ಗುರುವಾರ , ಡಿಸೆಂಬರ್ 12, 2019
26 °C

‘ನಿತ್ಯದ ಬದುಕೇ ನನಗೆ ಸ್ಫೂರ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಿತ್ಯದ ಬದುಕೇ ನನಗೆ ಸ್ಫೂರ್ತಿ’

* ಬೆಂಗಳೂರು ಬಗ್ಗೆ ಏನು ಹೇಳ್ತೀರಿ?

ನಾನು ಬೆಂಗಳೂರಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ. ಇಲ್ಲಿ ನಡೆಯುವ ಫ್ಯಾಷನ್ ಕಾರ್ಯಕ್ರಮಗಳು ಹಾಗೂ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ. ಮುಂಬೈಯಲ್ಲಿ ಮನೆ ಇದ್ದರೂ ಹೊರಗಿನ ಪ್ರದೇಶಗಳಿಗೆ ಹೋಗಲು ನಾನು ಇಷ್ಟಪಡುತ್ತೇನೆ. ಬೆಂಗಳೂರಿನ ತಂಪಾದ ಗಾಳಿ ನನಗಿಷ್ಟ.

* ಲೇಖಕಿಯಾಗಲು ಪೇರಣೆ...

ಲೇಖಕಿಯಾಗಲು ನಾನು ಆಸೆಪಟ್ಟಿರಲಿಲ್ಲ. ಹೆಚ್ಚು ಓದಲು ಮತ್ತು ಬರೆಯಲು ಪೆಂಗ್ವಿನ್ ಪ್ರಕಾಶನ ಸಂಸ್ಥೆ ನನ್ನನ್ನು ಪ್ರೇರೇಪಿಸಿತು. ಪುಸ್ತಕವೊಂದನ್ನು ಬರೆದು ಕೊಡುವಂತೆ ಕೇಳಿಕೊಂಡಿತು. ನಾನು ಬರೆಯಬಲ್ಲೆ ಎಂಬ ಖಚಿತತೆ ನನಗಿರಲಿಲ್ಲ. ಆದರೂ ಪುಸ್ತಕದ ಅಧ್ಯಾಯವೊಂದನ್ನು ಬರೆದು ಕೆಲ ಸ್ನೇಹಿತರಿಗೆ ಕಳುಹಿಸಿದ್ದೆ. ಅವರು ಉತ್ತಮ ಪ್ರತಿಕ್ರಿಯೆ ನೀಡಿದರು. ಕೃತಿ ರಚನೆಗೆ ಇದು ಪ್ರೇರಣೆ ನೀಡಿತು.

* ‘ದಿ ಪೆರಿಲ್ಸ್ ಆಫ್ ಬೀಯಿಂಗ್ ಮಾಡರೇಟ್ಲಿ ಫೇಮಸ್’ ಪುಸ್ತಕದ ಬಗ್ಗೆ ಹೇಳಿ...

ಈ ಪುಸ್ತಕಕ್ಕೆ ಶೀರ್ಷಿಕೆ ಇಟ್ಟ ನಂತರ ಓದುಗರು ಇದನ್ನು ಹೇಗೆ ಸ್ವೀಕರಿಸಿಯಾರು ಎಂಬ ವಿಚಾರ ನನ್ನನ್ನು ಕಾಡಿತ್ತು. ನಾನು ಸಿನಿಮಾ ಕ್ಷೇತ್ರದ ಜೊತೆ ನಂಟು ಹೊಂದಿರುವ ಜನಪ್ರಿಯ ಕುಟುಂಬದಿಂದ ಬಂದಿರುವುದರಿಂದ ನನ್ನ ಬಗ್ಗೆ ಜನರಿಗಿರುವ ತಪ್ಪು ಗ್ರಹಿಕೆಗಳನ್ನು ಹೋಗಲಾಡಿಸಲು ಈ ಮೂಲಕ ಸಾಧ್ಯ ಎಂದು ತಿಳಿದುಕೊಂಡಿದ್ದೇನೆ. ಈ ಪುಸ್ತಕದಲ್ಲಿ ನನ್ನ ಬಾಲ್ಯ, ಕುಟುಂಬ, ಪ್ರೇಮ ಹಾಗೂ ವೃತ್ತಿಜೀವನದ ಬಗೆಗಿನ ವಿಚಾರಗಳನ್ನು ದಾಖಲಿಸಲಿದ್ದೇನೆ.

* ಚಿತ್ರರಂಗಕ್ಕೆ ಸೇರಲು ಒತ್ತಡವಿತ್ತೇ?

ಚಿತ್ರರಂಗ ಪ್ರವೇಶಿಸಲು ಮನೆಯಿಂದ ಯಾವುದೇ ರೀತಿಯ ಒತ್ತಡ ಇರಲಿಲ್ಲ. ಆದರೆ ಈ ಕ್ಷೇತ್ರಕ್ಕೆ ನಾನು ಏನಾದರೂ ಕೊಡುಗೆ ನೀಡಬೇಕು ಮತ್ತು ಸಂತೋಷದಿಂದಿರಬೇಕು ಎಂದು ನನ್ನ ಪಾಲಕರು ಬಯಸಿದ್ದರು.

* ನಿಮಗೆ ಸಲಹೆ ಬೇಕೆಂದಾಗ ಯಾರನ್ನು ಕೇಳುವಿರಿ?

ನನ್ನ ಕುಟುಂಬ ಸದಸ್ಯರು ಸಾಕಷ್ಟು ವಿಷಯಗಳಿಗೆ ಸಲಹೆ ನೀಡುತ್ತಾರೆ. ಚಿತ್ರಗಳ ಮಾಹಿತಿ ಬೇಕೆಂದರೆ ಅಣ್ಣನಲ್ಲಿ ಕೇಳುತ್ತೇನೆ. ಅವನು ಸದಾ ಅಪ್‌ಡೇಟ್ ಆಗಿರುತ್ತಾನೆ. ಚಿತ್ರವೊಂದರ ಸನ್ನಿವೇಶವನ್ನು ಹೇಗೆ ನಿಭಾಯಿಸಬೇಕೆಂದಾಗ ನಾನು ಅಮ್ಮನ ಬಳಿ ಸಲಹೆ ಪಡೆಯುತ್ತೇನೆ. ಮದುವೆ, ಕೆಲಸ ಇವೆರಡರ ಸಮತೋಲನದ ಬಗ್ಗೆ ಅಮ್ಮ ಕೊಡುವ ಟಿಪ್ಸ್ ಉಪಯುಕ್ತ. ಮಾಧ್ಯಮದವರ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ನಾನು ತಂದೆಯಿಂದ ಕಲಿತಿದ್ದೇನೆ.

* ಇನಾಯಾಳ ಜೊತೆಗಿನ ಅಮೂಲ್ಯ ಕ್ಷಣಗಳ ಬಗ್ಗೆ ತಿಳಿಸಿ

ನನ್ನ ಮಗಳು ಇನಾಯಾಳಿಗೆ ಈಗ ನಾಲ್ಕು ತಿಂಗಳು. ಅವಳು ನನ್ನ ಬದುಕಿಗೆ ಬಂದ ನಂತರದ ಪ್ರತಿದಿನವೂ ನನಗೆ ಹೊಸ ದಿನವೇ. ಆರಂಭದ ದಿನಗಳಲ್ಲಿ ಮಗುವಿನ ಪೋಷಣೆ ಸವಾಲು ಎನಿಸಿತ್ತು. ನಾನು ಮತ್ತು ಕುನಾಲ್ ಅದನ್ನು ಜೊತೆಜೊತೆಯಾಗಿ ನಿಭಾಯಿಸಿದೆವು. ಈಗ ನಾನು ಅವಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅವಳು ಯಾಕೆ ಅಳುತ್ತಾಳೆ ಎಂಬುದು ನನಗೆ ಅರ್ಥವಾಗುತ್ತಿದೆ.

* ತಾಯ್ತನದ ಸವಾಲುಗಳೇನು?

ತಾಯಿಯಾದಾಗ ನಮ್ಮ ಆದ್ಯತೆಗಳು, ದೃಷ್ಟಿಕೋನಗಳು ಸಂಪೂರ್ಣ ಬದಲಾಗುತ್ತವೆ. ನಾನು ಡಯಾಪರ್ ಅನ್ನು ವಾಣಿಜ್ಯ ದೃಷ್ಟಿಯಿಂದ ನೋಡುತ್ತಿದ್ದೆ. ಅದು ಈಗ ಭಾವನಾತ್ಮಕವಾಗಿ ಬದಲಾಗಿದೆ.

* ತಂದೆಯಾಗಿ ಕುನಾಲ್ ಹೇಗಿದ್ದಾರೆ?

ಕುನಾಲ್ ಒಬ್ಬ ಉತ್ತಮ ತಂದೆ. ಇನಾಯಾ ಯಾಕೆ ಅಳುತ್ತಾಳೆ ಎಂದು ನಾನು ಚಿಂತೆಗೊಳ್ಳುತ್ತಿದ್ದೆ. ಆಗ ಕುನಾಲ್, ಮಕ್ಕಳು ಅಳುವ ಮೂಲಕ ಸಂಭಾಷಣೆ ನಡೆಸುತ್ತಾರೆ ಎನ್ನುತ್ತಿದ್ದ. ಅವನು ಒಳ್ಳೇ ಅಪ್ಪ.

* ಯಾವುದಾದರೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೀರಾ?

ತಿಗ್ಮಾಂಶು ದುಲಿಯಾ ಅವರ ‘ಸಾಹೆಬ್, ಬೀವಿ ಔರ್ ಗ್ಯಾಂಗ್‌ಸ್ಟರ್‌ 3’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ. ನಾನು ಹಾಗೂ ಕುನಾಲ್ ಸಿನಿಮಾ ನಿರ್ಮಾಣಕ್ಕೂ ಕೈಹಾಕಲಿದ್ದೇವೆ. ರಾಮ್ ಜೇಠ್ಮಲಾನಿ ಅವರ ಜೀವನ ಆಧಾರಿತ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ.

*ಇತರ ಆಸಕ್ತಿಗಳು?

ನಾನು ಸಾಹಸ ಕ್ರೀಡೆಗಳ ಅಭಿಮಾನಿಯಲ್ಲ. ಬಂಗೀ ಜಿಗಿತ ಅಥವಾ ಆಳ ಸಮುದ್ರದಲ್ಲಿ ಡೈವಿಂಗ್ ಮಾಡಲು ಬಯಸುವುದಿಲ್ಲ. ಪ್ರಯಾಣ ಮಾಡುವುದನ್ನು ಇಷ್ಟಪಡುತ್ತೇನೆ. ಬದುಕಿನ ಖುಷಿ ಕ್ಷಣಗಳೇ ನನಗೆ ಸ್ಫೂರ್ತಿ. ಇನಾಯಾಳ ಜೊತೆ ಹೊಸ ಪ್ರದೇಶಗಳಿಗೆ ತೆರಳಲು ಬಯಸುತ್ತೇನೆ.

ಪ್ರತಿಕ್ರಿಯಿಸಿ (+)