ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ, ಚಿಹ್ನೆಯಷ್ಟೇ ಅಭ್ಯರ್ಥಿಗಳೂ ಪ್ರಬಲ

Last Updated 5 ಫೆಬ್ರುವರಿ 2018, 10:40 IST
ಅಕ್ಷರ ಗಾತ್ರ

ಹಿರೇಕೆರೂರ (ಹಾವೇರಿ ಜಿಲ್ಲೆ):  ಬಯಲು ಸೀಮೆಗಿಂತ ಹೆಚ್ಚು ಮಲೆನಾಡಿನ ತಂಗಾಳಿ, ಪ್ರಬಲ ಸಮುದಾಯಗಳದ್ದೇ ರಾಜಕೀಯ ಮೇಲುಗೈ, ಪಕ್ಷಕ್ಕಿಂತ ನಾಯಕತ್ವಕ್ಕೆ ಬಲ, ಸ್ವಲ್ಪ ಸಿನಿಮಾ– ಒಂದಷ್ಟು ಒಡನಾಟದ ಖದರ್, ಇತರ ಆಕಾಂಕ್ಷಿಗಳಿಂದ ಟಿಕೆಟ್‌ಗಾಗಿ ಗುಟುರ್...

ಇದು ಹಿರೇಕೆರೂರು ವಿಧಾನ ಸಭಾ ಕ್ಷೇತ್ರದ ಚಿತ್ರಣ. ಇಲ್ಲಿನ ಮತದಾರರು ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿ ನಾಯಕತ್ವಕ್ಕೆ ಮಣೆ ಹಾಕಿದ್ದಾರೆ. ಈ ಬಾರಿಯೂ ಇಂತಹುದೇ ಸ್ಪರ್ಧೆಯ ಲಕ್ಷಣವಿದೆ. ಈ ಬಾರಿ ಇಬ್ಬರೂ ನಾಯಕರು ಪ್ರಮುಖ ಪಕ್ಷಗಳಿಗೆ ಸೇರಿದ್ದು, ಪ್ರಬಲ ಸ್ಪರ್ಧೆ ನಿಶ್ಚಿತವಾಗಿದೆ.

ಪೊಲೀಸ್, ಸಿನಿಮಾ, ರೈತರ ಹೋರಾಟದ ಮೂಲಕ ತಮ್ಮದೇ ಛಾಪು ಬೀರಿದ ಬಿ.ಸಿ. ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ. ಹಿರೇಕೆರೂರಿನಲ್ಲಿ ನಡೆದ ಸಮಾರಂಭದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದಾರೆ. ಇನ್ನೊಂದೆಡೆ, ತಮ್ಮದೇ ಆದ ಒಡನಾಟದ ಶೈಲಿ, ಅಪ್ಪಾಜಿಯ ಹೆಸರಿನ ಬಲ ಹೊಂದಿರುವ ಶಾಸಕ ಯು.ಬಿ.ಬಣಕಾರ ಬಿಜೆಪಿ ಅಭ್ಯರ್ಥಿ. ಹಂಸಭಾವಿಯಲ್ಲಿ ನಡೆದ ಪರಿವರ್ತನಾ ರ‍್ಯಾಲಿಯಲ್ಲಿ ಬಣಕಾರ ಹೆಸರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಈ ಇಬ್ಬರೂ ಪ್ರಬಲ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲ, ಈ ಹಿಂದೆ ಬೇರೆ ಪಕ್ಷಗಳಿಂದ ನಿಂತಾಗಲೂ ಬಿ.ಸಿ. ಪಾಟೀಲ್‌ (ಜೆಡಿಎಸ್) ಹಾಗೂ ಯು.ಬಿ. ಬಣಕಾರ (ಕೆಜೆಪಿ) ಜಯಗಳಿಸಿದ್ದರು. ಇದು, ಅವರ ವೈಯಕ್ತಿಕ ವರ್ಚಸ್ಸಿಗೆ ಹಿಡಿದ ಕೈಗನ್ನಡಿ. ಪಕ್ಷ, ಧರ್ಮ, ಜಾತಿಗಳನ್ನು ಮೀರಿ ಬೆಂಬಲಿಗರ ವಲಯವು ಇಬ್ಬರಿಗಿದೆ. ಬೇರುಮಟ್ಟದಲ್ಲಿ ರಾಜಕೀಯ ಸಂಚಲನ ರೂಪಿಸಬಲ್ಲ ಚಾಣಾಕ್ಷರು. ಹೀಗಾಗಿ ಚುನಾವಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

‘ಸ್ವತಃ ಸಿದ್ದರಾಮಯ್ಯ ಅಭ್ಯರ್ಥಿಯಾದರೂ ಗೆಲ್ಲಿಸಿ ಕೊಡುತ್ತೇನೆ’ ಎಂದು ಬಿ.ಸಿ. ಪಾಟೀಲ್ ಆಹ್ವಾನ ನೀಡಿದ್ದರೆ, ಬಿ.ಎಸ್. ಯಡಿಯೂರಪ್ಪ ಅಪ್ಪಟ ಅನುಯಾಯಿ ಯು.ಬಿ. ಬಣಕಾರ. ಪ್ರಬಲ ನಾಯಕತ್ವಗಳ ಕೃಪಾಶೀರ್ವಾದವೂ ಪ್ರಮುಖ ಅಂಶವಾಗಿದೆ.

ಇವರಿಬ್ಬರ ಭರದ ಸಿದ್ಧತೆಯ ನಡುವೆಯೂ ಕೆಲವರು ಬಹಿರಂಗವಾಗಿ ಹಾಗೂ ಇನ್ನೂ ಹಲವರು ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಸಾಂಬಾರು ಮಂಡಳಿ ಅಧ್ಯಕ್ಷೆ ಶಶಿಕಲಾ ಕವಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇತ್ತ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿರುವ ಎಸ್.ಕೆ. ಕರಿಯಣ್ಣನವರ ಕೂಡಾ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಆರ್, ಎನ್‌. ಗಂಗೋಳ ಮತ್ತಿತರರ ಹೆಸರು ಕೇಳಿಬಂದಿದ್ದರೂ, ಈಗ ಬಿ.ಸಿ. ಪಾಟೀಲ್ ಜೊತೆಗೂಡಿದ್ದಾರೆ. ಬಿಜೆಪಿಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಎನ್.ಎಂ.ಈಟೇರ ಆಕಾಂಕ್ಷೆ ವ್ಯಕ್ತಪಡಿಸಿದ್ದರೆ, ಲಿಂಗರಾಜ ಚಪ್ಪರದಹಳ್ಳಿ ಕೂಡಾ ಸ್ಪರ್ಧೆಯಲ್ಲಿದ್ದಾರೆ.

ಜೆಡಿಎಸ್‌ನಿಂದ ಸಿದ್ದಪ್ಪ ಗುಡದಪ್ಪನವರ ಹಾಗೂ ಎಚ್.ಎಸ್.ಅರವಿಂದ ಪ್ರಯತ್ನ ನಡೆಸಿದ್ದಾರೆ. ಚಿತ್ರನಟ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ವು ಜಿಲ್ಲೆಯಲ್ಲೇ ಈ ಕ್ಷೇತ್ರದಿಂದ ತನ್ನ ಮೊದಲ ಅಭ್ಯರ್ಥಿ ಡಾ.ಭರತ್ ಎಕ್ಕಿಗುಂದಿ ಹೆಸರನ್ನು ಘೋಷಿಸಿದೆ. ಒಟ್ಟಾರೆ, ದಿನೇ ದಿನೇ ಮಲೆನಾಡಿನ ತಂಗಾಳಿಯ ಹಿರೇಕೆರೂರಿನಲ್ಲಿ ಚುನಾವಣಾ ಕಾವು ಏರುತ್ತಿದೆ.

2013ರಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳು
ಯು.ಬಿ.ಬಣಕಾರ (ಕೆ.ಜೆ.ಪಿ)– 52,623
ಬಿ.ಸಿ.ಪಾಟೀಲ (ಕಾಂಗ್ರೆಸ್)– 50,017
ಬಿ.ಎಚ್.ಬನ್ನಿಕೋಡ (ಪಕ್ಷೇತರ)– 10,579
ಎಚ್.ಎಂ.ಅಶೋಕ (ಬಿ.ಎಸ್.ಆರ್. ಕಾಂಗ್ರೆಸ್)– 3,399
ಫಾಲಾಕ್ಷಗೌಡ ಪಾಟೀಲ (ಬಿಜೆಪಿ)– 3,177
ಡಿ.ಎಂ.ಸಾಲಿ (ಜೆಡಿಎಸ್)– 1,885
ಒಟ್ಟು ಚಲಾವಣೆಯಾದ ಮತಗಳು – 1,32,230

ಮತದಾರರ ವಿವರಗಳು (ಈ ಪೈಕಿ ಮಹಿಳಾ ಮತದಾರರು)
2013 ರಲ್ಲಿ ಮತದಾರರು– 1,55,971 (73,505)
2018ರಲ್ಲಿ ಮತದಾರರು– 1,73,927 (83,368)
ಒಟ್ಟು ಮತದಾರರ ಹೆಚ್ಚಳ– 17,956 (9,863)
(*2018 ಮತದಾರರ ಪಟ್ಟಿಯು ಅಂತಿಮ ಪರಿಷ್ಕರಣೆಗೆ ಒಳಪಡಲಿದೆ)

ಕ್ಷೇತ್ರದ ವಿವಿಧ ಅಂಕಿ ಅಂಶಗಳು

ಮತಗಟ್ಟೆಗಳು– 228
ಗ್ರಾಮ ಪಂಚಾಯ್ತಿಗಳು –40
ಗ್ರಾಮಗಳು –128
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳು–6
ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳು– 22
ಎಪಿಎಂಸಿ ಕ್ಷೇತ್ರಗಳು–14
ಪಟ್ಟಣ ಪಂಚಾಯ್ತಿ–1
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT