್ತು. ಆಗ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ನಿಂಗನಗೌಡ ಪಾಟೀಲ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು. ಇದರ ಜತೆಗೆ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವಕೀಲ ಸುಭಾಸ ಛಾಯಾಗೋಳ ಹೆಸರು ಎಲ್ಲೆಡೆ ಹರಿದಾಡಿತ್ತು.

ನಂತರದ ದಿನಗಳಲ್ಲಿ ಉದ್ಯಮಿ ಆನಂದಗೌಡ ದೊಡ್ಡಮನಿ ತಮ್ಮ ಎಬಿಡಿ ಫೌಂಡೇಷನ್‌ ಮೂಲಕ ಸದ್ದು ಮಾಡಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ ಸಹ ಟಿಕೆಟ್‌ ಆಕಾಂಕ್ಷಿ. ಚುನಾವಣೆ ಹೊಸ್ತಿಲಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಉಮೇಶ ಕೋಳಕೂರ ಸಹ ಟಿಕೆಟ್‌ಗೆ ಯತ್ನಿಸಿದ್ದು, ‘ಕೈ’ ಪಾಳೆಯದಲ್ಲಿ ಲಾಬಿ ಬಿರುಸುಗೊಂಡಿದೆ.

ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊಣೆಯನ್ನು ಸಚಿವ ಎಂ.ಬಿ.ಪಾಟೀಲ, ಶಾಸಕ ಸಿ.ಎಸ್‌.ನಾಡಗೌಡರ ಹೆಗಲಿಗೆ ಕೆಪಿಸಿಸಿ ಹೊರಿಸಿದೆ. ಸುಭಾಸ ಛಾಯಾಗೋಳ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ನಿಂಗನಗೌಡ ಪಾಟೀಲ, ಉಮೇಶ ಕೋಳಕೂರ ಸಚಿವ ಎಂ.ಬಿ.ಪಾಟೀಲ ಬೆಂಬಲಿಗರು. ಸಚಿವರ ಸಮ್ಮತಿಯಿಂದಲೇ ಉಮೇಶ ಸ್ಪರ್ಧೆಗೆ ಅಣಿಯಾಗಿದ್ದಾರೆ ಎಂಬುದು ಮತಕ್ಷೇತ್ರ ವ್ಯಾಪ್ತಿಯಲ್ಲಿ ಕೇಳಿ ಬಂದರೆ, ಸಚಿವರ ಆಪ್ತ ವಲಯದಲ್ಲೇ ಇದಕ್ಕೆ ಅಪಸ್ವರವೂ ವ್ಯಕ್ತವಾಗಿದೆ. ನಡಹಳ್ಳಿಗೆ ಟಾಂಗ್‌ ನೀಡಲು ಸಚಿವ ಪಾಟೀಲ ಅವರು ಪತ್ನಿ ಆಶಾ ಅವರನ್ನೇ ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಆನಂದ ದೊಡಮನಿ ಸಚಿವ ವಿನಯ ಕುಲಕರ್ಣಿ ಮೂಲಕ ಟಿಕೆಟ್‌ಗೆ ಅತೀವ ಯತ್ನ ನಡೆಸಿದರೆ, ಸುಣಗಾರ ತಮ್ಮ ರಾಜಕೀಯ ಗುರು ಖರ್ಗೆ ಮೊರೆ ಹೊಕ್ಕಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ ಸಹ ಟಿಕೆಟ್‌ಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

* * 

ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ದೀಪದ ಕೆಳಗೆ ಕತ್ತಲು ಎಂಬಂತಾಗಿದೆ. ಸಮಗ್ರ ಅಭಿವೃದ್ಧಿಯ ಕಲ್ಪನೆ ಹೊಂದಿರುವ ವ್ಯಕ್ತಿ ಆಯ್ಕೆಗೆ ಒತ್ತು ನೀಡಬೇಕಿದೆ

ಸಿದ್ದಲಿಂಗಪ್ಪ ಬುದ್ನಿ, ವ್ಯಾಪಾರಿ

ಪ್ರತಿಕ್ರಿಯಿಸಿ (+)