ಶುಕ್ರವಾರ, ಡಿಸೆಂಬರ್ 13, 2019
27 °C

ನಗರಕ್ಕೆ ದಾಂಗುಡಿ ಇಟ್ಟ ಕಲ್ಲಂಗಡಿ

ಹುಚ್ಚೇಶ್ವರ ಅಣ್ಣಿಗೇರಿ Updated:

ಅಕ್ಷರ ಗಾತ್ರ : | |

ನಗರಕ್ಕೆ ದಾಂಗುಡಿ ಇಟ್ಟ ಕಲ್ಲಂಗಡಿ

ಗದಗ: ಅವಳಿ ನಗರದಲ್ಲಿ ಚಳಿ ಕಡಿಮೆಯಾಗಿ ಬಿಸಿಲಿನ ತಾಪ ದಿನೇ ದಿನೇ ಏರುತ್ತಿದೆ. ಬಿಸಿಲಿನ ಝಳದಿಂದ ಪಾರಾಗಲು ಜನರು ಕಲ್ಲಂಗಡಿ ಹಣ್ಣುಗಳತ್ತ ಮುಖ ಮಾಡಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ದಾರಿ ಹೋಕರ ದಾಹ ತಣಿಸಲು ಕೈಬೀಸಿ ಕರೆಯುತ್ತಿದೆ.

ಬಿಸಿಲಿಗೆ ಝಳಕ್ಕೆ ಬಸವಳಿದ ಜನರು ಎಳೆನೀರು ಮತ್ತು ಹಣ್ಣಿನ ಪೇಯಗಳಿಗೆ ಮೊರೆ ಹೋಗಿದ್ದಾರೆ. ಕಲ್ಲಂಗಡಿ ಹಣ್ಣಿಗೂ ಬೇಡಿಕೆ ಹೆಚ್ಚಾಗಿದೆ. ನಗರ ವ್ಯಾಪ್ತಿಯಲ್ಲಿ, ರಸ್ತೆಗೆ ಹೊಂದಿಕೊಂಡಂತೆ ಖಾಲಿ ಜಾಗಗಳಲ್ಲಿ ಹಣ್ಣಿನ ರಾಶಿ ಹಾಕಿಕೊಳ್ಳುವ ವ್ಯಾಪಾರಿ ಗಳು, ತಿಂಗಳುಗಟ್ಟಲೇ ಇಲ್ಲೇ ಬಿಡಾರ ಹೂಡಿ, ವ್ಯಾಪಾರಕ್ಕೆ ಅಣಿಯಾಗಿದ್ದಾರೆ.

ತೋಂಟದಾರ್ಯ ಮಠದ ರಸ್ತೆ, ಕೆ.ಸಿ.ರಾಣಿ ರಸ್ತೆ, ಮುಳಗುಂದ ನಾಕಾ, ಹಳೆ ಜಿಲ್ಲಾ ಆಸ್ಪತ್ರೆ, ವೀರೇಶ್ವರ ಗ್ರಂಥಾಲಯದ ಸಮೀಪ, ಪಂಚರಹೊಂಡ, ಬೆಟಗೇರಿಯ ಬಸ್‌ ನಿಲ್ದಾಣ ಹತ್ತಿರ ಸೇರಿದಂತೆ ವಿವಿಧೆಡೆ ಕಲ್ಲಂಗಡಿ ಹಣ್ಣಿನ ಮಾರಾಟ ಜೋರಾಗಿ ನಡೆಯುತ್ತಿದೆ.

ವರ್ತಕರು ಆಂಧ್ರಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಹಣ್ಣುಗಳನ್ನು ತಂದು ಇಲ್ಲಿ ರಾಶಿ ಹಾಕಿದ್ದಾರೆ. ಕೆಲವರು ಸ್ಥಳದಲ್ಲೇ ಕತ್ತರಿಸಿ ಅದಕ್ಕೆ ಉಪ್ಪು, ಖಾರ ಹಾಕಿಸಿಕೊಂಡು ತಿಂದರೆ, ಕೆಲ ಗ್ರಾಹಕರು ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹಣ್ಣಿನ ಗಾತ್ರಕ್ಕೆ ತಕ್ಕಂತೆ ₹50ರಿಂದ ₹200ರವರೆಗೆ ಬೆಲೆ ಇದೆ.

‘ವರ್ಷವಿಡೀ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಇರುತ್ತದೆ. ಆದರೆ ಬೇಸಿಗೆಯಲ್ಲಿ ಮಾರಾಟ ಹೆಚ್ಚು. 2 ರಿಂದ 4 ಕ್ವಿಂಟಲ್‌ನಷ್ಟು ಕಲ್ಲಂಗಡಿ ಪ್ರತಿದಿನ ಮಾರಾಟವಾಗುತ್ತದೆ. ಸಾಮಾನ್ಯ ದಿನಗಳಲ್ಲಿ 1ರಿಂದ 2 ಕ್ವಿಂಟಲ್‌ ಮಾರಾಟವಾದರೆ ಹೆಚ್ಚು. ಬೇಸಿಗೆಯಲ್ಲೇ ಬಹುತೇಕ ಜನ ಹೆಚ್ಚು ಖರೀದಿ ಮಾಡುತ್ತಾರೆ.’

‘ನಾಮಧಾರಿ, ಸುಪ್ರೀತ್ ಎಂಬ ಎರಡು ತಳಿಗಳ ಕಲ್ಲಂಗಡಿ ಹಣ್ಣನ್ನು ಆಂಧ್ರ ಪ್ರದೇಶ ಹಾಗೂ ಮುಂಡರಗಿ ತಾಲ್ಲೂಕಿನ ಹೆಸರೂರಿನಿಂದ ತಂದು ಮಾರುತ್ತಿದ್ದೇವೆ. ಇಲ್ಲಿಂದ ತರುವ ಕಲ್ಲಂಗಡಿಗಳಲ್ಲಿ ಸಿಪ್ಪೆಯ ದಪ್ಪ ಕಡಿಮೆಯಿದ್ದು, ಸಿಹಿ ಹೆಚ್ಚು ಹಾಗೂ ಕಡುಗೆಂಪು ಬಣ್ಣ ಇರುವುದರಿಂದ ಈ ಹಣ್ಣಿಗೆ ಹೆಚ್ಚು ಬೇಡಿಕೆ ಇದೆ.’

‘ಒಂದು ಟನ್‌ಗೆ ಕಲ್ಲಂಡಿ ಹಣ್ಣಿಗೆ ಬಾಡಿಗೆ ಖರ್ಚು ಸೇರಿ ₹20 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಒಂದು ಹಣ್ಣು ಮಾರಾಟ ಮಾಡಿದರೆ ₹10ರಿಂದ ₹15 ಉಳಿಯುತ್ತದೆ’ ಎಂದು ಕಲ್ಲಂಗಡಿ ವ್ಯಾಪಾರಿ ಶಫಿ ವೈದ್ಯಗಾರ, ಚಾಂದಸಾಬ್ ಜಖನಿ ಹೇಳಿದರು.

* * 

ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಹೆಚ್ಚಿರುತ್ತದೆ. ದೇಹದ ತೂಕ ಇಳಿಕೆಗೆ ಇದು ಪೂರಕ. ಉರಿ ಮೂತ್ರ ಸಮಸ್ಯೆ ಶಮನವಾಗುತ್ತದೆ.

ಡಾ.ಕುಮಾರ ಕಂಠೀಮಠ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ

ಪ್ರತಿಕ್ರಿಯಿಸಿ (+)