ಸೋಮವಾರ, ಡಿಸೆಂಬರ್ 9, 2019
21 °C

‘ಕುರಿ ಮಾರುಕಟ್ಟೆ ಹಣ ದುರ್ಬಳಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕುರಿ ಮಾರುಕಟ್ಟೆ ಹಣ ದುರ್ಬಳಕೆ’

ಶಹಾಪುರ: ಇಲ್ಲಿನ ಕನ್ಯಾಕೊಳ್ಳುರ ರಸ್ತೆಯ ಎಪಿಎಂಸಿ ಜಾಗದಲ್ಲಿ ಕುರಿ ಮಾರಾಟಕ್ಕಾಗಿ ಮಾರುಕಟ್ಟೆ ಪ್ರಾಂಗಣ ನಿರ್ಮಿಸುವ ಉದ್ದೇಶದಿಂದ ರಾಜ್ಯ ಕುರಿ ಮತ್ತು ಉಣ್ಣೆ ನಿಗಮದಿಂದ ₹50 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಎಪಿಎಂಸಿ ಕಾರ್ಯದರ್ಶಿ ಹಾಗೂ ಗುತ್ತಿಗೆದಾರ ಶಾಮೀಲಾಗಿ ಕಾಮಗಾರಿಯನ್ನು ಅರೆಬರೆ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

2016–17ನೇ ಸಾಲಿನಲ್ಲಿ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿದ್ದ ಮತ್ತು ಪ್ರಸ್ತುತ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳದ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಪಂಡಿತರಾವ್‌ ಚಿದ್ರಿ ಈಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಂಶ ಬೆಳಕಿಗೆ ಬಂದಿದೆ.

ಅಲ್ಲದೆ ಅವರ ಜೊತೆಯಲ್ಲಿ ಇದ್ದ ಎಪಿಎಂಸಿ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಂಜುನಾಥ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ಉಪ ವಿಭಾಗಾಧಿಕಾರಿ ಮಂಜುನಾಥ ಅವರು, ‘ಯಾದಗಿರಿಗೆ ಬಂದು 10 ದಿನವಾಗಿದೆ. ಹಿಂದೆ ಯಾರು ನಿರ್ಮಿಸಿದ್ದಾರೆ ಎಂಬುವುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲಾಗುವುದು’ ಎಂದು ಸಮಜಾಯಿಸಿ ನೀಡಿದರು.

ಹಿನ್ನೆಲೆ: ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ಮಾತನಾಡಿ, ‘ದಲ್ಲಾಳಿಗಳ ಹಾವಳಿ ತಪ್ಪಿಸಲು ಹಾಗೂ ಮಾರಾಟದಲ್ಲಿ ಮೋಸ ಹೋಗುವುದನ್ನು ತಡೆಯಲು, ಕುರಿ ಸಾಕಾಣಿಕೆ ಮಾಡಿದ ಕುರಿಗಾರರಿಗೆ ಸೂಕ್ತ ನ್ಯಾಯ ಹಾಗೂ ಬೆಲೆ ಸಿಗಲಿ ಎಂಬ ಉದ್ದೇಶದಿಂದ 2016–17ನೇ ಸಾಲಿನಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ನನ್ನ ಅಧಿಕಾರಾವಧಿಯಲ್ಲಿ ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಅವರ ಖಾತೆಗೆ ₹50 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು’ ಎಂದು ತಿಳಿಸಿದರು.

‘ಅದರಂತೆ ಎಪಿಎಂಸಿ ಕಾರ್ಯದರ್ಶಿ ಅವರು ಶಹಾಪುರದ ಕನ್ಯಾಕೊಳ್ಳೂರ ರಸ್ತೆಯ ವಿಶಾಲವಾದ ಎಪಿಎಂಸಿ ಜಾಗದಲ್ಲಿ ಕುರಿ ನಿಲುಗಡೆ ಶೆಡ್, ಕುರಿ ಅಳತೆ ಮಾಡುವ ಯಂತ್ರ, ಕುಡಿಯುವ ನೀರು, ಕುರಿ ವಿಶ್ರಾಂತಿಗೆ ಜಾಗ, ಮಾರಾಟ ಹಾಗೂ ಖರೀದಿ ಮಾಡಿದ ಬಗ್ಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಕಂಪ್ಯೂಟರ್ ಖರೀದಿಗೆ ಹೀಗೆ ₹50 ಲಕ್ಷ ಸದ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು’ ಎಂದು ವಿವರಿಸಿದರು.

‘ಶಹಾಪುರ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆ ಆಯ್ಕೆ ಬಗ್ಗೆ ಕಲಬುರ್ಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಪ್ರಕರಣ ಇತ್ಯರ್ಥವಾಗಿಲ್ಲ. ಎಪಿಎಂಸಿಯ ಆಡಳಿತಾಧಿಕಾರಿಯಾಗಿ ಉಪವಿಭಾಗಾಧಿಕಾರಿ ನೇಮಕವಾಗಿದ್ದು, ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂದಿನ ಎಪಿಎಂಸಿ ಆಡಳಿತಾಧಿಕಾರಿ ಡಾ.ಜಗದೀಶ ನಾಯಕ ಇದ್ದರು. ಅವರು ವರ್ಗಾವಣೆಯಾಗಿದ್ದು ಈಗ ಮಂಜುನಾಥ ಅವರು ಬಂದಿದ್ದಾರೆ. ಹಿರಿಯ ಅಧಿಕಾರಿ ಅಕ್ರಮದಲ್ಲಿ ಶಾಮೀಲಾಗಿದ್ದು ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಸಿಪಿಐ (ಎಂ) ಜಿಲ್ಲಾ ಸಂಘಟನಾ ಕಾರ್ಯದರ್ಶಿ ದಾವಲಸಾಬ್ ನದಾಫ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಸ್ಪಷ್ಟನೆ: ‘ಕಾಮಗಾರಿಯನ್ನು ನಿರ್ವಹಿಸ ಲಾಗಿದೆ. ಬಯಲು ಪ್ರದೇಶವಾಗಿದ್ದರಿಂದ ಸೂಕ್ತ ರಕ್ಷಣೆ ಇಲ್ಲದ ಕಾರಣ ನಿರ್ಮಿಸಿದ ಕೌಂಟರ್‌ನ ಗಾಜು ಒಡೆದು ಹಾಕಿದ್ದಾರೆ. ಖರೀದಿಸಲಾದ ಕಂಪ್ಯೂಟರ್ ಹಾಗೂ ತೂಕದ ಯಂತ್ರ ನಮ್ಮ ಕಚೇರಿಯಲ್ಲಿ ಇಟ್ಟಿದ್ದೇವೆ. ಕಟ್ಟಡ ಸಂರಕ್ಷಣೆಗಾಗಿ ತಾತ್ಕಾಲಿಕವಾಗಿ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುತ್ತಲೂ ರಕ್ಷಣೆಗೆ ಆವರಣ ಗೋಡೆ ನಿರ್ಮಿಸುವುದು ಅಗತ್ಯವಾಗಿದೆ’ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘₹49 ಲಕ್ಷ ಪಡೆದು ₹10 ಲಕ್ಷ ಖರ್ಚು’

‘ಕುರಿ ಮಾರಾಟ ಮಾಡಲು ಬಂದ ಪ್ರತಿ ಕುರಿಗೆ ₹5 ಪಡೆದುಕೊಳ್ಳಬೇಕು. ಅದರಲ್ಲಿ ₹3 ಎಪಿಎಂಸಿ ಪಡೆಯಬೇಕು. ಇನ್ನುಳಿದ ₹2ಯನ್ನು ಕುರಿಗಾರರ ಸಹಕಾರ ಸಂಘ ಪಡೆದುಕೊಳ್ಳಬೇಕು ಎನ್ನುವ ಉದ್ದೇಶವಿತ್ತು. ಆದರೆ, ನಿರ್ಮಿಸಲಾದ ಕುರಿ ಮಾರುಕಟ್ಟೆ ಸ್ಥಳಕ್ಕೆ ಭೇಟಿ ನೀಡಿದಾಗ, ಕಳಪೆಮಟ್ಟದ ಕಬ್ಬಿಣದ ರಾಡ್ ಬಳಸಿ ಅರೆಬರೆಯಾಗಿ ಶೆಡ್ ನಿರ್ಮಿಸಲಾಗಿದೆ. ಕುಡಿಯುವ ನೀರಿಗಾಗಿ ಬೊರ್‌ವೆಲ್ ಕೊರೆಸಿಲ್ಲ. ವಿದ್ಯುತ್ ಸಂಪರ್ಕವಿಲ್ಲ. ಪ್ರಾಂಗಣ ಉದ್ಘಾಟನೆಗೊಂಡಿಲ್ಲ. ಕುರಿ ತೂಕ ಮಾಡುವ ಯಂತ್ರದ ಕಟ್ಟೆ ಆಗಲೇ ಕಿತ್ತುಹೋಗಿದೆ ಎಂದರೆ ಸುಮಾರು ₹10 ಲಕ್ಷ ವೆಚ್ಚವಾಗಿರಬಹುದು. ಆದರೆ ಈಗಾಗಲೇ ₹49 ಲಕ್ಷ ಹಣ ಪಡೆದುಕೊಂಡಿದ್ದಾರೆ’ ಎಂದು ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಪಂಡಿತರಾವ್‌ ಚಿದ್ರಿ ಆರೋಪಿಸಿದರು.

* * 

ಕುರಿ ಮಾರುಕಟ್ಟೆ ಕೆಲಸ ನಿರ್ವಹಿಸದೆ ಹಣ ದುರ್ಬಳಕೆ ಮಾಡಿಕೊಂಡ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು.

ಮಂಜುನಾಥ ಎಪಿಎಂಸಿ ಆಡಳಿತಾಧಿಕಾರಿ

ಪ್ರತಿಕ್ರಿಯಿಸಿ (+)