ಶುಕ್ರವಾರ, ಡಿಸೆಂಬರ್ 6, 2019
24 °C

ತರಾತುರಿಯಲ್ಲಿ ಜೆಪಿ ಮಾರುಕಟ್ಟೆ ಉದ್ಘಾಟನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತರಾತುರಿಯಲ್ಲಿ ಜೆಪಿ ಮಾರುಕಟ್ಟೆ ಉದ್ಘಾಟನೆ?

ಕೊಪ್ಪಳ: ನಗರದ ಜೆ.ಪಿ.ಮಾರುಕಟ್ಟೆ ಈಚೆಗೆ ಉದ್ಘಾಟನೆಗೊಂಡಿದೆ. ಅದನ್ನು ತರಾತುರಿಯಲ್ಲಿ ಉದ್ಘಾಟಿಸಲಾಗಿದೆ ಎಂದು ಇಲ್ಲಿನ ವ್ಯಾಪಾರಿಗಳು ಹೇಳಿದ್ದಾರೆ. ಜೆ.ಪಿ. ಮಾರುಕಟ್ಟೆಯಲ್ಲಿ 72 ಮಳಿಗೆಗಳು ಮಾತ್ರ ಇವೆ. ಆದರೆ 100ಕ್ಕೂ ಹೆಚ್ಚು ಜನ ವ್ಯಾಪಾರಿಗಳಿದ್ದೇವೆ. ಇದರಿಂದ ಬಹಳಷ್ಟು ತೊಂದರೆ ಆಗುತ್ತದೆ. ಟೆಂಡರ್‍ ಪ್ರಕ್ರಿಯೆ ಪೂರ್ಣವಾಗಿಲ್ಲ. ಮಳಿಗೆಗೆಗೆ ₹3 ಸಾವಿರದ ಒಳಗೆ ಬಾಡಿಗೆ ನಿಗದಿಪಡಿಸಿದರೆ ಟೆಂಡರ್‍ನಲ್ಲಿ ಪಾಲ್ಗೊಳ್ಳುತ್ತೇವೆ. ಅದಕ್ಕಿಂತ ಹೆಚ್ಚಾದರೆ ಪಾಲ್ಗೊಳ್ಳುವುದಿಲ್ಲ. ಇದು ನಗರದ ಕೇಂದ್ರ ಭಾಗ ಆಗಿದ್ದರಿಂದ ಇಲ್ಲಿ ಮಾರುಕಟ್ಟೆಯ ಅವಶ್ಯಕತೆ ಇತ್ತು. ಬಹಳ ದಿನಗಳ ಬೇಡಿಕೆ ಈಗ ಈಡೇರಿದೆ. ಆದರೆ ಪಾರ್ಕಿಂಗ್‍ ವ್ಯವಸ್ಥೆ ಇಲ್ಲ. ಶೌಚಾಲಯಗಳು ಸ್ವಚ‍್ಛವಾಗಿಲ್ಲ. ಇನ್ನೂ ಸಂಪೂರ್ಣವಾಗಿ ಕಾಮಗಾರಿ ಮುಗಿದಿಲ್ಲ’ ಎಂದು ಮಸಾಲೆ ಪದಾರ್ಥ ವ್ಯಾಪಾರಿ ಮಹಮ್ಮದ್‍ ಜಾಫರ್‍ ಹೇಳಿದರು.

'ಕಟ್ಟಡದ ಕೆಳ ಹಂತದ ಕಾಮಗಾರಿ ಬಹುತೇಕ ಮುಗಿದಿದೆ. ಮೇಲಿನ ಅಂತಸ್ತಿನ ಇನ್ನೂ ಬಾಕಿ ಇದೆ. ಆದರೆ ಸರ್ಕಾರದ ಆಡಳಿತಾವಧಿ ಮುಗಿಯುವುದರ ಒಳಗೆ ಮುಗಿಸಬೇಕು ಎನ್ನುವ ಉದ್ದೇಶದಿಂದ ಕಾಮಗಾರಿಯನ್ನು ತರಾತುರಿಯಲ್ಲಿ ಮಾಡಿದ್ದಾರೆ. ಫೆ.10ರಂದು ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ಅವರ ಸಮಾವೇಶ ನಗರದ ಸಾರ್ವಜನಿಕ ಮೈದಾನದಲ್ಲಿ ನಡೆಯಲಿದೆ. ಅಲ್ಲಿನ ವ್ಯಾಪಾರಿಗಳನ್ನು ಕೂಡಲೇ ಸ್ಥಳಾಂತರಿಸುವ ಉದ್ದೇಶದಿಂದ ತರಾತುರಿಯಲ್ಲಿ ಕಾಮಗಾರಿ ನಡೆಸಿ ಮಾರುಕಟ್ಟೆ ಉದ್ಘಾಟಿಸಿದ್ದಾರೆ' ಎಂದು ಸ್ಟೇಷನರಿ ವ್ಯಾಪಾರಿ ಮಂಜುನಾಥ ಹೇಳಿದರು.

‘ಮಾರುಕಟ್ಟೆ ಕಾಮಗಾರಿಗೆ ಸರ್ಕಾರದಿಂದ ₹ 4 .57 ಕೋಟಿ ಅನುದಾನ ಮೀಸಲಿಡಲಾಗಿತ್ತು. ಅದರಲ್ಲಿ ₹ 4 ಕೋಟಿ ಅನುದಾನವನ್ನು ಗುತ್ತಿಗೆದಾರ ಹೊಸಪೇಟೆಯ ಸದಾಶಿವ ರಡ್ಡಿ ಅವರಿಗೆ ನೀಡಲಾಗಿತ್ತು. ಇಲ್ಲಿ 72 ತರಕಾರಿ ಮಾರಾಟದ ಮಳಿಗೆಗಳು, 26 ವಾಣಿಜ್ಯ ಸಂಕೀರ್ಣಗಳಿವೆ. ಇಲ್ಲಿ ಈ ಮೊದಲು ಇದ್ದ ವ್ಯಾಪಾರಿಗಳ ಪಟ್ಟಿ ತಯಾರಿಸಿದ್ದೇವೆ. ಅದರಲ್ಲಿ 66 ವ್ಯಾಪಾರಿಗಳು ಮಾತ್ರ ಇದ್ದಾರೆ. ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಉಳಿದವರು ಕಿನ್ನಾಳ ರಸ್ತೆ, ಬನ್ನಿಕಟ್ಟಿ, ಭಾಗ್ಯನಗರ, ಕುಷ್ಟಗಿ ರಸ್ತೆಗಳಲ್ಲಿ ವ್ಯಾಪಾರ ಮಾಡಬಹುದು. ಅವರಿಗೂ ಅನುಕೂಲ ಕಲ್ಪಿಸುತ್ತೇವೆ. ಕಾಮಗಾರಿ ಬಹುತೇಕ ಮುಗಿದಿದೆ. ನಗರಸಭೆಗೂ ಆದಾಯ ಬರಬೇಕು ಎನ್ನುವ ಉದ್ದೇಶದಿಂದ ಬೇಗ ಉದ್ಘಾಟನೆ ಮಾಡಿದ್ದೇವೆ. ರಾಹುಲ್‍ ಗಾಂಧಿ ಬರುತ್ತಾರೆ ಎನ್ನುವ ಉದ್ದೇಶದಿಂದ ತರಾತುರಿಯಲ್ಲಿ ಉದ್ಘಾಟನೆ ಮಾಡಿಲ್ಲ' ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ಹೇಳಿದರು.

'ಮಾರುಕಟ್ಟೆಯ ಮೇಲ್ಭಾಗದಲ್ಲಿ ಐಡಿಎಸ್‍ಎಂಟಿ ಯೋಜನೆಯ ಅಡಿ ₹ 1.60 ಕೋಟಿ ಅನುದಾನ ಮೀಸಲಿಡಲಾಗಿದೆ. ಇದು 2ನೇ ಹಂತದ ಕಾಮಗಾರಿಯಾಗಿದೆ. ಮೇಲ್ಭಾಗದಲ್ಲಿ ಅಂಬೇಡ್ಕರ್‍ ಭವನ, ವಾಣಿಜ್ಯ ಸಂಕೀರ್ಣ ನಿರ್ಮಿಸಿ ನಗರಸಭೆಗೆ ಆದಾಯ ಬರುವಂತೆ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆಗೆ ಜಿಲ್ಲಾಧಿಕಾರಿ ಅವರೇ ಅಧ್ಯಕ್ಷರಾಗಿದ್ದಾರೆ' ಎಂದು ಛೋಪ್ರಾ ಹೇಳಿದರು.

ಅನಿಲ ಬಾಚನಹಳ್ಳಿ

* * 

ರಾಹುಲ್‍ ಗಾಂಧಿ ಬರುತ್ತಾರೆ ಎಂಬ ಉದ್ದೇಶದಿಂದ ತರಾ<br/>ತುರಿಯಲ್ಲಿ ಉದ್ಘಾಟನೆ ಮಾಡಿಲ್ಲ. ಸಾರ್ವಜನಿಕ ಮೈದಾನದಲ್ಲಿ ಸಮಾ<br/>ವೇಶ ಕುರಿತು ಮಾಹಿತಿಯೂ ಬಂದಿಲ್ಲ

ಮಹೇಂದ್ರ ಛೋಪ್ರಾ, ಅಧ್ಯಕ್ಷ, ನಗರಸಭೆ

ಪ್ರತಿಕ್ರಿಯಿಸಿ (+)