ಬುಧವಾರ, ಡಿಸೆಂಬರ್ 11, 2019
22 °C

ಅನಾಥ ವಾಹನ: ನಾಗರಿಕರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಾಥ ವಾಹನ: ನಾಗರಿಕರ ಅಸಮಾಧಾನ

ಕಾರವಾರ: ನಗರದ ಹಲವಾರು ರಸ್ತೆಗಳ ಬದಿಯಲ್ಲಿ ಹತ್ತಾರು ವಾಹನಗಳು ಅದೆಷ್ಟೋ ತಿಂಗಳಿನಿಂದ ಅನಾಥವಾಗಿ ನಿಂತಿವೆ. ಕಾಜುಬಾಗ್‌ನ ಪಶು ವೈದ್ಯಕೀಯ ಆಸ್ಪತ್ರೆಯ ಸಮೀಪ, ಮಹಾಸತಿ ಕಲ್ಯಾಣ ಮಂಟಪದ ಪಕ್ಕದಲ್ಲಿ, ಸೇಂಟ್ ಜೋಸೆಫ್ ಪ್ರೌಢಶಾಲೆಯ ಪಕ್ಕದಲ್ಲಿ, ಗ್ರೀನ್‌ ಸ್ಟ್ರೀಟ್‌ನ ಸುಭಾಶ್ ವೃತ್ತದ ಪಕ್ಕದಲ್ಲಿ ಈ ರೀತಿ ಹಲವಾರು ವಾಹನಗಳು ಮಾಲೀಕರ ನಿರೀಕ್ಷೆಯಲ್ಲಿವೆ.

ಅಕ್ರಮ ಚಟುವಟಿಕೆಗಳಿಗೆ ಬಳಸಿದ ವಾಹನಗಳನ್ನು ಇಲ್ಲಿ ತಂದು ನಿಲ್ಲಿಸಿ ಹೋಗುತ್ತಿದ್ದಾರೆ ಎಂಬ ಅನುಮಾನವಿದೆ. ಇವುಗಳಲ್ಲಿ ಹಲವು ಸ್ಥಳೀಯ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿವೆ. ಕೆಲವು ಗೋವಾ ರಾಜ್ಯದ ನೋಂದಣಿ ಸಂಖ್ಯೆ ಹೊಂದಿವೆ. ಮತ್ತೆ ಕೆಲವು ವಾಹನಗಳಲ್ಲಿ ನೋಂದಣಿ ಸಂಖ್ಯೆಯೇ ಇಲ್ಲ. ಇವುಗಳ ಮಾಲೀಕರು ಯಾರು, ಯಾಕೆ ಈ ರೀತಿ ನಿಲ್ಲಿಸಿ ಹೋಗಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ನಾಗರಿಕ ದಿನೇಶ್ ಗವಾಸ್ಕರ್ ಹೇಳುತ್ತಾರೆ.

ನಗರವು ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಲ್ಲೇ ಇದೆ. ಇಲ್ಲಿ ಹಗಲು, ರಾತ್ರಿ ವಾಹನಗಳ ಓಡಾಟವಿರುತ್ತದೆ. ಯಾರ‍್ಯಾರೋ ವಾಹನ ತಂದು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುತ್ತಾರೆ. ದೂಳು ಅಂಟಿ, ತುಕ್ಕು ಹಿಡಿದು, ಬಣ್ಣ ಮಾಸಿ, ಬಿಡಿಭಾಗಗಳೆಲ್ಲ ಕಳಚಿದರೂ ಅದನ್ನು ಯಾರೂ ಕೊಂಡೊಯ್ಯುವುದಿಲ್ಲ. ನಗರದಲ್ಲಿ ಈಗ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾದ ಹಲವು ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಈ ರೀತಿಯ ಸಣ್ಣ ವಿಚಾರಗಳಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ಅಧಿಕಾರಿಗಳಿಗೆ ಯಾಕೆ ಹೊಳೆಯುತ್ತಿಲ್ಲ ಎಂದು ಅವರು ಪ್ರಶ್ನಿಸುತ್ತಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದ್ದು, ಪಾರ್ಕಿಂಗ್‌ಗೆ ಕೂಡ ಜಾಗ ಜಾಸ್ತಿ ಬೇಕಾಗುತ್ತದೆ. ಈ ರೀತಿ ಅಲ್ಲಲ್ಲಿ ದಿಕ್ಕು ದೆಸೆಯಿಲ್ಲದೆ ವಾಹನಗಳನ್ನು ಬಿಟ್ಟುಹೋಗುವುದು ಸರಿಯಲ್ಲ. ಇಂತಹ ವಾಹನಗಳನ್ನು ಬಳಸಿ ಮುಂದೊಂದು ದಿನ ವಿಧ್ವಂಸಕ ಕೃತ್ಯ ನಡೆದರೆ ಯಾರು ಹೊಣೆಯಾಗುತ್ತಾರೆ? ಇಂತಹ ವಾಹನಗಳ ಮಾಲೀಕರನ್ನು ಪೊಲೀಸರು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂಬುದು ಕಾರು ಚಾಲಕ ಸಂಜಯ್ ಅವರ ಆಗ್ರಹವಾಗಿದೆ.

ಹಲವು ವಾಹನಗಳ ಗಾಜು, ಟೈರ್ ನಾಪತ್ತೆಯಾಗಿವೆ. ಮತ್ತೆ ಕೆಲವು ವಾಹನಗಳ ಬ್ಯಾಟರಿಗಳು ಕಾಣೆಯಾಗಿವೆ. ನಿಂತಲ್ಲೇ ನಿಂತು ಅವು ಚಲಿಸಲಾರದಷ್ಟು ಹಾಳಾಗಿವೆ. ಮಾಲೀಕರಿದ್ದರೆ ಅವುಗಳನ್ನು ಸೂಕ್ತ ರೀತಿ ವಿಲೇವಾರಿ ಮಾಡಬೇಕು. ಇಲ್ಲವಾದರೆ ಸಂಚಾರ ಪೊಲೀಸರು, ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.

‘ತೆರವಿಗೆ ಕ್ರಮ’

ನಗರದ ರಸ್ತೆಗಳ ಅಂಚಿನಲ್ಲಿ ವಾಹನಗಳನ್ನು ತಿಂಗಳುಗಟ್ಟಲೆ ಅಕ್ರಮವಾಗಿ ನಿಲ್ಲಿಸಿ ಹೋಗಿರುವ ಮಾಲೀಕರನ್ನು ಪತ್ತೆ ಹಚ್ಚಿ ಅವರಿಂದಲೇ ತೆರವು ಮಾಡಿಸಲಾಗುವುದು. ಮುಂದೆ ಈ ರೀತಿ ವಾಹನ ನಿಲ್ಲಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಚಾರ ಠಾಣೆ ಎಸ್‌ಐ ಪ್ರಸಾದ ಕೌರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)