ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಪುರದಲ್ಲಿ ನೈರ್ಮಲ್ಯ ಕೊರತೆ

Last Updated 5 ಫೆಬ್ರುವರಿ 2018, 9:47 IST
ಅಕ್ಷರ ಗಾತ್ರ

ಬೀದರ್‌: ನಲವತ್ತು ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿರುವ ಇಲ್ಲಿಯ ಬ್ರಹ್ಮಪುರ ಕಾಲೊನಿ ಇವತ್ತಿಗೂ ಮೂಲಸೌಕರ್ಯಗಳಿಗಾಗಿ ಗೋಗರೆಯುತ್ತಿದೆ. ಬೊಮ್ಮ ಗೊಂಡೇಶ್ವರ ವೃತ್ತದಿಂದ ಹಾರೂರಗೇರಿ ಕ್ರಾಸ್‌ ವರೆಗಿನ ದ್ವಿಪಥ ರಸ್ತೆಯ ಎಡ ಬದಿಗೆ ಸಾಗಿದರೆ ಬ್ರಹ್ಮಪುರ ಇದೆ. ಈ ಪ್ರದೇಶಕ್ಕೆ ಬ್ರಹ್ಮನ ಹೆಸರಿಡಲಾಗಿದೆ. ಆದರೆ ಒಳಗೆ ಸಮಸ್ಯೆಗಳೇ ತುಂಬಿಕೊಂಡಿವೆ. ಕೆಲ ಓಣಿಗಳಲ್ಲಿ ಒಂದೇ ಬದಿಗೆ ಗಟಾರ ನಿರ್ಮಿಸಲಾಗಿದೆ. ಕೆಲವು ಕಡೆ ಮನೆಯ ಕೊಳಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ.

ಈ ಪ್ರದೇಶದ ಓಣಿಗಳಲ್ಲಿ ಸರಿಯಾದ ರಸ್ತೆಗಳು ಇಲ್ಲ. ಮಣ್ಣಿನಿಂದ ಕೂಡಿದ ರಸ್ತೆಯಲ್ಲಿ ನಿತ್ಯ ಸಂಚಾರ ಮಾಡುವ ಪರಿಸ್ಥಿತಿ ಇಲ್ಲಿಯ ನಾಗರಿಕರದು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮೂಲ ಸೌಕರ್ಯ ಕಲ್ಪಿಸುವಲ್ಲಿ ನಗರಸಭೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕುಡಿಯುವ ನೀರು, ಗಟಾರ ಹಾಗೂ ರಸ್ತೆ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿಯ ನಿವಾಸಿಗಳು

ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆ ಅಡಿ ಪೈಪ್‌ಲೈನ್‌ಗಳನ್ನು ಹಾಕಿದಾಗ ಬ್ರಹ್ಮಪುರದ ಜನ ಬಹಳ ಖುಷಿ ಪಟ್ಟಿದ್ದರು. ಇನ್ನು ನೀರಿನ ಬವಣೆ ಸಂಪೂರ್ಣ ನಿವಾರಣೆ ಆಯಿತು ಎಂದೇ ಭಾವಿಸಿದ್ದರು. ಆದರೆ ಈ ಖುಷಿ ಬಹಳ ದಿನ ಉಳಿಯಲೇ ಇಲ್ಲ. ನಿರಂತರ ನೀರು ಭರವಸೆ ಆಗಿಯೇ ಉಳಿದಿದೆ. ನಲ್ಲಿಯಲ್ಲಿ ಒಂದು ಗಂಟೆ ನೀರು ಬಂದರೆ ಅದು ಅವರ ಭಾಗ್ಯ.

ದಿನದ 24 ಗಂಟೆ ನೀರು ಪೂರೈಸಲು ಪ್ರತಿಯೊಂದು ಮನೆಗೆ ಮೀಟರ್‌ಗಳನ್ನು ಅಳವಡಿಸಲಾಗಿದೆ. ಕಳ್ಳರು ರಾತ್ರಿ ಮೀಟರ್‌ಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಪೈಪ್‌ಗಳನ್ನು ಕಿತ್ತು ಹಾಳು ಮಾಡಿದ್ದಾರೆ. ಈ ಪ್ರದೇಶದಲ್ಲಿ ಕಳ್ಳರ ಹಾವಳಿಯೂ ಹೆಚ್ಚಾಗಿದೆ. ರಾತ್ರಿ ವೇಳೆಯಲ್ಲಿ ಬಡಾವಣೆಯಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು ಎನ್ನುವುದು ಬ್ರಹ್ಮಪುರ ನಿವಾಸಿಗಳ ಮನವಿಯಾಗಿದೆ.

ಬ್ರಹ್ಮಪುರದಲ್ಲಿ ಕಸದ ತೊಟ್ಟಿಗಳನ್ನು ಇಟ್ಟಿಲ್ಲ. ಜನ ಖಾಲಿ ನಿವೇಶನಗಳಲ್ಲೇ ಕಸ ಎಸೆದು ಹೋಗುತ್ತಿದ್ದಾರೆ. ರಸ್ತೆ ಮೇಲೆ ಪ್ಲಾಸ್ಟಿಕ್‌ ಹಾಳೆಗಳು ಹಾರಾಡುತ್ತಿವೆ. ನಗರಸಭೆಯ ಸಿಬ್ಬಂದಿ ಕಸ ಸಂಗ್ರಹಿಸಲು ಓಣಿಗಳಿಗೆ ಬರುತ್ತಿಲ್ಲ. ಹೀಗಾಗಿ ಅಲ್ಲಲ್ಲಿ ಕಸ ಬಿದ್ದುಕೊಂಡಿದೆ ಎಂದು ಅನಿಲಕುಮಾರ ಪಾಟೀಲ ದೂರುತ್ತಾರೆ.

‘ಮನೆಯ ಮುಂದೆ ಕಸದ ಗಾಡಿ ತಂದು ನಿಲ್ಲಿಸಿದರೂ ಬ್ರಹ್ಮಪುರದ ನಿವಾಸಿಗಳು ಮನೆಯಲ್ಲಿನ ಕಸ ಕೊಡುವುದಿಲ್ಲ. ನಗರಸಭೆಯ ಚಿಕ್ಕ ವಾಹನಕ್ಕೆ ಅಳವಡಿಸಿರುವ ಧ್ವನಿವರ್ಧಕ ಮೂಲಕ ಕೂಗಿ ಕೂಗಿ ಮನವಿ ಮಾಡಿದರೂ ಮನೆಯಲ್ಲಿ ಕುಳಿತುಕೊಂಡಿರುತ್ತಾರೆ. ವಾಹನ ಹೋದ ಮೇಲೆ ರಸ್ತೆ ಬದಿಗೆ ಕಸ ಚೆಲ್ಲುತ್ತಾರೆ. ನೈರ್ಮಲ್ಯ ಕಾಪಾಡಲು ಜನರೇ ಸಹಕರಿಸದಿದ್ದರೆ ಏನು ಮಾಡಲು ಸಾಧ್ಯ’ ಎಂದು ಪೌರ ಕಾರ್ಮಿಕರು ಹೇಳುತ್ತಾರೆ.

‘ಸ್ವಚ್ಛತೆ ಒಬ್ಬರ ಜವಾಬ್ದಾರಿ ಅಲ್ಲ, ಮನೆಯ ಮುಂದೆ ಕಸದ ಗಾಡಿ ಬಂದಾಗ ಕಸ ಕೊಟ್ಟು ಕಳಿಸಿದರೆ ಬ್ರಹ್ಮಪುರ ಬೃಂದಾವನವಾಗಿ ರೂಪುಗೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ನಗರಸಭೆ ಆರೋಗ್ಯ ವಿಭಾಗದ ಸಿಬ್ಬಂದಿ.

* * 

ಬ್ರಹ್ಮಪುರದಲ್ಲಿ ಕೆಲವು ಕಡೆ ಮಾತ್ರ ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನುಳಿದ ಕಡೆಗೆ ಈಗಲೂ ಕಚ್ಚಾ ರಸ್ತೆಗಳೇ ಇವೆ.
ಸತ್ಯಮೂರ್ತಿ, ಬ್ರಹ್ಮಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT