ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠ ಮುಚ್ಚುವ ರವಿಕೆಯ ಚೆಲುವು

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಹೇ... ಸುಮಾ ನೋಡೇ ಅಲ್ಲಿ. ಸುಜಾತ ಎಷ್ಟು ಚಂದನೆಯ ಬ್ಲೌಸ್ ಹೊಲಿಸಿದ್ದಾಳೆ. ಒಂದ್ಚೂರು ಮೈ ಕಾಣೋಲ್ಲ. ಅವಳ ಸೀರೆಗಿಂತ ಆ ಬ್ಲೌಸೇ ಎಷ್ಟು ಚೆನ್ನಾಗಿ ಕಾಣ್ತಾ ಇದೆ ಅಲ್ವಾ? ಚೂಡಿಗಷ್ಟೇ ಹೈನೆಕ್ ಇದ್ದರೆ ಚಂದ ಕಾಣುತ್ತೆ ಅಂದ್ಕೊಡಿದ್ದೆ. ಪರವಾಗಿಲ್ಲ ಬ್ಲೌಸ್‌ಗೂ ಹೈನೆಕ್ ಚೆನ್ನಾಗಿ ಒಪ್ಪುತ್ತೆ...’ ಸಂಕ್ರಾಂತಿಯಂದು ಹೈನೆಕ್ ರವಿಕೆ ತೊಟ್ಟು ಸೀರೆ ಉಟ್ಟು ಕಾಲೇಜಿಗೆ ಬಂದಿದ್ದ ಸುಜಾತಳತ್ತ ಆಕರ್ಷಕ ವಿನ್ಯಾಸದ ರವಿಕೆಯತ್ತಲೇ ಸುಷ್ಮಿತಾಳ ಮಾತು ಮುಂದುವರಿದಿತ್ತು.

ಹೈನೆಕ್ ರವಿಕೆ ತೊಡೋದು ಸ್ತ್ರೀವಾದಿಗಳ ಇಲ್ಲವೇ ಮಹಿಳಾ ರಾಜಕಾರಣಿಗಳ ಟ್ರೆಂಡ್ ಅನ್ನುವ ಕಾಲವಿತ್ತು. ಆದರೆ, ದಿನೇದಿನೇ ಬದಲಾಗುತ್ತಿರುವ ಫ್ಯಾಷನ್ ಲೋಕದಲ್ಲಿ ಹಳೆ ವಿನ್ಯಾಸ ಹೊಸ ಬಟ್ಟೆಯೊಂದಿಗೆ ಮಿಳಿತವಾಗಿ ಮತ್ತೊಂದು ಹೊಸ ಟ್ರೆಂಡ್‌ ಸೃಷ್ಟಿಯಾಗುತ್ತಲೇ ಇರುತ್ತದೆ. ಇದಕ್ಕೆ ಹೈನೆಕ್ ಅಥವಾ ಕ್ಲೋಸ್ಡ್‌ ಇಲ್ಲವೇ ಕಾಲರ್ ನೆಕ್ ವಿನ್ಯಾಸದ ರವಿಕೆಯೇ ಸಾಕ್ಷಿ.

ಸೀರೆ ವಿನ್ಯಾಸ ಹೇಗೆ ಇರಲಿ ಅದಕ್ಕೊಂದು ಕಂಠಮುಚ್ಚುವ, ಮೊಳಕೈ ಉದ್ದುದ್ದ ಹೈನೆಕ್ ರವಿಕೆ ತೊಟ್ಟರೆ ಸಾಕು ನಾಲ್ಕು ಜನರಲ್ಲಿ ಎದ್ದು ಕಾಣಬಹುದು. ಗೌರವ ಮತ್ತು ಘನತೆಯ ನೋಟ ನೀಡುವ ಹೈನೆಕ್ ರವಿಕೆ ತೊಡುವವರಿಗೆ ಆರಾಮದಾಯಕ. ಸೀರೆ ಸೆರಗು ಜಾರುವ ಭಯವಿಲ್ಲ. ಜಾರಿದರೂ ಎದೆಯ ನೋಟ ಕಾಣುವ ಭೀತಿಯಿಲ್ಲ. ಪದೇಪದೇ ಸೆರಗು ಸೀರೆ ಪಡಿಸಿಕೊಳ್ಳುವ ಉಸಾಬರಿಯೂ ಬೇಕಿಲ್ಲ. ಹಾಗಾಗಿಯೇ ಹೈನೆಕ್ ರವಿಕೆ ವಯೋಮಾನ ಮೀರಿ ಹೆಂಗಳೆಯರ ಮೆಚ್ಚುಗೆ ಗಳಿಸಿದೆ.

ಸಭೆ–ಸಮಾರಂಭಗಳಲ್ಲಂತೂ ಹೈನೆಕ್ ತೊಟ್ಟ ನೀರೆಯರತ್ತಲೇ ಎಲ್ಲರ ಕಣ್ಣು ಅನ್ನುವಷ್ಟು ಎದ್ದು ಕಾಣುವ ವಿನ್ಯಾಸ ಈ ರವಿಕೆಯದ್ದು. ರೇಷ್ಮೆ ಸೀರೆಯೇ ಇರಲಿ, ಕಾಟನ್ ಸೀರೆಯೇ ಇರಲಿ ಎಲ್ಲ ಬಗೆಯ ಸೀರೆಗಳಿಗೂ ಹೈನೆಕ್ ರವಿಕೆ ಹೊಂದಿಕೆಯಾಗುತ್ತದೆ.

ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ, ಸೋನಂ ಕಪೂರ್, ಶ್ರೀದೇವಿ, ಕಂಗನಾ ರೌನತ್, ವಿದ್ಯಾಬಾಲನ್, ಜಾಕ್ವೆಲಿನ್ ಫರ್ನಾಂಡೀಸ್, ಕಾಲಿವುಡ್‌ನ ತಮನ್ನಾ, ಸಮಂತಾ ರುತ್‌ಪ್ರಭು, ನಯನ್ ತಾರಾ ಹೀಗೆ ಸಾಲುಸಾಲು ತಾರೆಯರ ದಂಡೇ ಹೈನೆಕ್ ವಿನ್ಯಾಸ ರವಿಕೆಯಲ್ಲಿ ಸಭೆ–ಸಮಾರಂಭಗಳಲ್ಲಿ   ಮಿಂಚುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ ‘ಪದ್ಮಾವತ್’ ಸಿನಿಮಾದಲ್ಲೂ ಗುಳಿಕೆನ್ನೆಯ ಬೆಡಗಿ ದೀಪಿಕಾ ಪಡುಕೋಣೆ ಕೆಂಪು ಹೈನೆಕ್‌ ರವಿಕೆಯಲ್ಲಿ ಕಂಗೊಳಿಸಿದ್ದರು. ಅಷ್ಟೇ ಅಲ್ಲ ಬ್ಯಾಡ್ಮಿಂಟನ್ ಫೆಡರೇಷನ್ ಈಚೆಗೆ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಅವರ ಜೀವಮಾನದ ಸಾಧನೆಗೆ ಗೌರವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ದೀಪಿಕಾ ತೊಟ್ಟಿದ್ದು ತಿಳಿ ಗುಲಾಬಿಯ ಹೈನೆಕ್ ರವಿಕೆ ಮತ್ತು ಸೀರೆ.

ಸೆಲೆಬ್ರಿಟಿ ವಸ್ತ್ರವಿನ್ಯಾಸಕ ಸಬ್ಯಸಾಚಿ ವಿನ್ಯಾಸಗೊಳಿಸಿದ್ದ ಈ ಸೀರೆ–ರವಿಕೆಯಲ್ಲಿ ದೀಪಿಕಾ ತಾಜಾ ಗುಲಾಬಿ ಹೂವಿನಂತೆ ನಳನಳಿಸುತ್ತಿದ್ದರು. ಅಂತೆಯೇ ಸಿನಿಲೋಕದ ಸಮಾರಂಭವೊಂದರಲ್ಲಿ ದೀಪಿಕಾ ಚಿನ್ನದ ಬಣ್ಣದ ಟಿಶ್ಯೂ ಸೀರೆ ಕಪ್ಪು ವೆಲ್ವೆಟ್ ಹೈನೆಕ್ ರವಿಕೆ ಧರಿಸಿ ಕಂಠ ತುಂಬುವ ಚಿನ್ನದ ಕಂಠಹಾರ ಮತ್ತು ಅಗಲದ ಕಿವಿಯೋಲೆ ಧರಿಸಿ ಮಿಂಚಿದ್ದರು. ಆಗಲೂ ಹೈನೆಕ್ ರವಿಕೆ ಫ್ಯಾಷನ್ ಲೋಕ ಮತ್ತು ದೀಪಿಕಾ ಅಭಿಮಾನಿಗಳಲ್ಲಿ ಚರ್ಚೆಯ ವಿಷಯವಾಗಿತ್ತು.

ಹೈನೆಕ್ ರವಿಕೆ ಧರಿಸಲು ಆರಾಮದಾಯಕವಷ್ಟೇ ಅಲ್ಲ ಸ್ಟೈಲ್ ಸ್ಟೇಟ್‌ಮೆಂಟ್‌ ಕೂಡ ಹೌದು. ಅಂಚುಳ್ಳ ಡಿಸೈನರ್ ಸೀರೆಗಳಿಗೆ ಹೈನೆಕ್ ಚೆನ್ನಾಗಿ ಒಪ್ಪುತ್ತದೆ. ಇತ್ತೀಚೆಗೆ ರೇಷ್ಮೆ ಸೀರೆಗಳಿಗೆ ಹೈನೆಕ್ ರವಿಕೆ ತೊಡುವುದು ಟ್ರೆಂಡ್ ಆಗಿದೆ.

ಎತ್ತರವಿರುವವರು, ಕುಳ್ಳಗಿನವರು, ತೆಳ್ಳಗಿರುವವರು, ದಪ್ಪಗಿರುವವರಿಗೆ ಹೀಗೆ ಎಲ್ಲರಿಗೂ ಹೈನೆಕ್ ರವಿಕೆ ಧರಿಸಲಡ್ಡಿಯಿಲ್ಲ. ಆದರೆ, ಅಗಲವಾದ ಭುಜ, ಕಡಿಮೆ ಅಗಲವಾದ ಭುಜದ ಅಂಗಸೌಷ್ಟವ ಹೊಂದಿರುವವರು ತಮಗೆ ಸೂಕ್ತವಾದ ವಿನ್ಯಾಸಗಳನ್ನೇ ಆರಿಸಿಕೊಳ್ಳುವುದು ಉತ್ತಮ ಎನ್ನುತ್ತಾರೆ ವಸ್ತ್ರವಿನ್ಯಾಸಕರು.

ಹೈಬೋಟ್ ನೆಕ್ ಅಂತೂ ಎಲ್ಲರಿಗೂ ಒಪ್ಪುತ್ತದೆ. ಸಾಧಾರಣ ರವಿಕೆ ಧರಿಸಿ ಬೋರ್ ಆಗಿರುವವರು ಒಮ್ಮೆ ಹೈಬೋಟ್ ನೆಕ್ ರವಿಕೆ ಪ್ರಯತ್ನಿಸಬಹುದು. ಈ ರವಿಕೆ ತೊಡುವಾಗ ಪಾರದರ್ಶಕ ಬ್ರಾಸ್ಟ್ರಿಪ್ ಬಳಸುವುದು ಉತ್ತಮ ಇಲ್ಲವೇ ಸಲ್ವಾರ ಕಮೀಜ್ ಬ್ರಾ ಧರಿಸಬಹುದು. ಇಲ್ಲದಿದ್ದಲ್ಲಿ ಬ್ರಾ ಸ್ಟ್ರಿಪ್ ಎದ್ದುಕಂಡು ರವಿಕೆ ಧರಿಸಿದವರಿಗೂ ನೋಡುಗರಿಗೂ ಮುಜುಗರವುಂಟಾಗಬಹುದು.

ಹೈನೆಕ್ ರವಿಕೆ ತೊಡುವುದರ ಬಹುದೊಡ್ಡ ಲಾಭವೆಂದರೆ, ಯಾವುದೇ ಕೊರಳ ಹಾರ ಹಾಕದಿರುವುದು. ಸಾಧಾರಣ ವಿನ್ಯಾಸದ ರವಿಕೆ–ಸೀರೆ ತೊಟ್ಟಾಗ ಕತ್ತು ಬೋಳಾಗಿ ಕಾಣಬಾರದೆಂದು ಹೆವಿ ಆಭರಣಗಳನ್ನು ಧರಿಸಬೇಕಾಗುತ್ತದೆ. ಆದರೆ, ಹೈನೆಕ್ ರವಿಕೆ ತೊಟ್ಟಾಗ ಸಭೆ–ಸಮಾರಂಭಗಳಿಗೆ ಅನುಗುಣವಾಗಿ ಸರಳವಾದ ಕೊರಳ ಹಾರಗಳನ್ನು ಧರಿಸಬಹುದು. ಕಸೂತಿ ಇಲ್ಲವೇ ಲೇಸ್ ವಿನ್ಯಾಸ ಹೈನೆಕ್ ರವಿಕೆ ತೊಟ್ಟಾಗ ಆ ವಿನ್ಯಾಸ ಎದ್ದುಕಾಣಲು ಸರಳವಾದ ಸೀರೆ ಧರಿಸುವುದು ಸೂಕ್ತ.

ಕಾಲರ್ ಇರುವ ಹೈನೆಕ್‌ಗೆ ಜಿಪ್ ಕೂಡಾ ಅಳವಡಿಸುವುದು ಈಗಿನ ಟ್ರೆಂಡ್ ಆಗಿದೆ. ಇದರಿಂದ ಸಾಂಪ್ರದಾಯಿಕ ಸೀರೆಗೆ ಆಧುನಿಕ ನೋಟ ನೀಡಬಹುದು. ಇನ್ನು ಪಾರ್ಟಿಗಳಿಗೆ  ಹಾಲ್ಟರ್ ನೆಕ್ ಇರುವ ಸ್ಲೀವ್‌ಲೆಸ್ ರವಿಕೆ ಚೆನ್ನಾಗಿ ಒಪ್ಪುತ್ತದೆ. ಹೈನೆಕ್‌ ರವಿಕೆಗೆ ಕೀ ಹೋಲ್ ವಿನ್ಯಾಸ ವಿಭಿನ್ನ ನೋಟ ನೀಡುತ್ತದೆ. ಫ್ರಂಟ್ ಬಟನ್ ಹೈನೆಕ್, ವಿ ಶೇಪ್ ಹೈನೆಕ್ ದಪ್ಪ ಮೈಯುಳ್ಳವರನ್ನು ಸಣ್ಣದಾಗಿ ಕಾಣುವ ನೋಟ ನೀಡುತ್ತದೆ. ತೆಳ್ಳಗಿರುವವರಿಗೆ ಉದ್ದನೆಯ ತೋಳಿನ ಪೋಲೊ ವಿನ್ಯಾಸದ ಹೈನೆಕ್ ಆಕರ್ಷಕವಾಗಿರುತ್ತದೆ. ಹೈನೆಕ್‌ ರವಿಕೆ ಕನ್ನಡಿ ವಿನ್ಯಾಸ, ಕಟ್‌ ವರ್ಕ್ ನೆಕಲೇಸ್, ಸೆಮಿಶೀರ್ (ಪಾರದರ್ಶಕ ವಿನ್ಯಾಸ), ನೆಟ್ ಸ್ಲೀವ್, ಸ್ಲೀವ್‌ಲೆಸ್, ಫುಲ್ ಸ್ಲೀವ್ಸ್‌... ಹೀಗೆ ಬರೆದಷ್ಟೂ ಮುಗಿಯದ ವಿನ್ಯಾಸಗಳೂ ಹೈನೆಕ್ ರವಿಕೆಯ ಅಂದವನ್ನು ಹೆಚ್ಚಿಸುತ್ತವೆ.

ಮಾರುಕಟ್ಟೆಯಲ್ಲಿ ರೆಡಿಮೇಡ್ ಹೈನೆಕ್ ರವಿಕೆಗಳು ಸಿಗುತ್ತವೆಯಾದರೂ ಫಿಟ್ಟಿಂಗ್ ಸರಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳುವುದೊಳಿತು. ಇಷ್ಟದ ವಿನ್ಯಾಸವನ್ನು ಟೈಲರ್ ವಿವರಿಸಿ, ಸೂಕ್ತ ಅಳತೆ ನೀಡಿಯೇ ಹೊಲಿಸಿದಲ್ಲಿ ಆರಾಮದಾಯಕವಾಗಿ ಧರಿಸಬಹುದು.

*
ಸರಳ ವಿನ್ಯಾಸ ಹೈನೆಕ್ ರವಿಕೆಯ ತೋಳಿನ ಮೇಲೆ ಪಕ್ಷಿ ಇಲ್ಲವೇ ದೇವರ ಚಿತ್ರ ಈಗಿನ ಲೇಟೆಸ್ಟ್ ಫ್ಯಾಷನ್. ಇದನ್ನು ವಯೋಭೇದವಿಲ್ಲದೇ ಎಲ್ಲರೂ ಧರಿಸಬಹುದು.
–ಸುಮಾ ರೆಡ್ಡಿ, ವಸ್ತ್ರವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT