ಭಾನುವಾರ, ಡಿಸೆಂಬರ್ 8, 2019
25 °C

ನಿತ್ಯ ಒಂದು ಲಕ್ಷ ಮಂದಿಗೆ ಭೋಜನ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ನಿತ್ಯ ಒಂದು ಲಕ್ಷ ಮಂದಿಗೆ ಭೋಜನ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಭಕ್ತರಿಂದ ದವಸ ಧಾನ್ಯಗಳ ಮಹಾಪೂರವೇ ಹರಿದು ಬರುತ್ತಿದೆ. 12 ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಲಕ್ಷಾಂತರ ಭಕ್ತರಿಗೆ ಭೋಜನ ವ್ಯವಸ್ಥೆ ಮಾಡಲು ಅಪಾರ ಸಂಖ್ಯೆಯ ದಾನಿಗಳು ಮಠದ ಜತೆ ಕೈ ಜೋಡಿಸಿದ್ದಾರೆ.

ವಿವಿಧೆಡೆಯಿಂದ ಜೈನ ಸಮಾಜದವರು ಟನ್‌ಗಟ್ಟಲೇ ಆಹಾರ ಪದಾರ್ಥ ಕಳುಹಿಸಿಕೊಡುತ್ತಿದ್ದಾರೆ. ಸಕ್ಕರೆ, ಅಕ್ಕಿ, ಬೆಲ್ಲ, ಗೋಧಿ, ಗೋಧಿ ಹಿಟ್ಟು, ಎಣ್ಣೆ, ಉಪ್ಪು, ರವೆ, ತೊಗರಿಬೇಳೆ, ಉದ್ದಿನಬೇಳೆ, ಹೆಸರುಕಾಳು, ಕಡಲೆ ಬೀಜ, ಹೆಸರು ಬೇಳೆ, ಅವಲಕ್ಕಿ, ಮೆಣಸಿನಕಾಯಿ, ದ್ರಾಕ್ಷಿ, ಗೋಡಂಬಿ, ಬಾದಾಮಿ, ಹುಣಸೆ ಹಣ್ಣು, ಉತ್ತತ್ತಿ, ತುಪ್ಪ, ರಾಗಿ, ಜೋಳವನ್ನು ಮಠಕ್ಕೆ ದಾನ ನೀಡಿದ್ದಾರೆ.

ಅಂದಾಜಿನ ಪ್ರಕಾರ ಈವರೆಗೂ 667 ಟನ್‌ ಆಹಾರ ಪದಾರ್ಥ ಸಂಗ್ರಹವಾಗಿದೆ. ಭಕ್ತರು, ಗಣ್ಯರು, ಪ್ರವಾಸಿಗರು, ತ್ಯಾಗಿಗಳು, ಯಾತ್ರಾರ್ಥಿಗಳು ಸೇರಿದಂತೆ ದಿನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಉಪಾಹಾರ, ಮಧ್ಯಾಹ್ನ ಭೋಜನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಲು ಆಹಾರ ಸಮಿತಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಇದಕ್ಕಾಗಿ ಆರು ಬೃಹತ್‌ ಅಡುಗೆ ತಯಾರಿಸುವ ಸ್ಥಳ ಹಾಗೂ 17 ಭೋಜನಾ ಶಾಲೆ ನಿರ್ಮಿಸಲಾಗಿದ್ದು, ಪ್ರತಿ ಅಡುಗೆ ಕೋಣೆಯಲ್ಲಿ 120 ಬಾಣಸಿಗರು ಕೆಲಸ ನಿರ್ವಹಿಸಲಿದ್ದಾರೆ. ಹಾಗೆಯೇ ಭೋಜನಾ ಶಾಲೆಯಲ್ಲಿ 10 ಸಾವಿರ ಜನರಿಗೆ ಆಹಾರ ವಿತರಿಸಲು ಕೆಲಸಗಾರರನ್ನು ನೇಮಕ ಮಾಡಲಾಗಿದೆ.

‘ಭಕ್ತರು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದು, ಈಗಲೂ ಟನ್‌ಗಟ್ಟಲೇ ಆಹಾರ ಧಾನ್ಯಗಳನ್ನು ಲಾರಿಗಳಲ್ಲಿ ತಂದು ಕೊಡುತ್ತಿದ್ದಾರೆ. ಎಷ್ಟೇ ಜನರು ಬಂದರೂ ಆಹಾರ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬೃಹತ್‌ ಅಡುಗೆ ಕೋಣೆ, ಊಟದ ಸಭಾಂಗಣ ಸಜ್ಜುಗೊಂಡಿದೆ. ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಸಮಿತಿಯ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ನೀಡಲಾಗಿದೆ. ಇಪ್ಪತ್ತು ದಿನವೂ ದಕ್ಷಿಣ ಭಾರತದ ಆಹಾರ ನೀಡಲಾಗುವುದು’ ಎಂದು ಆಹಾರ ಸಮಿತಿ ಅಧ್ಯಕ್ಷ ಮೈಸೂರಿನ ವಿನೋದ್‌ಕುಮಾರ್‌ ಬಾಕ್ಲಿವಾಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪಂಚಕಲ್ಯಾಣ ಮತ್ತು ಆರಾಧನೆಗಳು ನಡೆಯುವ ಫೆ. 7ರಿಂದಲೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ.

ಉಪಾಹಾರ

ದಕ್ಷಿಣ ಭಾರತದ ಪದ್ಧತಿಯಂತೆ 20 ದಿನವೂ ವಿವಿಧ ರೀತಿಯ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ.

ಉಪಾಹಾರ: ಕೇಸರಿಬಾತ್‌, ಉಪ್ಪಿಟ್ಟು, ಇಡ್ಲಿ, ದೋಸೆ, ಸೆಟ್‌ ದೋಸೆ, ಅವಲಕ್ಕಿ, ಪಲಾವ್‌, ಟೊಮೆಟೊ ಬಾತ್‌, ಪೊಂಗಲ್‌, ಪುಳಿಯೊಗರೆ, ಪಾಯಸ, ಪೂರಿ ಸಾಗು, ಚಪಾತಿ, ಕಾಫಿ/ಚಹಾ.

ಮಧ್ಯಾಹ್ನ, ರಾತ್ರಿ ಊಟ: ಅನ್ನ ಸಾಂಬಾರು, ಶೇಂಗಾ ಚಟ್ನಿ, ತರಕಾರಿ, ಕಾಳಿನ ಪಲ್ಯ, ದಾಲ್‌, ತಿಳಿಸಾರು, ಹೋಳಿಗೆ, ರೊಟ್ಟಿ, ಚಪಾತಿ, ಪೂರಿ, ಹಪ್ಪಳ, ಸಿಹಿ ತಿಂಡಿ, ಉಪ್ಪಿನಕಾಯಿ.

* *

ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ವಸತಿ, ಭೋಜನದ ವ್ಯವಸ್ಥೆ ಸಮರ್ಪಕವಾದರೆ ಮಹಾನ್‌ ಕಾರ್ಯ ಯಶಸ್ವಿಯಾದಂತೆ.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜೈನ ಮಠ

ಪ್ರತಿಕ್ರಿಯಿಸಿ (+)