ಮಂಗಳವಾರ, ಡಿಸೆಂಬರ್ 10, 2019
21 °C

ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧ ಕೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯರ ಸಲಹೆ ಚೀಟಿ ಇಲ್ಲದೆ ಔಷಧ ಕೊಡಬೇಡಿ

ಕಲಬುರ್ಗಿ: ‘ವೈದ್ಯರ ಸಲಹೆ ಚೀಟಿ ಹಾಗೂ ವೈದ್ಯಕೀಯ ತಪಾಸಣೆಗೆ ಒಳಗಾಗದೇ ನೇರವಾಗಿ ಔಷಧಿ ಅಂಗಡಿಗೆ ಬರುವವರಿಗೆ ಫಾರ್ಮಸಿಸ್ಟ್‌ಗಳು ಔಷಧಿ, ಮಾತ್ರೆಗಳನ್ನು ಮಾರಾಟ ಮಾಡಬಾರದು’  ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ್ ಮನವಿ ಮಾಡಿದರು.

ಕರ್ನಾಟಕ ಸರ್ಕಾರಿ ಫಾರ್ಮಸಿಸ್ಟ್‌ ಸಂಘವು ಇಲ್ಲಿನ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಸರ್ಕಾರಿ ಫಾರ್ಮಸಿಸ್ಟ್‌ ಪ್ರತಿನಿಧಿಗಳ ಸಭೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತದಲ್ಲಿ ಸುಲಭವಾಗಿ ಸಿಗುವಷ್ಟು ಔಷಧಿ, ಮಾತ್ರೆಗಳು ಪ್ರಪಂಚದ ಬೇರೆ ಯಾವುದೇ ರಾಷ್ಟ್ರದಲ್ಲಿ ಲಭಿಸುವುದಿಲ್ಲ. ಇಲ್ಲಿ ದಿನದ 24ಗಂಟೆಯೂ ವೈದ್ಯರ ಶಿಫಾರಸು ಇಲ್ಲದೆ ಔಷಧಿ ನೀಡಲಾಗುತ್ತದೆ. ಆದರೆ, ಪಾಶ್ಚಿಮಾತ್ಯ ದೇಶದಲ್ಲಿ ವೈದ್ಯರ ಶಿಫಾರಸು ಚೀಟಿ ತಂದರೆ ಮಾತ್ರ ಔಷಧಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಮನಬಂದಂತೆ ಔಷಧಿ ನೀಡುವುದಿಂದ ರೋಗದ ನಿಖರ ಕಾರಣ ಗೊತ್ತಾಗುವುದಿಲ್ಲ. ಇದರಿಂದ ಔಷಧಿಯು ರೋಗಿಯ ಮೇಲೆ ಅಡ್ಡ ಪರಿಣಾಮ ಉಂಟಾಗಬಹುದು. ಸ್ವಲ್ಪ ಹೊತ್ತು ತಡವಾದರೂ ವೈದ್ಯರ ಸಲಹೆಯೊಂದಿಗೆ ಬರುವವರಿಗೆ ಔಷಧಿ ನೀಡಬೇಕು. ಜನರಲ್ಲಿಯೂ ನಾನು ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂಬ ಮನೋಭಾವ ಮೂಡಬೇಕಾಗಿದೆ’ ಎಂದು ಹೇಳಿದರು.

‘ಶುದ್ಧವಾದ ನೀರು, ಗಾಳಿ ಸೇವನೆಯಿಂದ ಅನೇಕ ಕಾಯಿಲೆಗಳು ವಾಸಿಯಾಗುತ್ತವೆ. ಆದರೆ, ಸಣ್ಣಪುಟ್ಟ ಕಾಯಿಲೆಗಳಿಗೂ ಜನ ಔಷಧಿ ತೆಗೆದುಕೊಳ್ಳುತ್ತಾರೆ. ಅಂಥವರಿಗೆ ಔಷಧಿ ಅಂಗಡಿಯವರೇ ಅವರ ರೋಗದ ಮದ್ದು ನೀಡುತ್ತಾರೆ. ಜನ ಅಲೋಪಥಿಗಿಂತ ಆಯುರ್ವೇದ ಔಷಧಿಗಳನ್ನು ಬಳಸಿದರೆ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.

‘ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ದೊಡ್ಡದಿದೆ. ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಕಡಿಮೆ ಬೆಲೆಯ ಹಾಗೂ ಅಡ್ಡಪರಿಣಾಮ ಇಲ್ಲದ ಔಷಧಿಗಳನ್ನು ತಯಾರಿಸಬೇಕು’ ಎಂದು ಹೇಳಿದರು.

ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ರವಿ ರಾಠೋಡ ಮಾತನಾಡಿ, ‘ಭಾರತದಲ್ಲಿ ಔಷಧ ವಿಜ್ಞಾನ ಕ್ಷೇತ್ರವೂ ಸಾಕಷ್ಟು ವಿಸ್ತಾರಗೊಂಡಿದೆ. ಔಷಧಿಯ ವಹಿವಾಟು ಪ್ರಮುಖ ಸ್ಥಾನ ಪಡೆದಿದೆ. ಈ ಕ್ಷೇತ್ರದಲ್ಲಿ ತೊಡಗಿದವರು ಸಂಘ ರಚಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಈ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಡಾ.ನಾ. ಸೋಮೇಶ್ವರ್ ಮಾತನಾಡಿ, ‘ಅಡ್ಡ ಪರಿಣಾಮ ಇಲ್ಲದ ಯಾವುದೇ ಔಷಧಿಗಳು ಇಲ್ಲ. ಪ್ರತಿಯೊಂದು ಔಷಧಿಯೂ ರೋಗಿಯ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಬಲ್ಲದು. ಈ ಸಂಗತಿ ಸಾಕಷ್ಟು ಜನರಿಗೆ ಗೊತ್ತಿರುವುದಿಲ್ಲ. ಇದರಿಂದ ವೈದ್ಯರು ಸಾಕಷ್ಟು ಬಿಕ್ಕಟ್ಟು ಎದುರಿಸಬೇಕಾಗುತ್ತದೆ’ ಎಂದರು.

ಎಚ್‌ಕೆಇ ಫಾರ್ಮಸಿ ಕಾಲೇಜಿನ ಮುಖ್ಯಸ್ಥ ಡಾ.ನಿತಿನ್‌ ಮಧುರಕರ್, ಕರ್ನಾಟಕ ಸರ್ಕಾರಿ ಫಾರ್ಮಸಿಸ್ಟ್‌ ಸಂಘದ ಅಧ್ಯಕ್ಷ ಬಿ.ಎಸ್‌.ದೇಸಾಯಿ, ಡಾ.ಎಂ.ಡಿ.ಕರವೇಕರ್, ಎನ್.ಶ್ರೀನಿವಾಸ, ಎಚ್‌.ಎಸ್‌.ಗಿರೀಶ, ವೈ.ಜಿ.ಶಶಿಧರ್ ಇದ್ದರು.

* * 

ಮೊಬೈಲ್‌ ಬಳಕೆ ಹಾಗೂ ಔಷಧ ಸೇವನೆಗೆ ಮನುಷ್ಯ ಅಂಟಿಕೊಂಡಿದ್ದಾನೆ. ಇವರೆಡು ಇಲ್ಲದೆ ಬದುಕಲಾರ. ಆದರೆ, ಅವು ಅತಿಯಾಗದಂತೆ ನೋಡಿಕೊಳ್ಳಬೇಕು. ಪ್ರೊ.ಎಸ್‌.ಆರ್‌.ನಿರಂಜನ್ ಕುಲಪತಿ, ಗುಲಬರ್ಗಾ ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)