ಬುಧವಾರ, ಡಿಸೆಂಬರ್ 11, 2019
16 °C

ಅಕ್ಕಿಆಲೂರ ಉತ್ಸವ ನಾಳೆಯಿಂದ ಪ್ರಾರಂಭ

ಸುರೇಖಾ ಪೂಜಾರ Updated:

ಅಕ್ಷರ ಗಾತ್ರ : | |

ಅಕ್ಕಿಆಲೂರ ಉತ್ಸವ ನಾಳೆಯಿಂದ ಪ್ರಾರಂಭ

ಅಕ್ಕಿಆಲೂರ: ನಾಡಿನಾದ್ಯಂತ ಧಾರ್ಮಿಕ ಕ್ರಾಂತಿಗೆ ಕಾರಣರಾಗಿರುವ ಹಾನಗಲ್‌ ಕುಮಾರ ಶ್ರೀಗಳ, ಮೌನದಿಂದಲೇ ಈ ಭಾಗದ ಧಾರ್ಮಿಕ ಕ್ಷೇತ್ರದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ  ಚನ್ನವೀರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಮತ್ತು ಇಲ್ಲಿಯ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಿಮಿತ್ತ ಫೆ.5 ರಿಂದ ‘ಅಕ್ಕಿಆಲೂರ ಉತ್ಸವ–2018’ ಆರಂಭಗೊಳ್ಳಲಿದೆ.

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಮಯದಲ್ಲಿ ಇತಿಹಾಸ ಪ್ರಸಿದ್ಧವಾದ ಇಲ್ಲಿಯ ವೀರಭದ್ರೇಶ್ವರ ದೇವಾಲಯ ಕಾಲಗರ್ಭ ಸೇರುತ್ತಿತ್ತು. ಆ ಸಮಯದಲ್ಲಿ ದೇವಾಲಯ ಪುನಶ್ಚೇತನದ ಅಗತ್ಯತೆಯನ್ನು ಮನಗಂಡ ಭಕ್ತರು ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದರು. ಮೂಡಿಯ ಚನ್ನವೀರ ಶ್ರೀಗಳು ಹಾಗೂ ಇಲ್ಲಿಯ ಚನ್ನವೀರ ಶ್ರೀಗಳು ಹಗಲಿರುಳೆನ್ನದೇ ಭಕ್ತರ ಸಹಾಯ, ಸಹಕಾರದಿಂದ ಭವ್ಯ ದೇವಾಲಯ ನಿರ್ಮಿಸಿದರು. ಅಂದಿನ ಕಾಲದಲ್ಲಿಯೇ ನೂತನ ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ವೆಚ್ಚ ಮಾಡಲಾಗಿದೆ. ಜೊತೆಗೆ ದೇವಾಲಯದ ಉದ್ಘಾಟನಾ ಸಮಾರಂಭವನ್ನು ನಾಡಿನ ವಿವಿಧ ಮಠಾಧೀಶರ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿರುವುದು ಇತಿಹಾಸ.

ವೀರಭದ್ರ ದೇವರ ಜಾತ್ರಾ ಮಹೋತ್ಸವ ಹಾಗೂ ಕಾರಣಿಕ ಯುಗ ಪುರುಷ ಲಿಂ.ಹಾನಗಲ್‌ ಕುಮಾರ ಶ್ರೀಗಳ, ಚನ್ನವೀರ ಶ್ರೀಗಳ ಪುಣ್ಯಸ್ಮರಣೋತ್ಸವಕ್ಕೆ ಅಕ್ಕಿಆಲೂರ ಸಜ್ಜುಗೊಳ್ಳುತ್ತಿದ್ದು, ಸಡಗರದ ಸಿದ್ಧತೆಗಳು ನಡೆದಿವೆ. ನಾಲ್ಕು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು ಭಾಗವಹಿಸಲಿದ್ದಾರೆ.

ಮೌನಯೋಗಿ ಚನ್ನವೀರ ಶ್ರೀ: ಅಕ್ಕಿಆಲೂರ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕೇಂದ್ರವಾಗಿ ಗುರುತಿಸಿಕೊಳ್ಳುವಲ್ಲಿ ಇಲ್ಲಿಯ ಚನ್ನವೀರೇಶ್ವರ ವಿರಕ್ತಮಠದ ಪಾತ್ರ ಹಿರಿದಾದುದು. ಸಮಾಜದ ಎಲ್ಲ ರಂಗಗಳಲ್ಲಿಯೂ ಶ್ರೀಮಠದ ಸೇವೆ ಅವಿಸ್ಮರಣೀಯ ಹಾಗೂ ಆದರ್ಶಮಯ. ಜನಸಮುದಾಯದಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಗೊಳಿಸುವಲ್ಲಿ ಶ್ರೀಮಠದ ಎಲ್ಲ ಪೀಠಾಧಿಪತಿಗಳು ಅವಿರತವಾಗಿ ಶ್ರಮಿಸಿದ್ದಾರೆ. ಪ್ರಮುಖವಾಗಿ ಹಿಂದಿನ ಪೀಠಾಧಿಪತಿಗಳಾಗಿದ್ದ ಚನ್ನವೀರ ಶ್ರೀಗಳು ಲಿಂಗಪೂಜೆ, ಅನುಷ್ಠಾನ, ಜಪ, ತಪಸ್ಸು ಸೇರಿದಂತೆ ಇನ್ನಿತರ ಶ್ರೇಷ್ಠ ಸಂಸ್ಕಾರಗಳಿಂದ ಭಕ್ತ ಸಮೂಹದ ಪ್ರೀತಿ–ಗೌರವಕ್ಕೆ ಪಾತ್ರರಾಗಿದ್ದರು. ಪ್ರಮುಖ ಧಾರ್ಮಿಕ ಕೇಂದ್ರದ ಅಧಿಕಾರ ವಹಿಸಿಕೊಂಡರೂ ಸಹ ಶ್ರೀಮಠದ ದೈನಂದಿನ ಜಂಜಾಟಗಳಲ್ಲಿ ಮುಳುಗದೇ ಲಿಂಗಪೂಜೆಯತ್ತ ಚಿತ್ತ ಹರಿಸಿದ್ದ ಚನ್ನವೀರ ಶ್ರೀಗಳೆಂದರೆ ಭಕ್ತ ಸಮೂಹದಲ್ಲಿ ಎಲ್ಲಿಲ್ಲದ ಭಕ್ತಿ–ಭಾವ.

 

ಪ್ರತಿಕ್ರಿಯಿಸಿ (+)