ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಹಾದಿ ಭಯೋತ್ಪಾದನೆ ಕಿತ್ತೊಗೆಯಿರಿ’

Last Updated 5 ಫೆಬ್ರುವರಿ 2018, 9:36 IST
ಅಕ್ಷರ ಗಾತ್ರ

ಬೆಳಗಾವಿ: ಕಾಶ್ಮೀರದಿಂದ ಪ್ರಾರಂಭವಾಗಿರುವ ಜಿಹಾದಿ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯಬೇಕು. ಹಿಂದೂ ರಾಷ್ಟ್ರದ ನಿರ್ಮಾಣಕ್ಕಾಗಿ ಇದು ಅತ್ಯಗತ್ಯವಾಗಿದೆ ಎಂದು ಯೂತ್‌ ಫಾರ್‌ ಪನೂನ ಕಾಶ್ಮೀರ ಸಂಘಟನೆಯ ರಾಹುಲ ಕೌಲ್ ಹೇಳಿದರು.

ಹಿಂದೂ ಜನ ಜಾಗೃತಿ ಸಮಿತಿಯಿಂದ ಇಲ್ಲಿನ ವಡಗಾವಿಯ ಆದರ್ಶ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶ ಹಾಗೂ ಕಾಶ್ಮೀರದಲ್ಲಿ ಅಧಿಕಾರ ನಡೆಸುವವರು ಬದಲಾವಣೆಯಾದರೂ, ಅಲ್ಲಿನ ಹಿಂದೂಗಳಿಗೆ ನ್ಯಾಯ ದೊರೆತಿಲ್ಲ. ಸೈನ್ಯದ ಮೇಲೆ ಕಲ್ಲೆಸೆತ ನಿಂತಿಲ್ಲ. ಭಯೋತ್ಪಾದನೆ ಹಿಮ್ಮೆಟ್ಟಿಸುವ ಸೈನಿಕರ ಮೇಲೆಯೇ ದೂರು ದಾಖಲಿಸಲಾಗುತ್ತಿದೆ. ಇದು ಅತ್ಯಂತ ದುರ್ದೈವದ ಬೆಳವಣಿಗೆಯಾಗಿದೆ’ ಎಂದು ಆರೋಪಿಸಿದರು.

ಜಾಗೃತಿ ಮೂಡಿಸಬೇಕು: ‘ಕಾಶ್ಮೀರದಲ್ಲಿ ಪ್ರಾರಂಭವಾಗಿರುವ ಜಿಹಾದಿ ಭಯೋತ್ಪಾದನೆ ಈಗ ಭಾರತದಾದ್ಯಂತ ಹರಡುತ್ತಿದೆ. ಇದನ್ನು ತಪ್ಪಿಸಲು, ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹಭಾಗಿಗಳಾಗಬೇಕಾಗಿದೆ. ಹಳ್ಳಿ–ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ ಎಂದರು.

ಹಿಂದೂ ಜನ ಜಾಗೃತಿ ಸಮಿತಿ ಪಶ್ಚಿಮ ಮಹಾರಾಷ್ಟ್ರದ ಮನೋಜ ಖಾಡಯೆ, ‘ಗಲಭೆಕೋರರ ವಿರುದ್ಧ ದಾಖಲಾಗಿರುವ ದೂರು ಹಿಂಪಡೆಯಲು ಮುಂದಾಗುತ್ತಿರುವ ಕಾಂಗ್ರೆಸ್‌ನ ರಾಜಕಾರಣಿಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು. ರಾಜ್ಯದಲ್ಲಿ ಹಿಂದೂ ನಿಷ್ಠರನ್ನು ಗುರುತಿಸಿ ಅವರ ಹತ್ಯೆ ಮಾಡಲಾಗುತ್ತಿದೆ. ಮತಾಂಧರು ನಿರಂತರವಾಗಿ ಗಲಭೆ ನಡೆಸುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲಿಗೆ, ಪ್ರಕರಣ  ವಾಪಸ್‌ಗೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ದೂರಿದರು.

ಸಿಲುಕಿಸುವ ಪ್ರಯತ್ನ: ಸಂಸ್ಥೆಯ ಸಾಧಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮೀರ ಗಾಯಕವಾಡ ಹಾಗೂ ಡಾ.ವೀರೇಂದ್ರಸಿಂಗ್‌ ತಾವಡೆ ಅವರನ್ನು ದಾಬೋಲ್ಕರ್ ಹಾಗೂ ಪಾನ್ಸರೆ ಹತ್ಯೆ ‍ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಆದರೆ, ಅವರ ವಿರುದ್ಧ ಒಂದೂ ಪುರಾವೆಗಳೂ ತನಿಖಾ ಸಂಸ್ಥೆಗೆ ದೊರೆತಿಲ್ಲ’ ಎಂದು ಸನಾತನ ಸಂಸ್ಥೆಯ ಪ್ರತಿನಿಧಿ ಪ್ರತಿಭಾ ತಾವರೆ ತಿಳಿಸಿದರು.

ರಾಗರಾಗಿಣಿ ಶಾಖೆಯ ಪ್ರತಿನಿಧಿ ಉಜ್ವಲಾ ಗಾವಡೆ, ‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಕನಿಷ್ಠ ಸ್ಥಾನಮಾನ ನೀಡಲಾಗಿದೆ ಎಂದು ವಿರೋಧಿಗಳು ಹೇಳುತ್ತಾರೆ. ಆದರೆ, ನಮ್ಮ ಮಹಿಳೆಯರು ರಾಜ್ಯದ ಮುಖಂಡತ್ವ ವಹಿಸಿದ್ದರು ಎನ್ನುವುದನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಶಾಖೆಯಿಂದ, ಮಹಿಳೆಯರಿಗೆ ಸ್ವರಕ್ಷಣೆಯ ಪ್ರಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಲಾಯಿತು. ಗ್ರಂಥಗಳನ್ನು ಪ್ರದರ್ಶಿಸಲಾಯಿತು. ಮಕ್ಕಳು ಮಹಾತ್ಮರ ವೇಷಭೂಷಣ ಧರಿಸಿ ಭಾಗವಹಿಸಿ ಗಮನಸೆಳೆದರು.

* * 

ಅತಿ ಪ್ರಾಚೀನ ಹಾಗೂ ಧಾರ್ಮಿಕತೆಗಳ ಗುರುತಾಗಿರುವ ಕಾಶ್ಮೀರ ಈಗ ಮುಸ್ಲಿಂ ಜಿಹಾದಿಗಳ ಆಕ್ರಮಣದಿಂದ ನಲುಗಿದೆ
ರಾಹುಲ ಕೌಲ್ ಯೂತ್‌ ಫಾರ್‌ ಪನೂನ್ ಕಾಶ್ಮೀರ ಸಂಘಟನೆ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT