ಮಂಗಳವಾರ, ಡಿಸೆಂಬರ್ 10, 2019
20 °C

ಬೇಸಿಗೆಗೂ ಮುನ್ನವೇ ಮಾರುಕಟ್ಟೆಗೆ ಕಲ್ಲಂಗಡಿ ಲಗ್ಗೆ

ಕೆ.ಎಸ್.ಪ್ರಣವಕುಮಾರ್ Updated:

ಅಕ್ಷರ ಗಾತ್ರ : | |

ಬೇಸಿಗೆಗೂ ಮುನ್ನವೇ ಮಾರುಕಟ್ಟೆಗೆ ಕಲ್ಲಂಗಡಿ ಲಗ್ಗೆ

ಚಿತ್ರದುರ್ಗ: ಸಾಮಾನ್ಯವಾಗಿ ಬೇಸಿಗೆ ಪ್ರಾರಂಭವಾಗುವ ಸಂದರ್ಭದಲ್ಲಿ ಮಾರುಕಟ್ಟೆ ಅಲಂಕರಿಸುತ್ತಿದ್ದ ಕಲ್ಲಂಗಡಿ ಹಣ್ಣಿನ ರಾಶಿಗಳು ಈ ಬಾರಿ ಅದಕ್ಕೂ ಮೊದಲೇ ಇಲ್ಲಿನ ಪ್ರಮುಖ ರಸ್ತೆಗಳ ಬದಿಗಳಲ್ಲಿ ರಾರಾಜಿಸಲು ಆರಂಭಿಸಿವೆ.

ಮುಂಜಾನೆ 5ರಿಂದ ಬೆಳಿಗ್ಗೆ 7.30ರ­ವರೆಗೂ ಮೈ ಕೊರೆಯುವಷ್ಟು ಚಳಿ ಒಂದೆಡೆಯಾದರೆ, ಹೊತ್ತೇರುತ್ತಿದ್ದಂತೆಯೇ ಬಿಸಿಲ ಬೇಗೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಬಿಸಿಲಿನ ದಾಹ ನೀಗಿಸುವ ಕಲ್ಲಂಗಡಿ ಹಣ್ಣಿನ ಮಾರಾಟಕ್ಕೆ ಹುರುಪು ಹೆಚ್ಚಿದೆ. ಫೆಬ್ರುವರಿ ಕೊನೆ­ ವಾರ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ಕಲ್ಲಂಗಡಿಗೆ ಅದಕ್ಕೂ ಮುನ್ನವೇ ನಗರ ವ್ಯಾಪ್ತಿಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.

ಇಲ್ಲಿನ ಚಳ್ಳಕೆರೆ ರಸ್ತೆ ಮಾರ್ಗ, ಪ್ರವಾಸಿ ಮಂದಿರದ ಮುಂಭಾಗ, ಕೃಷ್ಣರಾಜೇಂದ್ರ ನಗರ ಕೇಂದ್ರ ಗ್ರಂಥಾಲಯದ ಸಮೀಪ, ಚಳ್ಳಕೆರೆ ಟೋಲ್ ಗೇಟ್ ಸಮೀಪ, ಬಿ.ಡಿ. ರಸ್ತೆಗಳ ಬದಿಯಲ್ಲಿ ಈಗಾಗಲೇ ಹಣ್ಣಿನ ಅಂಗಡಿಗಳನ್ನು ತೆರೆಯಲಾಗಿದೆ.

‘ಬಿಸಿಲಿನ ಬೇಗೆಯಿಂದ ದಣಿವಾರಿಸಿಕೊಳ್ಳಲು ಪಾದಚಾರಿಗಳು, ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು, ಆಟೊ ಚಾಲಕರು ಕಲ್ಲಂಗಡಿ ಹಣ್ಣುಗಳ ಮೊರೆಹೋಗುವುದು ಸಾಮಾನ್ಯ. ಅಲ್ಲದೆ, ದೂರದ ಊರಿಗೆ ಕಾರಿನಲ್ಲಿ ಪ್ರಯಾಣಿಸುವ ಕೆಲವರು ತಮ್ಮ ವಾಹನ ನಿಲ್ಲಿಸಿ ಹಣ್ಣು ಸೇವಿಸಲು ಮುಂದಾಗುತ್ತಾರೆ. ಆದ್ದರಿಂದ ಬೆಂಗಳೂರು, ಚಳ್ಳಕೆರೆಗೆ ಹೋಗುವ ಪ್ರಮುಖ ರಸ್ತೆ ಮಾರ್ಗವಾದ ಎಲ್‍ಐಸಿ ಕಚೇರಿ ಮುಂಭಾಗದಲ್ಲಿ ಹಣ್ಣಿನ ಅಂಗಡಿಯನ್ನು ತೆರೆದಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಫಯಾಜ್‍.

‘ಆಯಾ ಕಾಲಘಟ್ಟಕ್ಕೆ ಸಂಬಂಧಿಸಿದ ವ್ಯಾಪಾರ ಮಾಡುವುದನ್ನು ಅನೇಕ ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದೇವೆ. ನಾವು ಚಿತ್ರದುರ್ಗ ತಾಲ್ಲೂಕಿನ ಕೆಲ ಭಾಗಗಳಲ್ಲಿ ಖರೀದಿಸಿ ಮಾರಾಟ ಮಾಡುತ್ತೇವೆ. ದಿನಕ್ಕೆ ₹ 2 ಸಾವಿರದವರೆಗೂ ವ್ಯಾಪಾರ ಆಗುತ್ತದೆ. ಜೀವನೋಪಾಯಕ್ಕಾಗಿ ಕಲ್ಲಂಗಡಿ ಹಣ್ಣನ್ನು ಅವಲಂಬಿಸಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಆಜಮ್.

ಹೆಚ್ಚಾಗಿ ಆಂಧ್ರಪ್ರದೇಶ, ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣುಗಳನ್ನು ತರಲಾಗುತ್ತಿದೆ. ಒಂದು ಕೆ.ಜಿ. ಕಲ್ಲಂಗಡಿ ಹಣ್ಣನ್ನು ₹ 20ರಂತೆ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಪ್ರಾರಂಭವಾದರೆ ದಿನಕ್ಕೆ ಕನಿಷ್ಠ ₹ 3 ಸಾವಿರ ವ್ಯಾಪಾರ ಆಗುವ ನಿರೀಕ್ಷೆ ಇದೆ ಎನ್ನುತ್ತಾರೆ ಸ್ಥಳೀಯ ವ್ಯಾಪಾರಿ ರೆಹಮಾನ್‍.

ಹಣ್ಣು ಮತ್ತು ಹಣ್ಣಿನ ರಸ ದೇಹಕ್ಕೆ ತಂಪು ಕೊಡುವುದರ ಜತೆಗೆ ಸ್ವಲ್ಪ ಮಟ್ಟಿಗೆ ಶಕ್ತಿಯನ್ನೂ ನೀಡುತ್ತದೆ. ಈ ಕಾರಣದಿಂದಾಗಿಯೇ ಬೇಸಿಗೆಯಲ್ಲಿ ಹೆಚ್ಚಿನ ಜನರು ಹಣ್ಣಿನ ರಸ ಸೇವಿಸುತ್ತಾರೆ. ಇತರೆ ಎಲ್ಲ ಹಣ್ಣುಗಳಿಗಿಂತಲೂ ಕಲ್ಲಂಗಡಿ ಹೆಚ್ಚಿನ ತಂಪು ಮತ್ತು ನೀರಿನ ಅಂಶವನ್ನು ಒದಗಿಸುವುದರಿಂದ ಜನರು ಇವುಗಳತ್ತ ಚಿತ್ತ ಹರಿಸುತ್ತಾರೆ ಎನ್ನುತ್ತಾರೆ ಕಲ್ಲಂಗಡಿ ಹಣ್ಣಿನ ವ್ಯಾಪಾರಿ ಜಾಫರ್.

ಕಲ್ಲಂಗಡಿ ಹಣ್ಣುಗಳ ವ್ಯಾಪಾರದ ಭರಾಟೆ ನಗರದಲ್ಲಿ ಈಗ ತಾನೇ ಆರಂಭವಾಗಿದೆ. ರಾಸಾಯನಿಕ ಮಿಶ್ರಣವಾಗಿರುವ ತಂಪು ಪಾನೀಯಗಳನ್ನು ಸೇವಿಸುವುದಕ್ಕಿಂತ ತಾಜಾ ಹಣ್ಣನ್ನು ಸೇವಿಸುವುದು ಉತ್ತಮ. ರಸ್ತೆ ಬದಿಯಲ್ಲಿ ಸ್ನೇಹಿತರು, ಸಹೋ ದ್ಯೋಗಿಗಳೊಂದಿಗೆ ಹರಟೆ ಹೊಡೆಯುತ್ತಾ ಕಲ್ಲಂಗಡಿ ಸೇವಿಸುವುದು ಒಂದು ರೀತಿಯ ಮಜಾ ಕೊಡುತ್ತದೆ. ಆದರೆ, ವ್ಯಾಪಾರಿಗಳು ಶುಚಿತ್ವದ ಕಡೆಗೂ ಹೆಚ್ಚು ಗಮನಹರಿಸಿದಲ್ಲಿ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಅನುಕೂಲವಾಗಲಿದೆ ಎಂದು ಹಣ್ಣು ಖರೀದಿಸಲು ಬಂದಿದ್ದ ಗ್ರಾಹಕ ರಮೇಶ್ ಅಭಿಪ್ರಾಯಪಟ್ಟರು.

ಮುಂಬೈಗೂ ರಫ್ತು

‘ನಾವು ಖರೀದಿಸುವ ಒಂದು ಲೋಡ್‍ನಲ್ಲಿ ಸುಮಾರು 9 ಟನ್‍ನಷ್ಟು ಕಲ್ಲಂಗಡಿ ಹಣ್ಣುಗಳಿರುತ್ತವೆ. ಮುಂಬೈನಲ್ಲೂ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದ್ದು, ಅಲ್ಲಿಗೂ ಕೂಡ ರಫ್ತು ಮಾಡುತ್ತೇವೆ. ಲೋಡ್‍ಗೆ ₹ 5 ಸಾವಿರ ಲಾಭ ದೊರೆಯಲಿದೆ. ನಾವೇ ವ್ಯಾಪಾರ ಮಾಡಿದರೆ, ಲೋಡ್‍ವೊಂದಕ್ಕೆ ₹ 9ರಿಂದ ₹ 10 ಸಾವಿರದವರೆಗೂ ಲಾಭ ಸಿಗಲಿದೆ’ ಎನ್ನುತ್ತಾರೆ ವ್ಯಾಪಾರಿ ಜಾಫರ್.

* * 

ಬೇಸಿಗೆ ಅವಧಿಯಲ್ಲಿ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣಿನ ರಸಗಳ ಕಡೆಗೆ ಮನಸ್ಸು ಹರಿಯುತ್ತದೆ. ಆದ್ದರಿಂದ ವರ್ಷವಿಡಿ ಹಣ್ಣುಗಳ ವ್ಯಾಪಾರ ಮಾಡುತ್ತೇವೆ. 

ಜಾಫರ್, ಸ್ಥಳೀಯ ವ್ಯಾಪಾರಿ

ಪ್ರತಿಕ್ರಿಯಿಸಿ (+)