ಶುಕ್ರವಾರ, ಡಿಸೆಂಬರ್ 13, 2019
27 °C

ಲಲಿತ ಸರೋವರದಲ್ಲಿ ಬೆಳ್ಗೊಳ ಒಡೆಯನ ದರ್ಶನ

ಬಿ.ಪಿ. ಜಯಕುಮಾರ್‌ Updated:

ಅಕ್ಷರ ಗಾತ್ರ : | |

ಲಲಿತ ಸರೋವರದಲ್ಲಿ ಬೆಳ್ಗೊಳ ಒಡೆಯನ ದರ್ಶನ

ಶ್ರವಣಬೆಳಗೊಳ: ಜೈನಕಾಶಿ ಕೇವಲ ಬಾಹುಬಲಿ ಮೂರ್ತಿ, ಬಸದಿಗಳು, ಶಿಲಾ ಶಾಸನಗಳಿಗೆ ಮಾತ್ರವಲ್ಲದೇ ಇತಿಹಾಸ ಪ್ರಸಿದ್ಧ ಕೆರೆಕಟ್ಟೆಗಳಿಗೂ ಹೆಸರಾಗಿದೆ. ಮಂತ್ರಿಗಳು, ದಂಡನಾಯಕರು, ಸ್ತ್ರೀಯರು, ಬಸದಿಗಳ ನಿರ್ಮಾಣದ ಜೊತೆಗೆ ಕೆರೆಕಟ್ಟೆಗಳನ್ನು ನಿರ್ಮಿಸಿ ನೀರಿನ ಸೌಲಭ್ಯ ಕಲ್ಪಿಸಿದ್ದರು. ಶಾಸನಗಳಲ್ಲಿ ಇಲ್ಲಿಯ ಕೆರೆಗಳನ್ನು ದೊಣೆ, ಕಟ್ಟೆ, ಕೊಳ, ಕಲ್ಯಾಣಿ, ಸರೋವರ ಮುಂತಾದ ಹೆಸರಿನಿಂದ ಕರೆಯಲಾಗಿದೆ. ಬೆಳಗೊಳದಲ್ಲಿ ಸುಮಾರು 50 ಕೆರೆ, 10 ಕೊಳ ಕಟ್ಟೆಗಳನ್ನಲ್ಲದೇ ಕಲ್ಯಾಣಿ, ಸರೋವರ, ದೊಣೆಗಳನ್ನು ಉಲ್ಲೇಖಿಸುವ ಶಾಸನಗಳಿವೆ.

ಕ್ರಿ.ಶ.1200ರಲ್ಲಿ ನಿರ್ಮಾಣವಾದ ಬೆಕ್ಕದ ಸಿಂಗಸಮುದ್ರ ಕೆರೆ ಅತಿ ದೊಡ್ಡದು. ಲಲಿತ ಸರೋವರ ಅತಿ ಚಿಕ್ಕದು. 12ನೇ ಶತಮಾನದಲ್ಲಿ ನಿರ್ಮಿಸಿದ ಈ ಸರೋವರ ವಿಂಧ್ಯಗಿರಿಯ ಬಾಹುಬಲಿಯ ಎಡ ಪಾದದ ಬಳಿಯ ಕಮಲಪೀಠದ ಹೊರಭಾಗದಲ್ಲಿದೆ. ಅಲ್ಲಿಯೇ ಇದನ್ನು ‘ಲಲಿತ ಸರೋವರ’ ಎಂದು ಕರೆದ ಶಾಸನವಿದ್ದು, ಇದು ಹಲವು ವಿಶೇಷತೆಯಿಂದ ಕೂಡಿದೆ.

ಬಾಹುಬಲಿ ಮೂರ್ತಿಗೆ ಫೆ. 17ರಿಂದ 25ರವರೆಗೆ ಪ್ರತಿನಿತ್ಯ ಮಹಾಮಸ್ತಕಾಭಿಷೇಕ ನೆರವೇರಲಿದ್ದು, ಇದು 88ನೇ ಮಹಾಮಜ್ಜನವಾಗಲಿದೆ. ಕ್ರಿ.ಶ. 981ರ ಮಾರ್ಚ್‌ 13ರ ಭಾನುವಾರ ಗಂಗರ ಪ್ರಧಾನಮಂತ್ರಿ ಮತ್ತು ದಂಡನಾಯಕ ಚಾವುಂಡರಾಯ ಈ ಮೂರ್ತಿ ಪ್ರತಿಷ್ಠಾಪಿಸಿ ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಿಸಿದ. ಅಲ್ಲಿಂದ ಇಲ್ಲಿಯವರೆಗೂ 12 ವರ್ಷ ಕ್ಕೊಮ್ಮೆ ಮಹಾ ಮಸ್ತಕಾಭಿಷೇಕ ಹಾಗೂ ನಿತ್ಯ ಪಾದಪೂಜೆಗಳು ನಡೆಯುತ್ತಿದೆ. ಜಲ, ಎಳನೀರು, ಈಕ್ಷುರಸ, ಕ್ಷೀರ, ಕಲ್ಕಚೂರ್ಣ, ಅರಿಸಿಣ, ಕಷಾಯ, ಚತುಷ್ಕೋಣ ಕಲಶ, ಅಷ್ಟಗಂಧ, ರಕ್ತಚಂದನ, ಶ್ರೀಗಂಧ, ಕೇಸರಿ ದ್ರವ್ಯಗ ಳಿಂದ ಮಹಾಮಜ್ಜನ ನಡೆಯುತ್ತದೆ. ಸಹಸ್ರಾರು ಲೀಟರ್‌ನಷ್ಟು ದ್ರವ್ಯಗ ಳಿಂದ ಆಗುವ ಅಭಿಷೇಕದ ಸಾಮಗ್ರಿಗಳು ಈ ಚಿಕ್ಕ ಲಲಿತ ಸರೋವರದ ಮೂಲಕ ಹರಿದು ಹೋಗುವುದರಿಂದ ಇದು ವಿಶೇಷತೆ ಪಡೆದಿದೆ.

‘ವೃತ್ತಾಕಾರದ ಆಕಾರವುಳ್ಳ ಕಲ್ಲಿನಿಂದ ನಿರ್ಮಿಸಿದ ಈ ಸರೋವರದ ಮೇಲಿನ ಭಾಗ ಹೊಯ್ಸಳ ಕಾಲದ ತ್ರಿಕೂಟಾಚಲ ದೇವಾಲಯದ ಅಧಿಷ್ಠಾನದ ಮಾದರಿಯಲ್ಲಿದೆ. ಈ ಸರೋವರ ಕೇವಲ 10 ಕೊಡದಷ್ಟು ನೀರು ಅಥವಾ ದ್ರವವನ್ನು ಸಂಗ್ರಹಿಸುವ ಸಾಮರ್ಥ್ಯವಿದ್ದು, ಅಭಿಷೇಕದ ದ್ರವ್ಯ ತುಂಬಿದ ನಂತರ ಅಲ್ಲಿಯೇ ಮೇಲಿರುವ ರಂಧ್ರದ ಮೂಲಕ ಸುಮಾರು 25 ಅಡಿಯಷ್ಟು ದೂರದ ಬಾಹುಬಲಿಯ ಪ್ರಾಂಗಣಕ್ಕೆ ಚಿಕ್ಕ ಕಾಲುವೆಯ ಮೂಲಕ ಹರಿದು ಬರುತ್ತದೆ. ನಂತರ ಈ ದ್ರವ್ಯಗಳು ಎಲ್ಲಿಗೆ ಹರಿದು ಹೋಗುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಇದು ಇತಿಹಾಸಕಾರರನ್ನು ಈಗಲೂ ಕಾಡುವ ಪ್ರಶ್ನೆಯಾಗಿದೆ’ ಎಂದು ಹಿರಿಯ ಪತ್ರಕರ್ತ ಎಸ್‌.ಎನ್‌.ಅಶೋಕ್‌ಕುಮಾರ್‌ ಹೇಳುತ್ತಾರೆ.

ಲಲಿತ ಸರೋವರ ನೀರಿನಿಂದ ಪೂರ್ಣ ತುಂಬಿದಾಗ ಅದರಲ್ಲಿ ಬಾಹುಬಲಿಯ ಪ್ರತಿಬಿಂಬ ಕಾಣಬಹು ದಾಗಿದ್ದು, ಈ ಸರೋವರದ ರಚನೆಯು ಅಂದಿನ ಶಿಲ್ಪಕಲೆಯಲ್ಲಿನ ಜಾಣ್ಮೆ ತೋರಿಸುತ್ತದೆ.

 

ಪ್ರತಿಕ್ರಿಯಿಸಿ (+)