ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬದಲಿಸುವ ಹಲಸಿನ ಸೊಳೆ

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಹಲಸಿನ ಸೊಳೆ ಹೆಚ್ಚಾಗಿ ಹಳದಿ ಬಣ್ಣದ್ದು. ಬಿಳಿ, ನಸು ಹಳದಿಯವೂ ಇವೆ. ಕಿತ್ತಳೆ, ಕೆಂಪು ಬಣ್ಣದ್ದು ಅಪೂರ್ವವಾದರೂ ಇವೆ. ಆದರೆ, ಒಂದೇ ಮರ ಹಳದಿ, ಕೆಂಪು – ಎರಡೂ ಬಣ್ಣಗಳ ಹಲಸಿನ ಹಣ್ಣು ಕೊಡುವುದು ಕೇಳಿದ್ದೀರಾ?

ಇಂಥದೊಂದು ಇಬ್ಬಣ್ಣದ ಹಣ್ಣು ಕೊಡುವ ಅತ್ಯಪೂರ್ವ ಮರ ಮಹಾರಾಷ್ಟ್ರದಲ್ಲಿದೆ. ಅಲ್ಲಿನ ಪಾಲ್ ಘರ್ ಜಿಲ್ಲೆಯ ಅನಿಲ ಪಾಟೀಲರ ಹಿತ್ತಲಲ್ಲಿರುವ ಏಳು ವರ್ಷದ ಮರ ಈ ವಿಶೇಷ ಗುಣವನ್ನು ತೋರಿಸುತ್ತಿದೆ. ಋತುವಿನ ಆರಂಭದಲ್ಲಿ ಇದರ ಸೊಳೆ ಮಧ್ಯಮ ಹಳದಿ ಬಣ್ಣದ್ದು. ‘ಫೆಬ್ರುವರಿ ಕಳೆದು ವಾತಾವರಣ ಬಿಸಿಯಾಗ ತೊಡಗಿತೋ, ಈ ತಳಿಯ ಹಣ್ಣಿನ ಸೊಳೆ ಕೆಂಪಾಗುತ್ತದೆ’ ಎನ್ನುತ್ತಾರೆ ಪಾಟೀಲ.

ಹದ ಹಳದಿಯಿಂದ ದಟ್ಟಗೆಂಪು ಬಣ್ಣ ಎಂದರೆ ಚಿಕ್ಕ ವ್ಯತ್ಯಾಸವೇನಲ್ಲ. ಇಷ್ಟು ಮಾತ್ರವಲ್ಲ, ಕೆಂಪಾದ ಮೇಲೆ ಸೊಳೆಯ ಸಿಹಿತನ ಹೆಚ್ಚುತ್ತದೆ. ಆದರೆ ಹಳದಿ ಸೊಳೆಯಷ್ಟು ಗಟ್ಟಿ ಕೆಂಪಿನದು ಇರುವುದಿಲ್ಲ. ಅದು ಸ್ವಲ್ಪ ಮೆತ್ತಗಾಗುತ್ತದೆ’ ಎನ್ನುತ್ತಾರೆ ಪಾಟೀಲರು.

ಪಾಲ್ ಘರ್ ರೈಲು ನಿಲ್ದಾಣದಿಂದ ಅನಿಲರ ‘ಕೇಶರ್ ನರ್ಸರಿ ಮತ್ತು ಫಾರ್ಮ್’ ಸರಿಸುಮಾರು 40 ಕಿಲೋಮೀಟರ್ ದೂರ. ರುಚಿರುಚಿಯಾದ ಹಣ್ಣು ಕೊಡುವ ಈ ಕಸಿಗಿಡ ಇವರು ತಂದದ್ದು ನೆರೆಯ ಕೃಷಿಕ ಪ್ರಕಾಶ್ ಸಾವಂತರಿಂದ. ಒಳ್ಳೆಯ ಆರೈಕೆ ಇದ್ದರೆ ಜಾತಿಯ ಗಿಡ ನೆಟ್ಟು ಮರುವರ್ಷದಲ್ಲೇ ಈ ಹಣ್ಣು ಬಿಡುತ್ತದೆ. ಮೊದಲ ಎರಡು ವರ್ಷ ಪಾಟೀಲರು ಈ ಗಿಡ ಬಿಟ್ಟ ಎಳೆ ಕಾಯಿಯನ್ನು ಕಿತ್ತು ತೆಗೆದಿದ್ದರು. ಕಳೆದ ಐದು ಋತುಗಳಿಂದ ಈ ಮರ ಚಳಿಗಾಲದಲ್ಲಿ ಹಳದಿ, ಬೇಸಿಗೆಯಲ್ಲಿ ಕೆಂಪು ಹಣ್ಣು ಕೊಡುತ್ತಲೇ ಇದೆ.

ನೆಟ್ಟು ಚೆನ್ನಾಗಿ ಬೆಳೆಸಿದರೆ ಎರಡು ವರ್ಷದೊಳಗೆ ಹಣ್ಣು ತಿನ್ನಲು ಕೊಡುವುದು ಇದರ ಅಚ್ಚರಿಯ ಗುಣ. ಈ ಜಾತಿಯ ಗಿಡ ಇನ್ನೂ ಹಲವು ವಿಶೇಷ ಗುಣ ಹೊಂದಿದೆ. ವರ್ಷದ ಹೆಚ್ಚು ಸಮಯದಲ್ಲೂ ಬೆಳೆ ಕೊಡುತ್ತದೆ. ಸೊಳೆ ನಸು ಕೇಸರಿ ಬಣ್ಣ ಹೊಂದಿರುತ್ತದೆ. ಬೀಜದ ಗಿಡವೂ ಬೇಗನೆ ಫಸಲು ಕೊಡುತ್ತಿದ್ದು ತಾಯಿಗುಣ ಉಳಿಸಿಕೊಳ್ಳುವುದು ಇನ್ನೊಂದು ಸದ್ಗುಣ.

ಈ ಹಳದಿಗೆಂಪು ಅಚ್ಚರಿಯ ತಳಿಯ ಹಲಸಿನ ಮರದ ಅಮ್ಮ ಮತ್ತಾಕೆಯ ನಿಕಟ ಬಂಧುಗಳು ಪ್ರಕಾಶ್ ಸಾವಂತರಲ್ಲಿ ಇವೆಯಲ್ಲ? ನಾಲ್ಕು ವರ್ಷಗಳ ಹಿಂದೆ ಅಲ್ಲಿಂದ ಕಸಿ ಕುಡಿ ತಂದು ಅತ್ರಾಡಿಯ ಕಸಿ ನಿಪುಣ ಗುರುರಾಜ್ ಬಾಳ್ತಿಲ್ಲಾಯ ಗಿಡ ಮಾಡಿದ್ದಾರೆ. ಇವರಲ್ಲಿಂದ ಒಯ್ದ ಗಿಡಗಳೂ ಬೇಗನೆ ಫಲ ಕೊಡುವ ಮತ್ತು ಅಕಾಲ ಫಲ ನೀಡಿಕೆಯ ಗುಣ ತೋರಿಸುತ್ತಿವೆ. ಆದರೆ ಸೊಳೆಯ ಬಣ್ಣದಲ್ಲಿ ಇಷ್ಟೊಂದು ಅಂತರ ವರದಿ ಆಗಿರುವುದು ಪಾಟೀಲರ ಮರದಲ್ಲಿ ಮಾತ್ರ.

‘ಋತು ಅನುಸರಿಸಿ ಸೊಳೆಯ ಬಣ್ಣ ಒಂದಷ್ಟು ವ್ಯತ್ಯಾಸ ಆಗುವುದಿದೆ. ಆದರೆ ಇಷ್ಟು ವ್ಯತ್ಯಾಸ ಈವರೆಗೆ ನೋಡಿಲ್ಲ’ ಎನ್ನುತ್ತಾರೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಲಸಿನ ವಿಶೇಷಜ್ಞೆ ಡಾ. ಶ್ಯಾಮಲಮ್ಮ. ‘ಸಂಶೋಧನೆಯ ದೃಷ್ಟಿಯಿಂದ ಇದು ಮಹತ್ವದ್ದು’ ಎನ್ನುತ್ತಾರೆ ಬಾಗಲಕೋಟೆ ತೋಟಗಾರಿಕಾ ವಿವಿಯ ಕುಲಪತಿ ಡಾ.ಡಿ.ಎಲ್. ಮಹೇಶ್ವರ್ ಮತ್ತು ಮಹಾರಾಷ್ಟ್ರದ ದಾಪೋಲಿಯ ಬಾಳಾಸಾಹೇಬ್ ಕೇಕೇವಿಯ ತೋಟಗಾರಿಕಾ ವಿಭಾಗ ಮುಖ್ಯಸ್ಥ ಡಾ, ಪರಾಗ್ ಹಲ್ದಂಕರ್.

ಅನಿಲ ಪಾಟೀಲರ ಈ ಅಚ್ಚರಿಯ ಹಲಸು ಸ್ವಲ್ಪ ಉದ್ದನೆಯ ಆಕಾರದ್ದು. ಸೆಪ್ಟೆಂಬರಿನಲ್ಲಿ ಋತು ಆರಂಭವಾಗುವಾಗ 10–15 ಕಿಲೋ ತೂಕದ ಹಣ್ಣು ಕೊಡುತ್ತದೆ. ಮಾರ್ಚ್–ಏಪ್ರಿಲ್‌ನಲ್ಲಿ ಸೀಸನ್ನಿಗೆ ತೆರೆ ಎಳೆಯುವ ಹೊತ್ತಿನ ಹಣ್ಣುಗಳ ಇದರ ಅರ್ಧಕ್ಕರ್ದ ತೂಕದವು. ಈ ಋತುವಿನಲ್ಲಿ ಹದಿನೈದು ಹಣ್ಣು ಕೊಟ್ಟಿತ್ತು.

‘ಸೂರ್ಯರಶ್ಮಿಗೂ ಹಲಸಿನ ಹಣ್ಣಿನ ಸೊಳೆಯ ಬಣ್ಣಕ್ಕೂ ಸಂಬಂಧ ಇದ್ದಂತಿದೆ. ಬೈರಚಂದ್ರ ಜಾತಿಯದು ಆರಂಭದಲ್ಲಿ ಬಿಡುವ ಸೊಳೆ ನಡುವೆ ಕೆಂಪು, ಆಚೀಚೆ ನಸುಗೆಂಪು ಬಣ್ಣ ಇದ್ದು ಎರಡು ಬಣ್ಣದ್ದರಂತೆ ಕಾಣುತ್ತದೆ. ಅದೇ ಬೇಸಿಗೆ ಬಂದರೆ ಇಡೀ ಸೊಳೆ ಒಳ್ಳೆ ಕೆಂಪಾಗುತ್ತದೆ’ ಎನ್ನುತ್ತಾರೆ ಡಾ. ಶ್ಯಾಮಲಮ್ಮ. ‘ಕೆಂಪು ತಳಿಗಳು ಫಸಲು ಕೊಡೋದೇ ಸಾಮಾನ್ಯ ಹಲಸಿನ ಸೀಸನಿನ ಅಂತ್ಯದಲ್ಲಿ, ಗಮನಿಸಿ’ ಎಂದು ಮಾತು ಸೇರಿಸುತ್ತಾರೆ ಗುರುರಾಜ್ ಬಾಳ್ತಿಲ್ಲಾಯ.

ಹಲಸಿನ ಸೊಳೆಯ ಬಣ್ಣದ ಹಿಂದಿನ ಗುಟ್ಟನ್ನು ಈಗ ನಮ್ಮ ವಿಜ್ಞಾನಿಗಳು ಭೇದಿಸಿ ತಿಳಿಸಬೇಕಾಗಿದೆ. ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಸಂಶೋಧನೆಯಾಗಿರುವ ಹಲಸು ಬೆಳೆಯ ಬಗ್ಗೆ ಹೀಗಾದರೂ ಹೆಚ್ಚುಹೆಚ್ಚು ಕೃಷಿ ವಿಜ್ಞಾನಿಗಳ ಗಮನ ಹರಿಯಬೇಕಿದೆ.

ಅನಿಲ ಪಾಟೀಲ ಅವರ ಸಂಪರ್ಕಕ್ಕೆ– 09970978700.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT